`ದೇವಾಲಯೋದ್ಯಮ…!'

0
490

ದೃಷ್ಟಿ ಅಂಕಣ: ಸೌಮ್ಯ ಸಾಗರ
ದೇವರು ಕೊಟ್ಟರೂ ಪೂಜಾರಿ ಬಿಡನು. ಇದು ಕನ್ನಡದ ಜನ ಜನಿತ ಗಾದೆ. ಎಷ್ಟೋ ಬಾರಿ ಈ ಮಾತು ನಮ್ಮ ನಿಮ್ಮೆಲ್ಲರ ಅನುಭವಕ್ಕೆ ವೇದ್ಯವಾಗಿರಲೂ ಬಹುದು. ಹಲವು ಬಾರಿ ನಮಗೆ ಏನೋ ಒಂದು ಕಾರ್ಯ ಆಗುವಂತಹ ಸಂದರ್ಭದಲ್ಲಿ ಮಧ್ಯವರ್ತಿಗಳಿಂದಾಗಿ ಆ ಕೆಲಸ ಆಗದೆ ಈ ಗಾದೆಮಾತನ್ನು ನೀವು ಉಚ್ಚರಿಸಲೂ ಬಹುದು ಅಲ್ಲವೇ…
 
temple vaarte
ಕಾಲ `ಮಾಡರ್ನ್’ ಎಂಬ ಹಣೆಪಟ್ಟಿ ತೆಗೆದುಕೊಂಡು ಜನಸಂಖ್ಯೆ ಸ್ಫೋಟಗೊಂಡ ಬೆನ್ನಲ್ಲೇ ದೇವಾಲಯಗಳೂ ಆಧುನಿಕತೆ ಸ್ಪರ್ಷಿಸಿಕೊಂಡು ಹೈಟೆಕ್ ಎನಿಸಿಕೊಂಡಿದೆ. ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾದರೂ ಅಧ್ಯಾತ್ಮಿಕ ಒಲವು , ದೇವರಲ್ಲಿನ ಭಯ ಭಕ್ತಿ ಕಡಿಮೆಯಾಗಿಲ್ಲ. ಹಾಗೆಯೇ ಜನರ ದೇವಾಲಯ ಭೇಟಿ ಇಂದಿನ ಪ್ರವಾಸೋದ್ಯಮದ ಪ್ರಮುಖ ಭಾಗ ಕೂಡಾ ಆಗಿದೆ. ಇತ್ತೀಚೆಗೆ ದೇವರ ನಾಡು ಎಂದು ಖ್ಯಾತಿ ಪಡೆದ ಕೇರಳ ಮತ್ತು ತಮಿಳುನಾಡಿನ ಕೆಲವು ದೇವಾಲಯಗಳಿಗೆ ಕುಟುಂಬ ಸಹಿತ ಭೇಟಿ ನೀಡಿದ್ದೆ.ಅಲ್ಲಿಯ ಸರಕಾರಗಳು ಕರ್ನಾಟಕಕ್ಕಿಂತ ಹೆಚ್ಚು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿದೆ. ಅದರಲ್ಲೂ ದೇವಾಲಯ ದರ್ಶನ ಈ ರಾಜ್ಯಗಳ ಪ್ರಮುಖ ಉದ್ಯಮವಾಗಿದೆಯೋ ಎಂಬಭಾವನೆ ಮೂಡುತ್ತದೆ. ಈ ಪವಿತ್ರ ದೇವಾಲಯಗಳು ವಾಸ್ತುಶಿಲ್ಪ ಹಾಗೂ ಐತಿಹಾಸಿಕತೆಗಳ ಮೂಲಕ ಜನರನ್ನು ತಮ್ಮತ್ತ ಸೆಳೆಯುತ್ತವೆ. ಪ್ರತೀ ದೇವಾಲಯವೂ ನಮ್ಮ ದೇಶದ ಸಂಸ್ಕೃತಿಯ ಐತಿಹಾಸಿಕ ಪ್ರಾಮುಖ್ಯತೆಯನ್ನು ಮೆರೆಯುತ್ತದೆ. ದೇವಾಲಯಗಳನ್ನು ದರ್ಶಿಸುವವನ ಮನದಲ್ಲಿ ಒಂದು ಬಗೆಯ ಆಧ್ಯಾತ್ಮಿಕ ಮಾನಸಿಕ ಸಾರ್ಥಕ ಭಾವವನ್ನೂ ಮೂಡಿಸುತ್ತದೆ.
ಆದರೆ ಪ್ರವಾಸೀ ತಾಣಗಳಾಗಿ ಪರಿವರ್ತಿತಗೊಂಡಿರುವ ಈ ದೇವಾಲಯಗಳು ಮೇಲೆ ಹೇಳಿರುವ ಎಲ್ಲಾ ಅಂಶಗಳನ್ನೂ ಮೀರಿ ಔದ್ಯಮಿಕವಾಗಿ ಲಾಭದತ್ತ ದೃಷ್ಟಿಹೊಂದಿ ವ್ಯವಹಾರಿಕತೆಯನ್ನು ಪ್ರಮುಖವಾಗಿಸಿದೆ. ಯಾವುದೇ ಪ್ರವಾಸೋದ್ಯಮದ ಭಾಗವಾಗಿರುವ ದೇವಾಲಯಗಳನ್ನು ಸಂದರ್ಶಿಸಿ. ಅಲ್ಲಿನ ಅರ್ಚಕರು, ಗೈಡ್ ಗಳೆಂದು ಕರೆಸಿಕೊಳ್ಳುವ ವ್ಯಕ್ತಿಗಳು ಮುಲಾಜಿಲ್ಲದೆ ಕೇಳುವ ಹಣದ ಮುಂದೆ ದೇವಾಲಯ ಉಂಟುಮಾಡುವ ಭಕ್ತಿಯ ಭಾವನೆ ಬೆಲೆ ಕಳೆದುಕೊಳ್ಳುತ್ತದೆ.
ಪ್ರತೀ ದೇವಾಲಯಗಳಲ್ಲಿಯೂ ನಿಶ್ಚಿತವಾದ ದೇವ ಸೇವಾ ಪದ್ಧತಿಯಿದೆ. ಭಕ್ತರು ಹಾಗೂ ಸಂದರ್ಶಕರು ಅವರ ಇಚ್ಛಾನುಸಾರ, ಅನುಕೂಲಾನುಸಾರ ಬೇಕಾದ ಸೇವೆಗಳನ್ನು ಮಾಡಿಸಿಕೊಳ್ಳಲು ದರಪಟ್ಟಿಯನ್ನೂ ನಿಗಧಿಪಡಿಸಲಾಗಿದೆ. ಆದರೂ ಹಲವು ದೇವಾಲಯಗಳಲ್ಲಿ ಅರ್ಚಕರು ಮತ್ತು ಆಡಳಿತವರ್ಗದವರು ಸೇವಾಚೀಟಿಯನ್ನು ನಕಲಿ ತಯಾರಿಸಿ ಹಣ ಮಾಡುವ ಹಾಗೂ ಭಕ್ತರಿಗೆ ಒತ್ತಾಯಪೂರ್ವಕವಾಗಿ ಪೂಜೆಯ ಹಣವನ್ನೂ ದರ ಚೀಟಿ ರಹಿತವಾಗಿ ಪಡೆಯುವುದು ಮಾಡುತ್ತಿದ್ದಾರೆ. ಮುಜುರಾಯಿ ಇಲಾಖೆಯ ಆಶ್ರಯದಲ್ಲಿರುವ ಪ್ರತಿಷ್ಠಿತ ದೇವಾಲಯಗಳಲ್ಲಿ ಇದೊಂದು ದೊಡ್ಡ ದಂಧೆಯಾಗಿಯೇ ನಡೆಯುತ್ತಿರುವುದು ವಿಪರ್ಯಾಸ…
 
ಈ ರೀತಿಯ ವ್ಯವಹಾರಗಳು ಹಲವು ಸಲ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದರೂ ಸಹ ಸರಕಾರಗಳು ಅದಕ್ಕೆ ತಕ್ಕ ಕ್ರಮ ಕೈಗೊಳ್ಳದಿರುವುದು ಖೇದಕರ . ದೇವಾಲಯಗಳಲ್ಲಿ ನಡೆಯುವ ಹಗಲು ದರೋಡೆಗಳಲ್ಲಿ ಎಷ್ಟೋ ಸಲ ಸರಕಾರಿ ಅಧಿಕಾರಿಗಳ ಶಾಮೀಲು ನಮ್ಮ ವ್ಯವಸ್ಥೆ ಸರಿಪಡಿಸಲಾಗದಂತೆ ಮಾಡಿದೆ. ಕೊಲ್ಲೂರಿನ ಪ್ರಕರಣವೇ ಇರಬಹುದು, ತಿರುಮಲ ತಿರುಪತಿಯದ್ದೇ ಇರಬಹುದು ದೇವಸ್ಥಾನ ಪ್ರವೇಶಿಸುವುದರಿಂದ ಹಿಡಿದು ದೇವಾಲಯ ಸಂದಶರ್ಿಸಿ ಹೊರಬರುವಷ್ಟರಲ್ಲಿ ನಿಮ್ಮ ಜೇಬು ಬಹಳಷ್ಟು ಹಗುರವಾಗಿ ಮನಸ್ಸು ಭಾರವಾಗಿರುತ್ತದೆ. ಹೆಚ್ಚಿನ ದೇವಾಲಯಗಳಲ್ಲೆಲ್ಲಾ ಅರ್ಚಕರ ಹಾಗೂ ದೇವಾಲಯದ ಆಡಳಿತ ಮಂಡಳಿಗಾರರ ಗುಂಪು ವ್ಯವಸ್ಥಿತವಾಗಿ ಹಣ ಮಾಡುವ ದಂಧೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.
 
 
ತಮಿಳುನಾಡಿನ ಎಷ್ಟೋ ದೇವಾಲಯಗಳ ಪ್ರವೇಶಕ್ಕೆ ಸಹ ದುಡ್ಡುಕೊಡಬೇಕು. ಹಾಗೂ ಅದಕ್ಕೆ ಯಾವುದೇ ರಸೀದಿ ಇರುವುದಿಲ್ಲ. ಈ ಅನಧಿಕೃತ ವ್ಯವಹಾರ ರಾಜಾರೋಶವಾಗಿ ಬಹಳಷ್ಟು ಸಮಯದಿಂದ ನಡೆಸುತ್ತಲೇ ಬಂದಿದ್ದು ವಿಪರ್ಯಾಸವೆಂದರೆ ನೀವೂ ಗೊತ್ತಿದ್ದೂ ಗೊತ್ತಿದ್ದೂ ಇದರ ಭಾಗವಾಗಿಬಿಡುತ್ತೀರಿ. ಹಾಗಾದರೆ ಕಣ್ಣಿಗೆ ಕಾಣುವ ದರೋಡೆಯನ್ನು ತಪ್ಪಿಸುವವರು ಯಾರು. ? ದೇವರು ಕೊಟ್ಟರೂ ಪೂಜಾರಿ ಕೊಡದ ಪರಿಸ್ಥಿತಿಗೆ ಪರಿಹಾರ ಕೊಡುವವರು ಯಾರು…?
ಸೌಮ್ಯ ಸಾಗರ
[email protected]

LEAVE A REPLY

Please enter your comment!
Please enter your name here