ದೇವರ ತೀರ್ಥಕ್ಕೂ ನೀರಿಲ್ಲ..

0
608

 
ದ.ಕ.ಪ್ರತಿನಿಧಿ ವರದಿ
ಏನಿದು ದೇವಾ….
ಕರಾವಳಿ ದೇಗುಲದಲ್ಲಿಯೂ ನೀರಿನ ಆಹಾಕಾರ ಉಂಟಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೂ ಬರದ ಬಿಸಿ ತಟ್ಟಿದ್ದು, ನೀರಿಗಾಗಿ ತೀವ್ರ ಅಭಾವ ಶುರುವಾಗಿದೆ.
 
 
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಧಾರ್ಮಿಕ ಕ್ಷೇತ್ರದಲ್ಲೊಂದಾದ ಸುಬ್ರಹ್ಮಣ್ಯ ದೇವಾಲಯಕ್ಕೆ ಬರುವ ಭಕ್ತರಿಗೆ ತೀರ್ಥ ಕೊಡಲು ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ದೇಗುಲದ ತೀರ್ಥಬಾವಿ ಬತ್ತಿ ಹೋಗಿದ್ದು, ದೇವರ ಅಭಿಷೇಕಕ್ಕೆ ಸಾಕಾಗುವಷ್ಟು ಮಾತ್ರ ನೀರು ಲಭ್ಯವಾಗುತ್ತಿದೆ.
 
 
 
ದೇವಸ್ಥಾನದ ಬಾವಿಯಲ್ಲಿ ಸದ್ಯಕ್ಕೆ ಅಭಿಷೇಕಕ್ಕೆ ನೀರಿದೆ. ಆದರೆ ಭಕ್ತರಿಗೆ ತೀರ್ಥ ನೀಡಲು ಅಗತ್ಯವಿರುವ ನೀರಿಲ್ಲ. ಪರಿಹಾರಕ್ಕಾಗಿ ದೇಗುಲದ ಸಿಬ್ಬಂದಿಗಳು ಜ್ಯೋತಿಷಿಗಳ ಮೊರೆಹೋಗಿದ್ದಾರೆ. ಜ್ಯೋತಿಷ್ಯದ ಮೂಲಕ ಪರಿಹಾರದ ಮಾಹಿತಿ ಪಡೆಯಲಾಗಿದೆ. ತಾಂಬೂಲ ಶಾಸ್ತ್ರದ ಮೂಲಕ ಶ್ರೀಕ್ಷೇತ್ರ ಆಡಳಿತಾಧಿಕಾರಿಗಳು ಪರಿಹಾರದ ಕೋರಿಕೆ ಮಾಡಿದ್ದಾರೆ.
 
 
 
ಪರಿಹಾರ ಕೋರಿಕೆ ಪಡೆದ ಆಡಳಿತಾಧಿಕಾರಿಗಳಿಗೆ ದರ್ಪಣತೀರ್ಥದಿಂದ ನೀರು ತನ್ನಿ ಎಂದು ಜ್ಯೋತಿಷಿ ಸಲಹೆ ನೀಡಿದ್ದಾರೆ. ದೇವಸ್ಥಾನದ ಸಮೀಪದ ಸಣ್ಣ ಹೊಳೆಯೇ ದರ್ಪಣ ತೀರ್ಥವಾಗಿದೆ. ದೇವಸ್ಥಾನದ ಹಿಂದಿನ ಗುಡ್ಡದ ಬಳಿ ದರ್ಪಣ ತೀರ್ಥ ನದಿಯಿದೆ. ಈ ದರ್ಪಣತೀರ್ಥ ದೇವಸ್ಥಾನದಿಂದ ಸುಮಾರು 2 ಕಿ.ಮೀ. ದೂರದಲ್ಲಿದೆ.
 
ಜ್ಯೋತಿಷಿ ಸಲಹೆಯಂತೆ ದರ್ಪಣ ತೀರ್ಥ ನದಿಯಿಂದ ದೇವಸ್ಥಾನಕ್ಕೆ ನೀರು ತರಲು ಸಿದ್ಧತೆ ಮಾಡಲಾಗಿದೆ. ದರ್ಪಣ ತೀರ್ಥಕ್ಕೆ ಪೈಪ್ ಲೈನ್ ಅಳವಡಿಕೆ ಕಾರ್ಯಾರಂಭವಾಗಿದೆ. ಗ್ರಾಮಸ್ಥರು ಸೇರಿ 50ಕ್ಕೂ ಹೆಚ್ಚು ಜನರು ಈ ಕಾರ್ಯ ನಡೆಸುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗಿನೊಳಗೆ ದೇವಸ್ಥಾನಕ್ಕೆ ಪೈಲ್ ಮೂಲಕ ನೀರು ತರಲಾಗುತ್ತದೆ.
 
 
ನಂತರ ದೇವಸ್ಥಾನದತ್ತ ಬರುವ ನೀರನ್ನು ಶುದ್ಧೀಕರಿಸಲು ಯೋಜನೆ ರೂಪಿಸಿದ್ದು, ಶುದ್ಧೀಕರಿಸಿದ ನೀರನ್ನು ಭಕ್ತರಿಗೆ ತೀರ್ಥವಾಗಿ ನೀಡಲು ಬಳಕೆ ಮಾಡಲಾಗುತ್ತದೆ. ವೈದಿಕ ವಿಧಿವಿಧಾನದ ಮೂಲಕ ನೀರಿನ ಶುದ್ಧೀಕರಣ ಮಾಡಲಾಗುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here