ದೇವರೊಂದಿಗೆ ಆಟ ಆಡಿದ ಭಾಗ್ಯವಂತರು!!!

0
705

ನಿತ್ಯ ಅಂಕಣ: 47

ಭಾರತದ ಮೂರು ಸಮುದ್ರಗಳ ಸಂಗಮ ಕ್ಷೇತ, ತಮಿಳುನಾಡಿನ ಕನ್ಯಾಕುಮಾರಿ, ಇಲ್ಲಿ ನಿತ್ಯಾನಂದರು ಕೆಲವು ದಿನಗಳು ಕಳೆಯುತ್ತಾರೆ. ಅಲ್ಲಿಂದ ನಿತ್ಯಾನಂದ ಸ್ವಾಮಿಗಳು ತಿರುವನಂತಪುರ ಇಲ್ಲಿಗೆ ಬರುತ್ತಾರೆ. ಕೆಲವು ಗುಂಡಾಗಳು ಅಲ್ಲಿಯ ಪ್ರಸಿದ್ಧ ಅಂಬಲಪುಳ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ಘಟನೆಯೊಂದು ನಡೆಯುತ್ತದೆ. ಗೂಂಡಗಳ ದುಷ್ಕ್ರತ್ಯದಿಂದ ದೇವಸ್ಥಾನವು ಬೆಂಕಿಯಿಂದ ಹೊತ್ತಿ ಉರಿಯುತ್ತದೆ. ದುರಂತವನ್ನು ಗಮನಿಸಿದ ಸ್ಥಳಿಯರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದರು. ಆವಾಗ ಅದೇ ದಾರಿಯಲ್ಲಿ ಕಪ್ಪಗಿನ ಅರೆ ಬರೆ ಬಟ್ಟೆಯಲ್ಲಿದ್ದ ಅಪರಿಚಿತ ವ್ಯಕ್ತಿ ಸಂಚರಿಸುತ್ತಿದ್ದ. ಅವರ ನಡಿಗೆಯು ವೇಗದಲ್ಲಿ ಇತ್ತು. ಅವರನ್ನು ಗಮನಿಸಿದ ದೇವಸ್ಥಾನದ ಸೇವಕನೊರ್ವನು ಅಗ್ನಿ ಅನಾಹುತ ಮಾಡಿರುವ ಗುಂಡಗಳ ತಂಡದ ಸದಸ್ಯ ಆತನೆಂದು ಸಂಶಯ ಪಟ್ಟ, ಓಡಿ ಹೋಗಿ ಆತನ ಹಿಡಿದು ಬಿಟ್ಟ. ಆತನ ಹಿಡಿದು ತಂದು ದೇವಸ್ಥಾನದ ಧರ್ಮದರ್ಶಿ ಕೊಟ್ಟಂಪಳ್ಳಿ ಕುರುಪ್ಪನ್ ಅವರ ಎದುರುಗಡೆ ನಿಲ್ಲಿಸುತ್ತಾನೆ. ಕುರುಪ್ಪನ್ ಶೀಘ್ರಕೋಪಿಯ ಮನುಷ್ಯ. ಸಿಟ್ಟಾದ ಕುರುಪ್ಪನ್ ಹಿಂದೆ ಮುಂದೆ ಏನನ್ನೂ ವಿಚಾರಿಸದೆ, ಇತನನ್ನು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಬಂಧಿಸಿಡಲು ಆಜ್ಞಾಪಿಸುತ್ತಾನೆ. ಸೇವಕ ಧರ್ಮದರ್ಶಿಗಳ ಆಜ್ಞೆಯಂತೆ ಶಂಕಿತ ವ್ಯಕ್ತಿಯನ್ನು ನೆಲೆಮಾಳಿಗೆ ಬಂಧೀಖಾನೆಯಲ್ಲಿ ಬಂಧಿಸಿಡುತ್ತಾನೆ.

ಮರುದಿನ ಕುರುಪ್ಪನ್ ಮನೆಗೆ ಪಂಡಿತರಾದ ಅನಂತ ನಾರಾಯಣ ಶಾಸ್ತ್ರಿಗಳ ಆಗಮನವಾಗುತ್ತದೆ. ಅವರು ಹಿಂದಿನ ದಿನ ನಡೆದ ದುರ್ಘಟನೆ ಬಗ್ಗೆ ವಿಚಾರಿಸಲೆಂದು ಬಂದಿದ್ದರು. ಆ ಸಂದರ್ಭ ಕುರುಪ್ಪನಿನ ಸಹೋದರನು ಅಲ್ಲಿಯೇ ಇದ್ದ. ಆವಾಗ ನೆಲಮಾಳಿಗೆಯಲ್ಲಿ ಬಂಧಿಸಿಟ್ಟ ವ್ಯಕ್ತಿಯನ್ನು ತಂದು ಪಂಡಿತ ಅನಂತ ನಾರಾಯಣ ಶಾಸ್ತ್ರಿಗಳ ಎದುರುಗಡೆ ನಿಲ್ಲಿಸಲಾಯಿತು. “ಇವನೇ ನೋಡಿ ಅಂಬಲಪುಳ ದೇವಸ್ಥಾನಕ್ಕೆ ಬೆಂಕಿ ಇಟ್ಟವರ ಗುಂಪಿನಲ್ಲಿ ಇದ್ದವ ..!” ಎಂದು ಬೆರಳು ತೋರಿಸಿ ಪಂಡಿತರಿಗೆ, ಕುರುಪ್ಪನ್ ಘಟನೆಯ ವಿವರ ನೀಡಿದ. ಅಪರಾಧಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿಯ ಮುಖದಲ್ಲಿ ಎಲ್ಲಿಯೂ ಅಪರಾಧ ಭಾವನೆಯ ಛಾಯೆ ಇರುವುದಿಲ್ಲ. ನಗುತ್ತಲೇ ಆ ವ್ಯಕ್ತಿ ಮುಂದೆ ಬಂದು ನಿಂತಿದ್ದ. ಪಂಡಿತರು ಅಪರಾಧಿ ಎಂದು ಬಿಂಬಿಸಿರುವ ವ್ಯಕ್ತಿಯನ್ನು ಕಂಡು ಒಮ್ಮೆಗೆ ದಂಗಾದರು..! ಆತನ ಕಾಲಿಗೆರಗಿ ನಮಸ್ಕರಿಸಿದರು. ಏನಿದು..! ಗುಂಡನೊಬ್ಬನ ಕಾಲಿಗೆರಗಿ ಪಂಡಿತ ಶಾಸ್ತ್ರಿಗಳು ನಮಸ್ಕರಿಸುತ್ತಿದ್ದಾರೆ..! ದೃಶ್ಯ ಕಂಡು ಕುರುಪ್ಪನ್ ಆಶ್ಚರ್ಯ ಪಡುವಂತಾಗುತ್ತಾರೆ. ಎಂಥಾ..! ಅಪರಾಧ ತಮ್ಮಿಂದ ನಡೆದಿದೆ. ಇವರು ಯಾರೆಂದು ಬಲ್ಲಿರಾ..! ಇವರು ಅವತಾರ ಪುರುಷರು. ಸದ್ಗುರು ನಿತ್ಯಾನಂದ ಸ್ವಾಮೀಜಿ ಎಂದು ಪಂಡಿತ ನಾರಾಯಣ ಶಾಸ್ತ್ರಿಗಳು ಪರಿಚಯಿಸುತ್ತಾರೆ. ಕುರುಪ್ಪನ್ ತನ್ನಿಂದ ಅರಿಯದೆ ನಡೆದ ಅಪರಾಧ ಕೃತ್ಯಕ್ಕೆ ನಿತ್ಯಾನಂದರಲ್ಲಿ ಕ್ಷಮೆಯಾಚಿಸುತ್ತಾನೆ. ಪಾದಗಳಿಗೆ ಎರಗಿ ನಮಸ್ಕರಿಸುತ್ತಾನೆ.

ಅಂಬಳಪುಳದಿಂದ ನಿತ್ಯಾನಂದ ಸ್ವಾಮಿಗಳು ತಮ್ಮ ಸಂಚಾರವನ್ನು ಉತ್ತರಾಭಿಮುಖವಾಗಿ ಮುಂದುವರಿಸುತ್ತಾರೆ. ಕಲ್ಲಿಕೋಟೆ ಎಂಬಲ್ಲಿ ಮೊಕ್ಕಾಂ ಇದ್ದು, ಬಹಳಷ್ಟು ದಿನಗಳನ್ನು ಅಲ್ಲಿ ಕಳೆಯುತ್ತಾರೆ. ಚಿಕ್ಕ ಮಕ್ಕಳು ಇವರ ಬಳಿಗೆ ಬಂದು, ‘ಸಕ್ಕರೆಗೆ ಇರುವೆಗಳು ಮುತ್ತಿಗೆ ಹಾಕಿದಂತೆ’, ಗುಂಪಾಗಿ ಸುತ್ತುವರಿಯುತ್ತಿದ್ದರು. ಮಕ್ಕಳು ಅವರ ಆಕರ್ಷಣೆಗೆ ಒಳಗಾಗುತ್ತಿದ್ದರು. ನಿತ್ಯಾನಂದರಿಗೂ ಮಕ್ಕಳೆಂದರೆ ಬಲು ಪ್ರೀತಿ. ಚಿಕ್ಕ ಮಕ್ಕಳಿಗೆ ಚಾಕಲೇಟು ಕೊಡುವ ಅಭ್ಯಾಸವು ಅವರಿಗಿತ್ತು. ಚಮತ್ಕಾರಗಳ ಮಾಡುತ್ತ ಮಕ್ಕಳನ್ನು ಬೆರಗುಗೊಳಿಸುತ್ತಿದ್ದರು. ಮಕ್ಕಳ ಮುಂದೆ ತಮ್ಮ ಬರಿಗೈ ತೋರಿಸುತ್ತಿದ್ದರು. ಮಕ್ಕಳಲ್ಲಿಯೇ ಕೈಯನ್ನು ಪರಿಶೀಲಿಸಲು ಹೇಳುತ್ತಿದ್ದರು. ನಂತರ ಕೈ ಮುಷ್ಟಿ ಕಟ್ಟುತ್ತಿದ್ದರು. ಮುಷ್ಟಿ ಬಿಟ್ಟಾಗ ಅದರಲ್ಲಿ ಸಿಹಿ ತಿಂಡಿಗಳು ಇರುತ್ತಿದ್ದವು. ಆ ಸಿಹಿ ತಿಂಡಿಗಳನ್ನು ನಿತ್ಯಾನಂದರು ಮಕ್ಕಳಿಗೆ ಹಂಚುತ್ತಿದ್ದರು. ಮಕ್ಕಳ ಸಂತೋಷದಿಂದ ಸಂಭ್ರಮಿಸುತ್ತಿದ್ದರು. ಇಂದ್ರಜಾಲ ವಿದ್ಯೆಯು ವಿಜ್ಞಾನ ಮತ್ತು ಕೈಚಳಕದಿಂದ ನಡೆಯುವ ಪ್ರದರ್ಶನ. ಪ್ರದರ್ಶನ ಪೂರ್ವದಲ್ಲಿಯೇ ಯಕ್ಷಿಣೆಗಾರನಿಂದ ಗೌಪ್ಯವಾಗಿ ತಯಾರಿ ನಡೆದಿರುತ್ತದೆ. ಅದರಂತೆ ನಿತ್ಯಾನಂದರು ನಡೆಸಿರುವುದು ಯಕ್ಷಿಣೆ, ಅವರು ಜಾದುಗಾರ ಎಂದು ಮಕ್ಕಳು ತಿಳಿದುಕೊಂಡಿದ್ದರು. ಮಕ್ಕಳಿಗೆ ದೊಡ್ಡವರಾದ ಬಳಿಕ, ಅಂದು ನಮಗೆ ಚಾಕಲೇಟು ನೀಡಿದ ಲಂಗೋಟಿಧಾರಿ, ಜಾದುಗಾರನಂತೆ ಕಂಡಿದ್ದ, ಆದರೆ ಆತ ಸಾಮಾನ್ಯ ವ್ಯಕ್ತಿಯಲ್ಲ…! ನಮ್ಮೊಂದಿಗೆ ಮಕ್ಕಳಂತೆ ಆಟ ಆಡಿದವ ಅವಧೂತ ಭಗವಾನ್ ನಿತ್ಯಾನಂದ ಸ್ವಾಮೀಜಿಗಳೆಂದು ಅದೇಷ್ಟೋ ಸಮಯದ ಬಳಿಕ, ಅವರು ತಿಳಿದು ಕೊಂಡರು. ದೇವರೊಂದಿಗೆ ಆಟ ಆಡಿದ ಭಾಗ್ಯವಂತರು ಅವರಾದರು.

-ತಾರಾನಾಥ್‌ ಮೇಸ್ತ,ಶಿರೂರು.

Advertisement

LEAVE A REPLY

Please enter your comment!
Please enter your name here