ದೇವರು ನಿರ್ಧರಿಸಿರುವಂತೆ, ಗಂಗಾ ಮಾತೆ ಮಾತ್ರ ಈ ಸ್ಥಳದ ಪಾಪಾವನ್ನು ತೊಳೆಯ ಬಲ್ಲಳು!!!

0
589

ನಿತ್ಯ ಅಂಕಣ: ೪೬

ನಿತ್ಯಾನಂದ ಸ್ವಾಮಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೆಲವು ಸಮಯ ಇದ್ದರು. ಅದೊಂದು ದಿನ ಮನುಷ್ಯನ ಅಹಂಭಾವಕ್ಕೆ ಪ್ರಕೃತಿ ಪಾಠ ಕಲಿಸುವ ಘಟನೆಯೊಂದು ನಡೆಯುತ್ತದೆ. ಜಡಿ ಮಳೆ ಎಡಬಿಡದೆ ಸುರಿಯುತಿತ್ತು. ನಿತ್ಯಾನಂದರು ಮಳೆಯಿಂದ ಒದ್ದೆಯಾಗದಂತೆ ರಕ್ಷಿಸಿಕೊಳ್ಳಲು ಪೇಟೆಯ ಅಂಗಡಿಯ ಹೊರ ಪೌಳಿಯ ಬಳಿ ಬಂದು ನಿಂತರು. ಅಲ್ಲಿಯೇ ಒಂದಿಷ್ಟು ಜನರು ಜಗುಲಿಯಲ್ಲಿ ಕೂತು ಕೆಲಸಕ್ಕೆ ಬಾರದ ಹರಟೆ ಹೊಡೆಯುತ್ತಿದ್ದರು. ಆ ಅಂಗಡಿಯ ಮಾಲಿಕ ಬಲು ಕಠೋರಿ ಆಗಿದ್ದ. ನಿತ್ಯಾನಂದರನ್ನು ಕಂಡು, ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಚುಚ್ಚಲಾರಂಭಿಸಿದ. ಅಲ್ಲದೆ ಇಲ್ಲಿಂದ ಹೊರ ತೆರಳುವಂತೆ ಎರುಧ್ವನಿಯಲ್ಲಿ ಆಜ್ಞಾಪಿಸಿದ. ನಿತ್ಯಾನಂದರು ಹೊರಹೋಗಲು ತಡವರಿಸಿದಾಗ, ಮಾಲಿಕನು ಅಂಗಡಿಯ ಮಾಡಿನಿಂದ ಸುರಿಯುತ್ತಿರುವ, ಮಳೆ ನೀರನ್ನು ಪಾತ್ರೆಯಲ್ಲಿ ಹಿಡಿದು, ನಿತ್ಯಾನಂದರ ಮೈಮೇಲೆ ಎಸೆದು ಬಿಟ್ಟ. ಮೊದಲೇ ನಿತ್ಯಾನಂದರು ಮೈಮೇಲೆ ಅರೆ ಬರೆ ಬಟ್ಟೆಯಲ್ಲಿದ್ದವರು. ಶೀತಗಾಳಿ ಚಳಿ ಬೇರೆ ಇತ್ತು. ಕೆಲಸ ಇಲ್ಲದೆ ಅಲ್ಲಿ ಬೀಡಿ ಸೇದಿ ಹೊಗೆ ಬೀಡುತ್ತಿದ್ದವರು ನಿತ್ಯಾನಂದರನ್ನು ಕಂಡು ವಿಕೃತವಾಗಿ ನಗುದಲ್ಲದೇ ಅಪಹಾಸ್ಯನೂ ಮಾಡುತ್ತಾರೆ. ಅಷ್ಟೊಂದು ಅಪಮಾನಗಳು ನಡೆದರೂ ನಿತ್ಯಾನಂದರ ಸ್ವಾಮಿಗಳ ಮುಖದಲ್ಲಿ ಮಾತ್ರ ಬೇಸರದ ಛಾಯೆ ಮೂಡಲಿಲ್ಲ.

ಅಂಗಡಿಯ ಪೌಳಿಯಿಂದ, ಸ್ವಾಮಿಗಳು ತಾವಾಗಿಯೇ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿಯೇ ಒದ್ದೆಯಾಗುತ್ತ ಹೊರ ನಡೆಯುತ್ತಾರೆ. ಹೊರಡುವಾಗ ನಿತ್ಯಾನಂದ ಸ್ವಾಮಿಗಳ ಬಾಯಿಂದ ಒಂದು ಮಾತು ಹೊರಡುತ್ತದೆ. “ದೇವರು ನಿರ್ಧರಿಸಿರುವಂತೆ, ಗಂಗಾ ಮಾತೆ ಮಾತ್ರ ಈ ಸ್ಥಳದ ಪಾಪಾವನ್ನು ತೊಳೆಯ ಬಲ್ಲಳು” ಎಂದು ಎಲ್ಲರಿಗೂ ಕೇಳುವಂತೆ ಹೇಳುತ್ತಾರೆ. ಆ ಮಾತನ್ನು ಎಲ್ಲರೂ ಆಲಿಸುತ್ತಾರೆ. ಅಂಗಡಿಯ ಮಾಲಿಕ ನಿತ್ಯಾನಂದರ ಮಾತು ಆಲಿಸಿ, ವ್ಯಂಗ್ಯ ಮಾತಿನಿಂದಲೇ, “ಹೋ..! ಹಾಗಾದರೆ ಅವಳು ಬರಲಿ, ನಾವು ಅವಳನ್ನು ಸತ್ಕರಿಸದೆ ಮನೆಗೆ ಹೋಗುವುದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸುತ್ತಾನೆ. ನಿತ್ಯಾನಂದರು ಈ ಊರಲ್ಲಿ ಪಾದಸ್ಪರ್ಶಗೊಳಿಸಿದ ಉದ್ದೇಶವನ್ನು ಗಮನಿಸಿದಾಗ, ಆ ಊರಲ್ಲಿ ನಡೆಯುವ ಅನಾಹುತ ಮತ್ತು ಪಾಪಗಳನ್ನು ನಿರ್ಮಲಗೊಳಿಸಲು ಬಂದಂತೆ ಇತ್ತು. ಅದಕ್ಕೆಂದೆ ಅವರು ಬಂದಿರಬಹುದು ಎಂಬುವುದು, ನಂತರ ನಡೆದ ಪ್ರಕೃತಿಯ ಮುನಿಸಿನ ಘಟನೆಯು ಹೇಳುವಂತಿದೆ.

ಗುರುದೇವ ನಿತ್ಯಾನಂದರು ಆಡಿದ, ಆ ಒಂದು ವಾಕ್ಯದ ಮಾತು, ಹೇಳಿ ಹೆಚ್ಚು ಹೊತ್ತಾಗಿಲ್ಲ. ಮೂಡಣ ಘಟ್ಟ ಪ್ರದೇಶದಲ್ಲಿ ಅತಿಯಾಗಿ ಸುರಿದ ಮಳೆ, ಬಂಟ್ವಾಳದಲ್ಲಿಯೂ ಅದೇ ರೀತಿ ಸುರಿದ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ಪ್ರವಾಹ ಉಂಟಾಯಿತು. ನದಿಯು ಭೋರ್ಗೆರೆಯುತ ಶರವೇಗದಲ್ಲಿ ಉಕ್ಕಿ ಹರಿಯಿತು. ಮರಗಿಡಗಳು ಕೊಚ್ಚಿಕೊಂಡು ಹೋದವು. ದಡ ಪ್ರದೇಶಗಳು ಮುಳುಗಡೆ ಹೊಂದಿದವು. ಮಳೆಯ ಅಬ್ಭರದಿಂದ ಬಂಟ್ವಾಳ ಪಟ್ಟಣವು ಪೂರ್ತಿ ಮುಳುಗಡೆ ಹೊಂದಿತು. ಮನೆ- ಅಂಗಡಿಗಳ ಗೊಡೆಗಳು ಉರುಳಿ ಬಿದ್ದವು. ಅಂದು ಅತಿವೃಷ್ಠಿಯಿಂದ ಜನ ಜೀವನ ತತ್ತರಿಸಿತು. ಉಲ್ಲಾಳದ ರೈಲ್ವೇ ಸೇತುವೆಯ ಒಂದು ಪಾರ್ಶ್ವ ಘಾಸಿಗೊಂಡಿತ್ತು. ಹಾಗಾಗಿ ಕೆಲವು ಸಮಯ ರೈಲು ಸಂಚಾರವನ್ನು ಅಂದು ನಿಲ್ಲಿಸಲಾಗಿತಂತೆ. ಹರಿಯುವ ನೀರಿನಲ್ಲಿ ಅಸಹಾಯಕರಾಗಿ ಪರದಾಡುತ್ತಿದ್ದ ಜನರನ್ನು ಅಂದು ನಿತ್ಯಾನಂದರು ಈಜಿ ರಕ್ಷಿಸಿ ‘ಆಪದ್ಬಾಂಧವ’ ಆಗಿದ್ದರಂತೆ. 1923 ರಲ್ಲಿ ನಡೆದ ದುರಂತ ಘಟನೆ ಇದು. ಈ ರೀತಿ ನಡೆಯಲು ‘ನಿತ್ಯಾನಂದ ಸ್ವಾಮಿಗಳಿಗೆ ಅವಮಾನ ಮಾಡಿದರ ಫಲ..!’ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಅಂದು ಹಿರಿಯರಿಂದಲೇ ಕೇಳಿಬಂದವು. ಪ್ರಕೃತಿಯ ಮಾತೆಯ ಮುನಿಸು ಜನರ ಪ್ರಾರ್ಥನೆಗಳಿಗೆ ಮಣಿದು ಮರುದಿನ ಕಡಿಮೆಯಾಯಿತು. ನೇತ್ರಾವತಿ ಸಹಜ ಸ್ಥಿತಿಗೆ ಬಂದಳು. ಅಂದು ನಡೆದ ಈ ಘಟನೆ ಇಂದಿನವರು ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಮಳೆಗಾಲದ ಸಮಯದಲ್ಲಿ ನೆರೆ ಬರುವ ಲಕ್ಷಣಗಳು ಕಂಡು ಬಂದಾಗ, ಭಗವಾನ್ ನಿತ್ಯಾನಂದರು ನೆನಪಿಗೆ ಬರುತ್ತಾರೆ. ಅವರ ಚಮತ್ಕಾರ ಲೀಲೆಗಳು ಹೇಳಲ್ಪಡುತ್ತವೆ.

-ತಾರಾನಾಥ್‌ ಮೇಸ್ತ,ಶಿರೂರು.

Advertisement

LEAVE A REPLY

Please enter your comment!
Please enter your name here