ದೇಗುಲ ನಗರಿ ಮೂಡುಬಿದಿರೆಯಲ್ಲಿ ರಾತ್ರಿ ಗಸ್ತು: ಭಟ್ಟಾರಕ ಶ್ರೀ ಮಾರ್ಗದರ್ಶನದಲ್ಲಿ ಸಮಿತಿ ರಚನೆ

0
1286

ಮೂಡುಬಿದಿರೆ: ಬಸದಿಗಳ ನಾಡು, ದೇಗುಲಗಳ ಬೀಡು ಮೂಡುಬಿದಿರೆಯಲ್ಲಿ ಪ್ರತೀ ದೇಗುಲ, ಬಸದಿ ಆರಾಧನಾ ಕೇಂದ್ರಗಳ, ಶ್ರದ್ಧಾ ಕೇಂದ್ರಗಳ ರಕ್ಷಣೆ, ಸುವ್ಯವಸ್ಥೆ, ಧರ್ಮ ಸಾಮರಸ್ಯ ಶಾಂತಿ ಸೌಹಾರ್ದತೆಗಳಿಗಾಗಿ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೂಡುಬಿದಿರೆ ಜೈನಮಠದ ಮಠಾದೀಶ  ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಗೌರವ ಮಾರ್ಗದರ್ಶನದಲ್ಲಿ ಸಮಿತಿ ರಚನೆಗೊಂಡಿತು. ಹಾಗೂ ರಾತ್ರಿ ಗಸ್ತು ಕೈಗೊಳ್ಳುವುದು ಸೇರಿದಂತೆ ಮಹತ್ವದ ತೀರ್ಮಾನಗಳನ್ನು ಕೈಗೊಂಡಿತು.

ಮೂಡುಬಿದಿರೆ ಜೈನಮಠದ ರಮಾರಾಣಿ ಶೋಧ ಸಂಸ್ಥಾನ ದ ನೂತನ ಸಭಾಭವನದಲ್ಲಿ ಬುಧವಾರ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮೂಡುಬಿದಿರೆ ಪೊಲೀಸ್‌ ಠಾಣೆಯ ನಿರೀಕ್ಷಕರಾದ ದಿನೇಶ್ ಕುಮಾರ್‌ ಸೂಕ್ತ ಮಾರ್ಗದರ್ಶನ ನೀಡಿದರು. ಪೊಲೀಸ್‌ ಇಲಾಖೆಯ ಸಿಬ್ಬಂದಿಗಳ ಜೊತೆಗೆ ಧಾರ್ಮಿಕ ಕೇಂದ್ರಗಳ ಸ್ವಯಂ ಸೇವಕರು, ಹಾಗೂ ಭದ್ರತಾ ಸಿಬ್ಬಂದಿಗಳು ಸಹಯೋಗ ನೀಡುವ ಮೂಲಕ ಬೀಟ್‌ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ನಡೆಸಲು ರೂಪುರೇಶೆಗಳನ್ನು ಸಿದ್ದಪಡಿಸಲಾಯಿತು.

ಭದ್ರತಾ ವ್ಯವಸ್ಥೆಯ ಸಿಬ್ಬಂದಿಗಳ ಸಂಚಾರಕ್ಕೆ ಬೊಲೆರೋ ವಾಹನದ ವ್ಯವಸ್ಥೆಯನ್ನು ಶ್ರೀಮಠದ ವತಿಯಿಂದ ನೀಡುವುದಾಗಿ ಶ್ರೀಗಳು ಘೋಷಿಸಿದರು. ಒಟ್ಟಾರೆ ಖರ್ಚಿನ ಬಾಪ್ತು ಮೊದಲ ತಿಂಗಳ ಖರ್ಚುವೆಚ್ಚಗಳನ್ನು ಮೂಡುಬಿದಿರೆಯ ಶ್ರೀವೆಂಕಟರಮಣ ದೇವಸ್ಥಾನದ ವತಿಯಿಂದ ನೀಡಲಾಗುವುದು, ದ್ವಿತೀಯ ತಿಂಗಳ ಖರ್ಚನ್ನು ಶ್ರೀ ಜೈನಮಠ ಭರಿಸಲಿದ್ದು ತೃತೀಯ ತಿಂಗಳ ಖರ್ಚುಗಳನ್ನು ಮೂಡುಬಿದಿರೆಯ ಕಾಳಿಕಾಂಬ ಕ್ಷೇತ್ರ ಹಾಗೂ ಬಡಗು ಮಹಾಗಣಪತಿ ದೇವಸ್ಥಾನ ಆಲಂಗಾರು ಭರಿಸುವುದಾಗಿ ಪ್ರಕಟಿಸಿದರು.

ಮೂಡುಬಿದಿರೆಯ ಒಂಭತ್ತನೇ ವಾರ್ಡು ವ್ಯಾಪ್ತಿಯಲ್ಲಿ ಅತೀ ಹೆಚ್ಚುಬಸದಿ ಹಾಗೂ ದೇಗುಲಗಳಿದ್ದು ಎಲ್ಲಾ ಶ್ರದ್ಧಾಕೇಂದ್ರಗಳ ಬಂದೋಬಸ್ತ್‌ ಗೂ ಗಮನ ಹರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಇದು ಸಕಾಲ: ಮಳೆಗಾಲದಲ್ಲಿ ಕಳ್ಳತನ ಪ್ರಕರಣಗಳು ಅಧಿಕ. ಈ ಸಂದರ್ಭ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುವುದು ಅನಿವಾರ್ಯ. ಈ ಪರಿಸ್ಥಿತಿಯಲ್ಲಿ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ಉತ್ತಮ ಎಂದು ಮೂಡುಬಿದಿರೆ ಪೊಲೀಸ್‌ ಠಾಣೆಯ ನಿರೀಕ್ಷಕ ದಿನೇಶ್‌ ಕುಮಾರ್‌ ಅಭಿಪ್ರಾಯಿಸಿದರು.

ಜಿ.ಉಮೇಶ್‌ ಪೈ, ಕೆ.ಪಿ.ಜಗದೀಶ್‌ ಅಧಿಕಾರಿ, ಸುಬ್ರಹ್ಮಣ್ಯ ಭಟ್‌ ಆಲಂಗಾರು, ಯಂ ಸುದೇಶ್‌ ಕುಮಾರ್‌, ಎನ್.ಜಯಕರ ಆಚಾರ್ಯ, ಎಂ.ಸಂಜಯಂತ್‌ ಕುಮಾರ್‌, ಎಂ.ಬಾಹುಬಲಿ ಪ್ರಸಾದ್‌, ಬಿ.ರಾಘವೇಂದ್ರ ಕಾಮತ್‌, ಪ್ರವೀಣ್‌ ಕುಮಾರ್‌ ಜೈನ್‌, ನಾಗವರ್ಮ ಜೈನ್‌,ಶ್ವೇತಾ ಪ್ರವೀಣ್‌ ಮೂಡುಬಿದಿರೆ, ಬೆಳುವಾಯಿ ಭಾಸ್ಕರ ಆಚಾರ್ಯ, ಶಿವರಾಮ ಆಚಾರ್ಯ ಉಳಿಯ ,ಶಿವಾನಂದ ಪ್ರಭು ಸೇರಿದಂತೆ ಇತರರಿದ್ದರು.

LEAVE A REPLY

Please enter your comment!
Please enter your name here