`ದುರಂತ' ಶತಕ

0
681

ನೂರರ ಗಡಿದಾಟಿದ ಅಗ್ನಿ ದುರಂತ…
ಎಚ್.ಕೆ.
ಬಿಸಿಲಝಳ ಏರುತ್ತಿದ್ದಂತೆಯೇ ಅಗ್ನಿ ಆಕಸ್ಮಿಕಗಳು, ದುರಂತಗಳು ಅಧಿಕವಾಗುತ್ತಿದೆ. ಎಲ್ಲೆಡೆ ಕುರುಚಲು ಗಿಡಗಳು, ಮುಳಿಹುಲ್ಲುಗಳು ಒಣಗಿಹೋಗಿವೆ. ಮರಳಗಳೆಲೆಗಳು ಒಣಗಿ ಉದುರಿ ತರಗೆಲೆಗಳಾಗಿವೆ. ನೀರ ಆಸರೆಯಿಲ್ಲದೆ ಅದೆಷ್ಟೋ ಪೊದೆಗಳು ಒಣಗಿನಿಂತಿವೆ…ಒಂದು `ಕಿಡಿ’ ಇಡೀ ಭೂಮಿಯನ್ನೇ ಸುಡುತ್ತದೆ ಎಂಬಂತೆ ಎಲ್ಲೆಂದರಲ್ಲಿ ಅಗ್ನಿ ತಾಂಡವವಾಗುತ್ತಿದೆ…ಹೌದು ಮೂಡಬಿದರೆಯಾದ್ಯಂತ ಬೆಂಕಿಯ ರುದ್ರ ನರ್ತನ ಕಳೆದ ಮೂರು ತಿಂಗಳಲ್ಲಿ ಅತಿಯಾಗಿದೆ.
 
 
ಜನವರಿ ತಿಂಗಳಿನಿಂದ ಮಾರ್ಚ್ 24ರ ತನಕ ಮೂಡಬಿದಿರೆ ಅಗ್ನಿಶಾಮಕ ದಳದ ವ್ಯಾಪ್ತಿಯಲ್ಲಿ ಒಟ್ಟು 100 ದುರಂತಗಳು ಸಂಭವಿಸಿದೆ. ಈ ಪೈಕಿ 99 ಅಗ್ನಿ ದುರಂತಗಳೇ ಆಗಿದ್ದು 1 ರಕ್ಷಣಾ ಕಾರ್ಯಾಚರಣೆ.
 
 
ಮೂಡಬಿದಿರೆಯ ಅಗ್ನಿಶಾಮಕ ದಳ ಮೂಡಬಿದಿರೆ ಬೆಳ್ತಂಗಡಿ ಹೆದ್ದಾರಿಯ ಕಲ್ಲಬೆಟ್ಟು ಎಂಬಲ್ಲಿ ಕಾರ್ಯಾಚರಿಸುತ್ತಿತ್ತು. ನಗರ ಕೇಂದ್ರದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿ ಪುರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಇತ್ತೀಚೆಗಷ್ಟೇ ನಗರದಿಂದ ನಾಲ್ಕು ಕಿಲೋಮೀಟರ್ ದೂರದ ಕಡಲ್ ಕೆರೆ ಸಮೀಪ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಅಚ್ಚುಕಟ್ಟಾದ ಕಾರ್ಯಾಚರಣೆಯ ಮೂಲಕ ಎಲ್ಲರ ಪ್ರಶಂಸೆಗೆ ಮೂಡಬಿದಿರೆ ಅಗ್ನಿಶಾಮಕ ದಳ ಪಾತ್ರವಾಗಿದ್ದು ಸುಳ್ಳಲ್ಲ. ಇದ್ದ ಸಿಬ್ಬಂದಿಗಳಲ್ಲೇ ನಿಷ್ಠೆಯ ಕಾರ್ಚಾಚರಣೆ ಮೂಲಕ ಕ್ಲಪ್ತ ಸಮಯದಲ್ಲೇ ಸಮಸ್ಯೆಗೆ ಸ್ಪಂದಿಸುವ ಇವರ ಕಾರ್ಯವನ್ನು ಪ್ರತಿಯೊಬ್ಬರೂ ನೆನೆಯುತ್ತಾರೆ.
 
 
 
ಹೊಸ ವರುಷಾರಂಭದಲ್ಲೇ ಅಗ್ನಿದುರಂತ ಪ್ರಾರಂಭವಾಗಿದೆ. ಈವರೆಗೆ 4 ಮನೆಗಳು, 1 ಎ.ಟಿ.ಎಂ, 1 ಕಾರು, 8 ರಬ್ಬರ್ ತೋಟ, 16 ಗೇರು ತೋಟ, 2 ಅನನಾಸ್ ತೋಟ, 2 ಮಾವಿನ ತೋಟಗಳು, 1ಡಾಮರ್ ಮಿಕ್ಸಿಂಗ್ ಘಟಕ, 13 ಅರಣ್ಯ ಪ್ರದೇಶಗಳು ಹಾಗೂ ಉಳಿದಂತೆ ಕಾಡು ಮುಳಿಹುಲ್ಲ ಗುಡ್ಡೆಗಳು ಬೆಂಕಿ ಆಕಸ್ಮಿಕಕ್ಕೆ ಒಳಗಾಗಿವೆ.
 
 
ಕಡಂದಲೆ ವ್ಯಾಪ್ತಿಯಲ್ಲಿ ಅತ್ಯಧಿಕ ಬೆಂಕಿ ದುರಂತಗಳು ಸಂಭವಿಸಿದೆ ಎಂಬುದು ಅಗ್ನಿಶಾಮಕ ಸಿಬ್ಬಂದಿಗಳ ಅಭಿಪ್ರಾಯ. ಬಿ.ಟಿ. ರಸ್ತೆಯ ಬಳಿಯ 50 ಎಕ್ಕರೆಗಳಷ್ಟು ಕಾಡು ಬೆಂಕಿಗೆ ನಾಶವಾಗಿದೆ ಎಂಬುದು ಗಮನಾರ್ಹ ಅಂಶ.
 
 
 
30 ಹೆಚ್ಚುವರಿ ಅವಘಡಗಳು
ಕಳೆದ ವರ್ಷಮಾರ್ಚ್ 24ರಂದು 61 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ ಇದರ ಸಂಖ್ಯೆ 100ರ ಗಡಿದಾಟಿದೆ. ಅಕ್ಷರಶಃ ಈ ಬಾರಿ ಬೆಂಕಿ ದುರಂತದ ಸಂಖ್ಯೆ ಏರಿಕೆಯಾಗಿದೆ. ಮಾರ್ಚ್ ಮಧ್ಯಂತರದಲ್ಲೇ ಈ ಪ್ರಮಾಣ ಇಷ್ಟಾದರೆ ಏಪ್ರಿಲ್, ಮೇ ತಿಂಗಳ ಸ್ಥಿತಿ ಊಹಿಸಲೂ ಕಷ್ಟ ಎಂಬುದು ಇಲ್ಲಿನ ಅಧಿಕಾರಿ ಕಿಶೋರ್ ಕುಮಾರ್ ಅವರ ಅಭಿಪ್ರಾಯ. ಹಲವು ಕಡೆಗಳಲ್ಲಿ ಜನರ ನಿರ್ಲಕ್ಷ್ಯದಿಂದಲೇ ಬೆಂಕಿ ದುರಂತ ಸಂಭವಿಸುತ್ತದೆ. ಮನೆ ಸುತ್ತಮುತ್ತ, ಜಮೀನಿನಲ್ಲಿ ಅನಾವಶ್ಯಕ ಕಸಗಳನ್ನು ಬೇಕಾಬಿಟ್ಟಿ ಬಿಡುವುದರಿಂದ ಬೆಂಕಿ ಅವಘಡ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುತ್ತಾರೆ.
 
 
 
40ಕಿಲೋ ಮೀಟರ್ ವ್ಯಾಪ್ತಿ
ಮೂಡಬಿದಿರೆ ಅಗ್ನಿಶಾಮಕ ದಳ ತನ್ನ ಕೇಂದ್ರದಿಂದ 40ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲೇ ದುರಂತ ಸಂಭವಿಸಿದರೂ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದೆ. ಮೂಡಬಿದಿರೆಯಿಂದ ಕಾರ್ಕಳ ಭಾಗದಲ್ಲಿ ಬೆಳುವಾಯಿ, ಇತ್ತ ಹೊಸಂಗಡಿ, ಮಂಗಳೂರು ಭಾಗದಲ್ಲಿ ಎಡಪದವು, ಕಿನ್ನಿಗೋಳಿ – ಐಕಳದ ಪ್ರದೇಶದಲ್ಲಿ ಬೆಂಕಿ ದುರಂತ, ಅಥವಾ ಯಾವುದೇ ರಕ್ಷಣಾ ಕಾರ್ಯಗಳಿದ್ದರೂ ತೆರಳುತ್ತಾರೆ. ಮೂಡಬಿದಿರೆಯಲ್ಲಿ ಅಗ್ನಿಶಾಮಕ ದಳದ ಒಂದೇ ವಾಹನವಿದೆಯಷ್ಟೇ. ಇನ್ನೊಂದು ವಾಹನವೂ ಹೆಚ್ಚುವರಿ ಸಿಬ್ಬಂದಿಗಳು ಸಿಕ್ಕದರೆ ಇನ್ನಷ್ಟು ಪರಿಣಾಮಕಾರಿ ಕಾರ್ಯಗಳನ್ನು ಮಾಡಬಹುದು ಎಂಬುದು ಇಲ್ಲಿನ ಅಧಿಕಾರಿಗಳ ಅಭಿಪ್ರಾಯ.
 
 
 
ಮೂಲ್ಕಿಯಲ್ಲಾಗಲಿ…
ಮೂಲ್ಕಿಯಲ್ಲಿ ಬಹುವರ್ಷದ ಬೇಡಿಕೆಯಿದೆ. ಅಲ್ಲೊಂದು ಅಗ್ನಿಶಾಮಕ ದಳದ ಕಚೇರಿಯಾದರೆ ಮೂಡಬಿದಿರೆಯ ಅಗ್ನಿಶಾಮಕ ದಳಕ್ಕೆ ಕೊಂಚ ಹೊರೆ ಕಡಿಮೆಯಾಗಬಹುದು. ಇತ್ತ ಕಿನ್ನಿಗೋಳಿ, ಐಕಳ ಭಾಗದಲ್ಲಿ ಏನಾದರೂ ಅವಘಡ ಸಂಭವಿಸಿದರೂ ಇದೇ ಮೂಡಬಿದಿರೆ ಅಗ್ನಿಶಾಮಕ ದಳದವರು ಕಾಯರ್ಾಚರಿಸಬೇಕಾಗುತ್ತದೆ. ಮೂಡಬಿದಿರೆಯಿಂದ ಅಷ್ಟು ದೂರ ತಲುಪಲು ಸಾಕಷ್ಟು ಸಮಯಾವಕಾಶವೂ ಬೇಕಾಗುತ್ತದೆ.
 
 
 
ಹೈಲೈಟ್ಸ್
* ಅಗ್ನಿ ಆಕಸ್ಮಿಕದ ಪ್ರಮಾಣ ಅಧಿಕ
* ಹೆಚ್ಚುವರಿ ಸಿಬ್ಬಂದಿಗಳು, ಹೆಚ್ಚುವರಿ ವಾಹನವೂ ಇದ್ದರೆ ಅನುಕೂಲ
* ನಗರ ಕೇಂದ್ರದಲ್ಲಿ ಕಚೇರಿಯಾದರೆ ಅನುಕೂಲ
* ಅರಣ್ಯ ಬೆಂಕಿ ಹೆಚ್ಚಾಗುತ್ತಿದೆ.

LEAVE A REPLY

Please enter your comment!
Please enter your name here