ದಾಳಿ ಖಂಡಿಸಿ ಮನವಿ

0
571

ಮಂಗಳೂರು ಪ್ರತಿನಿಧಿ ವರದಿ
ಇತ್ತೀಚೆಗೆ ತುಮಕೂರಿನಲ್ಲಿ ಎಐಎಸ್ಎಫ್ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿ ದಾಳಿಕೋರರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಹಾಗೂ ಗೃಹ ಸಚಿವರಿಗೆ ಸಿಪಿಐ ನಿಯೋಗ ಇಂದು ಮನವಿ ಸಲ್ಲಿಸಿತ್ತು.
 
ಪ್ರಸ್ತುತ ಕೇಂದ್ರ ಸರಕಾರದ ಆಡಳಿತದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಅವ್ಯಾಹತವಾದ ದಾಳಿಗೆ ಒಳಗಾಗುತ್ತಿರುವುದನ್ನು ನೋಡುತ್ತಿದ್ದೇವೆ. ಐಐಟಿ ಮದರಾಸಿನಲ್ಲಿ ಅಂಬೇಡ್ಕರ್-ಪೆರಿಯಾರ್ ಅಧ್ಯಯನ ವೃಂದದ ನಿಷೇಧ, ಪುನಾ ಫಿಲ್ಮ್ ತರಬೇತಿ ಸಂಸ್ಥೆಯಲ್ಲಿ ಸಂಘಪರಿವಾರಕ್ಕೆ ಸೇರಿದ ಗಜೇಂದ್ರ ಚೌಹಾನ್ರ ನೇಮಕ, ಹೈದರಾಬಾದ್ ವಿವಿಯಲ್ಲಿ ದಲಿತ ಸಮುದಾಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ವ್ಯವಸ್ಥಿತ ಕೊಲೆ ಮತ್ತು ಇದೀಗ ಆತನ ಸ್ಮಾರಕವನ್ನು ಧ್ವಂಸಗೊಳಿಸಲು ಅಧಿಕಾರಿಗಳ ತೀರ್ಮಾನ, ದೆಹಲಿ ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹಾಗೂ ಎಐಎಸ್ಎಫ್ ವಿದ್ಯಾರ್ಥಿ ಸಂಘನೆಯ ನಾಯಕ ಕನ್ನಯ್ಯ ಕುಮಾರ್ ಮೇಲೆ ಸುಳ್ಳು ಆರೋಪ ಹೊರಿಸಿ ನಡೆಸಿದ ಬಂಧನ -ಇವೆಲ್ಲವೂ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಸರಕಾರ ನಡೆಸುತ್ತಿರುವ ಅಮಾನವೀಯ ಸಂವಿಧಾನ ವಿರೋಧಿ ಕ್ರಮಗಳಾಗಿವೆ. ಒಂದು ಕಡೆ ವಿದ್ಯಾರ್ಥಿಗಳನ್ನು ಲೂಟಿ ಮಾಡಲು ಖಾಸಗಿ ವಿಶ್ವವಿದ್ಯಾಲಯಗಳಿಗೆ ವಿಪರೀತ ಸ್ವಾತಂತ್ರ್ಯ ನೀಡುತ್ತಿದ್ದರೆ ಇನ್ನೊಂದು ಕಡೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮುಗಿಸಲು ಹೊರಟಿದೆ.
 
ಈ ಎಲ್ಲಾ ಪ್ರಕರಣಗಳ ಸತ್ಯಾಸತ್ಯತೆಯನ್ನು ಕರಪತ್ರಗಳಲ್ಲಿ ಮುದ್ರಿಸಿ ತುಮಕೂರಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಂಚುತ್ತಿದ್ದ ಎಐಎಸ್ಎಫ್ ಹಾಗೂ ಎಐಟಿಯುಸಿ ಕಾರ್ಯಕರ್ತರ ಮೇಲೆ ಸಂಘ ಪರಿವಾರದ ಗೂಂಡಾಗಳು ದಾಳಿ ನಡೆಸಿದ ಪ್ರಕರಣ ತಮಗೆ ತಿಳಿದಿದೆ. ದಿನಾಂಕ 30-03-2016 ರಂದು ತುಮಕೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕರಪತ್ರ ಹಂಚುತ್ತಿದ್ದ ಜ್ಯೋತಿ ಹಾಗೂ ಚಿನ್ನಪ್ಪ ಮತ್ತಿತರ ಕಾರ್ಯಕರ್ತರನ್ನು ಎಬಿವಿಪಿ-ಆರ್ಎಸ್ಎಸ್-ಸಂಘಪರಿವಾರದ ಸುಮಾರು 60ರಷ್ಟಿದ್ದ ಗೂಂಡಾಗಳು ಬೆನ್ನಟ್ಟಿ ದಾಳಿ ಮಾಡಿರುವುದರಿಂದ ಇವರು ತುರ್ತು ನಿಗಾ ಘಟಕದಲ್ಲಿ ದಾಖಲಾದ ವಿಚಾರ ತಮಗೆ ತಿಳಿದಿದೆ.
 
 
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಯೇ ವಿನಹ: ಯಾರನ್ನೂ ಬಂಧಿಸದಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಸರಕಾರದ ಈ ನಿರ್ಲಕ್ಷ್ಯ ಖಂಡಾನಾರ್ಹವಾಗಿದೆ.
ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ.ರಾವ್, ಸಹ ಕಾರ್ಯದರ್ಶಿಗಳಾದ ವಿ.ಎಸ್.ಬೇರಿಂಜ, ಬಿ.ಶೇಖರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುರೇಶ್ ಕುಮಾರ್ ಬಂಟ್ವಾಳ್, ಎಂ.ಕರುಣಾಕರ್ ಮಾರಿಪಳ್ಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here