ತ್ಯಾಜ್ಯ ನಿರ್ವಹಣೆಯಲ್ಲಿ ಲೋಪ – ಸರಿಪಡಿಸುವಂತೆ ವಿಪಕ್ಷಗಳ ಪಟ್ಟು

0
363

ಮೂಡುಬಿದಿರೆ ಪ್ರತಿನಿಧಿ ವರದಿ
ಮೂಡಬಿದಿರೆ ಪುರಸಭೆಯ ಸಾಮಾನ್ಯ ಸಭೆ
ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ತೀವ್ರ ಸ್ವರೂಪದ ಲೋಪಗಳುಂಟಾಗುತ್ತಿದೆ. ತ್ಯಾಜ್ಯ ನಿರ್ವಹಣೆಗೆ ಕೋಟಿಗಟ್ಟಲೆ ವ್ಯಯವಾಗುತ್ತಿದೆ. ಇದರಲ್ಲಿ ಅವ್ಯವಹಾರವಾಗುತ್ತಿರುವುದು ಸ್ಪಷ್ಟ ಎಂದು ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ವಿಷಯ ಪ್ರಸ್ತಾಪಿಸಿದರು.
 
 
ನೆರೆಯ ಕಾರ್ಕಳ ನಗರ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಕನಿಷ್ಠ ಖರ್ಚಿನಲ್ಲಿ ತ್ಯಾಜ್ಯ ವಿಲೇವಾರಿ ನಡೆಸಲಾಗುತ್ತದೆ. ಅದೇ ಮಾದರಿಯನ್ನು ನಮ್ಮಲ್ಲೇಕೆ ಅಳವಡಿಸಬಾರದು? ವಿಷಯ ಗೊತ್ತಿಲ್ಲದಿದ್ದರೆ ಅಲ್ಲಿ ಹೋಗಿ ಅಧ್ಯಯನ ನಡೆಸುವ; ಅವರ ಮಾದರಿಯನ್ನು ಅನುಷ್ಠಾನಗೊಳಿಸುವ ಎಂಬ ಸಲಹೆ ನೀಡಿದರು. ಆದಾಯ ಕಡಿಮೆ ಖರ್ಚೇ ಜಾಸ್ತಿ ಎಂಬ ರೀತಿಯ ವ್ಯವಹಾರ ಸರಿಯಲ್ಲಿ . ಈ ಬಗ್ಗೆ ವಿಶೇಷ ಆಲೋಚನೆ ಮಾಡಬೇಕೆಂದು ಆಗ್ರಹಿಸಿದರು. ಈ ವಿಚಾರ ಪುರಸಭಾ ಸದಸ್ಯರಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
 
 
 
ಮನೆ , ಅಂಗಡಿಗಳ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಯ ಬಗ್ಗೆ ಸಮರ್ಪಕ ವ್ಯವಸ್ಥೆಯಾಗುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಹಿರಿಯ ಸದಸ್ಯ ಪಿ.ಕೆ. ಥೋಮಸ್ ಮಾತನಾಡಿ ನಾಲ್ಕು ವರುಷಗಳ ಹಿಂದೆಯೇ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾದರಿ ವ್ಯವಸ್ಥೆ ಮಾಡುವಲ್ಲಿ ಪುರಸಭೆ ಮುಂದಡಿಯಿಟ್ಟಿದೆ. ಇದಕ್ಕಾಗಿ ವಿಶೇಷ ಪುರಸ್ಕಾರಗಳೂ ಲಭಿಸಿವೆ. ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಸಭೆಗೆ ತಿಳಿಸಿದರು. ತ್ಯಾಜ್ಯ ವಿಲೇವಾರಿ ಹಾಗೂ ಪೌರ ಕಾರ್ಮಿಕರಿಗೆ ನೀಡುವ ವೇತನದಲ್ಲಿ ಗೊಂದಲಗಳಿವೆ. ಅದರ ಬಗ್ಗೆ ಸ್ಪಷ್ಟತೆಯ ಅವಶ್ಯಕತೆಯಿದೆ ಎಂದು ಸದಸ್ಯ ಪ್ರಸಾದ್ ಕುಮಾರ್ ಧ್ವನಿಯೆತ್ತಿದರು. ತ್ಯಾಜ್ಯ ನಿರ್ವಹಣೆಯ ವಿಚಾರದಲ್ಲೇ ಪ್ರತ್ಯೇಕ ಸಭೆ ಕರೆದು ಅದರಲ್ಲಿ ಈ ಚರ್ಚೆಗಳಾಗುವುದು ಉತ್ತಮ ಎಂದು ಸದಸ್ಯ ಸುರೇಶ್ ಕೋಟ್ಯಾನ್ ಸಲಹೆ ನೀಡಿದರು.

LEAVE A REPLY

Please enter your comment!
Please enter your name here