ತೆಂಕುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪುತ್ತಿಗೆ ಕುಮಾರ ಗೌಡ ಹಾಗೂ ಸುಬ್ರಾಯ ಹೊಳ್ಳ ಕಾಸರಗೋಡು ಇವರಿಗೆ ಸನ್ಮಾನ

0
2242

” ಯಕ್ಷಗಾನವು ಇಂದು ವಿಶ್ವವ್ಯಾಪಿಯಾಗಿದೆ .ಯಕ್ಷಗಾನದ ಪ್ರೇಮಿಗಳೂ ಹೆಚ್ಚಾಗಿದ್ದಾರೆ . ಯಕ್ಷಗಾನ ಕಲಾವಿದರನ್ನು ಸಂಮಾನಿಸುವುದೆಂದರೆ , ಯಕ್ಷಗಾನವನ್ನೇ ಆರಾಧಿಸಿದಂತೆ .ಹಿಂದಿನ ಕಾಲಕ್ಕೆ ಹೋಲಿಸಿದರೆ , ಇಂದು ಯಕ್ಷಗಾನ ಕಲಾವಿದರನ್ನು ಸಂಮಾನಿಸುವ ಸಂಪ್ರದಾಯ ಹೆಚ್ಚಾಗಿದೆ . ಹಿರಿಯ , ಸಾಧಕ ಕಲಾವಿದರನ್ನು ಸಂಮಾನಿಸುವುದು ಉತ್ತಮ ಬೆಳವಣಿಗೆ ” ಎಂದು ಯಕ್ಷಗಾನ ವಿಮರ್ಶಕ ಎಂ.ಶಾಂತರಾಮ ಕುಡ್ವ ನುಡಿದರು . ಮೂಡಬಿದಿರೆ, ಕಾಶಿಪಟ್ಣದಲ್ಲಿ ಇತ್ತೀಚೆಗೆ ಕೇಳಬೊಟ್ಟ ದಿ.ಸುಬ್ರಾಯ ಅಸ್ರಣ್ಣರ‌ ಧರ್ಮಪತ್ನಿ ಶ್ರೀಮತಿ ಸುನಂದಮ್ಮರ 75 ನೇ ವರ್ಷದ ಶಾಂತಿ ಹಾಗೂ ಚಿ.ಶ್ರುತಸುಬ್ರಹ್ಮಣ್ಯ ನ ಬ್ರಹ್ಮೋಪದೇಶದ ಪ್ರಯುಕ್ತ ಹನುಮಗಿರಿ ಮೇಳದ ಯಕ್ಷಗಾನ ಪ್ರದರ್ಶನದಂದು ಸುರತ್ಕಲ್ ಮೇಳದಲ್ಲಿ ತಿರುಗಾಟ ನಡೆಸಿ ನಿವೃತ್ತರಾದ ಪುತ್ತಿಗೆ ಕುಮಾರ ಗೌಡ ಹಾಗೂ ಹನುಮಗಿರಿ ಮೇಳದ ಕಲಾವಿದ ಸುಬ್ರಾಯ ಹೊಳ್ಳರನ್ನು ಶ್ರೀ ವಾಸುದೇವ ಭಟ್ ಹಾಗೂ ಶ್ರೀ ಶ್ರೀಪತಿ ಭಟ್ ರವರು ಸಂಮಾನಿಸಿದರು ‌.

ಅಧ್ಯಕ್ಷತೆ ವಹಿಸಿದ ವೇದಮೂರ್ತಿ ಶ್ರೀ ಶಶಾಂಕ ಭಟ್ , ಬಳೆಂಜ ” ಇಂದು ಸಂಮಾನಿಸಲ್ಪಟ್ಟ ಕಲಾವಿದರೀರ್ವರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ ” ಎಂದರು . ಸಂಮಾನಕ್ಕೆ ಉತ್ತರಿಸುತ್ತಾ ಸುಬ್ರಾಯ ಹೊಳ್ಳರು ,
” ಇಂದಿನ ಸಂಮಾನವು ರಾಜ್ಯ ಪ್ರಶಸ್ತಿ ದೊರೆತುದಕ್ಕಿಂತಲೂ ಹೆಚ್ಚಿನ ಸಂತಸ ನೀಡಿದೆ . ಏಕೆಂದರೆ , ಈ ಸಂಮಾನವನ್ನು ಸಂಘಟಕರೇ ನೀಡಿರುವಂತಹದು . ಯಾವುದೇ ಪ್ರಭಾವದಿಂದ ಪಡೆದುದಲ್ಲ ” ಎಂದು ನುಡಿದರು . ವೇದಮೂರ್ತಿ ಶ್ರೀ ವಾದಿರಾಜ ಉಪಾಧ್ಯಾಯ , ಕೊಲಕ್ಕಾಡಿಯವರು ಆಶೀರ್ವಚನ ನೀಡಿದರು . ಶ್ರೀ ರಾಧಾಕೃಷ್ಣ ತಂತ್ರಿ ಎಡಪದವು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು . ಪ್ರಾರಂಭದಲ್ಲಿ ಸೂರ್ಯ ನಾರಾಯಣ ದೇವಸ್ಥಾನ , ನಾರಾವಿಯ ಅರ್ಚಕರಾದ ವೇದಮೂರ್ತಿ ಶ್ರೀ ಕೃಷ್ಣ ತಂತ್ರಿಗಳು ಸ್ವಾಗತಿಸಿದರೆ , ಕೊನೆಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಶ್ರೀಪತಿ ಭಟ್ ಧನ್ಯವಾದ ಸಲ್ಲಿಸಿದರು .
ಶ್ರೀ ಯಶೋಧರ ಮರೋಡಿ ಕಾರ್ಯಕ್ರಮ ನಿರೂಪಿಸಿದರು .
ಸಂಮಾನಿತರಿಗೆ ಹಾರ ,ಶಾಲು ,ಫಲವಸ್ತು , ಸ್ಮರಣಿಕೆಯೊಂದಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಲಾಯಿತು . ನಂತರ ಹನುಮಗಿರಿ ಮೇಳದವರಿಂದ ” ಸುದರ್ಶನ ವಿಜಯ – ಭಾರ್ಗವ ವಿಜಯ – ರತಿಕಲ್ಯಾಣ ” ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಜರಗಿತು .

LEAVE A REPLY

Please enter your comment!
Please enter your name here