ತುಳು ಭಾಷಿಗರಿಗೆ ಋಣತೀರಿಸುವ ಹೊತ್ತು…ಯೋಚಿಸಿ…

0
1069

ವಿಶೇಷ ವರದಿ: ಹರೀಶ್ ಕೆ.ಆದೂರು

ಮೂಡುಬಿದಿರೆ: ಹೌದು ಎಂಥಹವರನ್ನೂ ಮನಕಲುಕುವಂತೆ ಮಾಡುತ್ತದೆ… ಅದ್ಭುತ, ಅನಘ್ಯ ಕವಿ ವಾಸವಾಗಿದ್ದ ಮನೆ ಇಂದು ಮನ ಕಲುಕುವಂತ ಸ್ಥಿತಿಗೆ ಬಂದು ತಲುಪಿದೆ. ಶತಮಾನದ ಸ್ಮಾರಕದಂತಿರುವ ಈ ವೈಭವದ ಮನೆಯನ್ನು ನೋಡುವಾಗ ನಮಗರಿವಿಲ್ಲದಂತೆಯೇ ಕಣ್ಣಂಚಿನಲ್ಲಿ ಹನಿ ನೀರು ಜಿನುಗುತ್ತದೆ. ಇದು ಹಿರಿಯ ಕವಿಗೆ, ಸಾಹಿತಿಗೆ ನಾವು ಕೊಟ್ಟ, ಕೊಡುತ್ತಿರುವ ಗೌರವವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇದು ನೈಜ ಅನಾಹುತವಲ್ಲ…ಮಾನವ ನಿರ್ಮಿತ ಅನಾಹುತ…ಹೌದು…ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಡೆಸಿದ ವ್ಯವಸ್ಥೆಯಿಂದ ಉಂಟಾದ ಅನಾಹುತ…ಈ ಅನಾಹುತಕ್ಕೆ ಇಂದು ಅತ್ಯದ್ಭುತ ಬೆಲೆಕಟ್ಟಲಾಗದ ಕವಿ ಮನೆಯೊಂದು ನಾಶವಾಗುವಂತಾಗಿದೆ.. ಇದು ಖಂಡನೀಯ.

ತುಳು ಭಾಷೆಯನ್ನು ಹೇಗೆ ಬಳಸಬಹುದು ಎಂಬುದನ್ನು ಸಮರ್ಥವಾಗಿ ತುಳುನಾಡಿಗೆ ತೋರಿಸಿ ಕೊಟ್ಟ; ತುಳು ಭಾಷೆ, ತುಳು ಕಾವ್ಯ, ಯಕ್ಷಗಾನ, ವ್ಯಾಕರಣ, ಛಂದಸ್ಸು, ಸೇರಿದಂತೆ ಸೃಜನ ಶೀಲ ಬರವಣಿಗೆ ಮತ್ತು ಶಾಸ್ತ್ರ ಸಾಹಿತ್ಯದಲ್ಲಿ ತೋರಿದ ಅಪಾರ ಶ್ರದ್ಧೆ, ತುಳು ಭಾಷೆಯಲ್ಲಿ ಐತಿಹಾಸಿಕ ಮಂದಾರ ರಾಮಾಯಣವನ್ನು ರಚಿಸಿ ನಾಡಿಗೆ ನೀಡಿದ ಮಂದಾರ ಕೇಶವ ಭಟ್ಟರು ವಾಸಿಸಿದ ಮನೆಯಿಂದು `ಕಸದ ರಾಶಿಯೊಳಗೆ’ ಹುದುಗಹೊರಟಿದೆ. ಇದು ತುಳು ಭಾಷಿಗರಿಗೆ, ಸಮಸ್ತ ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ.

ಜನ್ಮ ಶತಮಾನೋತ್ಸವ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಮಂದಾರದಲ್ಲಿ ಜನವರಿ 6, 1919ರಲ್ಲಿ ಮಂದಾರ ಕೇಶವ ಭಟ್ಟರು ಜನಿಸಿದರು. ಶಿಕ್ಷಣ,ಸಾಹಿತ್ಯ,ಕಲೆ, ಸಂಸ್ಕøತಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಮಂದಾರ ಕೇಶವ ಭಟ್ಟರು `ಮಂದಾರ’ ಎಂದೇ ಪ್ರಸಿದ್ಧಿಯನ್ನು ಪಡೆದದ್ದು ಇತಿಹಾಸ. ಅತ್ಯಂತ ಪ್ರಸಿದ್ಧಿಯ ಕುಡುಪು ಅನಂತಪದ್ಮನಾಭ ದೇವಸ್ಥಾನದ ಸಮೀಪದಲ್ಲಿರುವ ಪುಟ್ಟ ಪರಿಸರ `ಮಂದಾರ’ ಕೇಶವ ಭಟ್ಟರ ಸಾಧನೆಯಿಂದಾಗಿ ಜಗತ್ ಪ್ರಸಿದ್ಧಿ ಪಡೆಯುವಂತಾಯಿತು. ಇಂತಹ ಮೇರು ವ್ಯಕ್ತಿತ್ವ ಇದ್ದಂತಹ ಮನೆಯಿಂದ `ಹಾಳು ಹಂಪೆಯಂತಾಗಿದೆ’. ಇಡೀ ಮಂಗಳೂರಿನ ಕಸ, ತ್ಯಾಜ್ಯ ಈ ಮನೆಯನ್ನು ಆಪೋಷಣ ಗೈದಿದೆ.

ಹೇಗಿತ್ತು…: ಹಿರಿಯ ಕವಿ ಮಂದಾರರು ಬೆಳೆದ ಮನೆಗೂ ಈಗ ಶತಮಾನದ ಸಂಭ್ರಮ. ಅತ್ಯಂತ ಸುಂದರ ವಾಸ್ತು ವೈಭವದ ಹಳೆಯ ಮಾದರಿಯ ಮನೆ ಆಕರ್ಷಕವಾಗಿತ್ತು. ತುಳುನಾಡಿನ ಸಂಪ್ರದಾಯಸ್ಥ ಮನೆ ಇಂದಿಗೂ ತನ್ನ ಹಳೆಯ ವೈಭವವನ್ನು ಉಳಿಸಿಕೊಂಡಿತ್ತು. ವಿಶಾಲ ಚಾವಡಿ, ಬೃಹತ್ ಗಾತ್ರದ ಮರದ ಕೆತ್ತನೆಯ ಕಂಬಗಳು, ಹಳೆಯ ಮಾದರಿಯ ಬಾಗಿಲು, ದಾರಾಂದ್ರಗಳು, ಆಸನಗಳು, ಪುರಾತನ ವಾಸ್ತು ವೈಭವ ಇಂದಿನ ಆಧುನಿಕ ಮನೆಗಳನ್ನು ನಾಚಿಸುವಂತಿತ್ತು. ಶತಮಾನದ ಮನೆಯನ್ನು ಜತನವಾಗಿ ಕಾಪಾಡುವ ಕಾರ್ಯವನ್ನು ಮಂದಾರ ಮನೆಯ ಮಂದಿ ಅತ್ಯಂತ ಆಸಕ್ತಿಯಿಂದ ಮಾಡುತ್ತಿದ್ದುದು ಗಮನಾರ್ಹ.
ಎಲ್ಲೂ ಆಧುನಿಕತೆಯ ಸ್ಪರ್ಶವಿಲ್ಲ!: ನೂರು ವರುಷಗಳ ಇತಿಹಾಸ ಹೊಂದಿದ ಮನೆಯನ್ನು 1991ರಲ್ಲಿ ಅತ್ಯಂತ ಜಾಗರೂಕತೆಯಿಂದ ರಿಪೇರಿ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಪರಂಪರೆಯ ಶೈಲಿಗೆ ಕುತ್ತು ತರುವ ಕಾರ್ಯವನ್ನು ಎಲ್ಲೂ ಮಾಡಿಲ್ಲ. ಬದಲಾಗಿ ಎಲ್ಲೆಲ್ಲಿ ಸಮಸ್ಯೆಯಿತ್ತೋ ಅದನ್ನು ಸರಿಪಡಿಸಿ ಮತ್ತೆ ಹಳೆಯ ಮಾದರಿಯನ್ನೇ ಮುಂದುವರಿಸುವ ಕಾರ್ಯವನ್ನು ಮಾಡಲಾಗಿತ್ತು. ಕೆಂಪು ಕಾವಿ ಬಣ್ಣದ ಗೋಡೆಗಳನ್ನು ಹೊಂದಿದ ವಿಶಾಲ ಮನೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಅದೆಷ್ಟೋ ಸಿನೆಮಾ, ಧಾರಾವಾಹಿಗಳು ಈ ಕವಿ ಮನೆಯಲ್ಲಿ ಚಿತ್ರೀಕರಣಗೊಂಡಿದ್ದವು ಎಂದರೆ ಅಚ್ಚರಿಯಾಗದಿರದು…!

Advertisement

ಇದೀಗ ಕಸ, ತ್ಯಾಜ್ಯಗಳು…: ಮಂಗಳೂರಿನ ಪಚ್ಚನಾಡಿ ಡಂಪ್ಯಾರ್ಡ್‍ನ ಭಾರೀ ಭೂಕುಸಿತ ಮಂದಾರ ಮನೆಯನ್ನು ಬಿಡದೆ ಕಾಡಿದೆ. ಇಡೀ ಊರನ್ನೇ ಆಪೋಷಣಗೈಯುವುದರೊಂದಿಗೆ ಸುಮಾರು 23ಮನೆಗಳಿಗೂ ಹಾನಿ ಮಾಡಿದೆ. ಹಿರಿಯ ಸಾಹಿತಿ ಮಂದಾರರ ಮನೆಯನ್ನೂ ಬಿಡದೆ ಕಾಡಿದೆ.
ಡಂಪ್ಯಾರ್ಡ್‍ನ ಕಸ,ಪ್ಲಾಸ್ಟಿಕ್,ತ್ಯಾಜ್ಯಗಳು ಮನೆಯ ಸುತ್ತಲೂ ಮುತ್ತಿಕೊಂಡಿವೆ. ಪರಿಣಾಮ ಮನೆ ವಾಸಯೋಗ್ಯ ಸ್ಥಿತಿಗೆ ತಲುಪಿದೆ. ಶತಮಾನೋತ್ಸವ ಆಚರಣೆಯ ಈ ಸಂದರ್ಭದಲ್ಲಿ ಇಂತಹ ಸ್ಥಿತಿ ಬಂದಿರುವುದು ನಿಜಕ್ಕೂ ಖೇದಕರ ಅಂಶ.

ಪುನರ್ ನಿರ್ಮಾಣ ಆಗಲಿ: ಹಿರಿಯ ಸಾಹಿತಿ, ಮಹಾಕವಿ ಮಂದಾರರ ಮನೆಯನ್ನು ಸರಕಾರ ಪುನರ್ ನಿರ್ಮಾಣ ಮಾಡಿಕೊಡಬೇಕಾಗಿದೆ. ಐತಿಹಾಸಿಕ ಮನೆಯಾಗಿದ್ದು, ಶತಮಾನೋತ್ಸವದ ಸಂದರ್ಭದಲ್ಲಿ ಇಂತಹ ದುರ್ಘಟನೆಯಾಗಿದ್ದಕ್ಕೆ ಸೂಕ್ತ ನ್ಯಾಯ ದೊರಕಬೇಕಾಗಿದೆ. ಮಂದಾರ ಕೇಶವ ಭಟ್ಟರ ಜನ್ಮಶತಮಾನೋತ್ಸವದ ಜೊತೆ ಜೊತೆಗೆ ಅವರ ಮನೆಯೂ ಶತಮಾನೋತ್ಸವ ಆಚರಿಸುತ್ತಿರುವುದನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಬೇಕಾಗಿದೆ.

 

LEAVE A REPLY

Please enter your comment!
Please enter your name here