ತೀರ್ಥಸ್ನಾನ ಮಾಡಿದರೆ ಪುಣ್ಯಪ್ರದ

0
2845

ನಿತ್ಯ ಅಂಕಣ-೯೮ : ತಾರಾನಾಥ್‌ ಮೇಸ್ತ, ಶಿರೂರು.
ಸದಾನಂದ ಪಡಿಯಾರ್ ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು. ಅವರು ಉಡುಪಿ ಜಿಲ್ಲೆಯ ಕೊಕ್ಕರ್ಣೆ ಮೂಲದವರು. ಮುಂಬೈಯಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆಗ ಅವರು 14 ವರ್ಷದ ಬಾಲಕರಾಗಿದ್ದರು. ಕೆಲಸ ನಿರ್ವಹಿಸುವ ಹೊಟೇಲಿನಲ್ಲಿ ನಿತ್ಯಾನಂದರ ದರ್ಶನ ಪಡೆದಂತಹ ಅನುಭವ ಪಡೆಯುತ್ತಾರೆ. ಮುಂದೆ ಅವರು ಆಧ್ಯಾತ್ಮದ ಸೆಳೆತಕ್ಕೆ ಒಳಗಾಗಿ, ನಿತ್ಯಾನಂದರ ಸಂಪರ್ಕ ಪಡೆದು ಪರಮ ಭಕ್ತರಾಗುತ್ತಾರೆ. ಗಣೇಶಪುರಿಯಲ್ಲಿ ಬಹಳ ವರ್ಷಗಳ ಕಾಲದವರೆಗೆ ಸೇವೆ ಮಾಡುವ ಅವಕಾಶವು ಅವರಿಗೆ ಪ್ರಾಪ್ತಿಯಾಗುತ್ತದೆ. ನಿತ್ಯಾನಂದರ ಸಾಮೀಪ್ಯದ ಒಡನಾಟವು ಸದಾನಂದರಿಗೆ ದೊರೆಯುತ್ತದೆ. ಇವರು ಭಗವಾನ್ ನಿತ್ಯಾನಂದರ ಲೀಲಾಮೃತಗಳನ್ನು ಸಮೀಪದಿಂದ ಕಂಡವರು, ಮತ್ತು ಅನುಭವಿಸಿದವರು.
ಗಣೇಶಪುರಿಯಲ್ಲಿ ಸದಾನಂದ ಸ್ವಾಮಿಗಳು ನಿತ್ಯಾನಂದರಿಗೆ ಸೇವೆಸಲ್ಲಿಸುತ್ತಿದ್ದರು ನಿತ್ಯಾನಂದರು ಆಶ್ರಮದ ಹೊರಗೆ ನಿತ್ಯಸಂಚಾರವನ್ನು ಬರಿಕಾಲಿನಲ್ಲಿ ಮಾಡುವುದನ್ನು ಸದಾನಂದರು ಗಮನಿಸುತ್ತಾರೆ. ಗುರುದೇವರ ಕಾಲುಗಳಿಗೆ ನೋವಾಗಬಾರದೆಂದು, ಆ ಜಾಗಪೂರ್ತಿ ಮರಳನ್ನು ಹಾಕಲು ನಿರ್ಧರಿಸಿ, ಹಾರೆ ಬುಟ್ಟಿಯೊಂದಿಗೆ ಆಶ್ರಮದಲ್ಲಿ ಅವರೊಂದಿಗೆ ಇದ್ದ ಕುಟ್ಟಿರಾಮ ಸ್ವಾಮಿಯವರ ಜತೆಗೂಡಿ ಹಾಕಿ ಮುಗಿಸಿದರು. ಇದನ್ನು ನೋಡಿ ಪ್ರಸನ್ನರಾದ ನಿತ್ಯಾನಂದರು ಅವರಿಗೆ ಕೆಲಸದ ಹಣವೆಂದು ನೀಡಿದರು. ಸದಾನಂದರು ತಾನು ಮಾಡಿರುವುದು ಸೇವೆ, ಹಾಗಾಗಿ ಬೇಡ ಬೇಡವೆಂದು ನಿರಾಕರಿಸಿದರು. ನಂತರ ಸದಾನಂದರು ಹಠ ಮಾಡುವುದು ಸರಿಯಲ್ಲ, ನಿತ್ಯಾನಂದರು ನೀಡುತ್ತಿರುವುದು ಪ್ರಸಾದವೆಂದು ಸ್ವೀಕರಿಸಿದರು. ನಿತ್ಯಾನಂದರು ತಮ್ಮ ಆಶ್ರಮದಲ್ಲಿ ಸೇವೆ ಸಲ್ಲಿಸಿದವರನ್ನು ವಿಶೇಷ ಪ್ರೇಮದಿಂದ ಹರಸುವುದು ಸಾಮಾನ್ಯ. “ಹೋಗು ನಿಮ್ಮ ಅಪ್ಪ ಅಮ್ಮ ಮನೆಯವರ ಸೇವೆ ಸಲ್ಲಿಸೆಂದು” ಹಲವು ಜನರಿಗೆ ಆಗಾಗ ಹೇಳುತ್ತಿದ್ದರು. “ಸಮಾಜದ ಸೇವೆ ಭಗವಂತನ ಸೇವೆ” ಎಂಬುದರ ಅರಿವನ್ನು ಆಗಾಗ ನೀಡುತ್ತಿದ್ದರು.
ನಿತ್ಯಾನಂದರು ಆಧ್ಯಾತ್ಮ ಸಾಧನೆ ಮಾಡಲು ಸದಾನಂದರನ್ನು ಅನುಗ್ರಹಿಸಿ ಕಾಂಞಂಗಾಡ್ ಸಮೀಪದ ಕುಶಾಲನಗರಕ್ಕೆ ಕಳಿಸಿಕೊಡುತ್ತಾರೆ. ನಿತ್ಯಾನಂದ ಸ್ವಾಮಿಗಳು ಸಮಾಧಿಯಾದ ಎರಡು ವರ್ಷಗಳ ಬಳಿಕ ಕಾಂಞಂಗಾಡ್ ನಿತ್ಯಾನಂದ ಆಶ್ರಮದ ಜನಾನಂದ ಸ್ವಾಮಿಗಳಿಂದ ಸನ್ಯಾಸ ಪಡೆದು, ಸದಾನಂದ ಸ್ವಾಮಿ ಆದರು. ಭಕ್ತರು ಇವರನ್ನು ಪಡಿಯಾರ್ ಸ್ವಾಮೀಜಿ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಮುಂದೆ ಪಡಿಯಾರ್ ಸ್ವಾಮಿಗಳು ಕುಶಾಲನಗರಲ್ಲಿದ್ದು ಆಧ್ಯಾತ್ಮ ಜೀವನ ಸಾಗಿಸುತ್ತಾರೆ. ಅಲ್ಲಿಂದಲೇ ಆಗಾಗ ಉಡುಪಿ ಕವಿ ಮುದ್ದಣ ಮಾರ್ಗ ಇಲ್ಲಿರುವ ನಿತ್ಯಾನಂದ ಮಂದಿರ-ಮಠಕ್ಕೆ ಬಂದು ಗುರುದೇವರ ದರ್ಶನ ಪಡೆದು ತೆರಳುತ್ತಿದ್ದರು. ಸದಾನಂದರು ತನ್ನಲ್ಲಿಗೆ ಬರುವ ಭಕ್ತರಲ್ಲಿ ನಿತ್ಯಾನಂದರ ಮಹಿಮೆಯ ಕುರಿತಾದ ತತ್ವ ಅನುಭವ, ಮಹಿಮಾಮೃತಗಳನ್ನು ಹಂಚಿಕೊಳ್ಳುತ್ತಿದ್ದರು. ತನ್ನಲ್ಲಿಗೆ ಬರುವ ಜಿಜ್ಞಾಸುಗಳಿಗೆ, “ನೀವು ಏನನ್ನೂ ಮಾಡಬೇಕಂದಿಲ್ಲ. ನೀವು ನಿಮ್ಮ ಕರ್ತವ್ಯಗಳನ್ನು ಮೊದಲು ಮಾಡಿ ಸಾಮರ್ಥ್ಯದ ಪರಿಣಿತಿಗಾಗಿ ಪಳಗಿರಿ” ಎಂದು ಹೇಳುತ್ತಿದ್ದರು. ನಿತ್ಯಜಪ, ನಿತ್ಯಸ್ಮರಣೆ, ಭಜನೆ ಇವು ಗುರುವಿನ ಕೃಪೆ ತನ್ನತ್ತ ಸೆಳೆಯುವಂತೆ ಮಾಡುವ ಅಮೋಘವಾದ ಆಧ್ಯಾತ್ಮ ಮಾರ್ಗ. ಇದು ಅವರು ನುಡಿಯುವ ಅಮೃತ ವಾಣಿಯಾಗಿತ್ತು
ಸದಾನಂದ ಸ್ವಾಮಿಗಳು ಜೂನ್ 15, 2007 ರಲ್ಲಿ ಕುಶಾಲನಗರದ ತಮ್ಮ ಆಶ್ರಮದಲ್ಲಿ ಸಮಾಧಿ ಪಡೆದರು. ಕುಶಾಲನಗರದಲ್ಲಿ ಗೋಪಾಲ ಸದನದಲ್ಲಿ ಸಮಾಧಿ ಮಂದಿರ ಇದ್ದು ಇದು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಇಲ್ಲಿ ದುಂಡು ಮೇಜಿನ ಮಾದರಿಯ ರಚನೆ ಇದೆ. ಅಂದು ಬ್ರಿಟಿಷರ ಕಾಲದಲ್ಲಿ ಮಹಾತ್ಮ ಗಾಂಧೀಜಿ ಅವರು, ದುಂಡು ಮೇಜಿನ ಸಭೆಯಲ್ಲಿ ಪಾಲ್ಗೋಳ್ಳಲು ಲಂಡನಿಗೆ ತೆರಳಿದ್ದರು. ಇಲ್ಲಿ ಕೂತು ನಿತ್ಯಾನಂದ ಸ್ವಾಮಿಗಳು ಅಲ್ಲಿಯ ಸಭೆಯಲ್ಲಿ ನಡೆಯುತ್ತಿದ್ದ ವಿದ್ಯಾಮಾನಗಳನ್ನು ತನ್ನ ಸುತ್ತಲು ಕೂತಿರುವ ಭಕ್ತರಿಗೆ ಹೇಳುತ್ತಿದ್ದರಂತೆ. ಮರುದಿನ ಗುರುದೇವರು ಹೇಳಿರುವ ವಿಚಾರಗಳು ಪತ್ರಿಕೆಯಲ್ಲಿ ಬಂದಿರುವುದನ್ನು ಕಂಡು ಭಕ್ತರು ಅಚ್ಚರಿಗೆ ಒಳಗಾಗುತ್ತಿದ್ದರು. ಅದರ ಸ್ಮರಣಾರ್ಥ ದುಂಡು ಮೇಜಿನ ರಚನೆ ಮಾಡಲಾಗಿದೆ. ಆಶ್ರಮದ ಸ್ಥಳದ ಆವರಣದೊಳಗೆ ದೊಡ್ಡದಾದ ಬಾವಿ ಇದೆ. ಇದರಲ್ಲಿ ನಿತ್ಯಾನಂದರು ಹಾಕಿರುವ ಶಕ್ತಿಶಾಲಿ ಸಾಲಿಗ್ರಾಮಗಳಿವೆ. ಈ ಬಾವಿಯ ನೀರು ಪವಿತ್ರ ತೀರ್ಥವಾಗಿದೆ. ಈ ತೀರ್ಥ ಬಾವಿಯಿಂದ ನೀರನ್ನು ತಂಬಿಗೆಯಿಂದ ಎಳೆದು ತೀರ್ಥಸ್ನಾನ ಮಾಡಿದರೆ ಪುಣ್ಯಪ್ರದ ಎಂದು ಹಿರಿಯರು ಹೇಳುತ್ತಾರೆ.

LEAVE A REPLY

Please enter your comment!
Please enter your name here