ತಿಂಗಳ 2ನೇ ಸೋಮವಾರ ಕಾರ್ಮಿಕ ಅದಾಲತ್

0
310

 
ಮಂಗಳೂರು ಪ್ರತಿನಿಧಿ ವರದಿ
ಕಟ್ಟಡ ಕಾರ್ಮಿಕರು, ಇನ್ನಿತರ ಕಾರ್ಮಿಕರ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸಲು ಸಹಾಯಕ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಪ್ರತೀ ತಿಂಗಳ 2ನೇ ಸೋಮವಾರ ಕಾರ್ಮಿಕ ಅದಾಲತ್ ಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ತಮ್ಮ ಕಛೇರಿಯಲ್ಲಿ ನಡೆದ ಕಟ್ಟಡ ಕಾರ್ಮಿಕರ ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿದ್ದರು.
 
 
ಕಾರ್ಮಿಕ ಇಲಾಖೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರ ನೋಂದಣಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಮಾಜಿ ಹೊರಗುತ್ತಿಗೆ ನೌಕರ ವಿಷ್ಣುಪ್ರಸಾದ್ ಹಾಗೂ ಈತನನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದ ಬೆಂಗಳೂರಿನ ಅರನೀಸ್ ಬುಸಿನೆಸ್ ಪ್ರೊಸೆಸ್ ಏಜನ್ಸಿಯವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸಹಾಯಕ ಕಾರ್ಮಿಕ ಆಯುಕ್ತರಿಗೆ ಸೂಚಿಸಿದರು.
 
 
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಒಟ್ಟು 9610 ಜನರು ನೊಂದಣಿ ಕಾರ್ಡ್ ಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ, ಇದರಲ್ಲಿ 4607 ಅರ್ಜಿಗಳು ಪುರಸ್ಕೃತ ಗೊಂಡು ವಿವಿಧ ಸೌಲಭ್ಯಗಳಿಗಾಗಿ ಇವರಿಗೆ ರೂ. 2,12,52,098ಗಳನ್ನು ವೆಚ್ಚಮಾಡಲಾಗಿದೆ. 1923 ಅರ್ಜಿಗಳು ತಿರಸ್ಕೃತಗೊಂಡಿದ್ದರೆ 3080 ಅರ್ಜಿಗಳು ಬಾಕಿ ಇವೆ ಎಂದು ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ್ ಮಾಹಿತಿ ನೀಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಇನ್ನು ಮುಂದೆ ಯಾವುದೇ ಅರ್ಜಿಗಳನ್ನು ತಿರಸ್ಕರಿಸುವ ಮುನ್ನ ಯಾವ ಕಾರಣಕ್ಕೆ ತಿರಸ್ಕೃತಗೊಂಡಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಕಾರಣಗಳನ್ನು ಕಾಲಮಿತಿಯೊಳಗೆ ಸರಿಪಡಿಸಿ ತರುವಂತೆ ಅವಕಾಶ ನೀಡಿ ನಂತರವೂ ಅವರು ಸರಿಪಡಿಸದಿದ್ದಲ್ಲಿ ತಿರಸ್ಕರಿಸಲು ಹಾಗೂ ಬಾಕಿ ಇರುವ 3080 ಅರ್ಜಿಗಳನ್ನು ಜುಲೈ 30 ರೊಳಗೆ ವಿಲೆಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
 
 
ಸುಮಾರು 500 ಕ್ಕೂ ಮಿಕ್ಕಿ ಕಟ್ಟಡ ಕಾರ್ಮಿಕರು 3 ಅವಕಾಶಗಳನ್ನು ನೀಡಿದರೂ ತಮ್ಮ ಸದಸ್ಯತ್ವ ನವೀಕರಣ ಮಾಡಿಸದೆ ಇರುವುದು ಕಂಡು ಬಂದಿದ್ದು ಇವರ ಸದಸ್ಯತ್ವ ನವೀಕರಣವನ್ನು ಕಾರ್ಮಿಕ ಕಲ್ಯಾಣ ಮಂಡಳಿಗಳಿಗೆ ವಿಶೇಷ ಆದ್ಯತೆ ಮೇಲೆ ನವೀಕರಿಸಲು ಅವಕಾಶ ಕೋರಿ ಪತ್ರ ಬರೆಯಲು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಕಾರ್ಮಿಕ ಸಂಘಟನೆಯ ಸಿ.ಐ.ಟಿ.ಯು ಘಟಕದ ವಸಂತಾಚಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here