ತಿಂಗಳ ಗೃಹರಕ್ಷಕ ಪ್ರಶಸ್ತಿ

0
257

ಮಂಗಳೂರು ಪ್ರತಿನಿಧಿ ವರದಿ
ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ತಿಂಗಳ ಗೃಹರಕ್ಷಕ ಪ್ರಶಸ್ತಿಗೆ ಪಾತ್ರನಾದ ಸುನಿಲ್ ಕುಮಾರ್ ಇವರನ್ನು ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ ಚೂಂತಾರು ಇವರು ಗುರುವಾರ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು.
 
 
 
ಸುನಿಲ್ ಕುಮಾರ್ ಅವರು 2001 ರಲ್ಲಿ ಗೃಹರಕ್ಷಕ ದಳಕ್ಕೆ ಸೇರ್ಪಡೆಯಾಗಿ ಸುಮಾರು 15 ವರ್ಷಗಳಿಂದ ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಗೃಹರಕ್ಷಕ ಇಲಾಖೆಗೆ ಸೇರಿದ ಬಳಿಕ ಅಗ್ನಿಶಾಮಕದಳ, ಬಂದೋಬಸ್ತ್ ಕರ್ತವ್ಯ, ಪೊಲೀಸ್ ಇಲಾಖೆ, ಹಬ್ಬ ಹರಿದಿನಗಳಲ್ಲಿ ಕಾನೂನು ಪಾಲನೆ, ಚುನಾವಣೆ ಬಂದೋಬಸ್ತ್ ಕರ್ತವ್ಯ, ಪ್ರವಾಹ ರಕ್ಷಣಾ ಕರ್ತವ್ಯ ಮುಂತಾದವುಗಳಲ್ಲಿ ತಮ್ಮನ್ನು ಸುಮಾರು 15 ವರ್ಷಗಳಿಂದ ತೊಡಗಿಸಿಕೊಂಡಿರುತ್ತಾರೆ.
 
 
 
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುನಿಲ್ ಕುಮಾರ್ ಅವರು ಪ್ರಾಮಾಣಿಕವಾಗಿ, ನಿಸ್ವಾರ್ಥ, ನಿಷ್ಕಾಮ ಸೇವೆ ಸಲ್ಲಿಸಿದಲ್ಲಿ ಪ್ರತಿಫಲ ಇದ್ದೇ ಇದೆ. ಸಮಾಜದಲ್ಲಿ ಗುರುತಿಸಿಕೊಳ್ಳಲು ಒಂದಷ್ಟು ಸಮಯ ತೆಗೆದುಕೊಳ್ಳಬಹುದು. ಆದರೆ ಕೆಲಸದಿಂದ ಸಿಗುವ ಸಂತಸ ಮತ್ತು ನೆಮ್ಮದಿ, ಸಿಗುವ ಸಂಬಳದ ಮುಂದೆ ನಗಣ್ಯ ಎಂದರು. ಯುವ ಜನರು ಹೆಚ್ಚು ಹೆಚ್ಚು ಇಲಾಖೆಗೆ ಸೇರಿ ದೇಶಸೇವೆ ಮಾಡಿ ಎಂದು ಕರೆ ನೀಡಿದರು.
 
 
 
ಹಿರಿಯ ಗೃಹರಕ್ಷಕರು ಹೊಸದಾಗಿ ಸೇರಿದ ಗೃಹರಕ್ಷಕರಿಗೆ ಮಾರ್ಗದರ್ಶನ ನೀಡಿ ಇಲಾಖೆಯ ಘನತೆ ಗೌರವವನ್ನು ಎತ್ತಿ ಹಿಡಿಯಿರಿ ಎಂದು ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಅವರು ಕರೆ ನೀಡಿದರು. ಘಟಕಾಧಿಕಾರಿ ಅಭಿಮನ್ಯು ರೈ, ಹಿರಿಯ ಗೃಹರಕ್ಷಕರಾದ ಶ್ರೀ ಸುರೇಶ್ ಶೇಟ್, ಕು. ಲೀಲಾ ಕುಕ್ಯಾನ್, ಕೇಶವ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here