ತಾಳಿದವನು ಬಾಳಿಯನು, ತಾಳದವನು….?

0
2189

ಅರಿತುಕೋ ಬದುಕ ವೈಖರಿ ಅಂಕಣ: ಸಂಚನ ಎಂ.ಎಸ್
ನೀವೇನಾದರು ಈ ಕಾಲದಲ್ಲಿ ತಾಳ್ಮೆಯನ್ನು ಒಂದು ವಸ್ತುವೆಂದು ಪರಿಗಣಿಸಿ ಅಂಗಡಿಯಲ್ಲಿ ಮಾರಾಟಕ್ಕಿಟ್ಟು ನೋಡಿ, ಹಾಗಿಟ್ಟ ಕ್ಷಣಮಾತ್ರದಿ ಅದು ಸಂಪೂರ್ಣ ಮಾರಟಗೊಂಡು ನಿಮ್ಮ ಕಿಸೆ ತುಂಬಿಸದಿದ್ದರೆ ಕೇಳಿ? ಖಂಡಿತ, ತಾಳ್ಮೆಗಿಂದು ಬಂಗಾರದಷ್ಟು ಬೇಡಿಕೆ ಇದೆ ನಮ್ಮೀ ಜಮಾನದಲ್ಲಿ. ನನಗೆ ತಾಳ್ಮೆಬೇಡ ಎಂದು ತಿರಸ್ಕರಿಸಿದವರು ತೀರಾ ಕಮ್ಮಿ, ತಾಳ್ಮೆಬೇಕೆಂದು ತುಡಿಯುವವರ ಸಂಖ್ಯೆಯೇ ತುಂಬಾ ಜಾಸ್ತಿ, ಆದರೆ ಇಲ್ಲೊಂದು ತಮಾಷೆಯ ಸಂಗತಿಯೆಂದರೆ ತಾಳ್ಮೆಗಾಗಿ ತೀವ್ರ ಹಂಬಲಿಸುವವರಿಗೆ ತಾಳ್ಮೆ ಬೇಕು, ಬೇಕೇ-ಬೇಕು,ಆದರೆ ತಕ್ಷಣಕ್ಕೇ ಬೇಕು. ಈ ತಕ್ಷಣದ ನಿರೀಕ್ಷೆಯೇ ತಪ್ಪು, ಹಾಗಾಗಿಯೇ ಅಂತವರ ಕಡೆ ತಾಳ್ಮೆ ತಲೆಹಾಕಲಾರದು.
ತಂಗಾಳಿಯು ತನುವನ್ನು ತಂಪಾಗಿಸುವ ತೆರದಿ ತಾಳ್ಮೆಯು ಮನವನ್ನು ತಂಪಾಗಿಸಬಲ್ಲದು. ಯಶಸ್ಸಿನ ಶಿಖರವನ್ನೇರಲು ಕೇವಲ ಛಲ ಮತ್ತು ಪರಿಶ್ರಮಗಳೆಂಬ ಸಲಕರಣೆಗಳಿದ್ದರೆ ಸಾಕಾಗದು ಅವುಗಳೊಟ್ಟಿಗೆ ತಾಳ್ಮೆ ಎಂಬ ಸದ್ಗುಣವು ಜೊತೆ ಸೇರಬೇಕು.ಆಗ ಮಾತ್ರ ಆ ಯಶಸ್ಸಿಗೊಂದು ವಿಶೇಷ ಅರ್ಥ ಬರುವುದು. ತಾಳ್ಮೆ ಎಂದರೆ ಕೇವಲ ಕಾಯುವಿಕೆ ಎಂದು ಕಡಗಣಿಸಬೇಡಿ, ಆ ಕಾಯುವಿಕೆಯ ಪ್ರಕ್ರಿಯೆಯಲ್ಲಿ ನಾವು ತೋರುವ ಉತ್ತಮ ನಡವಳಿಕೆಯೇ ನಿಜವಾದ ತಾಳ್ಮೆ. ಮೇಲ್ನೊಟಕ್ಕೆ ತಾಳ್ಮೆಯು ಕಹಿ ಎಂದು ಕಂಡರೂ, ಅದು ನೀಡುವ ಫಲಮಾತ್ರ ಸದಾ ಸಿಹಿಯಿಂದ ಕೂಡಿರುತ್ತದೆ. ಒಂದು ಕ್ಷಣದ ತಾಳ್ಮೆಯು, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲದೆಂದರೆ ಊಹಿಸಿ ತಾಳ್ಮೆಯ ತಾಕತೆಷ್ಟೆಂಬುದನ್ನು.
ಕೆಲವೊಮ್ಮೆ ನಮ್ಮ ಸಹನೆ ,ತಾಳ್ಮೆಯನ್ನು ಜನರು ದೌರ್ಬಲ್ಯವೆಂದು ಹೀಯಾಳಿಸಿದಾಗ ಧೃತಿಗೆಡುವ ಅವಶ್ಯಕತೆ ಇಲ್ಲ.ನಿಜವಾಗಿ ಆ ಸಹನೆ,ತಾಳ್ಮೆಯೇ ನಮ್ಮ ಶಕ್ತಿ ಎಂದು ಹೆಮ್ಮೆ ಪಡಬೇಕು. ಕಾರಣ ಇತರರೊಂದಿಗೆ ನಾವು ತಾಳ್ಮೆಯಿಂದಿದ್ದರೆ ಅಲ್ಲಿ ಪ್ರೀತಿಯು ಜನಿಸುವುದು, ನಮ್ಮ ಜೊತೆಯೇ ನಾವು ತಾಳ್ಮೆಯಿಂದಿದ್ದರೆ ಅಲ್ಲಿ ಭರವಸೆಯು ಬೆಳೆಯುವುದು, ಮತ್ತು ಭಗವಂತನ ಜೊತೆ ನಾವು ತಾಳ್ಮೆಯಿಂದಿದ್ದರೆ ಅಲ್ಲಿ ನಂಬಿಕೆಯ ನೆಲೆಸುವುದು. ಪ್ರೀತಿ . ಭರವಸೆ, ನಂಬಿಕೆಗಿರುವ ಆಗಾಧ ಶಕ್ತಿಗೆ ಲೋಕವೇ ನಮಿಸುವುದು.
ತಾಳ್ಮೆಯೆಂದರೆ ಕೆವಲ ಒಂದು ಶಕ್ತಿ ಮಾತ್ರವಲ್ಲ, ಅದೊಂದು ಬಗೆಯ ಜ್ಞಾನ ಕೂಡ. ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರವೆಂಬುದು ಇದ್ದೇ ಇದೆ ಎಂಬ ಸತ್ಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಂಡಿದ್ದೇವೆ ಎಂಬುದನ್ನು ನಮಗಿರುವ ತಾಳ್ಮೆ ಪ್ರತಿಪಾದಿಸುತ್ತದೆ. ಕೊಳದಲ್ಲಿ ಕೆಲವೊಮ್ಮೆ ಕೆಸರು ತುಂಬಿ ನೀರೆಲ್ಲಾ ಕೆಂಪಾಗಿರುತ್ತದೆ, ಆದರೆ ಕೆಲಕಾಲ ನಾವು ತಾಳ್ಮೆಯಿಂದ ಕಾದದ್ದೇ ಹೌದಾದರೆ ನಿಧಾನವಾಗಿ ಮಣ್ಣೆಲ್ಲಾ ಅಡಿಹೋಗಿ, ಅದೇ ಕೊಳದಲ್ಲಿ ತಿಳಿನೀರು ದೊರೆಯುತ್ತದೆ ತಾನೆ? ಹಾಗೆಯೇ ಬದುಕಲ್ಲೂ ಕೆಲವೊಂದು ಕಷ್ಟಗಳು ನಮ್ಮಲ್ಲಿ ತಳಮಳ ಕಳವಳಗಳನ್ನುಂಟು ಮಾಡುತ್ತವೆ, ಅವುಗಳಿಗೆಲ್ಲಾ ನಾವು ನಲುಗದೆ ತಾಳ್ಮೆಯಿಂದಿದ್ದರೆ ಮುಂದೊಂದು ದಿನ ಆ ಕಷ್ಟಗಳೇ ಕಾಣದಂತೆ ಕಮರಿಹೋಗುತ್ತವೆ.
ತಾಳ್ಮೆಯ ವಿಷಯದಲ್ಲಿ ನಾವೆಲ್ಲರೂ ನಮ್ಮೀ ನಿಸರ್ಗದ ದಾರಿಯನ್ನು ತುಳಿಯುವುದು ಉತ್ತಮ,ಕಾರಣ ಅವಳ ಈ ಸೌಂದರ್ಯದ ರಹಸ್ಯವೇ ತಾಳ್ಮೆ.ಅತಿಯಲ್ಲದ -ಮಿತಿಮೀರದ ತಾಳ್ಮೆಯನ್ನು ನೀವುಗಳೂ ತಾಳಿ ಎಂಬ ಸಂದೇಶವನ್ನು ನಮಗೆ ನೀಡುವ ಪ್ರಕೃತಿಗೆ ಸರಿಸಾಟಿ ಮತ್ತೊಂದಿಲ್ಲ. ತಾಳ್ಮೆಯೆಂಬ ಒಂದಂಮೃತದ ಕೊರತೆಯಿಂದ ತಲೆದೂರುವ ತಾಪತ್ರಯಗಳು ಒಂದಾ-ಎರಡಾ? ನಮ್ಮ ಸುಮಧುರ ಸಂಬಂಧವೊಂದು ಹಳಸಲು ತಾಳ್ಮೆಯ ಅನುಪಸ್ಥಿತಿ ಸಾಕು. ಗೆಲುವ ಪಡೆವ ಜಾಗದಲ್ಲಿ ನಾವು ಸೋಲ ಕಂಡರೆ ಅದಕ್ಕೆ ತಾಳ್ಮೆಯ ಮರೆತದ್ದೇ ಕಾರಣವಾಗಿರಬಹುದು. ನೃತ್ಯಕ್ಕೆ ತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಆಷ್ಟೇ ಮುಖ್ಯ. ಅದಕ್ಕೇ ಹೇಳೋದು
ತಾಳಿದವನು ಬಾಳಿಯಾನು
ತಾಳದವನು ಬಳಲಿಯಾನು
ತಾಳ್ಮೆಬೇಕು ಬದುಕಿನಲ್ಲಿ
ಜಾಣ್ಮೆಯದುವೆ ಬಾಳಿನಲ್ಲಿ ಎಂದು.
 
ಸಂಚನ ಎಂ.ಎಸ್
[email protected]

LEAVE A REPLY

Please enter your comment!
Please enter your name here