ಡ್ರಾ ಮಿತಿ ಏರಿಕೆ

0
318

ರಾಷ್ಟ್ರೀಯ ಪ್ರತಿನಿಧಿ ವರದಿ
500ರೂ., 1000ರೂ. ನೋಟುಗಳ ಚಲಾವಣೆ ರದ್ದು ಹಿನ್ನೆಲೆಯಲ್ಲಿ ಹಲವೆಡೆ ಹಲವು ಎಟಿಎಂಗಳ ಬಳಿ ಜನರು ಸರತಿಸಾಲು ಇದೆ. ಅಲ್ಲದೆ ಕಂಗಾಲಾಗಿದ್ದ ಸಾರ್ವಜನಿಕರಿಗೆ ಇದೀಗ ಕೇಂದ್ರ ಸರ್ಕಾರ ಕೊಂಚ ನಿರಾಳವನ್ನು ನೀಡಿದ್ದು, ಎಟಿಎಂ ವಿತ್ ಡ್ರಾ ಮಿತಿ ಹಾಗೂ ಬ್ಯಾಂಕ್ ಕೌಂಟರ್ ಗಳ ಮಿತಿಯನ್ನು ಏರಿಕೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ವರದಿ ಪಡೆದುಕೊಂಡಿದ್ದರು. ಸಭೆ ಬಳಿಕ ಸಾರ್ವಜನಿಕರಿಗೆ ಕೊಂಚ ನಿರಾಳ ಎಂಬಂತಹ ನಿರ್ಧಾರವನ್ನು ಪ್ರಧಾನಿ ಮೋದಿಯವರು ತೆಗೆದುಕೊಂಡಿದ್ದು, ಎಟಿಎಂ ವಿತ್ ಡ್ರಾ ಮಿತಿಯನ್ನು 2000 ರಿಂದ 2,500ಕ್ಕೆ ಹಾಗೂ ಬ್ಯಾಂಕ್ ಕೌಂಟರ್ ಗಳ ಮಿತಿಯನ್ನು 4 ಸಾವಿರದಿಂದ 4,500ಕ್ಕೆ ಏರಿಕೆ ಮಾಡಿದ್ದಾರೆ.
 
ನಿಷೇಧ ಹೇರಿಕೆಯಿಂದಾಗಿ ದೇಶದಲ್ಲಿನ ಮೂಲೆ ಮೂಲೆಯಲ್ಲಿರುವ ಬ್ಯಾಂಕ್ ಗಳು ಹಾಗೂ ಎಟಿಎಂ ಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದ್ದು, ಸಾಲಿನಲ್ಲಿ ನಿಂತು ಹಣವನ್ನು ಪಡೆದುಕೊಳ್ಳುವಲ್ಲಿ ಹಿರಿಯ ನಾಗರಿಕರು ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಗರ್ಭಿಣಿಯರು ಹಾಗೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಕರೆಯನ್ನು ನೀಡಿದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣದ ಅಗತ್ಯತೆ ಹೆಚ್ಚಾಗಿರಲಿದ್ದು, ಬ್ಯಾಂಕ್ ಗಳು ಪ್ರತ್ಯೇಕವಾಗಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.
 
 
ಎಟಿಎಂ ನಲ್ಲಿ ಹೊಸ ನೋಟು ಲಭ್ಯ
ದೇಶದೆಲ್ಲೆಡೆ ಜನರಿಗೆ ಹಣ ಪೂರೈಸಲು ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಹಣದ ಪೂರೈಕೆ ಹೆಚ್ಚಳ ಮಾಡಲಾಗಿದೆ. ದೇಶದ್ಯಾಂತ ಮೈಕ್ರೋ ಎಟಿಎಂಗಳನ್ನು ಸ್ಥಾಪಿಸುತ್ತೇವೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇಂದು ಎಲ್ಲೆಡೆ ಹೊಸ 500ರೂ. ನೋಟುಗಳೂ ಕೂಡ ಲಭ್ಯವಿದೆ. ಇಂದು ಅಥವಾ ನಾಳೆಯಿಂದ ಎಟಿಎಂಗಳಲ್ಲಿ ಹೊಸ ನೋಟು ಲಭ್ಯವಾಗಲಿದೆ. ಎಟಿಎಂ ಗಳಲ್ಲಿ 2 ಸಾವಿರ ರೂ. ಹೊಸ ನೋಟು ಲಭ್ಯವಾಗಲಿದೆ. ನ.24ರವರೆಗೆ ಹಳೇ ನೋಟುಗಳ ಚಲಾವಣೆಗೆ ಅವಕಾಶ ನೀಡಲಾಗಿದೆ.
 
ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಫ್ರೀ ಅವಧಿಯನ್ನು ವಿಸ್ತರಿಸಲಾಗಿದೆ. ಇಂದಿನಿಂದ ನ.18ರ ಮಧ್ಯರಾತ್ರಿವರೆಗೂ ಟೋಲ್ ಫ್ರೀ ವಿಸ್ತರಿಸಲಾಗಿದೆ.

LEAVE A REPLY

Please enter your comment!
Please enter your name here