ಡಿಜಿ ಧನ್ – ಇದು ನಗದು ರಹಿತ ವ್ಯವಹಾರ!

0
181

-ಮಂಜುನಾಥ ಡಿ.ಡೊಳ್ಳಿನ
 
ಭಾರತ ಸರಕಾರವು ಗ್ರಾಹಕರು ಮತ್ತು ವ್ಯಾಪಾರಿಗಳನ್ನು ನಗದು ರಹಿತ ಡಿಜಿಟಲ್ ವ್ಯವಹಾರದತ್ತ ಸೆಳೆಯಲು ಪ್ರೋತ್ಸಾಹಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಗ್ರಾಹಕರನ್ನು ಉತ್ತೇಜಿಸಲು ಲಕ್ಕಿ ಗ್ರಾಹಕ ಯೋಜನೆ ಮತ್ತು ವ್ಯಾಪಾರಿಗಳನ್ನು ಉತ್ತೇಜಿಸಲು ಡಿಜಿ ಧನ್ ವ್ಯಾಪಾರ ಯೋಜನೆಯನ್ನು ಜಾರಿಗೊಳಿಸಿದೆ.ಆಕರ್ಷಕ ಬಹುಮಾನ,ಲಕ್ಕಿ ಡ್ರಾಗಳ ಮೂಲಕವೂ ಜನರನ್ನು ಡಿಜಿಟಲ್ ಧನದ ಬಳಕೆಯತ್ತ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ.ಈ ಚಟುವಟಿಕೆಯ ಭಾಗವಾಗಿಯೇ ಧಾರವಾಡದ ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಫೆ.25 ರಂದು ಡಿಜಿ ಧನ್ ಮೇಳ ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಏರ್ಪಡಿಸಲಾಗಿದೆ.
ಸ್ಥಳೀಯ ನಾಗರಿಕರಿಗೆ ಡಿಜಿಟಲ್ ಪಾವತಿಯ ವಿಧಾನಗಳು, ಬ್ಯಾಂಕುಗಳು ಮತ್ತು ಇತರ ಸಹಭಾಗಿದಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿಕೊಂಡು ಮೊಬೈಲ್ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ, ನಗದು ರಹಿತ ವ್ಯವಹಾರದ ವಿಧಾನಗಳನ್ನು ಅರಿತುಕೊಳ್ಳಲು ಡಿಜಿ ಧನ್‍ಮೇಳ ಸಹಕಾರಿಯಾಗಲಿದೆ.
ಇತ್ತೀಚೆಗೆ ಬೆಂಗಳೂರು,ಮಂಗಳೂರು ಹಾಗೂ ಮೈಸೂರು ನಗರಗಳಲ್ಲಿ ನಡೆದ ಡಿಜಿ ಧನ್ ಮೇಳದಲ್ಲಿ ಸಾವಿರಾರು ಜನ ಭಾಗವಹಿಸಿ ನಗದು ರಹಿತ ವ್ಯವಹಾರದ ಬಗೆಗೆ ತಿಳುವಳಿಕೆ,ಮಾಹಿತಿ ಪಡೆದುಕೊಂಡಿದ್ದಾರೆ. ಒಂದು ದಿನ ಪೂರ್ತಿಯಾಗಿ ನಡೆಯುವ ಮೇಳದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು,ಸಾಮಾನ್ಯ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಆಧಾರ್ ನೋಂದಣಿ, ಖಾಸಗಿ ಡಿಜಿಟಲ್ ಪೇಮೆಂಟ್ ಸೇವೇಗಳ ಪೂರೈಕೆದಾರರು. ರಸಗೊಬ್ಬರ ಕಂಪನಿಗಳು ಸೇರಿದಂತೆ ಹತ್ತು ಹಲವು ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಭಾಗವಹಿಸಲಿವೆ.
ಸಾರ್ವಜನಿಕರಲ್ಲಿ ಡಿಜಿಟಲ್ ಆರ್ಥಿಕ ವ್ಯವಹಾರಗಳ ಸಾಕ್ಷರತೆಯನ್ನು ಹೆಚ್ಚಿಸುವ ಕಾರ್ಯದ ಭಾಗವಾಗಿ, ಭಾರತ ಸರಕಾರವು ದೇಶದ ವಿವಿಧ ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರಕಾರಗಳ ಸಹಭಾಗಿತ್ವದೊಂದಿಗೆ ಡಿಜಿ ಧನ್ ಮೇಳ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಗ್ರಾಹಕರು ನಗದು ಪಾವತಿಸದೇ ಡಿಜಿಟಲ್ ವ್ಯವಹಾರ ನಡೆಸುವ ವಿಧಾನಗಳನ್ನು ಮೇಳದ ಮೂಲಕ ಸರಳವಾಗಿ ಜನರಿಗೆ ಅರ್ಥ ಮಾಡಿಸುವದು ಕಾರ್ಯಕ್ರಮದ ಗುರಿಯಾಗಿದೆ. ಪ್ರಾಯೋಗಿಕವಾಗಿ ಡಿಜಿಟಲ್ ವ್ಯವಹಾರದ ಕ್ರಮಗಳನ್ನು ಇಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ.ನಗದು ಹಣದ ಬದಲಿಗೆ ಕಾರ್ಡುಗಳನ್ನು ಬಳಸಿ ವ್ಯವಹರಿಸುವ ವಿಶಿಷ್ಟ ಮೇಳ ಇದಾಗಿದೆ.ನಗದು ರಹಿತ ವ್ಯವಹಾರದ ಬಗೆಗಿನ ಜನಸಾಮಾನ್ಯರ ಮನೋಭಾವವನ್ನು ಬದಲಿಸಲು ಮೇಳ ಸಹಕಾರಿಯಾಗಲಿದೆ. ಸ್ಥಳದಲ್ಲಿಯೇ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಆಧಾರ್ ನೋಂದಣಿ ಮಾಡಿಸಿಕೊಳ್ಳುವ ಕಾರ್ಯಗಳು ಡಿಜಿ ಧನ್ ಮೇಳದಲ್ಲಿ ನಡೆಯಲಿವೆ.ಭಾರತ ಸರಕಾರವು ದೇಶದ ಆಯ್ದ 100 ನಗರಗಳಲ್ಲಿ ಈ ಕಾರ್ಯಕ್ರಮ ನಡೆಸುತ್ತಿದೆ.
3ಮೇಳದಲ್ಲಿ ಬ್ಯಾಂಕುಗಳು,ಸರಕಾರದ ವಿವಿಧ ಇಲಾಖೆಗಳ, ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳ ಸೇವೆಗಳನ್ನೊದಗಿಸುವ ಮಳಿಗೆಗಳಿರುತ್ತವೆ. ಅದೃಷ್ಟಶಾಲಿ ಗ್ರಾಹಕ ಯೋಜನೆಯ ಬಹುಮಾನ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ.
ಮೇಳದಲ್ಲಿ ಗ್ರಾಹಕರಿಗೆ ಡಿಜಿಟಲ್ ವ್ಯವಹಾರಗಳಿಗೆ ಅಗತ್ಯವಾಗಿರುವ ಆ್ಯಪ್‍ಗಳನ್ನು ಡೌನ್‍ಲೋಡ ಹಾಗೂ ಇನ್‍ಸ್ಟಾಲ್ ಮಾಡಿಕೊಡಲಾಗುವದು. ಇದಕ್ಕಾಗಿ ಗ್ರಾಹಕರು ತಮ್ಮ ಬ್ಯಾಂಕ್ ಪಾಸ್‍ಪುಸ್ತಕ, ಪಾನ್ ಖಾತೆ ಸಂಖ್ಯೆ ತಂದಿರಬೇಕು. ವ್ಯಾಪಾರಿಗಳು ತಮ್ಮ ಕಂಪನಿಯ ವಿಳಾಸ,ಮಾಲಿಕರ ಪಾನ್ ಖಾತೆ ಸಂಖ್ಯೆ ತೆಗೆದುಕೊಂಡು ಬಂದರೆ ಮೇಳದಲ್ಲಿಯೇ ನಗದು ರಹಿತ ವ್ಯವಹಾರಗಳ ಕಾರ್ಯ ಆರಂಭಿಸಲು ಎಲ್ಲ ಮಾರ್ಗದರ್ಶನ,ಸಹಾಯ ಪಡೆಯಬಹುದು. ಆಧಾರ್ ಸಂಪರ್ಕ ಆಧಾರದ ಸೇವೆಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದು. ಆಧಾರ್ ನೋಂದಣಿ ಮಾಡಿಕೊಳ್ಳಲು ಬಯಸುವ ಗ್ರಾಹಕರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕದ ದಾಖಲೆಗಳನ್ನು ತೆಗೆದುಕೊಂಡು ಬಂದಿರಬೇಕು.
ಡಿಜಿ ಧನ್ ಮೇಳ ನಡೆಯುವ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಉಚಿತ ವೈ ಫೈ ಹಾಗೂ ಅಂತರ್ಜಾಲ ಸೇವೆಗಳನ್ನು ಒದಗಿಸಲಿದೆ. ಫೆ.25 ರಂದು ಬೆಳಿಗ್ಗೆ 10.30 ಕ್ಕೆ ಧಾರವಾಡದ ಕಲಾಭವನದಲ್ಲಿ ಗಣಿ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಡಿಜಿ ಧನ್ ಮೇಳದ ಮಳಿಗೆಗಳನ್ನು ಉದ್ಘಾಟಿಸುವರು. ಮಧ್ಯಾಹ್ನ 2.30 ಕ್ಕೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವ ರಮೇಶ ಜಿಗಜಿಣಗಿ,ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕು,ಜಿಲ್ಲೆಗಳ ಜನ ಡಿಜಿ ಧನ್ ಮೇಳದಲ್ಲಿ ಭಾಗವಹಿಸಿ ನಗದು ರಹಿತ ವ್ಯವಹಾರದ ಅನುಷ್ಠಾನಕ್ಕೆ ಅಣಿಯಾಗುವ ಅವಕಾಶ ಬಳಸಿಕೊಳ್ಳಲು ಮುಂದಾಗಬೇಕಿದೆ. ಬನ್ನಿ ಡಿಜಿ ಧನ್ ಮೇಳದಲ್ಲಿ ಪಾಲ್ಗೊಳ್ಳೋಣ, ನಗದು ರಹಿತ ವ್ಯವಹಾರವನ್ನು ಅಳವಡಿಸಿಕೊಳ್ಳೋಣ.
-ಮಂಜುನಾಥ ಡಿ.ಡೊಳ್ಳಿನ
ಹಿರಿಯ ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

LEAVE A REPLY

Please enter your comment!
Please enter your name here