“ಟೈಗರ್”ಹುಚ್ಚು ಬಿಟ್ಟಿತು!

0
981

ನಿತ್ಯ ಅಂಕಣ: ೪೧

ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದ ಕೊಯಿಲಾಂಡಿಯ ಕೃಷಿಕ ಕಣ್ಣನ್ ನಿತ್ಯಾನಂದ ಸ್ವಾಮಿ ಅವರ ವಿಭೂತಿ ಪ್ರಸಾದ ಚಿಕಿತ್ಸೆಯಿಂದ ಗುಣಮುಖ ಆಗುತ್ತಾನೆ. ಈ ವಿಚಾರವು ಬಲುಬೇಗನೆ ಊರೆಲ್ಲಾ ಹಬ್ಬುತ್ತದೆ. ವ್ಯಕ್ತಿಗಳು ಅಪರೂಪವಾಗಿ ಮುಖಾಮುಖಿ ಭೇಟಿಯಾದಾಗ ಚರ್ಚೆಗೊಳ್ಳುವ ವಿಷಯವಾಗುತ್ತದೆ. ನಿತ್ಯಾನಂದರ ಕಾಣಲೆಂದು ಊರ ಜನರು ರೈಲು ಹಳಿಗಳ ಆಚೆ ಇಚೆ ಗುಂಪಾಗಿ ನಿಲ್ಲುತ್ತಾರೆ. ನಿತ್ಯಾನಂದರ ಕಾಣಲೆಂದಷ್ಟೇ ಅಲ್ಲ. ರೋಗಪೀಡಿತರು, ಪವಾಡ ತಂತ್ರದಿಂದ ರೋಗ ಮುಕ್ತಗೊಳಿಸುವ ನಿತ್ಯಾನಂದರಿಂದ ದಿವ್ಯೌಷಧವನ್ನು ಪಡೆಯಲು ಬಂದಿದ್ದರು. ರೈಲು ಹಳಿಗಳ ಮೇಲೆ ಕುಳಿತಿರುವ ನಿತ್ಯಾನಂದರ ಸುತ್ತ ಜನರ ಗುಂಪು ಸೇರಿತು. ಇಲ್ಲಿ ಜನ ಗುಂಪುಗೊಂಡಿರುವ ವಿಚಾರವು ರೈಲ್ವೆ ಪರಿವೀಕ್ಷಕ ಅಧಿಕಾರಿ ನಾರಾಯಣ್ ನಾಯರ್ ಅವರಿಗೆ ತಿಳಿದು ಬರುತ್ತದೆ. ಅದೇ ಹೊತ್ತಲ್ಲಿ ಮಂಗಳೂರು- ಮದ್ರಾಸ್ ರೈಲು ಗಾಡಿ ಸಂಚರಿಸುವ ಸಮಯ. ಹಾಗಾಗಿ ಗೊಂದಲ ನಿವಾರಿಸಲು ಅವರು ಘಟನಾಸ್ಥಳಕ್ಕೆ ಧಾವಿಸಿ ಬರುತ್ತಾರೆ.

ರೈಲ್ವೇ ಪರಿವೀಕ್ಷಣಾಧಿಕಾರಿ ನಾರಾಯಾಣ ನಾಯರ್ ಸಿಡುಕು ಸ್ವಭಾವದ ವ್ಯಕ್ತಿ. ಅವರದು ಕಠಿಣವಾದ ನಿಲುವು. ಆತನ ಸ್ವಭಾವವು ಎಲ್ಲರಿಗೂ ತಿಳಿದಿತ್ತು. ಸಹದ್ಯೋಗಿಗಳಿಗೂ ಆತನೆಂದರೆ ಭಯ. ಹಾಗಾಗಿ ಜನರು ಅವರನ್ನು ‘ಟೈಗರ್’ ಎಂದು ನಾಮಕರಣ ಮಾಡಿದ್ದರು. ಟೈಗರ್ ನಾರಾಯಣ ನಾಯರ್ ಎಂದು ಪರಿಚಯಿಸಿದರೆ, ಅವರು ಸಲಭವಾಗಿ ಪರಿಚಯಗೊಳ್ಳುತ್ತಿದ್ದರು. ಟೈಗರ್ ನಾರಾಯಣ ನಿತ್ಯಾನಂದರು ಇರುವ ಸ್ಥಳದತ್ತ ಬರುತ್ತಾರೆ. ಬಂದವರೆ ಮನಬಂದಂತೆ ಬೈದು ಬೀಡುತ್ತಾರೆ. ನಿತ್ಯಾನಂದರು ಅಧಿಕಾರಿಯ ಬೈಗುಳಗಳಿಗೆ ಕಿವಿಕೊಡದೆ, ಮುಖದಲ್ಲಿ ನಗು ಅರಳಿಸುತ್ತಾರೆ. ನಾರಾಯಣರಿಗೆ ಕೋಪವು ನೆತ್ತಿಗೇರುತ್ತದೆ. ಅದೇ ಸಮಯ ರೈಲು ಗಾಡಿಯು ಬರುತ್ತಿರುವ ಸಿಳ್ಳು ಶಬ್ಧವು ಬರುತ್ತದೆ. ದೂರದಿಂದಲೇ ಹಳಿಯ ಮೇಲೆ ಕುಳಿತಿರುವ ವ್ಯಕ್ತಿಯನ್ನು ಗಮನಿಸಿದ ಆಂಗ್ಲ ಚಾಲಕ, ರೈಲು ಇಂಜಿನ್ನಿಗೆ ನಿಧಾನಗತಿಯ ಚಾಲನೆ ನೀಡುತ್ತಾನೆ. ರೈಲಿನ ಸದ್ದಿಗೆ ವ್ಯಕ್ತಿ ಏಳುವ ಸೂಚನೆಗಳು ಕಾಣುವುದಿಲ್ಲ. ನಾರಾಯಣ್ ಸಾವು ನೋವು ಗಣನೆಗೆ ತೆಗೆದು ಕೊಳ್ಳವುದು ಬೇಡ. ಚಲಾಯಿಸು, ಎಂದು ಹಸಿರು ನಿಶಾನೆ ತೋರಿಸಿ ಚಾಲಕನಿಗೆ ಆಜ್ಞಾಪಿಸುತ್ತಾನೆ.

ಕೂಗಳತೆಯ ದೂರದಲ್ಲಿ ಹಳಿಯ ಮೇಲೆ ವ್ಯಕ್ತಿ ಕೂತಿದ್ದು ನಿಜ. ಅಧಿಕಾರಿಯ ಹಸಿರು ನಿಶಾನೆಯ ಆದೇಶದಂತೆ ರೈಲು ಗಾಡಿಯ ಚಾಲಕ ಮುಂದೆ ಸಾಗಲು ವೇಗ ನೀಡಲು ಪ್ರಯತ್ನಿಸುತ್ತಾನೆ. ರೈಲು ವೇಗ ಪಡೆಯದೆ ನಿಧಾನಗತಿಲ್ಲಿ ಬಂದು ಹಳಿಯ ಮೇಲೆ ನಿತ್ಯಾನಂದರು ಕೂತ ಸ್ಥಳದ ಸನಿಹದಲ್ಲಿ ಯಂತ್ರವು ಕೆಟ್ಟು ಸ್ವಯಂ ನಿಲ್ಲುತ್ತದೆ. ಚಾಲಕನಿಗೆ ಆಶ್ಚರ್ಯವಾಗುತ್ತದೆ. ಚಾಲಕ ಯಂತ್ರವನ್ನು ಪರಿಶೀಲಿಸುತ್ತಾನೆ. ಏಲ್ಲಿಯೂ ಆತನಿಗೆ ದೋಷ ಕಾಣದೆ ಯಂತ್ರ ಸುವ್ಯವಸ್ಥೆಯಲ್ಲಿ ಇರುವುದು ಕಂಡು ಬರುತ್ತದೆ. ಯಾಕೆ ಹೀಗೆ ಆಯ್ತು..! ಎಂದು ಉತ್ತರ ಸಿಗದೆ ಚಾಲಕ ತಲೆ ಕೆರೆದುಕೊಳ್ಳುತ್ತಾನೆ. ಟೈಗರ್ ನಾರಾಯಣನಲ್ಲಿ ಅಸಹಾಯಕನಾಗಿ ನನ್ನಿಂದ ಏನು ಮಾಡಲಾಗದು ಎಂದು ಚಾಲಕ ಹೇಳುತ್ತಾನೆ. ನಡೆಯುತ್ತಿರುವ ವಿದ್ಯಾಮಾನ್ಯಗಳನ್ನು ಕಂಡು ನಿತ್ಯಾನಂದರು ವ್ಯಂಗ್ಯವಾಗಿ ನಗುತ್ತಾರೆ. ಅತ್ತ ಇತ್ತ ಸೇರಿರುವ ಜನರು ಅಲ್ಲಿಯ ದೃಶ್ಯ ಕಂಡು ಅಚ್ಚರಿಗೊಳ್ಳುತ್ತಾರೆ. ನಾರಾಯಣನಿಗೆ ಇದೆಲ್ಲವು ಹಳಿ ಮೇಲೆ ಕೂತಿರುವ ಕಪ್ಪು ಮನುಷ್ಯನ ಪವಾಡ ಎಂದು ಅರಿವಾಗುತ್ತದೆ. ಯಾವುದೇ ಸಂಕೋಚಪಡದೆ ನಿತ್ಯಾನಂದರ ಸನಿಹಬಂದು ಕಾಲಿಗೆರಗಿ ನಮಿಸುತ್ತಾನೆ. ನಗುತ್ತಲೇ ನಿತ್ಯಾನಂದರು ಹಳಿಮೇಲಿಂದ ಎದ್ದು ಪಕ್ಕಕ್ಕೆ ಬಂದು ನಿಲ್ಲುತ್ತಾರೆ. ಹಸಿರು ನಿಶಾನೆಯಂತೆ ಕೈ ಬೀಸಿ ಪೋ…ಪೋ ಎಂದು ಹೇಳುತ್ತಾರೆ. ಕೆಟ್ಟಿರದೆ ಕೆಟ್ಟು ನಿಂತಂತಿರುವ ರೈಲು ಮುಂದೆ ಚಲಿಸುತ್ತದೆ. ತಾನು ಹುಚ್ಚ ಎಂದು ತಿಳಿದ, ಅವಧೂತ ಮಹಾತ್ಮನಿಂದ ನನ್ನ ಹುಚ್ಚು ಬಿಟ್ಟಿತೆಂದು ನಾರಾಯಣ ತಿಳಿದುಕೊಂಡ. ನಂತರದ ದಿನಗಳಲ್ಲಿ ಟೈಗರ್ ನಾರಾಯಣ್ ನಾಯರ್ ನಿತ್ಯಾನಂದರ ಪರಮಭಕ್ತ ಆಗುತ್ತಾನೆ. ನೊಂದವರಿಗೆ ಸಹಾಯ ಮಾಡುವ ಜನಸೇವಕ ಆಗುತ್ತಾನೆ.

ತಾರಾನಾಥ್‌ ಮೇಸ್ತ, ಶಿರೂರು.

Advertisement

LEAVE A REPLY

Please enter your comment!
Please enter your name here