ಟೀಂ ಇಂಡಿಯಾದ ಕೋಚ್ ಸ್ಥಾನಕ್ಕೆ ಕನ್ನಡಿಗ ಆಯ್ಕೆ

0
540

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಟೀಂ ಇಂಡಿಯಾಕ್ಕೆ ಕೋಚ್ ಆಯ್ಕೆಗೆ ಕೊನೆಗೂ ತೆರೆ ಬಿದ್ದಿದೆ. ಸ್ಪಿನ್ ಮಾಂತ್ರಿಕ, ಮಾಜಿ ನಾಯಕ ಕನ್ನಡಿಗ ಅನಿಲ್ ಕುಂಬ್ಳೆ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಗುರುವಾರ ಪ್ರಕಟಿಸಿದ್ದಾರೆ.
 
 
ಧರ್ಮಶಾಲದಲ್ಲಿ ನಡೆದ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ರವಿಶಾಸ್ತ್ರಿ ಹಾಗೂ ಅನಿಲ್ ಕುಂಬ್ಳೆ ನಡುವಿನ ರೇಸಿನಲ್ಲಿ ಅನಿಲ್ ಕುಂಬ್ಳೆ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಕುಂಬ್ಳೆ ಅವರನ್ನು ಒಂದು ವರ್ಷದ ಅವಧಿಗೆ ಮಾತ್ರ ಕೋಚ್ ಆಗಿ ನೇಮಿಸಲಾಗಿದೆ. ಅನಿಲ್ ಕುಂಬ್ಳೆ ಅವರು ಈಗ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
 
 
956 ಅಂತಾರಾಷ್ಟ್ರೀಯ ವಿಕೆಟ್ (ಟೆಸ್ಟ್ ನಲ್ಲಿ 619 ಹಾಗೂ ಒಡಿಐ 337) ಪಡೆದಿರುವ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಈ ಹಿಂದೆ ಕೆಎಸ್ ಸಿಎಯಲ್ಲಿ ಆಡಳಿತಗಾರರಾಗಿ ಅನುಭವ ಹೊಂದಿದ್ದಾರೆ. ಕುಂಬ್ಳೆ ಅವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
 
 
 
ಕೋಚ್ ರೇಸ್ ನಲ್ಲಿ ರವಿಶಾಸ್ತ್ರಿ, ವೆಂಕಟೇಶ್ ಪ್ರಸಾದ್, ಸಂದೀಪ್ ಪಾಟೀಲ್ ಅಲ್ಲದೆ, ಮಾಜಿ ಬ್ಯಾಟ್ಸ್ ಮನ್ ಹೃಷಿಕೇಶ್ ಕಾನಿಟ್ಕರ್, ಮಾಜಿ ವೇಗಿ ಬಲ್ವಿಂದರ್ ಸಿಂಗ್ ಸಂಧು ಸೇರಿದಂತೆ 57 ಜನ ಸ್ಪರ್ಧೆಯಲ್ಲಿದ್ದರು. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ರವಿ ಶಾಸ್ತ್ರಿ ಹಾಗೂ ಅನಿಲ್ ಕುಂಬ್ಳೆ ಹೆಸರನ್ನು ಅಂತಿಮಗೊಳಿಸಿದ್ದರು.

LEAVE A REPLY

Please enter your comment!
Please enter your name here