ಝೇಂಕರಿಸಿತು ಸುಂದರ ಆಕರ್ಷಕ ಪುರಾತನ ಜಾನಪದ ಕಲೆ

0
513

 
ಲೇಖನ: ಶ್ಯಾಮ್ ಪ್ರಸಾದ್, ಬದಿಯಡ್ಕ
ಚಿನ್ಮಯ ವಿದ್ಯಾಲಯ ಬದಿಯಡ್ಕದಲ್ಲಿ ನಡೆದ ಯಕ್ಷಗಾನ ಬೊಂಬೆಯಾಟ
ಅತ್ಯಂತ ಸುಂದರವೂ ಆಕರ್ಷಕವೂ ಆದ ಅತೀ ಪುರಾತನ ಜಾನಪದ ಕಲೆಯಾಗಿದೆ ಯಕ್ಷಗಾನ ಬೊಂಬೆಯಾಟ. ಶತಕಗಳ ಹಿಂಧೆ ಮೂವತ್ತಕ್ಕಿಂತಲೂ ಹೆಚ್ಚಿನ ಯಕ್ಷಗಾನ ಬೊಂಬೆಯಾಟ ಸಂಘಗಳಿಂದ ಯಕ್ಷಪ್ರಿಯರನ್ನು ರಂಜಿಸುತ್ತಿದ್ದ ನಾಡಾಗಿತ್ತು ದಕ್ಷಿಣ ಕನ್ನಡ.ಆದರೆ ಆಧುನಿಕತೆಯ ಪ್ರಭಾವದಲ್ಲಿ ಸಿಲುಕಿ ಅಂಚಿನತ್ತ ತೇಲುತ್ತಿದೆ ಇಂದು ಯಕ್ಷಗಾನ ಬೊಂಬೆಯಾಟ. ಇಡೀ ಜಗತ್ತಿನಲ್ಲಿ ಯಕ್ಷಗಾನ ಬೊಂಬೆಯಾಟ ಕೇವಲ ಎರಡೇ ಎರಡು, ತೆಂಕುದಿಟ್ಟು ಮತ್ತು ಬಡಗುದಿಟ್ಟು ಯಕ್ಷಗಾನ ತಂಡಗಳು ಮಾತ್ರ ಜೀವಂತವಾಗಿರುತ್ತವೆ. ಗಡಿನಾಡಾದ ಕಾಸರಗೋಡಿನಲ್ಲಿ ಹಲವು ಶತಕಗಳ ಕಾಲ ವಿಜೃಂಭಣೆಯಿಧ ಝೇಂಕರಿಸಿದ್ದ ಯಕ್ಷಗಾನ ಬೊಂಬೆಯಾಟ ಕಲೆಯು 19ನೇ ಶತಮಾನದಲ್ಲಿ ಸಂಪೂರ್ಣವಾಗಿ ನಾಶವಾಗಿ ಹೋಯಿತು.
 
kasar_gombe2
‘ಪುಳ್ಳೂರು ಬಾಚ’ನನ್ನು ಕಾಸರಗೋಡಿನ ‘ಬೊಂಬೆಯಾಟದ ಜನಕ’ನೆಂದು ಗುರುತಿಸುತ್ತಾರೆ. ಅವನು ಕೆತ್ತಿದ ಬೊಂಬೆಗಳು ಇಂದು ಕಾಸರಗೋಡಿನ ಬೆದ್ರಡ್ಕದಲ್ಲಿದೆ.
 
 
 
ದೇಶ ವಿದೇಶಗಳಲ್ಲಿ 3000 ಕ್ಕಿಂತಲೂ ಅಧಿಕ ಪ್ರದರ್ಶನಗಳನ್ನು ನೀಡಿದೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ. ಕರ್ನಾಟಕ , ಕೇರಳ , ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ನವದೆಹಲಿ , ಅಸ್ಸಾಂ , ಪಶ್ಚಮ ಬಂಗಾಳ ಮುಂತಾದ ಕಡೆಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಪಡೆದಿದೆ ತೆಂಕುದಿಟ್ಟಿನ ಯಕ್ಷಗಾನ ಬೊಂಬೆಯಾಟ ಸಂಘ. ಕನ್ನಡ, ತುಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಪ್ರದರ್ಶನಗಳನ್ನು ನೀಡಿದೆ.
ಪಾಕಿಸ್ತಾನದ ಲಾಹೋರಿನಲ್ಲಿ , ಫ್ರಾನ್ಸಿನ ರಾಜಧಾನಿ ಪ್ಯಾರಿಸ್ , ದುಬೈ, ಜೆಕೆಸ್ಲೋವಾಕಿಯಾದ ಪ್ರಾಶ್ , ಚೈನಾ ದೇಶದ ಗುಯ್ಯಾಂಗ್ ನಗರ ಮುಂತಾದ ರಾಷ್ಟ್ರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ನೀಡಿದೆ.
ಅಂತರಾಷ್ಟ್ರೀಯ ಅತ್ಯುತ್ತಮ ಬೊಂಬೆಯಾಟ ಪ್ರಶಸ್ತಿಯನ್ನು ಪಡೆದಿರುವ ಕಾಸರಗೋಡಿನ ಹೆಮ್ಮೆಯ ಬೊಂಬೆಯಾಟವು ‘ಯಕ್ಷಪುತ್ಥಳಿ ‘, ‘ಬೊಂಬೆ ಮನೆ’ ಎಂಬ ಪ್ರಪಂಚದ ಪ್ರಥಮ ಮ್ಯೂಸಿಯಮ್ ತಯಾರಿಯಲ್ಲಿದೆ.
ಪರಂಪರಾಗತ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಜಾಗತಿಕ ಗೊಂಬೆಯಾಟದ ಮೂಲಕ ಜಾಗತಿಕ ಮಟ್ಟದಲ್ಲಿ ಕಾಸರಗೋಡನ್ನು ಗುರುತಿಸುವಂತೆ ಮಾಡಿದೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ.
 
 
ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘವು ಜಾಗತಿಕ ಮಟ್ಟದಲ್ಲಿ ಏಕೈಕ ತೆಂಕುದಿಟ್ಟಿನ ಯಕ್ಷಗಾನ ಸಂಘವಾಗಿದ್ದು ಕಲೆಯನ್ನು ಮುಂದಿನ ತಲೆಮಾರಿಗೆ ಉಳಿದುವುದೇ ಇದರ ಮುಖ್ಯ ಗುರಿಯಾಗಿದೆ ಎನ್ನುತ್ತಾರೆ ನಿರ್ದೇಶಕ ಕೆ.ವಿ.ರಮೇಶ್.
 
ಕಲಾಸಕ್ತ ಚಿನ್ಮಯಿಗಳ ಮನಸೂರೆಗೊಳಿಸಿದ ಯಕ್ಷಗಾನ ಬೊಂಬೆಯಾಟ:
ಚಿನ್ಮಯ ವಿದ್ಯಾಲಯ ಬದಿಯಡ್ಕದಲ್ಲಿ ನಡೆದ ಯಕ್ಷಗಾನ ಬೊಂಬೆಯಾಟವನ್ನು ಪುಟಾಣಿ ಮಕ್ಕಳಿಂದ ಹಿಡಿದು ಅಧ್ಯಾಪಕ ವೃಂದ , ಹೆತ್ತವರು ಬಹಳ ಆಸಕ್ತಿಯಿಂದ ವೀಕ್ಷಿಸಿದರು. ‘ನರಕಾಸುರ ವಧೆ – ಗರುಡ ಗರ್ವಭಂಗ’ ಎಂಬ ಅದ್ಭುತ ಪೌರಾಣಿಕ ಕಥಾ ಭಾಗವನ್ನು ಕೈಬೆರಳುಗಳ ಚಲನವಲನಗಳಿಂದ ಬೊಂಬೆಗಳನ್ನು ಕುಣಿಸುತ್ತಾ ನೋಡುಗರಿಗೆ ತಲುಪಿಸುವ ಈ ವಿಸ್ಮಯ ಪ್ರತಿಭೆಯು ಚಿನ್ಮಯಿಗಳ ಮನಸೂರೆಗೊಳಿಸಿತು. ಶಾಲಾ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್, ಪ್ರಾಂಶುಪಾಲ ಪ್ರಶಾಂತ್ ಬೆಳಿಂಜ , ಅಧ್ಯಾಪಕ ವೃಂದ , ಹೆತ್ತವರು ಉಪಸ್ಥಿತರಿದ್ದರು.
kasar_gombe
 
ಸ್ಪಿಕ್ ಮೇಕೆ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ :
ಚಿನ್ಮಯ ವಿದ್ಯಾಲಯದ ಸ್ಪಿಕ್ ಮೇಕೆ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಶ್ರೀ ಗೋಪಾಲಕೃಷ್ಣ ಬೊಂಬೆಯಾಟವನ್ನು ಆಯೋಜಿಸಿದ್ದು ಕಾರ್ಯಕ್ರಮದ ವಿಶೇಷತೆಯಾಯಿತು. ಕಳೆದ ಬಾರಿ ಒರಿಸ್ಸಾದ ‘ಗೋಟಿಪೂವಾ’ ನೃತ್ಯವು ಪ್ರೇಕ್ಷಕರನ್ನು ರಂಜಿಸಿದರೆ ಈ ಬಾರಿ ಯಕ್ಷಗಾನ ಬೊಂಬೆಯಾಟವು ಕನ್ನಡಿಗರ ಹೃದಯವನ್ನು ಆಕರ್ಷಿಸಿತು. ನವೆಂಬರ್ 13 ರಂದು ಅಸ್ಸಾಂನ ‘ಬಿಹು’ ನೃತ್ಯವು ನಡೆಯಲಿದೆ.

LEAVE A REPLY

Please enter your comment!
Please enter your name here