ಝಾಕೀರ್ ಭಾಷಣ ಪರಿಶೀಲನೆಗೆ ಕೇಂದ್ರ ಸೂಚನೆ

0
191

 
ವರದಿ: ಲೇಖಾ
ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ 20 ಜನ ವಿದೇಶಿಯರ ಧಾರುಣ ಸಾವಿಗೆ ಕಾರಣವಾದ ಉಗ್ರರ ದಾಳಿಯ ಪ್ರಚೋದನೆಗೆ ಡಾ.ಝಾಕೀರ್ ನಾಯ್ಕ್ ಭಾಷಣ, ಸಿಡಿಗಳು ಕಾರಣ ಎಂಬ ವರದಿ ಹಿನ್ನಲೆಯಲ್ಲಿ ನಾಯ್ಕ್ ಭಾಷಣಗಳನ್ನು ಪರಿಶೀಲನೆ ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ.
 
 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಯಾವುದೇ ಬೆಲೆ ತೆತ್ತರೂ ಸರಿ ಭಯೋತ್ಪಾದನೆ ಜೊತೆಗೆ ಭಾರತ ಸರ್ಕಾರವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಝಾಕೀರ್ ನಾಯ್ಕ್ ಭಾಷಣಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
 
 
 
ಢಾಕಾದ ಹೋಲಿ ಆರ್ಟಿಸನ್ ಬೇಕರಿ ಮೇಲೆ ದಾಳಿ ನಡೆಸಿದ್ದ ಐವರು ಉಗ್ರರು 20 ಮಂದಿಯ ಕತ್ತು ಕೊಯ್ದು ಹತ್ಯೆಗೈದಿದ್ದ ಘಟನೆ ಬೆನ್ನಲ್ಲೇ ಇವರೆಲ್ಲರೂ ಮುಂಬೈ ಮೂಲದ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ನ ಬೋಧನೆಯಿಂದ ಪ್ರಭಾವಿತರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಝಾಕೀರ್ ನಾಯ್ಕ್ ನ ಭಾಷಣಗಳನ್ನು ಪರಿಶೀಲಿಸುತ್ತಿದೆ.
 
 
ಎಲ್ಲಾ ಮುಸ್ಲಿಮರು ಭಯೋತ್ಪಾದಕರಾಗಬೇಕೆಂದು ಕರೆ ನೀಡಿದ್ದ ಝಾಕೀರ್ ಸಂದೇಶವನ್ನು ಢಾಕಾದಲ್ಲಿ ಹತನಾದ ಉಗ್ರರಲ್ಲಿ ಒಬ್ಬನಾದ ಅವಾಮಿ ಲೀಗ್ ನಾಯಕನ ಮಗ ರೋಹನ್ ಇಮ್ತಿಯಾಜ್ ಕಳೆದ ವರ್ಷ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿರುವುದಾಗಿ ಕೆಲ ವರದಿಗಳು ತಿಳಿಸಿವೆ.

LEAVE A REPLY

Please enter your comment!
Please enter your name here