ಜ.13ರವರೆಗೂ ಕಾರ್ಡ್ ಬಳಕೆ

0
236

ರಾಷ್ಟ್ರೀಯ ಪ್ರತಿನಿಧಿ ವರದಿ
ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಗಳ ಬಳಕೆ ಸ್ಥಗಿತಗೊಳ್ಳುವ ಆತಂಕ ಎದುರಿಸಿದ್ದ ಗ್ರಾಹಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸರ್ಕಾರದ ಆಶ್ವಾಸನೆ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಕಾರ್ಡ್ ಬಳಕೆ ಮೇಲಿನ ನಿರ್ಬಂಧ ನಿರ್ಧಾರವನ್ನು ಮುಂದೂಡಿದ್ದಾರೆ.
 
 
 
ಕೇಂದ್ರ ಸರ್ಕಾರ ಜನವರಿ 13ರವರೆಗೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ ಹಣ ಪಾವತಿ ಮಾಡಿದರೆ ಹೇರಲಾಗುತ್ತಿದ್ದ ಶೇ.1ರಷ್ಟು ವಹಿವಾಟು ಶುಲ್ಕವನ್ನು ರದ್ದುಗೊಳಿಸಿರುವ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಕೂಡ ತಾತ್ಕಾಲಿಕವಾಗಿ ಅಂದರೆ ಜನವರಿ 13ರವರೆಗೂ ಕಾರ್ಡ್ ಗಳನ್ನು ಸ್ವೀಕರಿಸುವುದಾಗಿ ಹೇಳಿಕೆ ನೀಡಿದೆ.
ಆದರೆ ಕೇಂದ್ರ ಸರ್ಕಾರದ ಮುಂದಿನ ನಿರ್ಧಾರವನ್ನು ಪರಿಶೀಲಿಸಿ ಬಳಿಕ ಮುಂದಿನ ನಿರ್ಧಾರಕ್ಕೆ ಬರುತ್ತೇವೆ ಎಂದು ಬಂಕ್ ಮಾಲೀಕರು ಹೇಳಿದ್ದಾರೆ.
 
 
ಈ ಬಗ್ಗೆ ಭಾನುವಾರ ಮಧ್ಯರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು‌, “ವಿಷಯವನ್ನು ಇತ್ಯರ್ಥ ಪಡಿಸಲು ಯತ್ನಿಸುತ್ತಿದ್ದೇವೆ. ಸದ್ಯದ ಮಟ್ಟಿಗೆ ಜನವರಿ 13ರ ವರೆಗೆ ಶುಲ್ಕ ಹೇರಿಕೆಗೆ ತಡೆ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
 
 
ಈ ಹಿಂದೆ ಗ್ರಾಹಕರಿಂದ ಕ್ರೆಡಿಟ್‌ ಕಾರ್ಡ್‌ ಮೂಲಕ ಬಂಕ್ ಗಳು ಸ್ವೀಕರಿಸುವ ಹಣಕ್ಕೆ ಶೇ. 1ರಷ್ಟು ಹಾಗೂ ಡೆಬಿಟ್‌ ಕಾರ್ಡ್‌ ಮೂಲಕ ಸ್ವೀಕರಿಸುವ ಹಣಕ್ಕೆ ಶೇ.0.25ರಿಂದ ಶೇ.1ರ ವರೆಗೆ ವಹಿವಾಟು ಶುಲ್ಕ ವಿಧಿಸಲಾಗುತ್ತಿತ್ತು. ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರ ಮೂರು ಬ್ಯಾಂಕುಗಳಾದ ಐಸಿಐಸಿಐ, ಎಕ್ಸಿಸ್‌, ಎಚ್‌ಡಿಎಫ್ ಸಿ ಬ್ಯಾಂಕ್‌ಗಳು ಶುಲ್ಕಗಳನ್ನು ಹೇರಿದ್ದವು. ಇದರಿಂದ ಸಿಟ್ಟಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ವಿತರಕರು, ಕಾರ್ಡ್‌ ಪಾವತಿಯನ್ನು ಸೋಮವಾರದಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದರು.

LEAVE A REPLY

Please enter your comment!
Please enter your name here