ಜ್ಞಾನಾರ್ಜನೆಗೆ ಕನ್ನಡ ವಿಕಿಪೀಡಿಯಾ ಸಹಕಾರಿ- ಯು.ಬಿ.ಪವನಜ

0
264

ಉಜಿರೆ ಪ್ರತಿನಿಧಿ ವರದಿ
ಪ್ರಪಂಚದ ಜ್ಞಾನವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳಲು ಕನ್ನಡ ವಿಕಿಪೀಡಿಯ ಸಹಕಾರಿ ಎಂದು ಸಾಮಾಜಿಕ ಮತ್ತು ಅಂತರ್ಜಾಲ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ, ಅಂಕಣಕಾರಾದ ಯು.ಬಿ.ಪವನಜ ಹೇಳಿದರು.
 
 
ಉಜಿರೆ ಎಸ್ ಡಿ ಎಂ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಪತ್ರಿಕೋದ್ಯಮ ಹಾಗೂ ಕನ್ನಡ ವಿಭಾಗ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ವಿಕಿಪೀಡಿಯ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
 
 
ಕನ್ನಡ ಸಾಹಿತ್ಯಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಆದರೆ ಮೊದಲಿನಿಂದಲೂ ವಿಜ್ಞಾನ ಸಾಹಿತ್ಯದ ಕೊರತೆಯಿದೆ. ಕನ್ನಡದ ಮೂಲಕ ವಿವಿಧ ವಿಷಯಗಳ ಕುರಿತಾದ ಜ್ಞಾನದ ಪ್ರಸರಣಕ್ಕೆ ವಿಕಿಪೀಡಿಯಾ ಪೂರಕ ವೇದಿಕೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.
 
 
ಕನ್ನಡ ವಿಶ್ವಕೋಶಗಳ ಪ್ರಕಟಿತ ಪಠ್ಯಗಳಿವೆ. ಅವುಗಳನ್ನು ತಂತ್ರಜ್ಞಾನದ ನೆರವಿನಿಂದ ಎಲ್ಲರಿಗೂ ತಲುಪಿಸುವ ಕೆಲಸವಾಗಿಲ್ಲ. ಅಂತರ್ಜಾಲದಲ್ಲಿ ವಿಶ್ವಕೋಶಗಳಲ್ಲಿರುವಂತಹ ಮಾಹಿತಿ, ಜ್ಞಾನ ಲಭ್ಯವಾಗಬೇಕು. ವಿಕಿಪೀಡಿಯಾದ ಮೂಲಕ ಮಾಹಿತಿ, ಜ್ಞಾನ ಹಂಚಿಕೊಳ್ಳುವ ಕೆಲಸವಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಇದುವರೆಗೆ ಕೇವಲ ಜ್ಞಾನದ ಗ್ರಾಹಕರಾಗಿದ್ದರು. ಆದರೆ ಕನ್ನಡ ವಿಕಿಪೀಡಿಯಾದಿಂದ ವಿದ್ಯಾರ್ಥಿಗಳು ಜ್ಞಾನದ ಸೃಷ್ಟಿಕರ್ತರಾಗಬಹುದು. ಭಾಷೆಯ ಕಲಿಕೆ, ಸಂಶೋಧನಾ ಮನೋಭಾವ ಅಳವಡಿಸಿಕೊಳ್ಳಲೂಬಹುದು. ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಬೇಕಾದ ಕೊಡುಗೆ ನೀಡಿದಂತಾಗುತ್ತದೆ ಎಂದರು.
 
 
ಪ್ರಾಂಶುಪಾಲರಾದ ಡಾ.ಕೆ.ಎಸ್.ಮೋಹನ ನಾರಾಯಣ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಜ್ಞಾನವನ್ನು ವಿಕಿಪೀಡಿಯಾ ಮೂಲಕ ಹಂಚುತ್ತಿರುವುದು ಸಂತೋಷದ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
 
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ, ಎಸ್ ಡಿ ಎಂ ವಿದ್ಯಾರ್ಥಿಗಳು ಹಿಂದಿನ ವರ್ಷ 65 ಲೇಖನಗಳನ್ನು ವಿಕಿಪೀಡಿಯಾಗೆ ಸೇರ್ಪಡೆಗೊಳಿಸಿದ್ದು, ಈ ವರ್ಷವೂ ಇನ್ನು ಹೆಚ್ಚಿನ ಲೇಖನಗಳನ್ನು ವಿಕಿಪೀಡಿಯಾಗೆ ಸೇರಿಸುವ ಉತ್ಸಾಹದಲ್ಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆಯ್ದ ಉತ್ತಮ ಬರಹಗಳಿಗೆ ಬಹುಮಾನ ನೀಡಲಾಯಿತು. ದ್ವಿತೀಯ ಎಂ.ಸಿ.ಜೆ. ವಿದ್ಯಾರ್ಥಿಗಳಾದ ಕೃಷ್ಣಪ್ರಶಾಂತ್(ಪ್ರಥಮ), ರಂಜಿತ್ ಗೌಡ(ದ್ವಿತೀಯ) ಹಾಗೂ ಪವಿತ್ರಾ (ತೃತೀಯ) ಬಹುಮಾನ ಪಡೆದರು.
 
 
ವಿದ್ಯಾರ್ಥಿ ಆಂಜನೇಯ ಪ್ರಾರ್ಥಿಸಿದರು. ಪತ್ರಿಕೋದ್ಯಮ ಉಪನ್ಯಾಸಕರಾದ ಡಾ.ಹಂಪೀಶ್ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಪಿ.ಸಂಪತ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯಾದ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here