ಜೈಲಿನಲ್ಲಿ ಗೋಶಾಲೆ

0
592

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಜೈಲು ಎಂದಾಕ್ಷಣ ನೆನಪಾಗುವುದು ಕಳ್ಳರು, ಕೊಲೆಗಡುಕರ ಮುಖಗಳು. ಅದೇ ಜೈಲಿನೊಳಗೆ ಗೋಮಾತೆ ಪ್ರವೇಶ ಮಾಡುವುದು ಎಂದರೆ ನಂಬಲಸಾಧ್ಯವಾದ ಸಂಗತಿ. ಆದರೆ ನಂಬಲೇಬೇಕು.
 
 
 
mata_goyatra1
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚೀಮೇನಿ ಎಂಬಲ್ಲಿ 300 ಎಕ್ರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ತೆರೆದ ಜೈಲು ಇದೆ. ಸರಕಾರವು ಅಲ್ಲಿ ಕೃಷಿ ಉತ್ಪನ್ನಗಳು, ಚಪಾತಿ ತಯಾರಿಕಾ ಘಟಕ, ತರಕಾರಿ ಕೃಷಿಗಳನ್ನು ಕೈದಿಗಳ ಮೂಲಕ ತಯಾರಿಸಲಾಗುತ್ತದೆ. ಅದಕ್ಕೆ ಸೂಕ್ತವಾದ ಮಾರುಕಟ್ಟೆಯನ್ನು ಒದಗಿಸಲಾಗುತ್ತದೆ. ಕಾಸರಗೋಡು ಗಿಡ್ಡತಳಿಯ ಗೋವಿನ ಮಹತ್ವವನ್ನರಿತು ಜೈಲಿನ ಅಧಿಕಾರಿಗಳು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಕಾಮದುಘಾ ಯೋಜನೆಯ ಮುಖಂಡರನ್ನು ಸಂಪರ್ಕಿಸಿ ಜೈಲಿನಲ್ಲಿ ಕಾಸರಗೋಡು ಗಿಡ್ಡ ತಳಿಯ ಗೋಶಾಲೆಯ ನಿರ್ಮಾಣಕ್ಕೆ ಆಸಕ್ತಿಯನ್ನು ವ್ಯಕ್ತಪಡಿಸಿದರು. ಕಾಮದುಘಾ ಯೋಜನೆಯ ಸಂಚಾಲಕ ಡಾ| ವೈ.ವಿ.ಕೃಷ್ಣಮೂರ್ತಿ ಹಾಗೂ ತಂಡದವರು ಅಧಿಕಾರಿಗಳನ್ನು ಸಂಪರ್ಕಿಸಿ ಮೊದಲಿಗೆ 15ದನ ಹಾಗೂ 5 ಹೋರಿಗಳನ್ನು ತಲುಪಿಸುವ ವ್ಯವಸ್ಥೆಗೆ ಅಣಿಯಾದರು. ಈಗಾಗಲೇ ಗೋಶಾಲೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಲ್ಲಿಗೆ ದನಗಳನ್ನು ತಲುಪಿಸಿ ಕಾಮದುಘಾ ಯೋಜನೆಯ ಮೂಲಕ ಕೈದಿಗಳಿಗೆ ತರಬೇತಿಯನ್ನು ನೀಡಲಾಗುವುದು. ಈಗಾಗಲೇ ಜೈಲಿನಲ್ಲಿ ಹಂದಿ, ಕೋಳಿ, ಆಡು ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಕಾಸರಗೋಡು ಗಿಡ್ಡ ತಳಿಯ ಗೋವನ್ನು ಸಾಕುವ ಮೂಲಕ ಸಂಪೂರ್ಣ ಸಾವಯವ ಕೃಷಿಯ ಮೂಲಕ ಸಾವಯವ ಉತ್ಪನ್ನಗಳನ್ನು ಉತ್ಪಾದಿಸುವ ಸಂಪೂರ್ಣ ಮಾಹಿತಿ ಹಾಗೂ ತರಬೇತಿಯನ್ನು ಖೈದಿಗಳಿಗೆ ನೀಡುವ ಮುಖಾಂತರ ಅವರ ಮುಂದಿನ ಜೀವನ ಹಸನುಗೊಳಿಸುವ ಮಹತ್ತರವಾದ ಉದ್ದೇಶವನ್ನು ಅಧಿಕಾರಿಗಳು ಹೊಂದಿರುವುದು ಸಂತೋಷದಾಯಕ ವಿಷಯವಾಗಿದೆ. ದುಡಿಯುತ್ತಿರುವ ಖೈದಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲವನ್ನೂ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜೈಲುಗಳಲ್ಲೂ ದೇಶೀಯ ತಳಿಯ ದನಗಳನ್ನು ಸಾಕುವ ಉದ್ದೇಶವನ್ನು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿರುತ್ತಾರೆ.
 
 
ಗೋಕರ್ಣ ಮಂಡಲಾದೀಶ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ದೇಶೀಯ ತಳಿಯ ಗೋವಿನ ಉಳಿವಿಗಾಗಿ ನಡೆಯುತ್ತಿರುವ ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ ಇಂತಹ ಒಂದು ಅಪೂರ್ವ ಕಾರ್ಯಕ್ಕೆ ಕೇರಳದಲ್ಲಿ ಚಾಲನೆ ದೊರಕಿರುವುದು ಸಂತೋಷದಾಯಕವಾಗಿದೆ ಹಾಗೂ ಶ್ರೀಗಳ ಕಾಮದುಘಾ ಯೋಜನೆಯು ಮಹತ್ವವನ್ನು ಪಡೆದಿದೆ.
 
 
ದೈವದತ್ತವಾದ ದೇಶೀಯ ಗೋತಳಿ ಮುಖಾಂತರ ಖೈದಿಗಳ ಮನಃಪರಿವರ್ತನೆಯಿಂದ ಅವರ ಜೀವನ ಹಸನಾಗಲೆಂಬ ಹಾರೈಕೆ ಎಲ್ಲಾ ಗೋಪ್ರೇಮಿಗಳದ್ದು.
ಕಾಮದುಘಾ ಸಂಚಾಲಕ ಡಾ| ವೈ.ವಿ.ಕೃಷ್ಣ ಮೂರ್ತಿ, ಸಹಕಾರ್ಯದರ್ಶಿ ಶ್ರೀಕೃಷ್ಣ ಮೀನಗದ್ದೆ, ಪಳ್ಳತ್ತಡ್ಕ ಗೋಕೃಷಿ ವಿಭಾಗದ ಮುಖ್ಯಸ್ಥ ನಾರಾಯಣ ಭಟ್ ದಂಬೆಮೂಲೆ, ದೇಶೀಯ ಗೋವಿಜ್ಞಾನ ಅಧ್ಯಯನ ಕೇಂದ್ರ ನೆಕ್ಕರೆಕಳೆಯದ ಸುಬ್ರಹ್ಮಣ್ಯ ಪ್ರಸಾದ ಮೊದಲಾದವರು ಇತ್ತೀಚೆಗೆ ಭೇಟಿ ನೀಡಿ ಮಾಹಿತಿ ನೀಡಿದ್ದರು.
 
 
ಬಜಕೂಡ್ಲು ಅಮೃತಧಾರಾ ಗೋಶಾಲೆಯಿಂದ ಹಾಗೂ ಶ್ರೀ ಮಠದ ಇತರ ಗೋಶಾಲೆಗಳಿಂದ ಆಯ್ದ ಹಸುಗಳನ್ನು ಅತೀ ಶೀಘ್ರದಲ್ಲಿ ನೀಡಲಾಗುವುದು. ಜೈಲಧಿಕಾರಿಗಳು ದೇಶೀಯ ತಳಿಯ ಗೋಸಾಕಣೆಗೆ ಆಸಕ್ತರಾಗಿರುವುದು ಮುಂದಿನ ದಿನಗಳಲ್ಲಿ ಗೋವಿನ ಮಹತ್ವ ಜನರಿಗೆ ಮನದಟ್ಟಾಗುವುದರಲ್ಲಿ ಸಂದೇಹವಿಲ್ಲ
– ಡಾ| ವೈ.ವಿ.ಕೃಷ್ಣಮೂರ್ತಿ, ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯ ಕಾರ್ಯದರ್ಶಿ

LEAVE A REPLY

Please enter your comment!
Please enter your name here