ಜೀವಕ್ಕೆ ಯಂತ್ರ ಪರಿಹಾರವಲ್ಲ

0
378

ನಮ್ಮ ಪ್ರತಿನಿಧಿ ವರದಿ
ಭಾರತೀಯರು ವಿಶ್ವಮಣ್ಣಿನ ಆರೋಗ್ಯ ದಿನವಾದರೂ ಫಲವತ್ತಾದ ಮಣ್ಣಿನ ಉಳಿಯುವಿಕೆಯ ಬಗ್ಗೆ ಆಲೋಚಿಸಬೇಕಿದೆ. ಹಾಗೆ ನೋಡುವಾಗ ಮಣ್ಣಿನ ಫಲವತ್ತತೆಗೆ ಗೋವು ಸಹಾಯಕಾರಿ. ಮಣ್ಣಿಗೆ ಗೋವಿನ ಅಗತ್ಯವಿದೆಯೇ ಹೊರತು ಗೋವನ್ನೇ ಮಣ್ಣು ಮಾಡಹೊರಟರೆ ಮಣ್ಣಿನ ಉಳಿವು ಸಾಧ್ಯವಿಲ್ಲ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
 
ತುಮಕೂರಿನ ಬಸವೇಶ್ವರ ಹೈಸ್ಕೂಲ್ ಮೈದಾನದಲ್ಲಿ ಮಂಗಲಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ವಸುಂಧರೆ ಎನಿಸಿದ ಭೂಮಾತೆ ತನ್ನೊಡಲಿನ ಸತ್ತ್ವವನ್ನು ನಮಗೆ ನೀಡಬೇಕು ಎಂದರೆ ಗೋಮಾತೆಯ ಸಹಕಾರ ಬೇಕು. ಆದರೆ ಇಂದು ಜೀವಕ್ಕೆ ಬದಲಾಗಿ ಯಂತ್ರವನ್ನೆ ಪರ್ಯಾಯವಾಗಿಸಿ, ಗೋಸಂತತಿಯ ನಿರ್ನಾಮದ ಬುನಾದಿಯಾದ ಟ್ರಾಕ್ಟರ್ ನಂತಹ ಯಾಂತ್ರೀಕತೆಗೆ ಮಾರುಹೋಗಿದ್ದಾನೆ. ಇದು ಮಾನವನ ಅಳಿವಿನ ಸೂಚನೆ. ಜೀವಕ್ಕೆ ಎಂದಿಗೂ ಯಂತ್ರ ಪರಿಹಾರವಾಗಲಾರದು. ವಿಜ್ಞಾನಿಗಳು ಮತ್ತು ಸರ್ಕಾರಗಳ ಪೌರೋಹಿತ್ಯದಲ್ಲೇ ದೇಶೀ ಗೋ ತಳಿಗಳ ಅಳಿವಿನ ಅಂಕುರಾರ್ಪಣವಾಗುತ್ತಿದೆ. ಟ್ರಾಕ್ಟರ್ ಗೆ ನೀಡುವ ಲೋನ್ ಗಳನ್ನು ಗೋವಿಗಾಗಿ ರೈತನಿಗೆ ನೀಡಿದಲ್ಲಿ ಗೋಸಂತತಿ ಉಳಿಯಲು ಸಾಧ್ಯ ಎಂದು ಗೋಸಂದೇಶ ನೀಡಿದರು.
 
 
ಶ್ರೀ ಅಟವಿಶಿವಲಿಂಗ ಸ್ವಾಮಿಗಳು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮನುಕುಲವನ್ನು ಜಾಗೃತಗೊಳಿಸಿರುವ ಶಕ್ತಿ ಗೋಮಾತೆ. ಗೋವಿನಿಂದಲೇ ಸರ್ವ ಪುರುಷಾರ್ಥ ಸಿಧ್ದಿಯಾಗಲು ಸಾಧ್ಯವಿದೆ. ಮನುಕುಲಕ್ಕೆ ಗೋಮಹತ್ತ್ವವನ್ನು ತಿಳಿಸುವ ಮಹತ್ತರ ಯಾತ್ರೆಯನ್ನು ನಡೆಸುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ. ಎರಡು ನಾಟಿ ಹಸುಗಳಿಂದ ಮೂವತ್ತು ಎಕರೆಯಷ್ಟು ಜಮೀನಿಗೆ ಸಾವಯವ ಗೊಬ್ಬರ ಪೂರೈಸಲು ಸಾಧ್ಯವಾಗುತ್ತದೆ. ಹಾಗಾಗಿ ಸಂಸ್ಕಾರ, ಸಂಸ್ಕೃತಿಗಳ ಪ್ರತೀಕವಾಗಿರುವ ಗೋರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
 
 
 
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಿದ್ಧಗಂಗಾಮಠ, ಇವರು ಮಾತನಾಡಿ, ಮಂಗಲಗೋಯಾತ್ರೆ ಎನ್ನುವುದು ವಿಶ್ವಕ್ಕೇ ಮಂಗಲ ನೀಡುವ ಯಾತ್ರೆ. ಮನುಷ್ಯನಿಲ್ಲದೇ ಗೋವು ಬದುಕಬಹುದು, ಆದರೆ ಗೋವಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ರೈತನೊಡನೆ ಅವಿನಾಭಾವ ಸಂಬಂಧ ಹೊಂದಿದ್ದ ಗೋವನ್ನು ಇಂದು ಉಪೇಕ್ಷಿಸುತ್ತಿರುವುದು ಎಲ್ಲಾ ಸಮಸ್ಯೆಗಳಿಗೂ ಮೂಲವಾಗಿದೆ. ಸಂತನೋರ್ವ ತನ್ನ ನೋವನ್ನು ನುಂಗಿ ಜಗತ್ತಿಗೆ ಸಂತಸ ನೀಡುತ್ತಾನೆ. ಹಾಗೆ ಗೋಸೇವೆಗಾಗಿ ವಾರ, ದಿನಗಳನ್ನೆಣಿಸದೇ ಗೋಮಾತೆಯ ಸೇವೆಯಲ್ಲಿ ತೊಡಗಿರುವ ರಾಘವೇಶ್ವರ ಶ್ರೀಗಳು ಶ್ರೇಷ್ಟಸಂತರು ಎಂದರು.
 
 
ತುಮಕೂರಿನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗೋವು, ಗೀತೆ, ಗಂಗೆ, ಗಾಯತ್ರೀ ಮಂತ್ರವೆನ್ನುವ “4 ಜಿ”ನೆಟ್ ವರ್ಕ್ ಇಂದಿನ ಎಲ್ಲಾ ಸಂಶೋಧನೆಗಳನ್ನು ಮೀರಿಸಿ “ಗೋ”ವಿಂದನನ್ನೆ ತಲುಪಲು ಸಹಾಯಮಾಡುತ್ತದೆ. ಹಸುವಿನ ಶೇಷವೆಲ್ಲವೂ ನಮಗೆ ವಿಶೇಷವಾಗಿರುವಂತದ್ದು. ಹಿಂದೆ ಗೋವು ಸತ್ಯ ಪರಿಪಾಲನೆಗಾಗಿ ಪುಣ್ಯಕೋಟಿ ಎಂಬ ಹೆಸರು ಪಡೆಯಿತು. ಆದರೆ ಇಂದು ರಾಘವೇಶ್ವರ ಶ್ರೀಗಳಂತವರೇ ಗೋರಕ್ಷಣೆ ಮಾಡಿ ಎಂದು ಹೇಳಿದ್ದರಿಂದ ನಿಜಾರ್ಥದಲ್ಲಿ ಪುಣ್ಯಕೋಟಿ ಕೋಟಿ ಪುಣ್ಯವನ್ನು ಹೊಂದಿದೆ ಎನ್ನುವುದು ಖಾತ್ರಿಯಾಯಿತು ಎಂದು ಅಭಿಪ್ರಾಯಪಟ್ಟರು.
 
 
ತುಮಕೂರಿನಲ್ಲಿ ಸುಂದರ ಶೋಭಾಯಾತ್ರೆ.
ಅರಸೀಕೆರೆಯ ಅದ್ಧೂರಿ ಕಾರ್ಯಕ್ರಮದ ನಂತರ ಇಂದು ತುಮಕೂರು ತಲುಪಿದ ಗೋಯಾತ್ರೆಯ ರಥಗಳನ್ನು ಗಜೇಂದ್ರ ಸ್ವಾಗತಿಸಿದ್ದು ಪ್ರಾಣಿಪ್ರಪಂಚದಲ್ಲೂ ಇರುವ ಸೌಹಾರ್ದತೆಯನ್ನು ಮನುಜನಿಗೆ ನೆನಪಿಸುವ ಅದ್ಭುತ ರೂಪಕದಂತಿತ್ತು. ಊರಿನ ಅನೇಕ ಗಣ್ಯರು ಗೋರಥಗಳನ್ನು ಸ್ವಾಗತಿಸಿದ್ದಲ್ಲದೇ, ವಿಘ್ನೇಶ್ವರ ನಾಸಿಕ್ ಡೋಲು ಬಳಗ, ಬೆಳ್ಳಾವಿ ತಂಡದವರಿಂದ ನಡೆದ ಡೋಲುವಾದ್ಯ ಸುತ್ತಲೂ ಸೇರಿದ್ದ ಜನಸಂದೋಹದ ಗಮನ ಸೆಳೆಯಿತು. ನಾಡಿನ ವಿಶಿಷ್ಟ ಕಲೆಯಾದ ಗರಡಿವಾದ್ಯ, ಎಲ್ಲರನ್ನೂ ಸೆಳೆದದ್ದಲ್ಲದೇ, ಗೋಮಾತೆಯ ಶೋಭಾಯಾತ್ರೆಯಲ್ಲಿ, ಆಧುನಿಕ ಕೃಷಿ ಸಲಕರಣೆಯಾದ ಟ್ರ್ಯಾಕ್ಟರ್ ನ ಮೇಲೆ ಏರಿಬಂದ ಶಹನಾಯಿ ವಾದನ, ಪಾರಂಪರಿಕತೆ ಮತ್ತು ಆಧುನಿಕತೆ, ಎರಡನ್ನೂ ಬೆಸೆದ ವೈರುಧ್ಯ ವಿಪರ್ಯಾಸದಂತೆ ಕಂಡುಬಂದಿತು. ಒಟ್ಟಿನಲ್ಲಿ ತುಮಕೂರಿನ ಸುಂದರ ಶೋಭಾಯಾತ್ರೆ ತುಮಕೂರಿನ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಜನಸಮೂಹದಲ್ಲಿ ಅಮೃತಪಥದೆಡೆಗೆ ಗೋ – ಯಾತ್ರೆ, ಎನ್ನುವ ಅರಿವು ಮೂಡಿಸುವ ಕಾರ್ಯವೆಸಗಿತು. ಈ ಸಂದರ್ಭದಲ್ಲಿ ರುದ್ರನಮಠದ ಶ್ರೀ ಶಿವಾಚಾರ್ಯ ಸ್ವಾಮಿಗಳು, ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಬಸವಲಿಂಗ ಸ್ವಾಮಿಗಳು, ಶ್ರೀ ಸಿದ್ಧರಾಮಚೈತನ್ಯ ಸ್ವಾಮಿಗಳು, ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು, ಉತ್ತರಕಾಶಿಮಠದ ಶ್ರೀರಾಮಚಂದ್ರಸ್ವಾಮಿಗಳು, ಪೂನಾದಿಂದ ಗೋಯಾತ್ರೆಗಾಗಿ ಆಗಮಿಸಿದ ಮಿಲಿಂದ್ ಕಾಶ್ಮೀಕರ್, ಹಾಗೂ ಇನ್ನಿತರ ಸಂತ ಮಹಂತರೊಡನೆ ಅನೇಕ ಗಣ್ಯರು,ಗೋಪ್ರೇಮಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here