ಜಿಜ್ಞಾಸೆಗಳಿಗೆ ದಿವ್ಯಾರ್ಥವನ್ನು ಪಡೆದರು!

0
1201

ನಿತ್ಯ ಅಂಕಣ: ೬೮ -ತಾರಾನಾಥ್‌ ಮೇಸ್ತ,ಶಿರೂರು.
ಶ್ರೀಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣ ಮಠ ಸ್ಥಾಪಿಸಿ, ಕಡಗೊಲು ಶ್ರೀಕೃಷ್ಣನ ಪ್ರತಿಷ್ಠಾಪಿಸಿದರು. ಹಾಗೆಯೇ ಅಷ್ಟಮಠಗಳ ಸ್ಥಾಪನೆಯು ಅವರಿಂದ ನಡೆಯಿತು. ಅವುಗಳಲ್ಲಿ ಪೇಜಾವರ ಅಧೋಕ್ಷಜ ಮಠವು ಒಂದು. ಅದರ 32 ನೇ ಪೀಠಾಧಿಪತಿಯಾಗಿದ್ದ ಪೂಜ್ಯ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು, 1958- 1960 ನಡುವೆ, ಅವಧೂತ ಭಗವಾನ್ ಶ್ರೀನಿತ್ಯಾನಂದ ಸ್ವಾಮೀಜಿ ಅವರನ್ನು ಗಣೇಶಪುರಿಯಲ್ಲಿ ತಮ್ಮ ಸಂಗಡಿಗರೊಂದಿಗೆ ತೆರಳಿ ದರ್ಶನವನ್ನು ಪಡೆದಿದ್ದರು. ಆವಾಗ ಪೇಜಾವರ ಶ್ರೀಗಳು ಯುವ ಯತಿಗಳಾಗಿದ್ದರು. ಅಂದು ಪೇಜಾವರ ಶ್ರೀಗಳು ಅವಧೂತ ನಿತ್ಯಾನಂದ ಸ್ವಾಮೀಜಿ ಅವರಲ್ಲಿ ಆಧ್ಯಾತ್ಮಿಕ ವಿಚಾರವಾಗಿ ಬಹಳ ಹೊತ್ತು ಚರ್ಚಿಸಿದ್ದಾರೆ. ಗುರುದೇವರಿಂದ ಜಿಜ್ಞಾಸೆಗಳಿಗೆ ದಿವ್ಯಾರ್ಥವನ್ನು ಪಡೆದಿದ್ದಾರೆ. ಅಲ್ಲಿಂದ ಶ್ರೀಗಳು ಜ್ಞಾನಾಮೃತದ ಆಳದ ಗಾಂಭೀರ್ಯವನ್ನು ತಿಳಿದು, ಸಂತೃಪ್ತಿ ಪಡೆದು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಪೇಜಾವರ ಶ್ರೀಗಳು ಅವಧೂತ ನಿತ್ಯಾನಂದ ಸ್ವಾಮೀಜಿ ಅವರ ಜೊತೆಗಿರುವ ಕಪ್ಪು ಬಿಳುಪು ಭಾವಚಿತ್ರವು ಇಗಲೂ ಅಂದಿನ ಭೇಟಿಯ ಸವಿ ಸವಿ ನೆನಪಾಗಿ ಉಳಿದುಕೊಂಡಿದೆ. ಇವಾಗ ಪೂಜ್ಯರಾದ ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ನಮ್ಮೊಂದಿಗೆ ಇಲ್ಲ. ಡಿ-29, 2019 ರಲ್ಲಿ ಅವರು ಕೃಷ್ಣಕ್ಯರಾದರು. ಅಂದು ಗುರುದೇವರು ಮತ್ತು ಶ್ರೀಪಾದರ ನಡುವೆ ನಡೆದ ಮಾತುಕತೆಯ ಕೆಲವೊಂದು ಸುಜ್ಞಾನದ ನುಡಿಗಳನ್ನು ಗುರುದೇವರ ಚರಿತಾಮೃತದ ಗ್ರಂಥದಿಂದ ಪಡೆದು ಈ ಕೆಳಗೆ ಉಲ್ಲೇಖಿಸಿದ್ದೇನೆ.

ಪೇಜಾವರ ವಿಶ್ವೇಶ ತೀರ್ಥರು, ನಿತ್ಯಾನಂದರಲ್ಲಿ ‘ಜನರು ನಿಮ್ಮನ್ನು ದೇವರು ಎಂದು ಯಾಕೆ ಕರೆಯುತ್ತಾರೆ..?’ ಎಂದು ಪ್ರಶ್ನಿಸುತ್ತಾರೆ. ಆವಾಗ ಗುರುದೇವರು, “ಪ್ರತಿಯೊಂದು ದೇವರು, ನೀವು ಮತ್ತು ನಿಮ್ಮ ಸುತ್ತಲಿನ ಎಲ್ಲವೂ ಭಗವಂತನೇ” ಎಂದು ಉತ್ತರ ನೀಡುತ್ತಾರೆ. ಆದರೆ ಅವರು ನಿಮ್ಮನ್ನು ದೇವರ ಅವತಾರವೆಂದು ತಿಳಿಯುತ್ತಾರೆ, ಹೀಗೆಂದು ಎರಡನೆಯ ಪ್ರಶ್ನೆಯಾಗಿ ಪೇಜಾವರ ಶ್ರೀಗಳು ಕೇಳುತ್ತಾರೆ. ಆವಾಗ ಗುರುದೇವರು, “ಯಾವುದೇ ದೇವರ ಅವತಾರ, ತಾನು ಅವತಾರ ಎಂದು ಘೋಷಿಸಿ ಕೊಳ್ಳುತ್ತದೆಯಾ..?” ಎಂದು ಬಹಳ ಸೊಗಸಾಗಿ ಪ್ರಶ್ನೆಯಾಗಿಯೇ ಉತ್ತರವನ್ನು ನೀಡುತ್ತಾರೆ. ಆವಾಗ ಪೇಜಾವರ ಶ್ರೀಗಳು, ಹೌದು, ಶ್ರೀಕೃಷ್ಣ ಗೀತೆಯಲ್ಲಿ ಹಾಗೆ ಹೇಳಿರುವನು, ಎಂದು ಗುರುದೇವರ ಪ್ರಶ್ನೆಗೆ ಉತ್ತರವಾಗಿ ನೀಡುತ್ತಾರೆ.

ಒಡನೆ ಗುರುದೇವರು, ಇಲ್ಲ..! ಶ್ರೀಕೃಷ್ಣ ಹಾಗೆ ಹೇಳಿಲ್ಲ. ಅದು ಋಷಿ ವ್ಯಾಸರು ಶ್ರೀಕೃಷ್ಣನ ಬಾಯಿಗೆ ತುರುಕಿಸಿದ್ದು ಎಂದು ಹೇಳುತ್ತಾರೆ. ಪೇಜಾವರ ಸ್ವಾಮಿಗಳು, ಆದರೆ ಅದರಲ್ಲಿ ‘ಶ್ರೀಕೃಷ್ಣ ಅರ್ಜುನನಿಗೆ ವಿಶ್ವರೂಪವನ್ನು ತೋರಿಸಿದ್ದ ಎಂದಿದೆ’ ಎನ್ನುತ್ತಾರೆ. ಬಳಿಕ ಪೇಜಾವರ ಶ್ರೀಗಳ ಜಿಜ್ಞಾಸೆಗೆ ಗುರುದೇವರು, ವಿಶ್ವರೂಪವನ್ನು ತೋರಿಸಲು ಅಥವಾ ನೋಡಲು ಸಾಧ್ಯವಿದೆಯೇ..? ಎಂದು ಪ್ರಶ್ನೆಯಾಗಿಯೇ ಉತ್ತರಿಸಿತ್ತಾರೆ. ಇದು ಋಷಿ ವ್ಯಾಸರ ಕಾವ್ಯದ ಉತ್ತುಂಗ ವಿವರಣೆ. ಅದಕ್ಕಾಗಿ ವಿಶ್ವರೂಪವನ್ನು ಗೀತೆ ಹೇಳಿದೆ. ವ್ಯಾಸರು ಜನರ ಭಕ್ತಿ ಭಾವನೆಯನ್ನು ವೃದ್ಧಿಸಲು ಇದನ್ನು ಮಾಡಿದರು. ಹೀಗೆ ಪೇಜಾವರ ಶ್ರೀಗಳು ಮತ್ತು ನಿತ್ಯಾನಂದರ ನಡುವೆ ಬಹಳ ಚರ್ಚೆಗಳು ನಡೆಯುತ್ತವೆ.

ಅಂದು ಈರ್ವರು ಸ್ವಾಮೀಜಿಗಳ ನಡುವೆ ನಡೆದ ಚರ್ಚಾ ವಿಚಾರವನ್ನು ಸಾಹಿತಿ ಪಿ. ವಿ. ರವೀಂದ್ರನ್ ಅವರು ತಾವು ಬರೆದ ‘ಸದ್ಗುರು ನಿತ್ಯಾನಂದ ಭಗವಾನ್’ ಮಳಯಾಳಂ ಭಾಷೆಯ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕೃತಿ ಜುಲೈ 2,1985 ರಲ್ಲಿ ಬಿಡುಗಡೆ ಕಂಡಿದೆ. ಮಲೆಯಾಳ ಭಾಷೆಯ ಅದೇ ಕೃತಿಯನ್ನು ಇ. ಆರ್. ರವೀಂದ್ರನಾಥ ಮೆನನ್ ಅವರು “Sadguru Nithyananda Bhgavan”- The Eternal Entity. ಹೆಸರಿನಿಂದ ಆಂಗ್ಲಭಾಷೆಗೆ ಭಾಷಾಂತರಿಸಿದರು. ನಂತರ ಇದೆ ಆಂಗ್ಲ ಕೃತಿಯನ್ನು 2008 ರಲ್ಲಿ ಉಡುಪಿಯ ಹಿರಿಯಸಾಹಿತಿ ಹರಿಕೃಷ್ಣ ರಾವ್ ಸಗ್ರಿ ಅವರು, “ಸದ್ಗುರು ನಿತ್ಯಾನಂದ ಭಗವಂತ” ಸಚ್ಚಿದಾನಂದದ ನಿತ್ಯತತ್ತ್ವ, ಹೆಸರಿನಲ್ಲಿ ಕನ್ನಡಕ್ಕೆ ಯಥಾ ರೂಪದಲ್ಲಿ ಭಾಷಾಂತರಿಸಿದ್ದಾರೆ. ಹರಿಕೃಷ್ಣ ರಾವ್ ಅವರು ಕನ್ನಡಿಗ ಸದ್ಭಕ್ತ ಗಡಣಕ್ಕೆ ಗುರುದೇವರ ಮಹಿಮೆಯನ್ನು ಮಹಾ ಪ್ರಸಾದವಾಗಿ ಉಣಬಡಿಸಿದ್ದಾರೆ. ಗುರುದೇವರ ಭಕ್ತರಾದ ದಯಾನಂದ ಬಂಟಕಲ್ ಅವರು, ಅಕ್ಷರ ಸರಸ್ವತಿ ಸ್ವರೂಪಿ ಈ ಹೊತ್ತಿಗೆಯ ಪ್ರಕಾಶಕರು.

LEAVE A REPLY

Please enter your comment!
Please enter your name here