ಜಾಯೀ ಫಲ – ಲಾಭದ ಸಾಂಬಾರ ಬೆಳೆ

0
218

ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಸುಮಾರು ಎಂಟು ಎಕ್ರೆ ಜಾಯೀಮರಗಳ ಕಾಡಿನಿಂದ ವರ್ಷಕ್ಕೆ 7 ಲಕ್ಷದಷ್ಟು ವರಮಾನವನ್ನು ಕೇರಳದ ಎರ್ನಾಕುಳಂ ಜಿಲ್ಲೆ ಪಾರಕ್ಕಾಡ ತೆಕ್ಕೂನೇಲ್ ನ ಮ್ಯಾಥ್ಯೂ ಜೋಸ್ ಇವರು ಗಳಿಸುತ್ತಾರಂತೆ. ಕೇರಳದ ಎರ್ನಾಕುಳಂ, ಇಡುಕ್ಕಿ, ಮುಂತಾದೆಡೆ ಭಾರೀ ಸಂಖ್ಯೆಯಲ್ಲಿ ಜಾಯೀ ಮರಗಳಿವೆ. ಕರ್ನಾಟಕದ ಕರಾವಳಿಯಲ್ಲೂ ಜಾಯೀ ಫಲ ಉತ್ತಮವಾಗಿ ಬೆಳೆಯುತ್ತದೆ. ಕಾರವಾರ ಜಿಲ್ಲೆ ಅಂಕೋಲದ ಪರಮಾನಂದ ವೆಂಕಟೇಶ ಭಟ್ ಇವರು ಜಾಯೀ ಸಸ್ಯವನ್ನು ಅಡಿಕೆ ತೋಟದ ಮಿಶ್ರಬೆಳೆಯಾಗಿ ಬೆಳೆಸಿ ಸುಮಾರು 5 ಲಕ್ಷದಷ್ಟು ವರಮಾನಗಳಿಸುತ್ತಾರೆ. ಕರಾವಳಿಯಲ್ಲಿ ಹಲವಾರು ಜನ ಅಡಿಕೆ , ತೆಂಗಿನ ತೋಟದಲ್ಲಿ ಜಾಯೀ ಸಸ್ಯ ಬೆಳೆಸಿ ಒಂದಷ್ಟು ಆದಾಯಗಳಿಸುತ್ತಾರೆ. ಜಾಯೀ ಕಾಯಿ ಸಸ್ಯ ಬೆಳೆಯಲು ಕರಾವಳಿ ಮಲೆನಾಡು ಹೆಚ್ಚು ಪ್ರಶಸ್ತ.
 
 
ಜಾಯೀ ಫಲ ಒಂದು ಮರ ಸಾಂಬಾರ. ಇದನ್ನು ಇಂಗ್ಲೀಷಿನಲ್ಲಿ NUTMEG ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು Myristica fragrans . ನಿತ್ಯ ಹರಿದ್ವರ್ಣದ, ಆಳಕ್ಕೆ ಬೇರು ಬಿಡುವ, ಎತ್ತರಕ್ಕೆ ಬೆಳೆದು ಸುತ್ತಲೂ ಗೆಲ್ಲುಗಳನ್ನು ಪಸರಿಸುವ ಇದು ಲಾಭದ ಸಾಂಬಾರ ವೃಕ್ಷ. ಅಡಿಕೆ , ತೆಂಗಿನೊಂದಿಗೆ ಮಿಶ್ರ ಬೆಳೆಯಾಗಿ ಹಾಗೂ ಅದನ್ನೇ ಮುಖ್ಯ ಬೆಳೆಯಾಗಿಯೂ ಬೆಳೆಸಬಹುದು. ಜಾಯೀ ಒಂದು ಕಾಡು ಮರ. ನೂರಾರು ವರ್ಷತನಕವೂ ಬದುಕಿರಬಲ್ಲುದು. ಮರ ಬೆಳೆದು ಅದರಲ್ಲಿ ಬಿಡುವ ಫಲವೇ ಜಾಯೀ ಫಲ. ಇದರ ಒಳಗೆ ಒಂದು ಬೀಜವೂ ಆ ಬೀಜಕ್ಕೆ ಸುತ್ತಲೂ ಅಂಟಿರುವ ಪತ್ರೆಯೂ (mace)ಇರುತ್ತದೆ. ಈ ಬೀಜಕ್ಕೆ ಜಾಯೀ ಕಾಯಿ ಹಾಗೂ ಪತ್ರೆಗೆ ಜಾಯೀ ಪತೆ ಎನ್ನುತ್ತಾರೆ. ಫಲ ಬೆಳೆದು ತುದಿ ಭಾಗ ಒಡೆದು ಕೆಳಕ್ಕೆ ಉದುರುತ್ತದೆ. ಆಗ ಅದರಲ್ಲಿ ಪತ್ರೆ ಸಹಿತ ಕಾಯಿ ದೊರೆಯುತ್ತದೆ. ಅದನ್ನು ತೊಗಟೆಯಿಂದ ಬೇರ್ಪಡಿಸಿ ಕಾಯಿ ಮತ್ತು ಪತ್ರೆ ಬೇರೆ ಬೇರೆಯಾಗಿ ಒಣಗಿದಾಗ ಅದಕ್ಕೆ ವಾಣಿಜ್ಯಿಕ ಮಹತ್ವ ಬರುತ್ತದೆ. ಕಾಯಿ ಮತ್ತು ಪತ್ರೆಗಳೆರಡೂ ಔಷಧೀಯ ಹಾಗೂ ಸಾಂಬಾರ ಬಳಕೆಗೆ ಬೇಕಾಗುತ್ತದೆ. ಅದಕ್ಕಾಗಿಯೇ ಇದಕ್ಕೆ ಬೇಡಿಕೆ. ಈಗ ಜಾಯೀ ಕಾಯಿಗೆ 250 ರೂ. ನಿಂದ 300 ರೂ. ತನಕ ಬೆಲೆ ಇದೆ. ಪತ್ರೆಗೆ 500-700 ರೂ. ತನಕ ಬೆಲೆ ಇದೆ.
 
 
 
125 ರಿಂದ 150 ಸಂಖ್ಯೆಯ ಬೀಜಗಳಿದ್ದರೆ ಒಂದು ಕಿಲೋ ಕಾಯಿ ಆಗುತ್ತದೆ. ಕಾಯಿ ಒಣಗಿದ ಮೇಲೆ ಚಿಪ್ಪು ಸಹಿತ ಹಾಗೂ ಚಿಪ್ಪು ತೆಗೆದ ರೀತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಚಿಪ್ಪು ತೆಗೆದರೆ ಹೆಚ್ಚು ಸಮಯ ಸಂಗ್ರಹಿಸುವುದಕ್ಕೆ ಆಗುವುದಿಲ್ಲ. ಜಾಯೀ ಕಾಯಿ ಬೀಜದಲ್ಲಿ 25 ರಿಂದ 40 % ಕೊಬ್ಬ್ಬಿನ ಎಣ್ಣೆ ( ಬೆಣ್ಣೆ) ಇರುತ್ತದೆ. ಸುಮಾರು 1000 ಕಾಯಿಗಳಿದ್ದರೆ ಇಂದು ಕಿಲೋ ಪತ್ರೆ ಆಗುತ್ತದೆ. 10-15 ವರ್ಷ ಬೆಳೆದ ಮರವು ವರ್ಷಕ್ಕೆ 500-1000 ತನಕವೂ ಫಲ ಬಿಡುತ್ತದೆ. ಒಂದು ಮರವು ಏನಿಲ್ಲವಾದರೂ ವರ್ಷಕ್ಕೆ 1000 ಕ್ಕೂ ಹೆಚ್ಚಿನ ಆದಾಯ ಗಳಿಸಿಕೊಡಬಲ್ಲುದು.
 
 
ಜಾಯೀ ಫಲದಲ್ಲಿ ಸಾಮಾನ್ಯವಾಗಿ ಕಂಡು ಬರುವುದು ಒಂದೇ ಪ್ರಕಾರದ ತಳಿ. ಕೆಲವು ತಳಿಯಲ್ಲಿ ಪತ್ರೆ ಹೆಚ್ಚು, ಮತ್ತೆ ಕೆಲವು ತೆಳು ಇರುವುದೂ ಇದೆ. ಕೆಲವು ಹೆಚ್ಚು ಇಳುವರಿಯವೂ ಮತ್ತೆ ಕೆಲವು ಸಾಧಾರಣ ಇಳುವರಿಯವೂ ಇದೆ. ಇದೆಲ್ಲಾ ಪ್ರಕಾರಗಳು ಅಷ್ಟೇ. ಪ್ರಾದೇಶಿಕತೆ ಮತ್ತು ಮಣ್ಣಿನ ಗುಣ ಮತ್ತು ತಳಿ ಮಾರ್ಪಾಡಿನಿಂದ ಈ ವೆತ್ಯಾಸಗಳಾಗುವುದಿದೆ. ಕೇರಳದ ಕಲ್ಲಿಕೋಟೆಯಲ್ಲಿರುವ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ಕಾಡು ಜಾತಿಯ, ಅಪರೂಪದ ಹಾಗೂ ಒಂದೇ ಫಲದಲ್ಲಿ 1-4 ಬೀಜಗಳಿರುವ ಸುಮಾರು 475 ಬಗೆಯ, ಜಾಯೀ ಸಸ್ಯಗಳ ಸಂಗ್ರಹ ಇದೆ.
 
 
ಜಾಯಿಫಲದ ಸಾಂಪ್ರದಾಯಿಕ ಸಸ್ಯಾಭಿವೃದ್ದಿ ಬೀಜದ ಮೂಲಕ ಅಗುತ್ತದೆ. ಇದರ ಒಂದು ವಿಷೇಷ ಗುಣ, ಹೆಣ್ಣು -ಗಂಡು ಗುಣಗಳು. ಕೆಲವು ದ್ವಿಲಿಂಗೀಯವೂ ಇರುತ್ತದೆ. ಇದು ನೆಟ್ಟು ಸುಮಾರು ಆರು ವರ್ಷ ಕಳೆದು ಫಲ ನೀಡಲು ಹೂ ಬಿಟ್ಟಾಗ ಗೊತ್ತಾಗುವುದು. ಹೆಣ್ಣು ಸಸ್ಯಗಳು ಕಾಯಿ ಬಿಡುತ್ತವೆ. ಗಂಡು ಹೂವು ಮಾತ್ರ ಬಿಡುತ್ತವೆ. ಗಂಡಿನ ಪರಾಗ ಹೆಣ್ಣು ಹೂವುಗಳಿಗೆ ಕಾಯಿ ಫಲಿತಗೊಳ್ಳಲು ಬೇಕು. ದ್ವಿಲಿಂಗೀಯದಲ್ಲಿ ಕಾಯಿ ಕಚ್ಚುತ್ತದೆಯಾದರೂ ಪ್ರಮಾಣ ಕಡಿಮೆ. ಹತ್ತು ಹೆಣ್ಣು ಮರಗಳಿಗೆ ಒಂದು ಗಂಡು ಮರ ಬೇಕು. ವಾಣಿಜ್ಯ ಉದ್ದೇಶಕ್ಕೆ ಜಾಯೀ ಫಲ ಬೆಳೆಯುವಾಗ ಈ ಅನಿಶ್ಚಿತತೆಯಿದ್ದರೆ ನಷ್ಟವಾಗುತ್ತದೆ. ಇದನ್ನು ನಿವಾರಿಸಲು ಕಸಿ ವಿಧಾನವನ್ನು ಅನುಸರಿಸಲಾಯಿತು. ಗೂಟಿ ಕಸಿ, ಸಾಮಿಪ್ಯ ಕಸಿ ,ಕಣ್ಣು ಕಸಿಯ ಮೂಲಕ ಸಸ್ಯಾಭಿವೃದ್ದಿ ಸಾಧ್ಯ. ಗೂಟಿಗಿಂತ ಕಣ್ಣು ಕಸಿ ಹಾಗೂ ಸಾಮಿಪ್ಯ ಕಸಿಯಲ್ಲಿ ಯಶಸ್ಸು ಜಾಸ್ತಿ. ಇತ್ತೀಚೆಗೆ ರಾಮಪತ್ರೆಯ ಸಸಿಗೂ ಜಾಯೀ ಸಸ್ಯವನ್ನು ಕಸಿ ಮಾಡಲಾಗುತ್ತಿದೆ. ಜಾಯೀ ಬೀಜವು ಕೊಯಿಲಿನ ತಕ್ಷಣ ಬಿತ್ತಿದರೆ 1-15 ದಿನದಲ್ಲಿ ಮೊಳಕೆಯೊಡೆಯುತ್ತದೆ.
 
 
ಜಾಯೀ ಮರ ವಿಶಾಲವಾಗಿ ಬೆಳೆದಿದ್ದರೆ ಅಷ್ಟು ಹೆಚ್ಚು ಇಳುವರಿ ಪಡೆಯಬಹುದು. ಸಾಮಿಪ್ಯ, ಗೂಟಿ ಕಸಿಯವು ಸ್ವಾಭಾವಿಕವಾಗಿ ಬೆಳೆದಂತೆ ಹೆಚ್ಚು ಎತ್ತರಕ್ಕೆ ಬೆಳೆಯದು. ಈ ಸಮಸ್ಯೆಯನ್ನು ನಿವಾರಿಸಲು ಕಣ್ಣು ಕಸಿ ಸಹಾಯಕವಂತೆ. ಸಾಮಿಪ್ಯ ಕಸಿಗೂ ಮೇಲ್ಮುಖವಾಗಿ ಬೆಳೆಯುವ ಗೆಲ್ಲನ್ನು plagiotropic ಕಸಿ ಕಡ್ಡಿಯನ್ನಾಗಿ ಬಳಸಿದರೆ ಆ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಜಾಯೀ ಫಲದಲ್ಲಿ ಹೆಚ್ಚಿನವು ಕೆಳಮುಖವಾಗಿ ಮತ್ತು ಅಡ್ಡಕ್ಕೆ orthotropic ಬೆಳೆಯುವ ಗೆಲ್ಲುಗಳೇ ಇರುವುದರಿಂದ ಅದಕ್ಕೂ ಭಾರೀ ಇತಿಮಿತಿಗಳಿವೆ. ಈಗ ಕಣ್ಣು ಕಸಿಯೇ(budding) ಮಾಮೂಲಿಯಾಗಿದೆ. ಕೇರಳದ ಪೆರುವನ್ನಾಮುಝಿಯಲ್ಲಿ ಈ ಮೂರು ವರ್ಷದ ಸಾಮಿಪ್ಯ ಕಸಿ ಮಾಡಿದ ಸಸ್ಯ ನೆಟ್ಟು ಮೂರನೇ ವರ್ಷಕ್ಕೇ ಫಸಲಿಗಾರಂಭಿಸಿ 800-1200 ಕಾಯಿ ನೀಡಿದ ವರದಿ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿದೆ. ಕೊಯಿಲು ಹಾಗೂ ಗಂಡು-ಹೆಣ್ಣೆಂಬ ಅನಿಶ್ಚಿತತೆ ನಿವಾರಣೆಗೆ ಕಸಿ ಸಸ್ಯಗಳ ನಾಟಿ ಒಳ್ಳೆಯದು ಎನ್ನುತ್ತಾರೆ. ಕಸಿ ಮಾಡಿದ ಸಸ್ಯಗಳನ್ನು ಹೆಚ್ಚು ಸಾಂದ್ರತೆಯಲ್ಲಿ ಬೆಳೆಸಬಹುದು. ನಾಟಿ ಮಾಡುವವರು ಮೂಲ ಸಸ್ಯವನ್ನು ಅರಿತು ಸಸಿ ಆಯ್ಕೆ ಮಾಡುವುದು ಸೂಕ್ತ.
ರಾಧಾಕೃಷ್ಣ ಹೊಳ್ಳ.
[email protected]

LEAVE A REPLY

Please enter your comment!
Please enter your name here