ಜವರಾಯನಾಗಬಹುದು ಜಮಾಯಿಸಿ ನೀ ತಿನ್ನುವ ಜಂಕ್ ಫುಡ್!!!

0
425

ಅರಿತುಕೋ ಬದುಕ ವೈಖರಿ ಅಂಕಣ: ಸಂಚನ.ಎಂ.ಎಸ್
ಇಂದು ಜಗತ್ತಿನಾದ್ಯಂತ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಸಫಲವಾಗಿರುವ ಆಹಾರ ಪದಾರ್ಥಗಳಲ್ಲಿ ಮೊದಲನೆಯ ಸ್ಥಾನ ಪಡೆದುಕೊಂಡ ಕೀರ್ತಿ ಜಂಕ್ ಫುಡ್ ನದು ಎಂದರೆ ಅತಿಶಯೋಕ್ತಿ ಅಲ್ಲ. ಜನರೊಂದಿಗೆ ತುಂಬಾ ಸ್ಟ್ರಾಂಗ್ ಆದ ಲಿಂಕ್ ಒಂದನ್ನು ಜಂಕ್ ಫುಡ್ ಇಂದು ಬೆಸೆದುಕೊಂಡಿದೆ. ಜಂಕ್ ಫುಡ್ ಬೇಡವೆಂದು ಜರಿಯುವ ಸಣ್ಣ ಗುಂಪು ಒಂದೆಡೆಯಾದರೆ, ಅದರ ಅಂದ, ಸ್ವಾದಕ್ಕೆ ಮಾರು ಹೋಗಿ ಜಂಕ್ ಫುಡ್ ಗೇ ಜೈ ಅನ್ನುವ ಬಹುದೊಡ್ಡ ಗುಂಪೂ ಮತ್ತೊಂದೆಡೆ ತಲೆಎತ್ತಿದೆ. ತಂಪುಪಾನೀಯ, ಕೇಕ್, ಚೀಪ್ಸ್, ಚಾಕಲೇಟ್, ಪೀಜಾ, ಬರ್ಗರ್ ಗಳ ಭರಾಟೆಯಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಮೂಲೆಗುಂಪಾಗುತ್ತಿವೆ. ” ಯು ಆರ್ ವಾಟ್ ಯು ಈಟ್” ಎಂಬುದು ತುಂಬಾ ಜನಜನಿತ ಮಾತು. ಜಂಕ್ ಫುಡ್ ದಾಸರು ಒಮ್ಮೆ ಇದನ್ನು ಚಿಂತಿಸಿ ನೋಡಿದರೆ ಒಳಿತು. ಕ್ಲಬ್ ಪಬ್ ಗಳ ಸಂಸ್ಕೃತಿಯ ಪಾಲಕರಾಗಲು ಬಯಸುತ್ತಿರುವ ನಾವುಗಳು ಆಹಾರದ ಆಯ್ಕೆಯಲ್ಲಿಯೂ ಅಜ್ಞಾನವನ್ನು ತೋರಿರುತ್ತಿರುವುದು ಖಂಡಿತಾವಾಗಿಯೂ ಖೇದಕರ ವಿಷಯ.
 
 
ಜಂಕ್ ಫುಡ್ ಎಂಬುದು ಜೀವ (ಸತ್ವ)ವಿರದ ಆದರೆ ಜೀವತೆಗೆವ (ಸಾವುತರುವ) ಒಂದು ಬಗೆಯ ಭೂತವೇ ಸರಿ, ಕಾರಣ ಜಂಕ್ ಫುಡ್ ನಲ್ಲಿ ದೇಹದ ಸರಿಯಾದ ಪಾಲನೆಗೆ, ಪೋಷಣೆಗೆ ಬೇಕಾಗುವ ಪೌಷ್ಠಿಕಾಂಶಗಳು ಶೂನ್ಯವೆಂದೇ ಹೇಳಬಹುದು. ದುರ್ಬಿನನ್ನು ಹಿಡಿದು ನೋಡಿದರೂ ಅದೊಂದು ದೋಷ ಪೂರಿತ ಆಹಾರವೆಂದು ಅನಿಸುವುದೆ ಹೊರತು, ಶರೀರಕ್ಕೆ ಪೂರಕವೆಂದು ಎಂದೂ ಅನಿಸಲಾರದು. ರಸ್ತೆ ಬದಿ ಮಾರಾಟ ಮಾಡುವ ಜಂಕ್ ಫುಡ್ ಗಳು ಒಂದೆಡೆ ಇರಲಿ, ಕೆಲವೊಂದು ಬ್ರಾಂಡೆಡ್ ಜಂಕ್ ಫುಡ್ ಗಳನ್ನು ದೇಶದಲ್ಲಿ ಅತ್ಯುನ್ನತ ಬಹುರಾಷ್ಟ್ರೀಯ, ಅಂತರಾಷ್ಟ್ರೀಯ ಕಂಪನಿಗಳೇ ತಯಾರಿಸುತ್ತವೆ, ಅವುಗಳನ್ನು ತಯಾರಿಕೆಯಲ್ಲಿ ಉತ್ಕೃಷ್ಟ ಆಹಾರ ಸಾಮಾಗ್ರಿಗಳನ್ನೇ ಬಳಸುತ್ತಾರೆ. ಇಷ್ಟಾದರೂ ಅದನ್ನು ವರ್ಜಿಸಿ ಎಂದು ನೀವು ಬೊಬ್ಬೆಹಾಕಲು ಕಾರಣವೇನು? ಇಂದು ವಾದಿಸುವ ಮಂದಿಯೂ ನಮ್ಮಲ್ಲಿ ಅನೇಕರಿದ್ದಾರೆ. ಅವರ ಈ ವಾದಕ್ಕೆ ನಾವು ಕೊಡುವ ಉತ್ತರವಿಷ್ಟೇ, ನೀವು ಹೇಳಿದಂತೆ ಬ್ರಾಡೆಂಡ್ ಜಂಕ್ ಫುಡ್ ಗಳನ್ನು ತಯಾರಿಸುವಾಗ ಜಗತ್ತಿನ ಸರ್ವಶ್ರೇಷ್ಠ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನೇ ಬಳಸಿದರೂ, ಅತೀಯಾದರೆ ಅಮೃತವೂ ವಿಷವೆಂಬತೆ ಅವುಗಳನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ (ಉದಾ: ಬ್ರಾಂಡೆಡ್ ಸಕ್ಕರೆ, ಉಪ್ಪು ಅಥವಾ ಎಣ್ಣೆ) ಹಾಗೂ ಉತ್ಪಾದಿಸುವ ಮತ್ತು ಸಂಗ್ರಹಿಸುವ ಪದ್ಧತಿಯಲ್ಲಿನ ದೋಷದಿಂದಾಗಿ ಉತ್ಕೃಷ್ಟ ಆಹಾರವು ನಾವು ತಿನ್ನುವಹಂತವನ್ನು ತಲುಪಿದಾಗ, ಸ್ವಾದಿಷ್ಠ ರುಚಿಯಲ್ಲಿ, ಕನಿಷ್ಠ ಪೌಷ್ಟಿಕಾಂಶ ಮತ್ತು ಬೆಲೆಯೊಂದಿಗೆ ಗ್ರಾಹಕರ ಕೈ ಸೇರುತ್ತದೆ.
 
 
ಇನ್ನು ನಮ್ಮ-ನಮ್ಮ ಊರಿನ ರಸ್ತೆಬದಿಗಳಲ್ಲಿ ದೊರೆಯುವ ಜಂಕ್ ಫುಡ್ ಗಳು ಉದಾ: ಪಕೋಡ, ಬಜ್ಜಿ, ಬೋಂಡಗಳಂತೂ ಹೆಚ್ಚು ಕಡಿಮೆ, ಎಲ್ಲಾ ವರ್ಗದ, ಎಲ್ಲಾ ವಯಸ್ಸಿನವರ ಹಾಟ್ ಫೇವರೇಟ್. ಅದರಲ್ಲಿಯೂ ಮುಖ್ಯವಾಗಿ ನಮ್ಮ ಯುವಜನಾಂಗ, ಮನೆಯಲ್ಲಿ ಅಮ್ಮ ಕೈಯಾರೆ ತಯಾರಿಸುವ ಮೃಷ್ಠಾನ್ನ ಭೋಜನವನ್ನು ಕಣ್ಣೆತ್ತಿಯೂ ನೋಡದೆ ಮಾಲ್ ಗಳಲ್ಲಿ, ಹಾದಿ-ಬೀದಿಗಳಲ್ಲಿರುವ ಜಂಕ್ ಫುಡ್ ಅಂಗಡಿಗಳ ಮುಂದೆ, ಬೆಲ್ಲಕ್ಕೆ ಇರುವೆ ಮುತ್ತುವಂತೆ ಮುತ್ತಿಕೊಂಡಿರುತ್ತಾರೆ. ಕಾಳಜಿಯಲ್ಲಿ ಅದರ ಬಗ್ಗೆ ತಿಳಿ ಹೇಳದರೂ, ನಾವು ಪ್ರತಿದಿನವೂ ಅವುಗಳನ್ನೆಲ್ಲಾ ತಿಂದರೇಂನತೆ, ಕಸರತ್ತು ಮಾಡಿ ಕರಗಿಸಬಲ್ಲೆವೂ ಎಂಬ ಧೋರಣೆಯು ಅವರ ಧಾಟಿಯಲ್ಲಿರುತ್ತದೆ. ಆದರೆ ಪಾಪ, ಅವರಿಗೆ ಅರಿವಿಲ್ಲ, ಪ್ರತಿದಿನವೂ ಜಂಕ್ ಫುಡ್ ತಿಂದು, ಜಿಮ್ ದಾರಿ ಹಿಡಿದರೆ ಮುಂದಿನ ಫಲಿತಾಂಶವು ಸೊನ್ನೆ ಎಂದು.
ಫಾಸ್ಟ್ ಜೀವನಕ್ಕಾಗಿ ಫಾಸ್ಟ್ ಫುಡ್, ಜಾಲಿ ಜೀವನಕ್ಕಾಗಿ ಜಂಕ್ ಫುಡ್ ಎಂಬ ಮಾರ್ಡನ್ ಆಹಾರ ಮಂತ್ರವನ್ನು ಮರೆಯದೆ ಪ್ರತಿದಿನ ಪಠಿಸಬೇಕಾದ ಪರಿಸ್ಥಿತಿ ನಮ್ಮದು. ಫಾಸ್ಟ್ ಫುಡ್ ಎಂದರೆ ಆರ್ಡರ್ ಮಾಡಿದ ಕೆಲವೇ ನಿಮಿಷಗಳೊಳಗಾಗಿ ತಿನ್ನಲು ರೆಡಿ ಎಂದು ನಮ್ಮ ಕೈ ಸೇರುವ ಆಹಾರ.
 
 
 
ಇಡ್ಲಿ, ವಡೆ, ಭಜ್ಜಿ, ಬೋಂಡ, ಸಮೋಸ ಮುಂತಾದವುಗಳು ಈ ಗುಂಪಿಗೆ ಸೇರುವ ಆಹಾರ ಪದಾರ್ಥಗಳು ಹಾಗೆಯೆ ಯಾವ ಆಹಾರಕ್ಕೆ ದೇಹಕ್ಕೆ ಪೋಷಣೆ ನೀಡುವ ಸಾಮರ್ಥ್ಯವಿಲ್ಲವೋ ಮತ್ತು ಆರೋಗ್ಯಕ್ಕೆ ಹಾನಿಕಾರವಾಗಿ ಪರಿಣಮಿಸುವುದೋ ಅದನ್ನು ಜಂಕ್ ಫುಡ್ ಎಂದು ಕರೆಯಲಾಗುವುದು. ಪೂರಿ, ಪಕೋಡ, ಪೀಜ್ಜಾ, ಚಿಪ್ಸ್, ಕೇಕ್, ಪಾನಿಪುರಿ ಮೊದಲಾದವುಗಳು ಈ ಗುಂಪಿಗೆ ಸೇರುವ ಆಹಾರ ಪದಾರ್ಥಗಳು. ಹೆಚ್ಚಿನ ಸಂದರ್ಭಗಳಲ್ಲಿ ನಾವು ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಅನ್ನು ಒಂದೇ ಗುಂಪಿನಡಿ ಪರಿಗಣಿಸಿ ಪ್ರಯೋಗಿಸುತ್ತೇವೆ, ಕಾರಣ ಅವೆರಡರ ನಡುವೆ ಇರುವುದು ಒಂದು ಸಣ್ಣ ಕೂದಲೆಳೆ ಅಂತರ ಮಾತ್ರ. ಬಹುಪಾಲು ಜಂಕ್ ಫುಡ್ ಗಳು ಫಾಸ್ಟ್ ಫುಡ್ ಗಳಾಗಿರುತ್ತವೆ, ಅಂತೆಯೇ ಹಲಾವರು ಫಾಸ್ಟ್ ಫುಡ್ ಗಳು ಜಂಕ್ ಫುಡ್ ಗಳಾಗಿರುತ್ತದೆ. ಹಾಗೆಂದು ಎಲ್ಲಾ ಬಗೆಯ ಫಾಸ್ಟ್ ಫುಡ್ ಗಳು ವೇಸ್ಟ್ ಎಂದು ಹೇಳಲಾಗುವುದಿಲ್ಲ. ದೇಹವನ್ನು ಫಿಟ್ ಆಗಿಡುವಲ್ಲಿ ಕೆಲವೊಂದು ಫಾಸ್ಟ್ ಫುಡ್ ಗಳು ತಮ್ಮ ಪಾತ್ರ ವಹಿಸುತ್ತದೆ ಎಂಬುದ ಒಪ್ಪಲೇ ಬೇಕು ಉದಾಹರಣೆಗೆ ಹಣ್ಣು-ತರಕಾರಿಗಳ ಸಲಾಡ್ . ಅದರಿಂದ ಎಲ್ಲಾ ಫಾಸ್ಟ್ ಫುಡ್ ಗಳು ಜಂಕ್ ಫುಡ್ ಗಳೇನಲ್ಲ, ಹಾಗೆಯೇ ಎಲ್ಲಾ ಜಂಕ್ ಫುಡ್ ಗಳು ಫಾಸ್ಟ್ ಫುಡ್ ಗಳಾಗಿರಬೇಕೆಂದೇನೂ ಇಲ್ಲ.
 
 
 
ಜಂಕ್ ಫುಡ್ ಗಳಿಗೆ ನಾವು ತೆರುವ ನಿಜವಾದ ಮೌಲ್ಯವನ್ನು ಯಾವ ಪೈವ್ ಸ್ಟಾರ್ ಹೋಟೆಲ್ ಗಳ ಮೆನು ಪುಸ್ತಕದಲ್ಲಿಯೂ ನಮೂದಿಸಲು ಸಾಧ್ಯವಿಲ್ಲ. ಕಾಲ ಮಾತ್ರವೇ ಹಲವಾರು ಬಗೆಯ ಖಾಯಿಲೆಗಳ ರೂಪದಲ್ಲಿ, ಅದಕ್ಕಾಗಿ ನಾವು ಸುರಿಯುವ ಕಾಸಿನ ರೂಪದಲ್ಲಿ, ಅದರ ನೈಜ ಮೌಲ್ಯವನ್ನು ನಮಗೆ ಪರಿಚಯಿಸಬಲ್ಲದು. ಆಧುನಿಕ ಜೀವನ ಶೈಲಿ ಎಂಬ ಹೆಸರಿನಲ್ಲಿ ನಾವೂ ಮಾಡುತ್ತಿರುವ ಎಡವಟ್ಟುಗಳು ಫಲವಾಗಿ ಇಂದು ಬಹುವಾಗಿ ಹಬ್ಬಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಾದ ಹೃದ್ರೋಗ, ಮಧುಮೇಹ, ಆಧಿಕ ರಕ್ತದೊತ್ತಡ, ಸ್ಥೂಲಕಾಯ ಇನ್ನೂ ಹಲವಾರು ಬಗೆಯ ಖಾಯಿಲೆಗಳಿಗೆ ಜಂಕ್ ಫುಡ್ ಸೇವನೆಯ ಕೊಡುಗೆಯೂ ಅಪಾರ.
 
 
 
ಜಗತ್ತಿನಾದ್ಯಂತ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳಂತೂ ಜಂಕ್ ಫುಡ್ ಆರೋಗ್ಯದ ಮೇಲೆ ತಂದೊಡ್ಡುತ್ತಿರುವ ಅಪಾಯಗಳ ಕುರಿತಂತೆ ಬೆಳಕು ಚೆಲ್ಲುತ್ತಲೇ ಬಂದಿವೆ. ತೀರಾ ಇತ್ತೀಚಿನ ಸಂಶೋಧನೆಗಳೇ ಬಿಚ್ಚಿಟ್ಟ ಭಯಾನಕ ಸತ್ಯಗಳನ್ನೇ ನೋಡುವುದಾದರೆ – ಪ್ರತಿದಿನದ ಜಂಕ್ ಫುಡ್ ಸೇವನೆಯು ಮನುಷ್ಯನ ನೆನಪಿನ ಶಕ್ತಿಯು ಕುಂಠಿತವಾಗುವಂತೆ ಮಾಡುತ್ತದೆ, ವಿಷಯಗಳನ್ನು ಗ್ರಹಿಸುವಲ್ಲಿಯೂ ಆತ ಹಿಂದೆ ಬೀಳುತ್ತಾನೆ, ಬಹುಬೇಗ ಖಿನ್ನತೆಗೆ ಜಾರುತ್ತಾನೆ, ಹಸಿವನ್ನು ನಿಯಂತ್ರಿಸುವ ಶಕ್ತಿಯನ್ನೂ ಕಳೆದುಕೊಂಡು ಅತಿ ಹೆಚ್ಚು ತಿನ್ನಲಾರಂಭಿಸುತ್ತಾನೆಂಬ ಅನೇಕ ಸಂಗತಿಗಳನ್ನು ಬಯಲು ಮಾಡಿವೆ. ಹೀಗೆ ಜಂಕ್ ಫುಡ್ ನಿಂದ ಬಂದೆರಗುತ್ತಿರುವ ಈ ಎಲ್ಲಾ ಸಮಸ್ಯೆಗಳಿಗೆ ಅದನ್ನು ತಯಾರಿಸಲು ಉಪಯೋಗಿಸುವ ಸಾಮಗ್ರಿಗಳಾದ ಸಕ್ಕರೆ, ಉಪ್ಪು, ಮೈದಾ, ಎಣ್ಣೆ, ಕೃತಕ ಬಣ್ಣ, ಮಸಾಲೆಗಳ ಅತಿರೇಕದ ಬಳಕೆಯೇ ಕಾರಣ.
 
 
 
ಜಗದೆಲ್ಲೆಡೆ ಜೋರಾಗಿರುವ ಜಂಕ್ ಫುಡ್ ಗಳ ಹಾವಳಿಗೆ ಜನರು ಬಲಿಯಾಗದಿರಲಿ ಎಂಬುದಷ್ಟೇ ನಮ್ಮ ಕಳಕಳಿ. ಹಾಗೆಂದು ಜಂಕ್ ಫುಡ್ ಗೆ ಸಂಪೂರ್ಣ ಧಿಕ್ಕಾರ, ಬಹಿಷ್ಕಾರ ಹಾಕಬೇಕೆಂಬುದು ನಮ್ಮ ನಿಲುವಲ್ಲ. ಅಪರೂಪಕೊಮ್ಮೆ ಅದು ನಮ್ಮ ಆಹಾರ-ಅಡುಗೆಯಲ್ಲಿ ಅತಿಥಿಯಂತೆ ಬಂದು ಹೋದರೆ ಯಾವ ಬಗೆಯ ಆಕ್ಷೇಪಣೆಯೂ ಇಲ್ಲ. ಆದರೆ ಪ್ರತಿನಿತ್ಯವೂ ಅದನ್ನು ಆಹ್ವಾನಿಸುವ ನೆಪದಲ್ಲಿ ಅಸ್ವಾದಿಸುವ ಗೌಜಿಗೆ ಹೋಗದಿರುವುದು ಜಾಣತನ. ಅದೇನೆ ಇರಲಿ ಇನ್ನೆಂದೂ ಜಂಕ್ ಫುಡ್ಅನ್ನು ಎತ್ತಿ ಬಾಯಲ್ಲಿಡುವ ಮುನ್ನ ಒಮ್ಮೆ ಥಿಂಕ್ ಮಾಡಿ ಬಂಧುಗಳೇ.
ಸಂಚನ.ಎಂ.ಎಸ್
[email protected]

LEAVE A REPLY

Please enter your comment!
Please enter your name here