ಜನನುಡಿ -2016

0
267

ವರದಿ: ಮುನೀರ್ ಕಾಟಿಪಳ್ಳ
ಡಿಸೆಂಬರ್ 24, 25ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿಗೆ ವ್ಯಾಪಕ ತಯಾರಿಗಳು ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಹಿತಿಗಳು, ಚಳುವಳಿಗಾರರು ಜನನುಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯವನ್ನು ವ್ಯಾಪಾರವನ್ನಾಗಿಸುತ್ತಿರುವ ವೈಭವದ ಸಾಹಿತ್ಯ ಜಾತ್ರೆಗಳನ್ನು ವಿರೋಧಿಸಿ, ಅದಕ್ಕೆ ಪರ್ಯಾಯವಾಗಿ 2013ರಲ್ಲಿ ಆರಂಭಗೊಂಡ ಜನನುಡಿ ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಡಾ.ಬಿ.ಆರ್.ಅಂಬೇಡ್ಕರ್’ರ 125ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ, ಅಂಬೇಡ್ಕರರ ಸಮಾನತೆಯ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ‘ಸಮತೆ ಎಂಬುದು ಅರಿವು’ ಘೋಷಣೆಯೊಡನೆ ಜನನುಡಿ ಗೋಷ್ಠಿಗಳು ನಡೆಯಲಿವೆ.
 
 
 
ಕೋಮುವಾದಿಗಳು, ಶಿಕ್ಷಣ ವ್ಯಾಪಾರಿಗಳು, ಧರ್ಮಾಧಿಕಾರಿಗಳು, ಮಠಾಧೀಶರು ಸಾಹಿತ್ಯ ಜಾತ್ರೆಯನ್ನು, ಸರ್ವ ಧರ್ಮ ಸಮ್ಮೇಳನಗಳನ್ನು ನಡೆಸಿ, ತಾವು ನಡೆಸುವ ಚಟುವಟಿಕೆಗಳಿಗೆ ನೈತಿಕತೆಯನ್ನು ತಂದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕೋಮುವಾದ, ಧಾರ್ಮಿಕ ಮೂಲಭೂತವಾದ, ಜಾತಿವಾದ, ಬಂಡವಾಳವಾದಗಳು ಅಪವಿತ್ರ ಮೈತ್ರಿಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಇಂತಹ ಅಪವಿತ್ರ ಮೈತ್ರಿಯಲ್ಲಿ ನಡೆಯುವ ಸಾಹಿತ್ಯ ಜಾತ್ರೆಗಳಿಗೆ ಸಾಹಿತಿಗಳನ್ನು ಗಾಜಿನ ಗೋಳದಲ್ಲಿ ತುಂಬಿಸಿಟ್ಟು ಪೇಪರ್ ವೈಟ್ ಗಳನ್ನಾಗಿ ಬಳಸಲಾಗುತ್ತಿದೆ. ಈ ಮೂಲಕ ಜನವಿರೋಧಿ ಜಾಲವು ಸಾಹಿತ್ಯ- ಸಂಸ್ಕೃತಿಗಳನ್ನು ಬಳಸಿಕೊಂಡು ಜನಮನ್ನಣೆ ಪಡೆಯುತ್ತಿದೆ.
 
 
ಈ ಹಿನ್ನಲೆಯಲ್ಲಿ ಅಭಿಮತ ಮಂಗಳೂರು ಬಳಗವು ಪ್ರಗತಿಪರ ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು ಮತ್ತು ಜನಪರ ಸಂಘಟನೆಗಳೊಡನೆ ಸೇರಿಕೊಂಡು ಮಂಗಳೂರಿನಲ್ಲಿ 3 ವರ್ಷಗಳಿಂದ ಜನನುಡಿಯನ್ನು ನಡೆಸುತ್ತ ಬಂದಿದೆ. ಜನನುಡಿ ಎಂಬುದು ಕೇವಲ ಪರ್ಯಾಯ ಮಾತ್ರವೇ ಅಲ್ಲ, ಅದೊಂದು ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ಸಾಹಿತ್ಯದ ಪಾತ್ರದ ಬಗೆಗಿನ ಗಂಭೀರ ಚರ್ಚೆಯಾಗಿದೆ.
 
ಉದ್ಘಾಟನೆ:
ಡಿಸೆಂಬರ್ 24ರಂದು ಆರಂಭಗೊಳ್ಳುವ ಈ ಬಾರಿಯ ಜನನುಡಿಯನ್ನು ತಮ್ಮ ಆತ್ಮಕತೆ ‘ಅಕ್ರಮ ಸಂತಾನ’ದ ಮೂಲಕ ಸಾಮಾಜಿಕ ಸಂಚಲನ ಮೂಡಿಸಿದ್ದ ಪ್ರಖ್ಯಾತ ಮರಾಠಿ ಸಾಹಿತಿ ಶರಣಕುಮಾರ್ ಲಿಂಬಾಳೆಯವರು ಉದ್ಘಾಟಿಸಲಿದ್ದು, ಡಾ.ಕೆ.ವಿ.ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.
 
 
 
ಉದ್ಘಾಟನಾಗೋಷ್ಠಿಯ ನಂತರ ಎರಡನೆ ಗೋಷ್ಠಿಯಲ್ಲಿ ಮತೀಯತೆ, ವೈದಿಕತೆಯ ವಿರುದ್ಧ ತತ್ವ ಪದಗಳ ಪ್ರಸ್ತುತಿ ಇರಲಿದೆ. ಉಳಿದಂತೆ ಸಮಾನತೆಯ ಆಶಯ ಮತ್ತು ಮೀಸಲಾತಿ, ತುಳುನಾಡಿನ ಸಾಂಸ್ಕೃತಿಕ – ನೆಲಮೂಲ ಪರಂಪರೆಗಳು, ಕವಿ ಗೋಷ್ಠಿ, ಜಾತಿ ವಿನಾಶ ಮತ್ತು ನಾನು, ಹಾಗೂ ಮುಸ್ಲಿಂ – ದಲಿತ – ಹಿಂದುಳಿದ ವರ್ಗಗಳ ಐಕ್ಯತೆ: ಸವಾಲು ಸಾಧ್ಯತೆ ಗೋಷ್ಠಿಗಳು ನಡೆಯಲಿವೆ. ದಿನಾಂಕ ೨೪ರ ಸಂಜೆ ಕುರಲ್ ಕಲಾತಂಡ ಕುಡ್ಲ, ಫೇಸ್ ಟ್ರಸ್ಟ್ ತಂಡ ಮಂಗಳೂರು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
 
 
ಡಾ. ವಿಜಯ, ಡಾ. ನಾಗಪ್ಪ ಗೌಡ, ಎರಿಕ್ ಒಝಾರಿಯೊ, ಅಬ್ದುಸ್ಸಲಾಂ ಪುತ್ತಿಗೆ, ಡಾ. ಮೀನಾಕ್ಷಿ ಬಾಳಿ, ಡಾ.ಸಿ. ಜಿ. ಲಕ್ಷ್ಮಿಪತಿ, ಪ್ರೊ.ರಹಮತ್ ತರೀಕೆರೆ, ಡಾ.ಬಂಜಗೆರೆ ಜಯಪ್ರಕಾಶ್, ಡಾ ಅರವಿಂದ ಮಾಲಗತ್ತಿ, ದಿನೇಶ್ ಅಮೀನ್ ಮಟ್ಟು, ಡಾ. ಎಚ್. ಎಸ್. ಅನುಪಮಾ, ರಾಜಪ್ಪ ದಳವಾಯಿ, ಹುಲಿಕುಂಟೆ ಮೂರ್ತಿ, ಪ್ರದೀಪ್ ರಮಾವತ್, ಡಾ.ಕಿರಣ್ ಗಾಜನೂರು, ಡಾ.ಅಪ್ಪಗರೆ ಸೋಮಶೇಖರ್, ಪ್ರೊ.ಪುರುಷೋತ್ತಮ ಬಿಳಿಮಲೆ, ಮೂಡ್ನಾಕಾಡು ಚಿನ್ನಸ್ವಾಮಿ, ಶಿವಾಜಿ ಗಣೇಶನ್, ಡಾ. ಸಬಿತಾ ಬನ್ನಾಡಿ, ಮಲ್ಲಿಕಾ ಬಸವರಾಜು, ಶೈಲಜಾ ನಾಗರಘಟ್ಟ, ವಿ.ಕೆ. ಸಂಜ್ಯೋತಿ, ಭಾರತೀ ದೇವಿ ಮತ್ತು ೨೦ಕ್ಕೂ ಹೆಚ್ಚು ಕವಿಗಳು ಎರಡು ದಿನಗಳ ಕಾಲವೂ ಜನನುಡಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.
ಮಂಗಳೂರಿನ ನಂತೂರುನಲ್ಲಿರುವ ಶಾಂತಿಕಿರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಭಾಗವಹಿಸಲು ಬರುವ ಪ್ರತಿನಿಧಿಗಳಿಗೆ ಉಚಿತ ಊಟ-ವಸತಿ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here