ಜಗತ್ತೇ ಮತ್ತೊಮ್ಮೆ ಗೋ ಚರಣಗಳಿಗೆ ಎರಗಲಿದೆ

0
369

ನಮ್ಮ ಪ್ರತಿನಿಧಿ ವರದಿ
ತನ್ನ ಕುಡಿಗಷ್ಟೇ ಅಲ್ಲ, ಪ್ರಪಂಚದ ಕುಡಿಗಳಿಗೆಲ್ಲಾ ಹಾಲು ನೀಡುವವಳು ಪುಣ್ಯಕೋಟಿ. ಇದಕ್ಕೆ ಕೃತಜ್ಞತಾ ರೂಪವಾಗಿ ನಡೆಯುತ್ತಿರುವುದು ಮಂಗಲಗೋಯಾತ್ರೆ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
 
 
ಬಳ್ಳಾರಿಯ ಸೆಂಟಿನರಿ ಹಾಲ್ ನಲ್ಲಿ , ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನವಿತ್ತ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ತಾಯಿ ಹಾಲು ಮತ್ತು ಸಾಹಿವಾಲ್ ಹಾಲು ಒಂದೇ ರೀತಿಯಾದ ಸತ್ತ್ವವನ್ನು ಒಳಗೊಂಡಿದೆ. ರೋಗನಿರೋಧಕ ಶಕ್ತಿಯನ್ನು ಗಮನಿಸುವಾಗ, ಕೃಷಿ ಪರಂಪರೆಯಲ್ಲಿ ಬೀಜೋಪಚಾರಕ್ಕೆ ಪ್ರಯೋಜನಕಾರಿಯಾಗಿ ಗಮನಿಸುವಾಗ, ಗೋವಿನ ಮಹತ್ತ್ವ ಅರಿವಿಗೆ ಬರುತ್ತದೆ. ಅಮೂಲ್ ಹಾಗೂ ವರ್ಗೀಸ್ ಕುರಿಯನ್ ನಂತವರು ಶ್ವೇತಕ್ರಾಂತಿಯ ಮೂಲಕ ದೇಶಕ್ಕೆ ಮಿಶ್ರತಳಿಯನ್ನು ತಂದರು. ಆದರೆ ಇಂದು ಅದೇ ಸರ್ಕಾರ,ಅದೇ ಕಂಪೆನಿಗಳು ಅರಿತು ದೇಸಿತಳಿಗಳ ಹಾಲನ್ನು ಅಧಿಕ ಬೆಲೆಗೆ ಮಾರುವತ್ತ ಅಡಿಯಿತ್ತಿದ್ದಾರೆ. ಆದರೆ ನಮಗೆ ಮಾತ್ರ ಇದರ ಅರಿವಾಗುತ್ತಿಲ್ಲ. ವಿಶ್ವವಿಡೀ ದೇಸೀ ಗೋವುಗಳ ಶಕ್ತಿಯನ್ನು ಅರಿತು ಮತ್ತೊಮ್ಮೆ ನಮ್ಮ ಗೋವಿನ ಚರಣಗಳ ಬಳಿ ಬರಲಿದೆ. ಆದರೆ ಆ ಸಮಯಕ್ಕೆ ಇಲ್ಲಿನ ಗೋವುಗಳ ನಾಶಹೊಂದುವಿಕೆ ಅತಿರೇಕಕ್ಕೆ ತಲುಪಿರುತ್ತದೆ. ಅದರ ಕುರಿತಾದ ಜಾಗೃತಿಗಾಗಿ ಸಾಗುತ್ತಿರುವಂತದ್ದು ಮಂಗಲಗೋಯಾತ್ರೆ.
 
 
 
ಸರ್ಕಾರಕ್ಕಿಂತ ಸಂತರ ಮೇಲೆ ನಂಬಿಕೆಯಿದೆ
ಹಿಂದಿನ ಶ್ವೇತಕ್ರಾಂತಿಯು ರಕ್ತಕ್ರಾಂತಿಯಾಗುವತ್ತ ಸಾಗಿತ್ತು. ಆದರೆ ಮಂಗಲಗೋಯಾತ್ರೆ ನಿಜವಾದ ಅಮೃತಕ್ರಾಂತಿ. ಹೀಗೆ ಧ್ವನಿಯೆತ್ತಿದವರ ಸದ್ದಡಗಿಸುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗುತ್ತಿವೆ. ಆದರೆ ಇದಕ್ಕೆ ಪ್ರತಿಯಾಗಿ ಸಾವಿರಪಾಲು ಹೆಚ್ಚಿನ ಮನೋಶಕ್ತಿಯಿಂದ ನಾವು ಕಾರ್ಯ ನಿರ್ವಹಿಸಲಿದ್ದೇವೆ. ಕಾರಣ ನಮಗೆ ಸರ್ಕಾರಕ್ಕಿಂತ ಸಂತರ ಮೇಲೆ ನಂಬಿಕೆಯಿದೆ ಎಂದು ಗೋಪರ ನುಡಿಗಳನ್ನಾಡಿದರು.
 
 
 
ಮನೆಯ ವೈದ್ಯ – ಗೋವು
ಶ್ರೀಕಲ್ಯಾಣಮಹಾಸ್ವಾಮೀಜಿಯವರು ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯನ್ನು ಬೆಂಬಲಿಸುತ್ತಿರುವ ರಾಘವೇಶ್ವರ ಶ್ರೀಗಳ ಜೊತೆಗೆ ನಮ್ಮೆಲ್ಲ ಯತಿಗಳ ಬೆಂಬಲವಿದೆ. ನಿಸರ್ಗದ ಎಲ್ಲ ನೋವುಗಳನ್ನೂ ಸಹಿಸಿ ಬದುಕುವ ಗೋಮಾತೆಯ ಬಗ್ಗೆ ಕೊಂಚವಾದರೂ ಆಲೋಚಿಸಬೇಕಾದ ಅನಿವಾರ್ಯತೆ ಇಂದಿದೆ. ಮನೆತನವನ್ನೇ ರಕ್ಷಣೆ ಮಾಡುತ್ತಿರುವ ಗೋಮಾತೆಯನ್ನು ರಕ್ಷಣೆ ಮಾಡಲೇಬೇಕಿದೆ. ಮನೆಯ ವೈದ್ಯನಂತೆ ಗೋವು ಮನೆಯ ಸುರಕ್ಷತೆಯನ್ನು ಕಾಯುತ್ತದೆ. ಇಂತಹ ತಾಯಿಯ ಬಗ್ಗೆ, ಗೋಮಾತೆಯ ಬಗ್ಗೆ ಮಮತೆಯಿಲ್ಲದೇ ತಿರಸ್ಕಾರ ಮನೋಭಾವವನ್ನು ನಾವಿಂದು ತಳೆಯುತ್ತಿದ್ದೇವೆ. ಫಿಲ್ಟರ್ ನೀರು ಕುಡಿಯುವ ನಮಗೆ ಪ್ಯಾಕೇಟ್ ಹಾಲಿನಲ್ಲಿ ಬಳಸಬಹುದಾದ ಕಲುಷಿತ ನೀರಿನ ಗ್ರಹಿಕೆಯೇ ಇರುವುದಿಲ್ಲ. ಆದರೆ ನಾವು ಸ್ವತಃ ಗೋವು ಸಾಕುವುದರ ಬದಲು ಹಾಲು ತಂದವರಲ್ಲಿ ನೀರಿನಂಶ ತೋರಿಸಿ ಕಡಿಮೆ ಬೆಲೆಗೆ ಕೊಳ್ಳುತ್ತಿದ್ದೇವೆ. ಈ ದೆಸೆಯಲ್ಲಿ ರಾಘವೇಶ್ವರ ಶ್ರೀಗಳ ಆದರ್ಶ ನಮಗೆಲ್ಲಾ ಅನುಕರಣೀಯ. ಹಾಗಾಗಿ ಮಂಗಲಗೋಯಾತ್ರೆಗೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದು ಕರೆ ನೀಡಿದರು.
 
 
 
ಗೋಮಾತೆಯ ಸೇವೆಯಿಂದಲೇ ಪುನೀತರಾಗಿ
ಶಾನವಾಸಪುರದ ದ್ವಾರಕಾಶ್ರಮದ ಪೀಠಾಧಿಪತಿಗಳಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗೋಮೂತ್ರ, ಗೋಕ್ಷೀರ, ಗೋಮಯ, ಮೊಸರು, ತುಪ್ಪ, ಎಲ್ಲವೂ ಶ್ರೇಷ್ಟ. ಗೋಮಾತೆಯನ್ನು ಮನೆಗೆ ಪ್ರವೇಶ ಮಾಡಿಸಿಯೇ ನಾವು ಪ್ರವೇಶಿಸುತ್ತೇವೆ. ಅದರಿಂದ ಮನೆ ಶುದ್ಧವಾಗುತ್ತದೆ ಎಂದು ನಾವು ಭಾವಿಸುವುದಾದರೆ ಗೋವು ಎಷ್ಟು ಪವಿತ್ರವಾಗಿರಬೇಕು ಎನ್ನುವ ಆಲೋಚನೆಯನ್ನು ನಾವು ಮಾಡಿಕೊಳ್ಳಬೇಕು. ಹಾಗಾಗಿ ನಾವೆಲ್ಲರೂ ಧನ್ಯತೆಯನ್ನು ಪಡೆಯಬೇಕಾದರೆ ಗೋ ಸಾಕಣೆಯಲ್ಲಿ ತೊಡಗಬೇಕು ಎಂದರು.
 
 
 
ಯುದ್ಧ ಮಾಡಲೂ ಸಿದ್ಧ, ಪ್ರಾಣ ನೀಡಲೂ ಬದ್ಧ
ನಂದೀಪುರದ ಶ್ರೀಮಹೇಶ್ವರ ಸ್ವಾಮಿಗಳು ಮಾತನಾಡಿ, ಗೋವು ತಾಯಿಯಿದ್ದಂತೆ. ಆದರೆ ರಾಘವೇಶ್ವರ ಶ್ರೀಗಳು ನಮ್ಮ ಭಾರತೀಯ ಸಂಸ್ಕೃತಿಗೇ ತಾಯಿಯಿದ್ದಂತೆ. ಗೋಸಂರಕ್ಷಣೆಯ ಆಶಯವನ್ನು ಹೊತ್ತಿರುವ ಮಂಗಲಗೋಯಾತ್ರೆಯ ಮೂಲಕ ಮಾತೆಯ ಕಾರ್ಯವನ್ನೇ ಶ್ರೀಗಳು ನೆರವೇರಿಸುತ್ತಿದ್ದಾರೆ. ಮಾತನಾಡುವುದಕ್ಕಿಂತ ಗೋವಿಗಾಗಿ ಯುದ್ಧ ಸನ್ನಾಹ ಮಾಡುವ ಸ್ಥಿತಿಯಲ್ಲಿ ನಾವಿದ್ದೇವೆ. ಹಾಗಾಗಿ ಗೋ ಸಂರಕ್ಷಣೆಗಾಗಿ ಯುದ್ಧ ಮಾಡಲೂ ಸಿದ್ಧ, ಪ್ರಾಣ ನೀಡಲೂ ಬದ್ಧ ಎಂದು ಗೋರಕ್ಷಣೆಗೆ ಕಟೀಬದ್ಧ ನುಡಿಗಳನ್ನಾಡಿದರು.
 
 
 
ಬಳ್ಳಾರಿಯಲ್ಲಿ ಸಂಪನ್ನಗೊಂಡ ಶೋಭಾಯಾತ್ರೆ
ನಾದಸ್ವರದ ರವದೊಡನೆ ಮೇಳೈಸಿ ಸಂತ ಸಮೂಹದೊಡಗೂಡಿ, ಸೃಷ್ಟಿವಿಲಾಸದ ಪರಮಕೌತುಕ ಗೋಮಾತೆಯ ಶೋಭಾಯಾತ್ರೆ ಬಳ್ಳಾರಿಯ ಜನತೆಯಲ್ಲಿ ಗೋಸಂವರ್ಧನೆಯ ಬಲ ಹೆಚ್ಚಿಸುವ ಸಲುವಾಗಿ, ನಗರದ ಮುಖ್ಯ ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆಯನ್ನು ನೆರವೇರಿಸಿತು. ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಿರಿಮಲ್ಲೇಶ ಮಹಾಸ್ವಾಮಿಗಳು, ನಗರದ ಗೋಪ್ರೇಮಿ ಗಣ್ಯರಾದ ಹೀರಾಲಾಲ್ ಚೌಧರಿ, ಸೂರಜ್ ಮಲ್ ಜೈನ್, ಮಹೇಶ್ ಆರ್ ಅಗಿವಾಲ್, ಗೋವಿಂದ ಭಟ್, ಲಕ್ಷ್ಮಿ ಪವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here