ಛಾಯಾಗ್ರಹಣ ಒಂದು ಮಾಯಲೋಕ

0
841

ಭಾಗ- ೧೦
ಆನೇಕ ನನ್ನ ಆತ್ಮೀಯ ಸನ್ಮಿತ್ರರ ಅಭಿಪ್ರಾಯದಂತೆ ನಿಮ್ಮ ಅನುಭವಗಳನ್ನು ಅಂಕಣದಲ್ಲಿ ಪ್ರಸ್ತುತ ಪಡಿಸಿ ಎಂಬ ಕಾರಣಕ್ಕಾಗಿ ಮಾಯಲೋಕದ ಲೋಕಾಭಿರಾಮ ಬರೆದೆ……ಮುಂದೆ ಡಿಜಿಟಲ್ ಕ್ಯಾಮರಗಳ ಬಗ್ಗೆ ನೋಡೋಣ.
ಇತ್ತೀಚಿನ ಕೆಲವು ವರುಷಗಳಿಂದ ಈ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದು ಡಿಜಿಟಲ್ ಕ್ಯಾಮರಾಗಳ ಸಾಧನೆ. ಇಲ್ಲಿ ಸ್ವಯಂಚಾಲಿತ ಆಯ್ಕೆಗಳು ಬೇಡವೆಂದಾದರೆ ಮ್ಯಾನ್ಯುವಲ್ ಸೆಟ್ಟಿಂಗ್ನೊಂದಿಗೆ ತನ್ನ ಕೌಶಲ್ಯ ಬುದ್ದಿಮತ್ಯೆಗಳಿಂದ ಚಿತ್ರದ ಗುಣಮಟ್ಟವನ್ನು ಚೆನ್ನಾಗಿ ಮೂಡಿ ಬರುವಂತೆ ಮಾಡಬಹುದಾದ ಆನೇಕ ಸಾಧ್ಯತೆಗಳಿವೆ. ಬೇರೆ ಬೇರೆ ರೀತಿಯಲ್ಲಿ ಹತ್ತಾರು ಚಿತ್ರಗಳನ್ನು ತೆಗೆಯಬಹುದಾದ ಸುಲಭದ ಆಯ್ಕೆಗಳೇ ಹೆಚ್ಚು ಜನ ಈ ಡಿಜಿಟಲ್ ಕ್ಯಾಮರಾದ ಕಡೆ ಆಕರ್ಷಿತರಾಗುವುದಕ್ಕೆ ಕಾರಣವಾಯಿತು. ಹೈಡೆಫಿನಿಷನ್ ಚಿತ್ರೀಕರಣಸೌಕರ್ಯ, ದೂರದ ವಸ್ತು, ವಿಷಯ,ವಿಷೇಶತೆಗಳನ್ನು ಅದಕ್ಕರಿವಿಲ್ಲದಂತೆಯೇ ಕಣ್ಣೆದುರಿಗೆ ತಂದು ನಿಲ್ಲಿಸ ಬಹುದಾದ ಮೆಘಝೂಮ್, ಹೀಗೆ ಆಧುನಿಕ ಡಿಜಿಟಲ್ ಕ್ಯಾಮರಗಳ ಕಾರ್ಯ ವೈಶಿಷ್ಟ್ಯ ಗಳಿಗೆ ಕೊನೆಯೇ ಇಲ್ಲ.
ಹಿಂದಿನ ಫಿಲ್ಮ್ ಕ್ಯಾಮರಾಗಳಂತೆ ಡಿಜಿಟಲ್ ಕ್ಯಾಮರಗಳಲ್ಲೂ ಬೆಳಕನ್ನು ಒಳಬಿಡುವ ಲೆನ್ಸ್ ಗಳು ಇರುತ್ತವೆ. ಹಿಂದೆ ಹೀಗೆ ಒಳ ಬರುವ ಬೆಳಕು ಫಿಲ್ಮ್ ನ ಮೇಲೆ ಬಿದ್ದು ಮುಂದಿನ ದೃಶ್ಯವನ್ನು ಸೆರೆ ಹಿಡಿದಂತೆ ಈ ಕಾಲಘಟ್ಟದ ಡಿಜಿಟಲ್ ಕೆಮರಗಳಲ್ಲಿ ಇಮೇಜ್ ಸೆನ್ಸರ್ ಎಂಬ ಸಾಧನದ ಮೇಲೆ ಪ್ರತಿಫಲಿಸಿ ದೃಶ್ಯವನ್ನು ಒಂದು ಸೊನ್ನೆಗಳ ಕಂಪ್ಯೂಟರ್ ಭಾಷೆಯಲ್ಲಿ ಸೆರೆಹಿಡಿದಿಟ್ಟುಕೊಳ್ಳುತ್ತದೆ.
ಸಾಮಾನ್ಯ ಕ್ಯಾಮರಗಳಲ್ಲಿ ಫಿಲ್ಮ್ ಮಾಡುವ ಕೆಲಸವನ್ನೇ ಡಿಜಿಟಲ್ ಕ್ಯಾಮರದ ಇಮೇಜ್ ಸೆನ್ಸರ್ ಮಾಡುತ್ತದೆ ಎಂದು ತಿಳಿಯಬಹುದು. ಇಲ್ಲಿ ಚಿತ್ರವನ್ನು ದಾಖಲಿಸುವ ವಿಧಾನ ಮಾತ್ರ ಕೊಂಚ ಭಿನ್ನವಾಗಿದೆ ಅಷ್ಟೆ. ಲೆನ್ಸ್ ಮೂಲಕ ಹಾದು ತನ್ನ ಮೇಲೆ ಬೀಳುವ ಬೆಳಕನ್ನು ಮೊದಲಿಗೆ ಎಲೆಕ್ಟ್ರಾನ್ ಗಳಾಗಿ ಪರಿವರ್ತಿಸುವುದು ಈ ಸೆನ್ಸರ್ ನ ಮುಖ್ಯ ಕಾರ್ಯವಾಗಿದೆ.
ಸೂರ್ಯಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಸೋಲಾರ್ ಫಲಕಗಳಂತೆ ಈ ಇಮೇಜ್ ಸೆನ್ಸರನ್ನು ಕೂಡ ಸಣ್ಣ ಫಲಕದಲ್ಲಿ ಕಲ್ಪಿಸಿಕೊಂಡು ಇಲ್ಲಿಯೂ ಸೋಲಾರ್ ಸೆಲ್ ನಂತಹದೇ ಲಕ್ಷಾಂತರ ಸಂಖ್ಯೆಯ ಘಟಕಗಳಿರತ್ತದೆ ಎನ್ನಲಾಗಿದೆ. ಇಂತಹ ಪ್ರತಿಯೊಂದು ಸೆಲ್ ನ ಮೇಲೆ ಬೀಳುವ ಬೆಳಕನ್ನು ಇಲೆಕ್ಟ್ರಾನ್ ಅಗಿ ಪರಿವರ್ತಿಸುವ ಇಮೇಜ್ ಸೆನ್ಸರ್ ಅದರ ಪ್ರಮಾಣವನ್ನು ಪ್ರತಿನಿಧಿಸುವುದೇ ಡಿಜಿಟಲ್ ರೂಪ.
ಮುಂದೆ ಇದೇ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವ ನಮ್ಮ ಕಂಪ್ಯೂಟರ್ ಇದನ್ನು ಚಿತ್ರರೂಪದಲ್ಲಿ ಪ್ರದರ್ಶಿಸುತ್ತದೆ. ಮತ್ತು ಇದನ್ನ ಒಂದು ಕಡೆ ಸಂರಕ್ಷಿಸಿ ಮುದ್ರಿಸಲೂ ಸಹಕರಿಸುತ್ತದೆ.
ಇಲ್ಲಿ ಬಹಳಷ್ಟು ಗಮನಿಸ ಬೇಕಾದ ಅಂಶ ಅಂದರೆ ಬೆಳಕಿನ ಪ್ರಭಾವವನ್ನನುಸರಿಸಿ ಇಮೇಜ್ ಸೆನ್ಸರ್ ನ ಮೇಲೆ ದೃಶ್ಯವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಹಾಗು ದಾಖಲಾಗುವುದೇನೊ ಸರಿ.ಆದರೆ ಇಲ್ಲಿ ಇರುವ ಅಸಂಖ್ಯಾತ ಬಣ್ಣಗಳು ಚಿತ್ರದಲ್ಲಿ ಕಾಣುವುದು ಹೇಗೆ …?
ಕ್ಯಾಮರಾದಲ್ಲಿ ಫಿಲ್ಟರ್ ಬಳಸುವುದು ಇದೇ ಉದ್ದೇಶ ಹೊಂದಿ ಎಂದು ತಿಳಿದಿರಬೇಕು.ಇಲ್ಲಿ ಕೆಂಪು,ಹಸಿರು,ಮತ್ತು ನೀಲಿ ಬಣ್ಣಗಳನ್ನು ಗ್ರಹಿಸುವ ಈ ಫಿಲ್ಟರ್ ತನ್ನ ಮುಂದಿನ ದೃಶ್ಯಗಳ ಬಣ್ಣಗಳು ಯಾವ ಪ್ರಮಾಣದಲ್ಲಿದೆ ಎನ್ನವುದನ್ನು ದಾಖಲಿಸಿ ಕೊಂಡು ಈ ಮಾಹಿತಿಯ ಆಧಾರದ‌ ಮೇಲೆ ನೈಜ ಬಣ್ಣಗಳೇ ಬರುವಂತೆ ಕ್ಯಾಮರ ಚಿತ್ರವನ್ನು ನಮಗೆ ನೀಡುತ್ತದೆ.
ಇದು ಫೋಟೊ ಗ್ರಾಫರ್ ಆದವನಿಗೆ ಗೊತ್ತಿರಬೇಕಾದ ಸತ್ಯ. ಹೆಚ್ಚಿನವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಕಾರಣ ತನ್ನ ಕೈಯಲ್ಲಿ ಇರುವುದು ಡಿಜಿಟಲ್ ಕ್ಯಾಮರ, ಫಿಚ್ಚರ್ ಸರಿ ಬರುವವರೆಗೆ ಎಷ್ಟು ಸಲ ಕ್ಲಿಕ್ ಮಾಡಿದರೂ ಕ್ಯಾಮರ ಸುಮ್ಮನಿರುವುದೇ ಕಾರಣ, ಒಂದು ವೇಳೆ ಅಲ್ಲೂ ನಾಲ್ಕು ಸ್ನೇಪ್‌ ಆದ ಬಳಿಕ ಸೈರನ್ ಮೊಳಗಿದರೆ ತನ್ನ ಬಣ್ಣ ಬಯಲಾಗುತ್ತದೆ ಎಂಬ ಕಾರಣಕ್ಕಾದರೂ ಮುಂಜಾಗ್ರತೆ ವಹಿಸುತ್ತಿದ್ದನೋ ಏನೋ….ಹಿಂದೆ ಫಿಲ್ಮ್ ನ (ರೋಲ್) ಬಗ್ಗೆ ಆಸೆ ಪಟ್ಟಂತೆ….
ಇರಲಿ ಕಲಿತಷ್ಟು ಕಲಿಸಲ್ಪಡುತ್ತದೆ..ಬೇಕೊ ಬೇಡವೊ ಎಂಬುದು ಅವರವರ ಚಿಕಿತ್ಸಕ ಬುದ್ದಿಯ ಒರೆಗೆ ಹಚ್ಚಿದ ವಿಮರ್ಶಾತ್ಮಕ ವಿಷಯಗಳು.
ನಮಸ್ಕಾರ…

ಎಂ.ದೇವಾನಂದ ಭಟ್ ಬೆಳುವಾಯಿ.

ಚಿತ್ರಕೃಪೆ:ಅಂತರ್ಜಾಲ

LEAVE A REPLY

Please enter your comment!
Please enter your name here