ಛಾಯಾಗ್ರಹಣ ಒಂದು ಮಾಯಲೋಕ

0
711

ಭಾಗ-9

ಕ್ಷೇತ್ರ ಯಾವುದೇ ಆಗಿರಲಿ ಅವರವರ ವ್ಯವಹಾರಕ್ಕೆ ತಕ್ಕಂತೆ ಅನುಭವಗಳು ಬಗೆಬಗೆಯಿಂದ ಕೂಡಿರುತ್ತದೆ. ನಮಗಿಂತ ನಮ್ಮೆದುರು ಇರುವ ವ್ಯಕ್ತಿ ಹೆಚ್ಚು ಜ್ಞಾನಿ ಎಂದು ತಿಳಿಯುವುದೇ ಹೆಚ್ಚು ಔಚಿತ್ಯ ಪೂರ್ಣ. ಈ ಜ್ಞಾನ ಸಂಪಾದನೆ ಎಂದರೆ ಪ್ರವಾಹದ ವಿರುದ್ದ ನೌಕೆಯನ್ನು ಸಾಗಿಸಿ ಕೊಂಡು ಹೋದಂತೆ. ಆನೇಕ ಸನ್ನಿವೇಶಗಳು ನಮ್ಮ ಅನುಭವ ಹೆಚ್ಚುವಂತೆ ಮಾಡಿ ಜೀವನ ಉಜ್ಜೀವನ ಹೊಂದುವಂತೆ ಮಾಡುತ್ತದೆ. ಇದಕ್ಕೊಂದು ಉದಾಹರಣೆ ಇಂದಿನ‌ ಜೆನರೇಶನ್ ಹೇಗಿದೆ ನೋಡಿ…ಸ್ಟುಡಿಯೋದಲ್ಲಿ ಆರು ವರುಷದ ಮಗುವಿನ ಫೋಟೊ ತೆಗೆಯುವ ಫೋಟೊಗ್ರಾಫರ್….ಹೇಳಿದನಂತೆ ನನ್ ಕಡೆ ನೋಡು ಪುಟ್ಟ…. ಕ್ಯಾಮರಾ ಒಳಗಿಂದ ಪಾರಿವಾಳ ಹಾರುತ್ತೆ ನೋಡು. ಎಂದಾಗ…ಆ ಹುಡುಗ… ಸುಮ್ನೆ ಕಾಗೆ ಹಾರಿಸ್ಬೇಡ….. ನೀಟಾಗಿ ಫೋಕಸಿಂಗ್ ಅಡ್ಜಸ್ಟ್ ಮಾಡಿಕೊ, ಐಎಸ್ಒ ಸರಿ ಇದೆಯ ಚಕ್ ಮಾಡಿಬಿಡು, 200 ಸ್ಪೀಡ್ ಗಿಂತ ಕಡಿಮೆ ಇರಲಿ, portrait ಮೋಡ್ ಯೂಸ್ ಮಾಡು, ಹೈರೆಸೊಲ್ಯೂಶನ್‌ ಪಿಕ್ ಬೇಕು ….ನನಗೆ ಫೇಸ್ಬುಕ್ , ಟ್ವಿಟರ್ ಗೆ ಅಫ್ಲೋಡ್ ಮಾಡಲು ಇದೆ….ಇಲ್ಲ ಅಂದ್ರೆ ಕಾಸ್ ಕೊಡಲ್ಲ..!
ಹಾಗದ್ರೆ ಗಮನಿಸಿ ಯಾರು ಯಾರಿಗೂ ಈ ಕಾಲದಲ್ಲಿ ಕಡಿಮೆಯವರಲ್ಲ…. ಸಣ್ಣ ಮಕ್ಕಳಿಂದಲೂ ಕಲಿಯುವ ಪಾಠ ಇದೆ.
ನಾನು ನಾಲ್ಕಾರು ವರುಷ ಯಕ್ಷಗಾನ ವೃತ್ತಿ ಕಲಾವಿದನಾಗಿ ಮೇಳ ತಿರುಗಾಟ ನಡೆಸಿ, ಬಳಿಕ 1988-89 ರ ಹೊತ್ತಿಗೆ ಒಬ್ಬ ಫೋಟೊ ಗ್ರಾಫರ್ ಆಗಬೇಕೆಂಬ ತುಡಿತದಿಂದ ಕುಂದಾಪುರದಲ್ಲಿ ನನ್ನ ಭಾವ ಶ್ರೀಧರ ರಾವ್ ಅವರ ನವ್ಯ ಸ್ಟುಡಿಯೋಗೆ ಸೇರಿಕೊಂಡೆ. ಆರಂಭದ ದಿನಗಳಲ್ಲಿ ನನಗೆ ಈ ಕ್ಷೇತ್ರದ ಏನೇನು ಅನುಭವ ಇಲ್ಲ. ಒಂದು ದಿನ ಸ್ಟುಡಿಯೋಗೆ ಬಂದ ಒಬ್ಬ ಗ್ರಾಹಕ ಕುಂದಾಪುರ ಕನ್ನಡದಲ್ಲಿ… ಪಾಸ್‌ಪೋರ್ಟ್ ಸೈಜ್ ಫೋಟೊ ಬೇಕಿತ್ತ್ ಮಾಣಿ ಅಂದ… ಆದರೆ ಅದರಲ್ಲಿ ಚಪ್ಪಲ್ ಬತ್ತ ಎಂದು ಹಾಸ್ಯ ಚಟಾಕಿಯೊಂದಿಗೆ ನಕ್ಕಾಗ ನಾನಂದೆ ಅದನ್ನು ತಲೆಯಲ್ಲಿ ಇಟ್ಟು ಬಿಡಿ ಸರ್ ಬತ್ತ್ ಅಂದೆ…, ಅನುಭವ ಕುಶಲತೆ ಇಲ್ಲದವನಿಗೂ ಕಲಿಸುತ್ತದೆ ಎಂಬಂತೆ… ಒಂದು ಮದುವೆ ಫೋಟೊ ಶೂಟ್ ಮಾಡುತ್ತಿದ್ದಂತೆ ಒಬ್ಬ ಅಲ್ಲಿ ಬಹಳ ಮೇನೇಜ್ಮೆಂಟ್ ಮಾಡುತ್ತಿದ್ದ ಗುರಿಕಾರ. ( ಮದುವೆಯ ಅಲ್ಪ ಸ್ವಲ್ಪ ಕ್ರಮ ತಿಳಿದಾತ).ಸಾಕು ಎಷ್ಟು ಫೋಟೊ ತೆಗೆತೀರಿ….ಮದುಮಕ್ಕಳನ್ನು ಮಂಟಪ ಇಳಿಸಿ ಕಾಲಿಗೆ ನೀರು ಹಾಕಿ ಭಾವನಿಗೆ ಉಡುಗೊರೆ ಕೊಟ್ಟು ಊಟಕ್ಕೆ ಕರೆದು ಕೊಂಡು ಹೋಗಲು ವಿಳಂಬವಾಗುತ್ತದೆ ಸಾಕು ಮಾಡಿ ನಿಮ್ಮ ಫೋ ಪೋಟೊಸ್ ಎಷ್ಟೋ ವರುಷಗಳಿಂದ ಅದೇ ಪೋಸ್ !.. ಹಾಗೆ ಕೈ ಹಾಕಿ…ಹೆಗಲಿಗೆ, ಹೀಗೆ ನಿಲ್ಲಿ, ಆಚೆ ತಿರುಗಿ,ಈಚೆ ನೋಡಿ…. ಇದು ಬಿಟ್ಟರೆ ಬೇರೆ ವಿಷಯದ ಫೋಟೊಗಳೇ ನಿಮ್ಮಲ್ಲಿ ಇಲ್ಲ ಎಂದು ಎಲ್ಲರ ಮುಂದೆ ಜೋರಾಗಿ ಗದರಿಸಿ; ಮದುಮಕ್ಕಳ ಕೈ ಹಿಡಿದು ಬಾಗಿಲಕಡೆ ಎಳೆದುಕೊಂಡು ಹೋಗಿಯೇ ಬಿಟ್ಟ. ನಾವು ಲೈಟ್ ಗಳನ್ನು ಸೆಟಪ್ ಮಾಡಿ ನಿಂತು ನೋಡಿಯೇ ಉಳಿದೆವು….ಆಕ್ಷಣ ಅಲ್ಲಿ ಇದ್ದ ಅಷ್ಟೂ ಫೋಟೊ ಗ್ರಾಫರ್ಗಳಿಗೂ ಜೀವಚ್ಚವವಾದ ಅನುಭವ. ಒಬ್ಬರಂತೂ ನಮಗೆ ನಿಮ್ಮ ಪೋಟೊದ ಅಗತ್ಯವೇ ಇಲ್ಲ.ಏನಾದರು ನಾಲ್ಕು ಪೋಟೊ ಚೆನ್ನಾಗಿ ಬಂದರೆ ಅದನ್ನು ನಾವು ನಿಮ್ಮ ಆಲ್ಬಮ್ ಗೆ ಹಾಕಿ ಕೊಡುವುದಕ್ಕೆ ಅಷ್ಟೇ ಎಂದು ಹೇಳಿ ಹುಡುಗಿಕಡೆ ಫೋಟೊಗ್ರಾಫರ್ ಕ್ಯಾಮರಾ ಬ್ಯಾಗ್ ಪ್ಯಾಕಪ್ ಮಾಡಿ ಹೊರಟೇ ಬಿಟ್ಟರು!

ಲೇಖಕ: ಎಂ.ದೇವಾನಂದ ಭಟ್‌ ಬೆಳುವಾಯಿ.


ಮುಂದೆ ಕಾಲು ತೊಳೆಯಲು ನೀರಿಗಾಗಿ ತಂಬಿಗೆ ಹುಡುಕಿ ನೀರು ತುಂಬಿ ಕಾಲುತೊಳೆಯಲು ಭಾವ ಬರುವುದಕ್ಕೆ ಬಾಗಿಲ ಬುಡದಲ್ಲಿ ಸಮಾನ್ಯ ಅರ್ಧತಾಸಿಗೂ ಹೆಚ್ಚು ಕಾದಾಗಲೂ ನನ್ನ ತಾಳ್ಮೆಯ ಕಟ್ಟೆ ಒಡೆಯಲಿಲ್ಲ… ಯಜಮಾನ ಕಡೆಗೆ ನೀಡುವ ಚಿಕ್ಕಾಸಿಗೆ ಕೈ ಒಡ್ಡುವ ಈ ಗುರಿಕಾರ ಹಾ. ..ಹಾಕು ನೀರು ಕಾಲಿಗೆ ಎಂದು ಅಲ್ಲಿಯೂ ಮದುಮಗನ ಭಾವನಿಗೆ ಬೊಬ್ಬಿಟ್ಟಾಗ ನಾನು ಎಲ್ಲರ ಎದುರು ಕೇಳಿಯೇ ಬಿಟ್ಟೆ ಯಾಕೆ ಕಾಲಿಗೆ ನೀರು… ಈ ಬಾರಿ ತಲೆಗೆ ಹೊಯ್ಯಲು ಹೇಳಿ ಎಂದೆ. ಎಲ್ಲರಿಗೂ ಕೇಳುವಂತೆ ಆಗ…ಆ ಗುರಿಕ್ಕಾರ ಆ ಕ್ರಮ ಇಲ್ಲ ಎಂದ. ಅವನಿಗೆ… ಹಾಗೆನೇ ನಮ್ಮಲ್ಲೂ ಅದೇ ಅನಾದಿಯಿಂದಲೂ ಮದುಮಕ್ಕಳ ಫೋಟೊ ತೆಗೆಯುವ ಕ್ರಮ ಒಂದೇ ರೀತಿ. ಅದಕ್ಕಾಗಿ ನಿಮ್ಮ ಒರಟು ಮಾತಿನ ಸಲಹೆ ನಮಗೆ ಅಗತ್ಯವಿಲ್ಲ. ನಮ್ಮ ಕೈ ತಪ್ಪಿಸಿ ಕರೆತಂದ ಮದುಮಕ್ಕಳನ್ನು ಇಲ್ಲಿ ಈ ಸುಡು ಬಿಸಿಲಿನಲ್ಲಿ ಅರ್ಧ ತಾಸಿಗೂ ಹೆಚ್ಚು ನಿಲ್ಲಿಸಿ ಕಾಯಿಸಿದಿರಿ. ಈಗ ಸಮಯ ಮೀರುದಿಲ್ಲವೇ ನಿಮಗೆ ಎಂದಾಗ ಅಲ್ಲಿ ಸೇರಿದ ಎಲ್ಲರೂ ಒಮ್ಮೆ ಅವಕ್ಕಾದರು….ಎಷ್ಟೋ ಸಲ ನಾವು ತೆಪ್ಪಗಿದ್ದರೂ ಸಂಧರ್ಭ ನಮ್ಮನ್ನು ಮಾತನಾಡುವಂತೆ ಮಾಡುತ್ತದೆ. ಹೆಚ್ಚಿನವರು ತಾವೇ ಅನುಭವಿಗಳು ಎಂಬ ಸಣ್ಣ ಬುದ್ದಿಯಿಂದಲೇ ಅನೇಕ ಸಲ ಸೋಲನುಭವಿಸುತ್ತಾರೆ.
ದಾರಿಯ ಕಲ್ಲು ಕಾಲಿಗೆ ಚುಚ್ಚಬಾರದೆಂದು ಬೂಟ್ ಹಾಕುತ್ತೇವೆ. ಆದರೆ ಈ ಬೂಟ್ನೊಳಗೆ ಸೇರಿಕೊಂಡ ಒಂದು ಚೂಪಾದ ಕಲ್ಲಹರಳೇ ಚ್ಚುಚ್ಚಲ್ಪಟ್ಟಂತೆ.
ಕೆಲವರಿಗೆ ಹೊರಗಿನ ಸವಾಲುಗಳಿಗಿಂತ ಒಳಗಿನ ದುರ್ಬಲತೆಯೇ ಹೆಚ್ಚು ಕಾಡುತ್ತಿರುತ್ತದೆ. ಫೋಟೊ ಗ್ರಾಫರ್ ಅವರಿಗೆ ಏನು ಮಾರಾಯ ಎಷ್ಟು ಬೇಗ ಬಂದು ಎಷ್ಟು ತಡವಾಗಿ ಹೋಗುತ್ತಾರೊ ಅಷ್ಟು ಹೊತ್ತು ಅವರ ಮೀಟರ್ ತಿರುಗುತ್ತಾ ಇರುತ್ತದೆ ಎಂಬ ಬುದ್ದಿಜೀವಿಗಳು ಒಂದಷ್ಟು ಕಾಲ ಸ್ಟುಡಿಯೋದಲ್ಲಿ ನಮ್ಮೊಂದಿಗೆ ತೊಡಗಿಸಿಕೊಂಡರೆ ನಮ್ಮ ಈ ಛಾಯಾಗ್ರಹಣ ಕ್ಷೇತ್ರದಲ್ಲಿ ಎಷ್ಟು ಎಡವಟ್ಟುಗಳು,ಕಷ್ಟ ನಷ್ಟಗಳು,ರಿಸ್ಕ್ ಇದೆ ಎಂದು ತಿಳಿಯಬಹುದು. ಆದ್ದರಿಂದ ಎಲ್ಲಾ ಕ್ಷೇತ್ರದ ಸಮಸ್ಯೆ ಒಂದಾದರೆ, ನಮ್ಮ ಕ್ಷೇತ್ರದ ಸಮಸ್ಯೆಯೇ ಬೇರೆ …..ಕಾರಣ ನೀವು ತೆಗೆಸಿದ ನಿಮ್ಮ ಫೋಟೊ ಅನ್ಯರಿಗೆ ಯಾರಿಗೂ ನೀಡಿ ಹಣ ಪಡೆಯುವಂತಿಲ್ಲ….ಅವರಿಗೆ ಅದರ ಅಗತ್ಯವೂ ಇಲ್ಲ.ಹಾಗಾಗಿ ಎಲ್ಲವನ್ನೂ ನಿಭಾಯಿಸುವಲ್ಲಿ ನಮ್ಮ ಜವಾಬ್ದಾರಿ ದೊಡ್ಡದು ಮತ್ತು ಅಷ್ಟೇ ತಾಳ್ಮೆಯಿಂದ ಕೂಡಿರುವಂತಹದ್ದು .
ಎಂ.ದೇವಾನಂದ ಭಟ್ ಬೆಳುವಾಯಿ.

LEAVE A REPLY

Please enter your comment!
Please enter your name here