ಛಾಯಾಗ್ರಹಣ ಒಂದು ಮಾಯಲೋಕ

0
788ಭಾಗ-೮

ಒಂದು ವಿಷಯಕ್ಕೆ ಸಾವಿರ ದಾರಿಗಳು ಇರುವಂತೆ, ಇನ್ನೊಂದು ಬಗೆಯಿಂದ ಆಲೋಚಿಸೋಣ ಬಂಧುಗಳೆ… ಒಂದು ಯಾವುದೇ ಸಮಾರಂಭ ಕೈಗೊಳ್ಳಬೇಕಾದರೆ ಅದರ ಹಿಂದಿನ ಅವರ ಪರಿಶ್ರಮ,ಕಷ್ಷ,ಸುಖ ದುಖಃ ಹೀಗೆ… ಇದೆಲ್ಲ ಖಂಡಿತಾ ಅದು ಆನುಭವದಿಂದಲೇ ವೇದ್ಯವಾಗುವಂತಹದ್ದು.
ನಾನು ಫೋಟೊ ಶೂಟ್ ಮಾಡಲು ಹೋದ ಒಂದು ಮನೆಯಲ್ಲಿ ಬೆಳ್ಳಂಬೆಳಗ್ಗೆನೆ ಜಗಳ ಆರಂಭವಾಯಿತು….ಒಟ್ಟು ಒಳಗೆ ಹೋರಗೆ ಓಡಾಡುತ್ತ ನೋಡಿ ಫೋಟೊಗ್ರಾಫರ್ ಬಂದಾಯಿತು. ನಾವು ಇನ್ನೂ ಹೊರಟಿಲ್ಲ….ಇವರದ್ದು ಮುಗಿಲಿಕ್ಕೆನೆ ಇಲ್ಲ.ಎಷ್ಟು ಹೊತ್ತಾಯಿತು ನೋಡಿ …..ಇನ್ನೂ ಸಾರಿ ಉಟ್ಟೇ ಆಗಿಲ್ಲ ಹೀಗಾದ್ರೆ ಮುಹೂರ್ತ ಮೀರುತ್ತದೆ ಎಂಬ ಸಾಮಾನ್ಯ ಆಲೋಚನೆಯಾದರೂ ಬೇಡವೆ ಇವರಿಗೆ… ಎಂದು ಯಜಮಾನ ಗುಣುಗುತ್ತಾ ಗಲಾಟೆ ಆರಂಭವಾಯಿತು. ಒಳಗಿಂದ ಮಹಿಳೆಯರ ಧ್ವನಿ… ಇವರಿಗೇನು ಅವಸರ ಇನ್ನು ಎರಡು ಪಿನ್ ಹಾಕಲು ಉಳಿದಿದೆ, ಮ್ಯಾಕಪ್ ಆಗಬೇಡುವೆ….ತಡೀರಿ ಹೊರಟು ಬರುತ್ತೇವೆ….ಎಂದು ಮತ್ತೆ ಮಾತು ಆರಂಭ.ಅಂತೂ ಮನೆಯ ಚಪ್ಪರ ಮುಹೂರ್ತಕ್ಕೆ ಕ್ಲಪ್ತ ಸಮಯಕ್ಕೆ ಪೋಟೊಕ್ಕಾಗಿ ತೆರಳಿದ್ದ ನಮಗೆ ಫೋಟೊ ಸಿಕ್ಕಿರುವದು ಎಲ್ಲ ನೈಟಿ ಧಾರಿಣಿಯರದ್ದೆ. ( ಮತ್ತೆ ಫೋಟೊ ನೋಡಿ ಇದೆಲ್ಲ ಒಳ್ಳೆದು ಬರಲಿಲ್ಲ ಎಂಬ ಅಪಾದನೆಳು!) ಇರಲಿ… ಸಮಯ ಚಳಿಗಾಲವಾಗಿದ್ದರೂ ನಮಗೆ ಕುಡಿಯಲು ಬೇಡವೆಂದರೂ ನಾಲ್ಕು ಸೀಯಾಳದ ಜೊತೆ ಬಾಳೆಹಣ್ಣು ಸಮೇತವಾಗಿ ಅದಾಗಲೇ ಬಂದು ಬಿಟ್ಟಿತು.ಬಹಳ ಪ್ರೀತಿಪೂರ್ವಕವಾಗಿ ಯಜಮಾನ ತಂದಿಟ್ಟಾಗ ಅಷ್ಟೇ ಗೌರವದಿಂದ ಸ್ವೀಕರಿಸಿದ್ದು ಆಯಿತು.
ಈ ಮದ್ಯೆಯು ಯಜಮಾನ ಗಲಿಬಿಲಿಯಿಂದ ನಿಮಗೆ ಮೊನ್ನೆ ಬುಕ್ಕಿಂಗ್ ಮಾಡುವಾಗ ಆಮಂತ್ರಣವೂ ಕೊಡಲಿಲ್ಲ ಅಡ್ವಾನ್ಸ್ ಕೊಡಲಿಲ್ಲ ತಗೊಳ್ಳಿ…ಎಂದು ರೂಪಾಯಿ ಐದು ಸಾವಿರ ತಂದು ಕೊಟ್ಟು ಕೈ ಮುಗಿದು ಕಾರ್ಯಕ್ರಮ ಒಳ್ಳೆದು ಮಾಡಿ ಕೊಡಿ ಎಂದು ಗೌರವಪೂರ್ವಕವಾಗಿ ವಿನಂತಿ ಮಾಡಿಕೊಂಡರು. ಅಷ್ಟರಲ್ಲೇ ಶೃಂಗಾರ ಭರಿತಳಾದ ಮದುಮಗಳ ಬಗೆಬಗೆಯ ಫೋಸ್ಗಳಲ್ಲಿ ಪೋಟೊ ಕ್ಲಿಕ್ ಮಾಡಿಯೂ ಸಮಯಕ್ಕೆ ಸರಿಯಾಗಿ ದಿಬ್ಬಣ ಹೊರಟೇ ಬಿಟ್ಟಿತು “ಮಾಂಗಲ್ಯಮಂಟಪ”ದ ಕಡೆ…
ಅಲ್ಲಿಯೂ ಯಜಮಾನನ ಒತ್ತಡ,ಗಡಿಬಿಡಿ, ಉದ್ವೇಗ… ಬಂದವರನ್ನು ಮಾತಾಡಿಸಬೇಕೆಂಬ ಆತುರ, ಮಂಟಪದ ಜವಾಬ್ದಾರಿ, ಒಂದು ಕಡೆ ಪುರೋಹಿತರು ಬರಲಿಲ್ಲ ಎಂಬ ಗೊಂದಲ ಮಧ್ಯೆ ಪಾನಿಯದವರು ಸರಿಯಾಗಿ ಮಂಟಪದ ಎದುರು ಬಂದವರಿಗೆ ಕೊಡುತ್ತಾರೋ ಇಲ್ಲವೋ ಎಂಬ ಗಲಿಬಿಲಿ. ಎಲ್ಲವೂ ಬಹಳಷ್ಟು ಕಷ್ಟದ ನಿರ್ವಹಣೆ ಆಗಿದ್ದರೂ ಯಜಮಾನನಲ್ಲಿ ತುಂಬಿದ ಲವಲವಿಕೆ ಕಂಡು ನಮ್ಮಲ್ಲು ಚೈತನ್ಯ, ಉತ್ಸಾಹ ಮೂಡುತ್ತಿತ್ತು. ಇದೆಲ್ಲದರ ಮದ್ಯ ಆಗಾಗ ನಮ್ಮನ್ನು ವಿಚಾರಿಸುತ್ತ ನಿಮಗೆ ಬೇಕಾದ ಹಾಗೆ ಫೋಟೊ ತೆಗೆದುಕೊಳ್ಳಿ ನಾನೇನು ಹೇಳುವುದಕ್ಕಿಲ್ಲ …ಬೇಕಾದ್ದನ್ನು ಕೇಳಿ ಪಡೆಯಿರಿ… ಅಷ್ಟಾಗಿ ಸಮಯಕ್ಕೆ ಸರಿಯಾಗಿಯೇ ಪುರೋಹಿತರು ಮಂಟಪದ ಕೆಲಸಗಳಿಗೆ ತೊಡಗಿ ಫೋಟೊಗೆ ಬೇಕಾದಷ್ಟು ಸಮಯ ನೀಡಿದ್ದರು. ಮದ್ದುಮಕ್ಕಳನ್ನು ಶೃಂಗರಿಸುವ ಮತ್ತು ಬೇರೆ ಬೇರೆ ಫೋಸ್ ಗಳ ಫೋಟೊಗಳು ನಮ್ಮದಾಯಿತು, ಸಮಯಕ್ಕೆ ಸರಿಯಾಗಿ ಸದ್ದು ಗದ್ದಲಗಳಿಲ್ಲದೆ ಮಂಗಳವಾದ್ಯಗಳೊಂದಿಗೆ ಮದುವೆ ಮುಹೂರ್ತಕ್ಕೆ ಸರಿಯಾಗಿ ನೆರವೇರಿದ್ದು ಆಯಿತು.ಮಂಟಪದ ಎಲ್ಲ ಶುಭಶೋಭನಾದಿ ಕಾರ್ಯಕ್ರಮಗಳು ಮುಗಿದು ಶುಭಾಶಯ ಸಲ್ಲಿಸಲು ಸರದಿಯಸಾಲಲ್ಲಿ ಜನ ಕಿಕ್ಕಿರಿದಿದ್ದರು. ಅಲ್ಲಿ ಜನರ ನೂಕು ನುಗ್ಗಲು. ಮೊದಲೊಬ್ಬ ಹೇಳಿದಂತೆ “ಅವಸರದವನಿಗೆ ಎಲೆಯಲ್ಲಿ ಬಡಿಸಿ ನನಗೆ ನೆಲದಲ್ಲಿ ಬಡಿಸಿ” ಎಂದಂತೆ ತಾ ಮುಂದು ನಾಮುಂದು ಎಂಬಂತೆ ಕೆಲವರಂತೂ ನುಗ್ಗಿ ತಾನೊಮ್ಮೆ ಮುಗಿಸಿ ಬಿಟ್ಟೆ ಎಂಬ ಧೀರ್ಘ ನಿಟ್ಟುಸಿರು. ಕೆಲವರಂತೂ ಅಲ್ಲೇ ಗುಣುಗುವುದುಂಟು “ಮತ್ತೆಂತ ಸಾಯುದು ಮಾರಾಯ ಹೇಳಿದ್ದಕ್ಕೆ ಒಂದು ಮುಖ ತೋರಿಸುವ ಎಂದು ಬಂದದ್ದು ಒಂದು ಘಳಿಗೆ ಪುರುಸೊತ್ತು ಇಲ್ಲ ಮಾರ್ರೆ ಇನ್ನು ಆರು ಕಡೆ ಹೋಗ್ಬೇಕು.ಮೂರು ಮುಗಿಸಿದೆ”
ಅಲ್ಲೆ ನಮ್ಮ ಬಳಿ ಹಾದು ಹೋಗುವ ಇಂತಹ ಆನೇಕ ವಿಷಯಗಳು ನಮ್ಮ ಕಿವಿಗೆ ಬಂದು ಬಡಿಯುತ್ತಿರುತ್ತದೆ.
ಬಂದಷ್ಟೂ ಜನರನ್ನು ಒಂದಿನಿತು ಬೇಸರಗೊಳ್ಳದಂತೆ ತನ್ನ ಆಯಾಸವನ್ನು ತೋರ ಗೊಡದೆ ಮುಗುಳ್ನಗುತ್ತಾ ಉಪಚರಿಸಿದ ಯಜಮಾನನ ಬಗೆಗೆ ನಾವು ಶರಣು. ಆರಂಭದ ಶ್ರಮ ಸಾರ್ಥಕ್ಯ ಹೊಂದಿ ಎಲ್ಲವೂ ಸುಖಪ್ರದವಾಯಿತು. ಹೊರಟು ನಿಂತ ನಮಗೆ ಯಜಮಾನ ಮತ್ತೆ ನಿಮಗೇನಾದರು ಅಡ್ವಾನ್ಸ್….ಬೇಡವೆಂದ ನಮ್ಮಲ್ಲಿ ಬಹಳ ವಿನೀತನಾಗಿ ಮತ್ತೆ ….ನಮ್ಮ ಆಲ್ಬಮ್ ಚೆನ್ನಾಗಿರಲಿ.ನಿಮಗೆ ಅಗತ್ಯಕಂಡ ಪೋಟೊಗಳನ್ನು ಹಾಕಿ ಸೊಗಸಾಗಿ ಬರುವಂತೆ ಮಾಡಿರಿ ಎಂದ ಯಜಮಾನನ ಜೊತೆಗಿದ್ದವರೆಲ್ಲ ಮುಂದೆ ಬಂದು ನಿಮ್ಮ ವರ್ತನೆ ಮತ್ತು ನಮ್ಮೊಂದಿಗೆ ಬೆರೆತ ನಿಮ್ಮ ಬಗ್ಗೆ ಗೌರವಮೂಡಿದೆ.ಎಂಬ ಮೆಚ್ಚುಗೆಯ ಮಾತುಗಳಾಡಿ ನಮ್ಮನ್ನು ಆಯಾಸವಿಲ್ಲದ ಮನಸ್ಸಿನಿಂದ ಬೀಳ್ಕೊಟ್ಟರು….
ಕೆಲವು ದಿನಗಳ ಬಳಿಕ ಮದುವೆ ಮಂಟಪದಲ್ಲಿ ಒದಗಿದ ಒಂದು ದೊಡ್ಡ ಗಂಡಾಂತರಕ್ಕೆ ನಮ್ಮ ಪೋಟೊ ವಿಡಿಯೋಗಳೇ ಸಾಕ್ಷಿ ಒದಗಿಸಿ ಪ್ರಕರಣ ಸುಖಾಂತ್ಯವಾಯಿತು. ಆಗ ಹೆಚ್ಚಿನ ಎಲ್ಲರಿಗೂ ಫೋಟೊ ವಿಡಿಯೋಗಳ ಬಗೆಗಿನ ಔಚಿತ್ಯ ಮನವರಿಕೆಗೆ ಆಯಿತು.
ಮತ್ತೆ ಒಂದಷ್ಟು ಕಾಲ ಕಳೆದು ನಾನವರಲ್ಲಿ ಬೇಟಿಕೊಟ್ಟ ಸಂದರ್ಭ ನಾನೇ ಉಭಯ ಕುಶಲೋಪರಿಗಳೊಂದಿಗೆ ತೊಡಗಿದೆ…
ಆದಿನ ನಿಮ್ಮ ಮದುವೆಯಲ್ಲಿ ಎಷ್ಟು ಬಗೆ ಸ್ವೀಟ್ ಮಾಡಿದ್ದರು,ಅದು ಏನು ಎಂದು ಕೇಳಿದಾಗ ಅವರಿಗೆ ನೆನಪಿರಲಿಲ್ಲ. ಆಗ ಮತ್ತೆ ಆಲ್ಬಮ್ ಹೊರಗೆ ತಂದು ಎಲ್ಲರೂ ಸುತ್ತ ಕುಳಿತು ನೋಡಿ ಸಂತಸ ಪಟ್ಟರು. ನೋಡಿ ಆ ಕಷ್ಟದಲ್ಲೂ ಮದುವೆ ಫೋಟೊ ತೆಗೆಸಿಕೊಂಡ ಕಾರಣ ಇಂದು ನೆನಪು ಹಸನಾಗಿ ನಮ್ಮಲ್ಲಿ ಉಳಿದು ಕೊಂಡಿದೆ. ಮತ್ತು ಇಷ್ಟು ಸಮಯ ಕಳೆದರು ಒಂದಿನಿತು ಪೋಟೊಗಳು ಹಾಳಾಗಿಲ್ಲ, ಎಂಬ ಸಮಾಧಾನ ಸಂತಸಗಳೊಂದಿಗೆ ಒಬ್ಬ ಪೋಟೊಗ್ರಾಫರ್ ನ ಬಗ್ಗೆ ಬಹಳ ಗೌರವದ ನುಡಿಗಳನ್ನಾಡಿ ಬೀಳ್ಕೊಟ್ಟರು.
ಇದೆಲ್ಲ ಒಂದು ಅನುಭವ. ಬದುಕು ಅನುಭವಿಸಿ ಬರಿದು ಮಾಡಬಹುದಾದ ಪಾತ್ರೆಯಲ್ಲ ಅದು ಅನುಭವದಿಂದ ತುಂಬ ಬೇಕಾದ ಪಾತ್ರೆ.ಎಂತಹ ಕಠಿನ ಸಂದದಲ್ಲೂ ನಮ್ಮವರ ಬದುಕು ಎಂದೆಂದೂ ಬರಿದಾಗದ ಅಕ್ಷಯಪಾತ್ರೆಯಾಗ ಬೇಕು.ಎಂಬ ಸದಾಶಯ ನನ್ನದು ಬಂಧುಗಳೆ, ಹಾಗೆ ಸುಮ್ಮನೆ ಲೋಕಾಭಿರಾಮ
ನಮಸ್ಕಾರ….
ಎಂ.ದೇವಾನಂದ ಭಟ್ ಬೆಳುವಾಯಿ.

LEAVE A REPLY

Please enter your comment!
Please enter your name here