ಚುಚ್ಚುಮದ್ದು ರೂಪದಲ್ಲಿ ಪೋಲಿಯೋ ಲಸಿಕೆ

0
195

 
ಉಡುಪಿ ಪ್ರತಿನಿಧಿ ವರದಿ
ಪೋಲಿಯೋ ನಿರ್ಮೂಲನೆಯಲ್ಲಿ ದೇಶವು ಪ್ರಗತಿ ಸಾಧಿಸಿದ್ದು, ದೇಶವು ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೆ ವಿಶ್ವದಲ್ಲಿ ಪಾಕಿಸ್ತಾನ ಮತ್ತು ಅಪಘಾನಿಸ್ತಾನ ಮಾತ್ರ ಪೋಲಿಯೋ ಪೀಡಿತ ಪಟ್ಟಿಯಲ್ಲಿದ್ದು, ಅಲ್ಲಿಂದ ಸಾಂಕ್ರಾಮಿಕ ರೂಪದಲ್ಲಿ ಪೋಲಿಯೋ ಹರಡುವ ಸಾಧ್ಯತೆಯಿರುವುದರಿಂದ, ಚುಚ್ಚುಮದ್ದು ರೂಪದಲ್ಲಿ ಪೋಲಿಯೋ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
 
 
ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪೋಲಿಯೋ ದೇಶದಲ್ಲಿ ಸಂಪೂರ್ಣವಾಗಿ ಇಲ್ಲವಾಗಿದ್ದು, ಮುಂದೆ ಪೋಲಿಯೋ ಮರುಕಳಿಸದಂತೆ ಮುನ್ನೆಚ್ಚರಿಕೆಗಾಗಿ ಈ ಚುಚ್ಚುಮದ್ದು ನೀಡಲಾಗುತ್ತಿದೆ. ಏಪ್ರಿಲ್ 24 ರ ವರೆಗೆ ಹಿಂದಿನ ರೀತಿಯಲ್ಲಿ ಬಾಯಿಗೆ ಲಸಿಕೆ ಹಾಕಲಾಗುವುದು, ಏಪ್ರಿಲ್ 25 ರ ನಂತರ ಇದರ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿರುವುದರಿಂದ, ಈಗಾಗಲೇ ಇದರ ದಾಸ್ತಾನು ಮಾಡಿರುವವರು, ತಮ್ಮಲ್ಲಿ ಉಳಿಯುವ ಲಸಿಕೆಯನ್ನು ಆರೋಗ್ಯ ಇಲಾಖೆಯ ಫಾರ್ಮಸಿ ವಿಭಾಗಕ್ಕೆ ಹಿಂದಿರುಗಿಸುವಂತೆ ಸಿಇಓ ಸೂಚಿಸಿದರು.
 
 
ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು ಎಲ್ಲಾ ನರ್ಸಿಂಗ್ ಹೋಂ ಮತ್ತು ಔಷಧ ಮಾರಾಟಗಾರರ ಮೂಲಕ ಲಸಿಕೆಯನ್ನು ಹಿಂಪಡೆದು ಆರೋಗ್ಯ ಇಲಾಖೆಗೆ ನೀಡುವಂತೆ ಸೂಚಿಸಿದರು.
 
 
ಜಿಲ್ಲೆಯಲ್ಲಿ ಎಪ್ರಿಲ್ 11 ರಂದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಚುಚ್ಚುಮದ್ದು ಮೂಲಕ ಪೋಲಿಯೋ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಸಿಇಓ ತಿಳಿಸಿದರು.
 
ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಸತೀಶ್ಚಂದ್ರ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಹಾಗೂ ರೋಟರಿ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here