ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರ ಪ್ರತಿಷ್ಠಾ ಮಹೋತ್ಸವ

0
168

ವರದಿ ಶ್ಯಾಮ್ ಪ್ರಸಾದ್ ಬದಿಯಡ್ಕ
ಪ್ಲಾಸ್ಟಿಕ್ ಮುಕ್ತ ಶಬರಿಮಲೆಗೆ ಪ್ರತಿಯೊಬ್ಬ ವ್ರತಧಾರಿಯೂ ಕೈಜೋಡಿಸಬೇಕಾಗಿದೆ – ಸ್ವಾಮಿ ಅಯ್ಯಪ್ಪದಾಸ್
ಪ್ಲಾಸ್ಟಿಕ್ ಮುಕ್ತ ಶಬರಿಮಲೆಗೆ ಕೈಜೋಡಿಸುವ ಮೂಲಕ ಶಬರಿಮಲೆಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸ ಪ್ರತಿಯೊಬ್ಬ ಅಯ್ಯಪ್ಪ ವ್ರತಧಾರಿಗೂ ಇದೆ ಎಂದು ಅಯ್ಯಪ್ಪ ಸೇವಾಸಮಾಜಂನ ರಾಜ್ಯಾಧ್ಯಕ್ಷ ಸ್ವಾಮಿ ಅಯ್ಯಪ್ಪದಾಸ್ ಅಭಿಪ್ರಾಯಪಟ್ಟರು.
 
kasaragod_nirchalu-temple
 
ಅವರು ಆದಿತ್ಯವಾರ ಸಂಜೆ ನೀರ್ಚಾಲು ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ನವೀಕರಣ ಪ್ರತಿಷ್ಠಾ ಮಹೋತ್ಸವದ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡುತ್ತಾ ಕಲಿಯುಗದಲ್ಲಿ ಅಯ್ಯಪ್ಪನ ಮೇಲಿನ ಭಕ್ತಿ ಶ್ರದ್ಧೆ ನಂಬಿಕೆಗಳ ನಾಶಕ್ಕೆ ಹೊರಟಿದೆ ಸರಕಾರೀ ಅಧಿಕಾರಿಗಳ ತಂಡ. ಅದಕ್ಕೆ ನಾವೆಂದೂ ಬಿಡಬಾರದು. ವಿಶ್ವದ ಅತೀ ದೊಡ್ಡ ಹಾಗೂ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿದೆ ನಮ್ಮ ಶಬರಿಮಲೆ. ಪೂರ್ವಜರು ಸೃಷ್ಟಿಸಿದ ಪ್ರತಿಯೊಂದು ನಿಯಮಗಳನ್ನು ಆಚರಿಸುವ ಕರ್ತವ್ಯ ನಮಗಿದೆ. ಕೇರಳದ ಜನಸಂಖ್ಯೆಗಿಂತ ಎಷ್ಟೋ ಹೆಚ್ಚು ಜನ ಅಯ್ಯಪ್ಪನ ದರ್ಶನವನ್ನು ಮಾಡುತ್ತಿದ್ದಾರೆ. ಶಬರಿಮಲೆ ಸರಕಾರದ ಆದಾಯ ಕೇಂದ್ರವಾಗಿ ಮಾರ್ಪಟ್ಟಿರುವುದು ದುರಂತವಾಗಿದೆ ಎಂದು ಖೇದವ್ಯಕ್ತಪಡಿಸಿದರು. ಕೇಂದ್ರ ಸರಕಾರ ಶಬರಿಮಲೆಯ ಬಗ್ಗೆ ಕಾಳಜಿಯನ್ನು ವಹಿಸಿರುವುದು ಸಂತೋಷದಾಯಕವಾಗಿದೆ. ಅಯ್ಯಪ್ಪ ವ್ರತಧಾರಿಗಳು ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ಪ್ಲಾಸ್ಟಿಕ್ ನಮ್ಮ ಶ್ರದ್ಧಾಕೇಂದ್ರದ, ಪರಿಸರದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ ಎಂದರು.
 
 
 
ಉದ್ಘಾಟನೆಯನ್ನು ನೆರವೇರಿಸಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನವನ್ನು ನೀಡುತ್ತಾ ಕಣ್ಣಿಗೆ ಕಾಣುವ ಶಕ್ತಿಗಳೇ ದೇವತೆಗಳು. ಉದಾರತೆಯ ಸಾಕಾರ ರೂಪ ಅಯ್ಯಪ್ಪ, ಪಂಚಭೂತಗಳ ಅಧಿಪತಿ ಅಯ್ಯಪ್ಪ. ಎಲ್ಲವನ್ನೂ ತ್ಯಾಗಮಾಡಿದ ಸಚ್ಚಿದಾನಂದ ಸ್ವರೂಪಿ ಅಯ್ಯಪ್ಪ ಸ್ವಾಮಿ. ನಂಬಿಕೆಗಳ ಬಗ್ಗೆ ನಾವು ಜಾಗ್ರತೆಯಿಂದಿರಬೇಕು. ಸನಾತನ ಸಂಸ್ಕೃತಿಯನ್ನು ನಾಶಮಾಡಲು ಯಾರಿಂದಲೂ ಆಗದು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ನಂಬಿಕೆಗಳ ಮೇಲೆ ಆಕ್ರಮಣಗಳು ನಡೆಯುತ್ತಾ ಇದೆ. ದೇವರನ್ನು ಆರಾಧಿಸಲು ನಾವು ಎಲ್ಲ ತ್ಯಾಗಕ್ಕೂ ಸಿದ್ಧರಾಗಬೇಕು. ಅಯ್ಯಪ್ಪ ವ್ರತಧಾರಿಗಳು 48 ದಿನ ಮಾತ್ರವಲ್ಲದೆ ಜೀವಮಾನದುದ್ದಕ್ಕೂ ಅಯ್ಯಪ್ಪನ ಆದರ್ಶವನ್ನು ಪಾಲಿಸುತ್ತಾ ಬರಬೇಕು ಎಂದರು.
 
 
 
ದೇವರು ಧರ್ಮವನ್ನು ಬಿಟ್ಟು ನಮಗೆ ಅಸ್ತಿತ್ವವಿಲ್ಲ. ಧರ್ಮ ಅಧರ್ಮಗಳ ಸಂಘರ್ಷದಿಂದ ತೊಳಲಾಡುವ ಸಂದರ್ಭದಲ್ಲಿ ಅಯ್ಯಪ್ಪನ ಆರಾಧನೆ ಮಾಡುವ ಮೂಲಕ ಪುನೀತರಾಗೋಣ ಎಂದು ಕೊಂಡೆವೂರು ಶ್ರೀ ನಿತ್ಯಾನಂದಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳು ಆಶೀರ್ವಚನದ ಮೂಲಕ ಹಿತನುಡಿಗಳನ್ನಾಡಿದರು. ದೇವರನ್ನು ಆರಾಧಿಸುವ ಮೂಲಕ ತಮ್ಮಲ್ಲಿರುವ ಕೊಳೆ ಕಶ್ಮಲಗಳನ್ನು ತೊಳೆದುಕೊಳ್ಳಬೇಕು. ನಂಬಿಕೆ ಇದ್ದರೆ ಮಾತ್ರ ಕಲ್ಲು ದೇವರಾಗಬಹುದು, ಚೈತನ್ಯ ಬರಬಹುದು ಇಲ್ಲವಾದಲ್ಲಿ ದೇವರೇ ನಮಗೆ ಕಲ್ಲಾಗಬಹುದು. ಧರ್ಮದ ರಕ್ಷಣೆಗಾಗಿ ಧಾರ್ಮಿಕತೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ನಮ್ಮದು, ಧರ್ಮದ ಹಾದಿಯಲ್ಲಿ ಮುಂದೆ ಹೋಗಿ ಧಾರ್ಮಿಕ ಕೇಂದ್ರವಾಗಿ ಈ ಅಯ್ಯಪ್ಪ ಭಜನ ಮಂದಿರ ಮುಂದುವರಿಯಬೇಕು. ಪರಿಸರಕ್ಕೆ ಭಕ್ತಿಯ ಚುಕ್ಕಿ ಇಟ್ಟಿದೆ ಈ ಚುಕ್ಕಿನಡ್ಕ ಅಯ್ಯಪ್ಪ ಮಂದಿರ. ಧರ್ಮರಕ್ಷಣೆ ಸದಾ ನಡೆಯಬೇಕಿದೆ ಎಂದರು.
 
 
 
ರಾಜ್ಯಪ್ರಶಸ್ತಿವಿಜೇತ ಶಿಕ್ಷಕ ಗೋಪಾಲ ಭಟ್ ಚುಕ್ಕಿನಡ್ಕ ವಿರಚಿತ `ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾವಳಿ’ ಕೃತಿಯನ್ನು ಶ್ರೀಗಳವರು ಬಿಡುಗಡೆಗೊಳಿಸಿದರು. ಜನರನ್ನು ಭಕ್ತಿಮಾರ್ಗಕ್ಕೊಯ್ಯಲು ಸಂತರು, ಧಾರ್ಮಿಕ ಮುಂದಾಳುಗಳ ಪ್ರಯತ್ನ ಶ್ಲಾಘನೀಯ ಎಂದು ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಮೋಹನ ಮಾನ್ಯ ಹೇಳಿದರು. ಗೋಪಾಲ ಭಟ್ ಚುಕ್ಕಿನಡ್ಕ ತಾವು ರಚಿಸಿದ ಕೃತಿಯ ಭಜನೆಯನ್ನು ಹಾಡಿದರು. ಸ್ಥಳೀಯರ ಅವಿರತ ಪ್ರಯತ್ನದಿಂದಾಗಿ ಚೊಕ್ಕವಾದ ಮಂದಿರ ನಿರ್ಮಾಣವಾಗಿ ಭಕ್ತರಿಗೆ ತೆರೆದುಕೊಂಡಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ ನುಡಿದರು. ಮಂದಿರ ನಿರ್ಮಾಣದಿಂದ ಜನರ ಭಕ್ತಿ ಶ್ರದ್ಧೆ ಹೆಚ್ಚಾಗಲಿದೆ ಎಂದು ಪೆರಡಾಲ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶಿವರಾಮ ಭಟ್ ಹೇಳಿದರು.
 
ಕರ್ನಾಟಕ ಜಾನಪದ ಅಕಾಡೆಮಿ ಪುಸ್ತಕ ಪ್ರಶಸ್ತಿ ವಿಜೇತ ಕೇಳು ಮಾಸ್ಟರ್ ಅಗಲ್ಪಾಡಿ, ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮ ಮಾಸ್ಟರ್ ಪಿಲಿಕೂಡ್ಲು, ಶ್ರೀ ಮಂದಿರದ ಶಿಲ್ಪಿ ಹರಿಶ್ಚಂದ್ರ ನೆಟ್ಟಣಿಗೆ, ಮಂದಿರದ ಕುಂಞಿಕಣ್ಣ ಗುರುಸ್ವಾಮಿ ಉಪಸ್ಥಿತರಿದ್ದರು.
ಮಧುಸೂದನ ಸ್ವಾಮಿ ಪ್ರಾರ್ಥನೆಗೈದರು. ಮಂದಿರದ ಅಧ್ಯಕ್ಷ ವೆಂಕಪ್ಪ ನಾಯ್ಕ ಚುಕ್ಕಿನಡ್ಕ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಧನ್ಯವಾದವನ್ನಿತ್ತರು. ನಾರಾಯಣ ಆಸ್ರ ಮಾನ್ಯ ನಿರೂಪಣೆಗೈದರು. ಸಭಾ ಕಾರ್ಯಕ್ರಮದ ನಂತರ ಊರಿನ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ಓಂ ಪ್ರೆಂಡ್ಸ್ ಚುಕ್ಕಿನಡ್ಕ ಇವರ ಪ್ರಾಯೋಜಕತ್ವದಲ್ಲಿ ರತ್ನಾಕರ ಎಸ್. ಓಡಂಗಲ್ಲು ನೇತೃತ್ವದಲ್ಲಿ ಕೇರಳ ಹಾಗೂ ಕರ್ನಾಟಕದ ಪ್ರಸಿದ್ಧ ಗಾಯಕರಿಂದ ಭಕ್ತಿ ಜೇಂಕಾರ ನಡೆಯಿತು.
 
 
ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಕರೆಕೊಟ್ಟಂತೆ ಜನವರಿ 8 ರಂದು ನಮ್ಮ ಪರಿಸರದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ನಮ್ಮ ಪರಿಸರವನ್ನು ಶುಚಿ ಗೊಳಿಸುವ ಮೂಲಕ ಎಲ್ಲರೂ ಕ್ಷೇತ್ರ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕೊಂಡೆವೂರು ಶ್ರೀಗಳು ಕರೆಕೊಟ್ಟರು.
 
 
 
ಕಣ್ಣಿಗೂ ಮನಸ್ಸಿಗೂ ಹಬ್ಬವನ್ನುಂಟುಮಾಡುವ ಈ ಕ್ಷೇತ್ರದಲ್ಲಿ ಎಲ್ಲರ ಸಹಕಾರದಿಂದ ಚೊಕ್ಕವಾದ ಚುಕ್ಕಿನಡ್ಕ ಮಂದಿರ ಇಲ್ಲಿ ನಿರ್ಮಾಣವಾಗಿದೆ. ಸಂತರ ಪಾದಸ್ಪರ್ಶದಿಂದ ಈ ಭೂಮಿ ಪಾವನವಾಗಿದೆ ಎಂದು ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಡಾ| ಜನಾರ್ಧನ ನಾಯ್ಕ ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here