ಚೀಲದೊಳಗಿಂದ ಒದ್ದೆಯಾಗಿರುವ ನೋಟುಗಳು ಬಿದ್ದವು!!!

0
1093

ನಿತ್ಯ ಅಂಕಣ : ೫೪ – ತಾರಾನಾಥ್‌ ಮೇಸ್ತ,ಶಿರೂರು.
ಕಾಂಞಂಗಾಡ್ ಇಲ್ಲಿ ನಡೆಯುತ್ತಿರುವ ಗುಹೆಗಳ ನಿರ್ಮಾಣ ಕಾರ್ಯವು ಎಲ್ಲರೂ ಅಚ್ಚರಿ ಪಡುವಂತ ಕಾಮಗಾರಿ ಎಂದೆನಿಸಿತು. ದಿನದ ಕೆಲಸ ಮುಗಿದ ಬಳಿಕ ಕಾರ್ಮಿಕರು ಕೈ ಕಾಲುಗಳ ತೊಳೆದು, ನಿತ್ಯಾನಂದರಲ್ಲಿ ಸಂಬಳ ಪಡೆಯಲು ಸರತಿ ಸಾಲಿನಲ್ಲಿ ಒಬ್ಬೊಬ್ಬರಾಗಿ ಬರುತ್ತಿದ್ದರು. ಒಬ್ಬರಿಗೆ ಕೈ ಮುಷ್ಠಿ ಕಟ್ಟವಂತೆ ಹೇಳುತ್ತಿದ್ದರು. ನಂತರ ಮುಷ್ಠಿ ತೆರೆಯುವಂತೆ ಹೇಳುತ್ತಿದ್ದರು. ಆಗ ಅವನ ಕೈಯಲ್ಲಿ ಆ ದಿನದ ಸಂಬಳದ ಹಣ ಇರುತಿತ್ತು. ಮತ್ತೊಬ್ಬನಿಗೆ, ತನ್ನ ಲಂಗೋಟಿಯಿಂದ ತೆಗೆದು ಹಣ ನೀಡುತ್ತಿದ್ದರು. ಅಲ್ಲಿ ಅವನಿಗೆ ದೊರೆಯ ಬೇಕಾದ ಸರಿಯಾದ ಸಂಬಳವು ಇರುತಿತ್ತು. ಎಲ್ಲಾ ಕಾರ್ಮಿಕರು ನಿತ್ಯಾನಂದರು ಚಮತ್ಕಾರದಿಂದ ವೇತನ ನೀಡುವ ಶೈಲಿಕಂಡು ಆಶ್ಚರ್ಯಚಕಿತರಾಗಿದ್ದರು. ವಿಷಯ ಮಾತ್ರ ಬಲುಬೇಗನೆ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಿತು.

ಯಾವೊಂದು ಸಂಪಾದನೆ, ಆದಾಯ ಮೂಲಗಳು ಇಲ್ಲದೆ, ಧನ ಸಂಪತ್ತು ಸ್ವಾಮಿಗಳು ಹೇಗೆ ಕ್ರೂಢಿಕರಿಸಿದ್ದಾರೆ. ಅವರು ಚಮತ್ಕಾರಗಳ ಮೂಲಕವಾಗಿ ಹಣ ಸೃಷ್ಠಿಸುತ್ತಾರೆ. ಎಂದೆಲ್ಲಾ ದೂರುಗಳು, ನಂಜು ಮನಸಿನ ವ್ಯಕ್ತಿಗಳಿಂದ ಮೌಖಿಕವಾಗಿ ಇಲಾಖೆಗೆ ಬಂದಿದ್ದವು. ಒಂದು ದಿನ ಸತ್ಯಾಸತ್ಯೆ ಪರಿಶೀಲಿಸಲು ನಿತ್ಯಾನಂದರು ಗುಹೆಗಳ ನಿರ್ಮಾಣ ಮಾಡುವ ಸ್ಥಳದ ಬಳಿ ಇಲಾಖೆಯ ಅಧಿಕಾರಿಗಳು ಬಂದರು. ನಿತ್ಯಾನಂದರಲ್ಲಿ ದೊಡ್ಡ ಮಟ್ಟದ ಕಾಮಗಾರಿ ನಡೆಸಲು ಹಣಎಲ್ಲಿಂದ ಬಂದಿತು..? ಎಂದು ಜೋರಾಗಿ ಏರುಧ್ವನಿಯಲ್ಲಿ ಕೇಳುತ್ತಾರೆ. ನಿತ್ಯಾನಂದರು ಅಧಿಕಾರಿ ವರ್ಗವನ್ನು ಬಂಡೆಗಳಿರುವ ಗದ್ದೆಗಳಿರುವ ಸ್ಥಳಕ್ಕೆ ಕರೆದೊಯ್ದರು. ಅಲ್ಲಿದ್ದ ಹಳ್ಳದೊಳಗೆ ಮುಳುಗಿದರು. ಹೊರ ಬರುವಾಗ ಚೀಲದೊಂದಿಗೆ ಬಂದರು. ಅಧಿಕಾರಿಗಳ ಸಮ್ಮುಖ ಚೀಲವನ್ನು ಸುರಿದು ಬಿಟ್ಟರು. ಚೀಲದೊಳಗಿಂದ ಒದ್ದೆಯಾಗಿರುವ ನೋಟುಗಳು ಬಿದ್ದವು. ಅಧಿಕಾರಿಗಳು ಧಿಗ್ಭ್ರಮೆ ಪಡುವಂತಾಯಿತು. ನೀರಲ್ಲಿ ಒಂದು ಮೊಸಳೆ ಇದೆ. ಅದರ ಬಳಿ ಎಷ್ಟು ಬೇಕಾದರೂ ಹಣ ಇದೆ. ತಾವುಗಳು ನನ್ನಂತೆಯೇ ಹಣ ಪಡೆಯಲು ಪ್ರಯತ್ನಿಸ ಬಹುದು..!! ನಾನು ಬೇಕಾದರೆ ನೀರಿಂದ ಮೊಸಳೆ ಕರೆದು ತರುವೆ, ಅದಕ್ಕೆ ವಿಚಾರಣೆಗೆ ಒಳಪಡುಸುವಿರಾ..? ಎಂದು ನಿತ್ಯಾನಂದರು ಅಧಿಕಾರಿಗಳಿಗೆ ಹೇಳುತ್ತಾರೆ.

ಲಂಗೋಟಿಧಾರಿ ಓರ್ವ ಸಾಮಾನ್ಯ ಸನ್ಯಾಸಿಯಿಂದ ಬಹಿರಂಗವಾಗಿ ಅವಮಾನಪಟ್ಟದ್ದು, ಅಧಿಕಾರಿಗಳಿಗೆ ಕೋಪದ ತಾಪವು ಹೆಚ್ಚಾಗುತ್ತದೆ. ತಕ್ಕ ಶಿಕ್ಷೆಗೆ ಗುರಿಪಡಿಸಲು ಯೋಜನೆ ರೂಪಿಸುತ್ತಾರೆ. ಅಂದಿನ ಸೌತ್ ಕೆನಾರಾ ಜಿಲ್ಲೆಯ ಜಿಲ್ಲಾಧಿಕಾರಿ ಇ.ಎಮ್.ಗೋನ್ ಅವರಿಗೆ ದೂರಿನ ವರದಿ ಒಪ್ಪಿಸುತ್ತಾರೆ. ಗೋನ್ ಬ್ರಿಟಿಷ್ ಅಧಿಕಾರಿಯಾಗಿದ್ದರು. ದೂರಿನ ಪತ್ರದಲ್ಲಿ ಸನ್ಯಾಸಿಯೊಬ್ಬ ಸರಕಾರಿ ಭೂಮಿಯಲ್ಲಿ ಅನುಮತಿ ಇಲ್ಲದೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾನೆ. ಕೂಲಿಯಾಳುಗಳಿಗೆ ಇಂದ್ರಜಾಲ ವಿದ್ಯೆಯ ಮೂಲಕ ವೇತನ ಬಟವಾಡೆ ನಡೆಸುತ್ತಿದ್ದಾನೆ. ಹೀಗಾದರೆ “ಅರ್ಥ ವ್ಯವಸ್ಥೆಯು ಅನರ್ಥ ಆಗುತ್ತದೆ” ಎಂದು ಅಪಾದನೆ ಮಾಡಲಾಗಿತ್ತು.

ರೈಲಿನಲ್ಲಿ ಕಾಂಞಂಗಾಡಿಗೆ ಬಂದ ಜಿಲ್ಲಾಧಿಕಾರಿಗಳು, ಅಲ್ಲಿಂದ ಅವರು ಕುದುರೆ ಎರಿಕೊಂಡು ತಮ್ಮ ಜೊತೆ ಕರೆತಂದ, ಅಲ್ಸೇಸಿಯನ್ ನಾಯಿಯೊಂದಿಗೆ ಸ್ಥಳಕ್ಕೆ ಬರುತ್ತಾರೆ. ಜಿಲ್ಲಾಧಿಕಾರಿಗಳು ಬರುವಾಗ ಸ್ವಾಮಿಗಳು ಬಂಡೆಯೊಳಗಿನ ಗುಹೆಯೊಳಗಿದ್ದರು. ನಾಯಿಯು ಸ್ವಾಮೀಜಿ ಹೋದ ಹಾದಿಯಲ್ಲಿ ಬೊಬ್ಬಿಟ್ಟಿತು. ಶಬ್ದ ಆಲಿಸಿ ಸ್ವಾಮೀಜಿಗಳು ಹೊರ ಬಂದರು. ನಾಯಿಯು ಸ್ವಾಮೀಜಿ ಬಳಿ, ಬಾಲ ಅಲ್ಲಾಡಿಸುತ್ತ ಕುಳಿತುಕೊಂಡಿತು. ನಾಯಿಯನ್ನು ಹಿಂಬಾಲಸಿಕೊಂಡು ಜಿಲ್ಲಾಧಿಕಾರಿಗಳು ಹೋದರು. ನಾಯಿ ಸ್ವಾಮೀಜಿ ಅವರೊಂದಿಗಿರುವ ಆತ್ಮೀಯತೆ ಕಂಡು ವಿಸ್ಮಯ ಪಟ್ಟರು. ಬಳಿಕ ಸ್ವಾಮೀಜಿ ಅವರಲ್ಲಿ “ಇದೆಲ್ಲಾ ಯಾರಿಗೆ..?, ಯಾಕೇ..? ಮಾಡುತ್ತಿರುವಿರೆಂದು ಪ್ರಶ್ನಿಸಿದರು.

ನಿತ್ಯಾನಂದರು “ಇದಗೋಸ್ಕರ ಅಲ್ಲ..! ನಿಮಗೆ ಬೇಕಾದರೆ, ನೀವು ಪಡೆದು ಕೊಳ್ಳಬಹುದು” ಎಂದು ಆಂಗ್ಲ ಭಾಷೆಯಲ್ಲಿ ಹೇಳಿದರು. ಈ ಮೊದಲೇ ಕೆಳಗಿನ ಅಧಿಕಾರಿಗಳಿಂದ ನಿತ್ಯಾನಂದರ ಲೀಲೆಗಳನ್ನು ಗೋನ್ ಅವರು ಕೇಳಿದ್ದರು. ಗರುದೇವರ ಸಾನಿಧ್ಯಕ್ಕೆ ಬಂದಾಗ ಗೋನ್ ಅವರ ಮನಸ್ಸಿನ ಭಾವನೆ, ನಿರ್ಧರಿಸಿರುವ ಕರ್ತವ್ಯ ದೃಷ್ಟಿಯು ಬದಲಾಗುತ್ತದೆ. ಸ್ಥಳದಲ್ಲಿದ್ದ ಸ್ಥಳೀಯ ಎಲ್ಲಾ ಅಧಿಕಾರಿಗಳಿಗೆ ಆದೇಶ ಹೊರಡಿಸುತ್ತಾರೆ. ನಿತ್ಯಾನಂದರು ನಿರ್ಮಾಣ ಕಾರ್ಯಗಳನ್ನು ಸಮಾಜದ ಒಳಿತಿಗಾಗಿ ಮಾಡುತ್ತಿದ್ದಾರೆ. ಅವರ ಸ್ವಾರ್ಥಕ್ಕಾಗಿ ಅಲ್ಲ. ಹಾಗಾಗಿ ಅವರಿಗೆ ಯಾವೊಂದು ತೊಂದರೆ ನೀಡಬೇಡಿ, ರಕ್ಷಣೆ ಮತ್ತು ಸಹಾಯ ನೀಡಿ. ಸ್ವಾಮಿಗಳು ತಮ್ಮ ಇಚ್ಚಾನುಸಾರ ಮಾಡುವುದು ಮಾಡುತ್ತಿರಲಿ. ಎಂದು ಹೇಳಿ ಕುದುರೆ ಏರಿಕೊಂಡು ತಮ್ಮ ನಾಯಿಯೊಂದಿಗೆ ಪ್ರವಾಸಿ ಮಂದಿರದ ಬಳಿಗೆ ಹೋರಟರು. ಹೋಗುವಾಗ ಅವರಿಗೆ ಅಚ್ಚರಿ ಕಂಡಿತು..! ರಸ್ತೆಯಲ್ಲಿ ಹೊಸದಾಗಿ ಬರೆದು ಅಳವಡಿಸಿದ ಬೊರ್ಡೊಂದನ್ನು ಕಂಡರು. ಅದರ ಮೇಲೆ “Gawne Road” ಎಂದು ಬರೆಯಲಾಗಿತ್ತು. ಅವರು ಗುಹೆಗಳಿರುವ ಪ್ರದೇಶಕ್ಕೆ ಹೋಗುವಾಗ ಆ ಬೋರ್ಡ್ ಇಲ್ಲವಾಗಿತ್ತು. ಆ ರಸ್ತೆಯನ್ನು ಜಿಲ್ಲಾಧಿಕಾರಿಗಳ ಹೆಸರಿಗೆ ನಿತ್ಯಾನಂದರು ಸಮರ್ಪಿಸಿರುತ್ತಾರೆ. ಇಗಲೂ ಆ ರಸ್ತೆ ಅದೇ ಹೆಸರಿನಿಂದ ಕರೆಯಲ್ಪಡುತ್ತಿದೆ. ಇದಾದ ಬಳಿಕ ಗೋನ್ ಅವರ ಭವಿಷ್ಯವು ಉಜ್ವಲಗೊಂಡಿತು. ಮದ್ರಾಸು ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಮುಂಬಡ್ತಿ ಪಡೆಯುತ್ತಾರೆ. ಆಗಾಗ ನಿತ್ಯಾನಂದರ ಸೇವಾ ಕಾರ್ಯಗಳಿಗೆ ಸಹಕರಿಸುವಂತೆ ಮಂಗಳೂರಿನ ಅಧಿಕಾರಿಗಳಿಗೆ ಅವರು ಆದೇಶವನ್ನು ನೀಡುತ್ತಿದ್ದರು.

Advertisement

LEAVE A REPLY

Please enter your comment!
Please enter your name here