ಚೀನಾಗೆ ಕಠಿಣ ಸಂದೇಶ ರವಾನೆ

0
210

 
ವರದಿ: ಲೇಖಾ
ನಿರಂತರವಾಗಿ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಚೀನಾಗೆ ಕಠಿಣ ಸಂದೇಶ ರವಾನಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಈಶಾನ್ಯ ಭಾರತದ ಗಡಿಗಳಲ್ಲಿ ಇಂಡೋ-ರಷ್ಯಾ ಜಂಟಿ ನಿರ್ಮಾಣದ ಅತ್ಯಾಧುನಿಕ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ನಿಯೋಜನೆಗೆ ಸಮ್ಮತಿ ನೀಡಿದೆ.
 
 
ಇಂಡೋ-ಭಾರತದ ಗಡಿಯಲ್ಲಿ ಚೀನೀ ಸೈನಿಕರ ಚಟುವಟಿಕೆಗಳು ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ಸೇನೆ ಮಹತ್ವದ ಪ್ರಸ್ತಾಪವೊಂದನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಸೇನೆಯ ಪ್ರಸ್ತಾಪಕ್ಕೆ ಕೇಂದ್ರ ಕೂಡ ಅಸ್ತು ಎಂದಿದೆ. ಅದರಂತೆ ಇಂಡೋ-ಚೀನಾ ಗಡಿಗಳಲ್ಲಿ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
 
 
 
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ, ಈಶಾನ್ಯ ಭಾರತ ಗಡಿಯಲ್ಲಿ ಬ್ರಹ್ನೋಸ್ ಕ್ಷಿಪಣಿ ನಿಯೋಜಿಸುವ ಸೇನಾಧಿಕಾರಿಗಳ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ರಕ್ಷಣಾ ಇಲಾಖೆ ಸುಮಾರು 4.300 ಕೋಟಿ ರುಗಳ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಈಶಾನ್ಯ ಭಾರತದ ವಿವಿಧ ಗಡಿಗಳಲ್ಲಿರುವ ಸೇನಾ ಕ್ಯಾಂಪ್ ಗಳಿಗೆ 100 ಕ್ಕೂ ಹೆಚ್ಚು ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಲಿದೆ.
 
 
ಒಂದು ರೆಜಿಮೆಂಟ್​ನಲ್ಲಿ 100 ಬ್ರಹ್ಮೋಸ್ ಕ್ಷಿಪಣಿಗಳು, ಕ್ಷಿಪಣಿ ಉಡಾಹಕ ಟ್ರಕ್​ಗಳು, ಮೊಬೈಲ್ ಕಮಾಂಡ್ ಪೋಸ್ಟ್ ಸೇರಿ ಇತರ ಉಪಕರಣಗಳು ಇರಲಿದೆ. ರಷ್ಯಾದ ಎನ್​ಪಿಒಎಂ ಮತ್ತು ಭಾರತದ ಡಿಆರ್​ಡಿಒ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿಯು ಭಾರತ ಸೇನೆಯ ಪ್ರಮುಖ ಅಸ್ತ್ರವಾಗಿದೆ. ಬ್ರಹ್ಮೋಸ್ 290 ಕಿ.ಮೀ. ದೂರ ವ್ಯಾಪ್ತಿ ಸಾಮರ್ಥ್ಯ ಹೊಂದಿದೆ.
 
 
ಅರುಣಾಚಲ ಪ್ರದೇಶದ ಗಡಿ ಸಮೀಪವೇ ಚೀನಾ ಸೇನೆ ಬೃಹತ್ ನೆಲೆ ಸ್ಥಾಪಿಸಿಕೊಂಡಿದೆ. ಇತ್ತೀಚೆಗೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲೂ ಅಕ್ರಮವಾಗಿ ಪ್ರವೇಶ ಮಾಡಿದೆ. ಚೀನಾ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಭಾರತ ಬ್ರಹ್ಮೋಸ್ ಮೊರೆ ಹೋಗಿದೆ. ನೌಕಾ ಪಡೆಯು 10 ಪ್ರಮುಖ ಯುದ್ಧ ನೌಕೆಗಳಲ್ಲಿ ಬ್ರಹ್ಮೋಸ್ ಕ್ಷಿಪಣಿ ಅಳವಡಿಸಿದೆ. ಜತೆಗೆ ರಷ್ಯಾ ನಿರ್ವಿುತ ಸುಖೋಯ್ ಯುದ್ಧವಿಮಾನದಲ್ಲೂ ಬ್ರಹ್ಮೋಸ್ ಕ್ಷಿಪಣಿ ಅಳವಡಿಸಿ ಪರೀಕ್ಷಿಸಲಾಗಿದೆ. ವಿಯೆಟ್ನಾಂ ಬೇಡಿಕೆಯಂತೆ ಅಲ್ಲಿಗೆ ಭಾರತ-ರಷ್ಯಾ ಬ್ರಹ್ಮೋಸ್​ನ್ನು ತಯಾರಿಸಿ ಒದಗಿಸಲಿದೆ.

LEAVE A REPLY

Please enter your comment!
Please enter your name here