“ಚಿದಾಕಾಶ ಗೀತಾ- ಆತ್ಮಪ್ರಭಾವ”

0
995

ನಿತ್ಯ ಅಂಕಣ-೯೧ : ತಾರಾನಾಥ್‌ ಮೇಸ್ತ, ಶಿರೂರು.
“ಸಾದ್ವಿ ತುಲಸಿ ಅಮ್ಮ” ಇವರು ಭಗವಾನ್ ನಿತ್ಯಾನಂದರ ಪರಮ ಭಕ್ತೆ. ಇವರು 1920 ರ ನಂತರದ ಕೆಲವು ವರ್ಷಗಳ ಕಾಲ ಸ್ವಾಮಿಗಳ ಸಂಪರ್ಕದಲ್ಲಿದ್ದವರು. ಗುರುದೇವರ ಸಾಮೀಪ್ಯದ ಆಧ್ಯಾತ್ಮದ ಸತ್ಸಂಗ ಇವರಿಗೆ ಪ್ರಾಪ್ತಿಯಾಗಿದೆ. ಅಂದಿನ ಸಮಯದಲ್ಲಿ ತುಲಸಿ ಅಮ್ಮ ಅವರಿಗೆ ಬೇಗನೆ ಮದುವೆ ಆಗುತ್ತದೆ. ಅವರು ಸಣ್ಣ ಪ್ರಾಯದಲ್ಲಿ ಗಂಡನನ್ನು ಕಳೆದುಕೊಂಡು ವಿಧವೆ ಆಗಬೇಕಾದ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ತುಳಸಿ ಅಮ್ಮ ಅವರು, ಸಮಾಜ ಸಂಪ್ರದಾಯದ ವಿಧವಾ ಕಟ್ಟು ಕಟ್ಟಳೆ ಪಾಲಿಸಬೇಕಾಗುತ್ತದೆ. ಬಿಳಿಸೀರೆ ಧಾರಣೆ, ಕೇಶಮುಂಡನೆ ಮಾಡಿ ಕೊಳ್ಳಬೇಕಾಗುತ್ತದೆ. ಆ ಕಾಲಘಟ್ಟದಲ್ಲಿದ್ದ ಸಮಾಜದ ನಡವಳಿಕೆಗಳು, ಅನಿಷ್ಠ ಪದ್ಧತಿಗಳು ಆಕೆಯ ಬದುಕು ದುಸ್ತರದ ಕಷ್ಟಕೋಟಲೆಗಳ ಬೀಡಾಗಿಸುತ್ತದೆ. ಹೀಗಿರುವಾಗ ಆಕೆಯ ಮನಸ್ಸು ಸಂಸಾರಿಕ ಜೀವನದಿಂದ ಆಧ್ಯಾತ್ಮದ ಸೆಳೆತಕ್ಕೆ ಒಳಗಾಗುತ್ತದೆ. ಜಪ ತಪ ಸಂಧ್ಯಾವಂದನೆ ಅನುಷ್ಠಾನಗಳ ಮಾಡುತ್ತ, ಭಜನೆಗಳ ಹಾಡುತ್ತ, ಪ್ರವಚನ, ಹರಿಕಥೆ ಹೇಳುತ್ತ, ಪುಸ್ತಕಗಳ ಬರೆಯುತ್ತ ಬದುಕು ಸಾಗಿಸುತ್ತಾರೆ. ತುಳಸಿ ಅಮ್ಮ ಕನ್ನಡ, ಕೊಂಕಣಿ, ಮರಾಠಿ ಭಾಷೆಗಳಲ್ಲಿಯೂ ಪ್ರವಚನ ನೀಡುತ್ತಿದ್ದರು.
ಅವಧೂತ ನಿತ್ಯಾನಂದರು ಮಂಗಳೂರಿನಲ್ಲಿ ಸಂಚಾರದಲ್ಲಿದ್ದಾಗ ಅವರ ದರ್ಶನವನ್ನ ತುಳಸಿ ಅಮ್ಮವರು ಪಡೆಯುತ್ತಾರೆ. ಗುರುದೇವರ ಪವಾಡಗಳ ಕಣ್ಣಾರೆ ಕಾಣುತ್ತಾರೆ, ತಾವು ಅನುಭವಿಸುತ್ತಾರೆ. ಹೀಗೆ ನಂತರದ ಕ್ಷಣಗಳು ಅವಳ ಮನಸನ್ನು ಸಂಪೂರ್ಣ ಬದಲಾಯಿಸುತ್ತದೆ. ಮುಂದೆ ತುಳಸಿ ಅಮ್ಮ ಬಾಬಾರ ವಿಧೇಯ ಭಕ್ತೆಯಾಗುತ್ತಾಳೆ. ಬಾಬಾರು ತುಳಸಿ ಮಾತೆಗೆ ‘ಆನಂದಿ’ ಶುಭ ನಾಮವಿಟ್ಟು ಅನುಗ್ರಹಿಸುತ್ತಾರೆ. ಇವರು ಭಗವಾನ್ ನಿತ್ಯಾನಂದರ ಸಾಮಿಪ್ಯದಲ್ಲಿ ಇದ್ದಾಗ, ಸ್ವಾಮಿಗಳು ಆಡಿದ ನುಡಿ ಮುತ್ತುಗಳನ್ನು ಆಗಿಂದಾಗ ಬರೆದಿಟ್ಟು, ಜೋಪಾನವಾಗಿ ಸಂಗ್ರಹಿಸಿ ಇಡುತ್ತಾರೆ. ಯೋಗ- ವೇದಾಂತ- ಆಧ್ಯಾತ್ಮಿಕತೆಯ ಸುಜ್ಞಾನದ ಒಗಟುಗಳಂತೆ ಇರುವ, ಬಾಬಾರ ವಾಣಿಯ ಸಂಗ್ರಹವನ್ನು ಗ್ರಂಥ ಸ್ವರೂಪ ನೀಡಲು ಅಮ್ಮ ಸಂಕಲ್ಪಿಸುತ್ತಾರೆ.
ಸಂಕಲ್ಪಿಸಿದಂತೆ ತುಳಸಿ ಅಮ್ಮರು ಗುರುದೇವರಿಂದ ಅನುಮತಿ, ಪಡೆದು ಕನ್ನಡದಲ್ಲಿ ಮುದ್ರಿಸುತ್ತಾರೆ. ಗ್ರಂಥಕ್ಕೆ ನಿತ್ಯಾನಂದರು “ಚಿದಾಕಾಶ ಗೀತಾ- ಆತ್ಮಪ್ರಭಾವ” ಎಂದು ಶುಭನಾಮವನ್ನು ಸೂಚಿಸುತ್ತಾರೆ. “ಚಿದಾಕಾಶ ಗೀತಾ- ಆತ್ಮಪ್ರಭಾವ” ಹೆಸರಿನಲ್ಲಿ ಗ್ರಂಥವು 1927 ರ ಶುಭದಿನದಲ್ಲಿ ಬಿಡುಗಡೆ ಪಡೆಯುತ್ತದೆ. ಜ್ಞಾನಾಮೃತದ ಈ ಅಮೂಲ್ಯ ಗ್ರಂಥವು ಆಂಗ್ಲ, ಹಿಂದಿ, ಮರಾಠಿ ಮಳಯಾಳಂ, ತಮಿಳು ಹೀಗೆ ಹಲವಾರು ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಚಿದಾಕಾಶ ಗೀತಾ ಗ್ರಂಥವು ಮಾನವಕುಲಕ್ಕೆ ಶಾಂತಿಮಾರ್ಗ, ಮಾನವನು ಅಧರ್ಮದಿಂದ ಧರ್ಮದಡೆಗೆ ನಡೆಯಲು, ಹಾಗೂ ಗುಣದೋಷಗಳ ಸರಿ ಪಡಿಸುವ ಆಧ್ಯಾತ್ಮ ದಿವ್ಯೌಷಧವಾಗಿದೆ. ಗುರುದೇವರು ಭೋಧಿಸಿರುವ ಸುಜ್ಞಾನಾಮೃತ ನೀತಿಸಾರವು ಈ ಹೊತ್ತಗೆಯಲ್ಲಿದೆ. ಅದಲ್ಲದೆ ತುಳುಸಿ ಅಮ್ಮನವರು ಹಲವು ಕೃತಿಗಳನ್ನು ಬರೆದಿದ್ದರೂ, ಅವರು ಲೇಖಕಿಯಾಗಿ ತಮ್ಮ ಹೆಸರನ್ನು ಉಲ್ಲೇಖಿಸಲಿಲ್ಲ. ಅವರು ಬರೆದ ಭಜನೆ ಪುಸ್ತಕ ‘ಆತ್ಮಸ್ಫುರಣ’ ವು ಅಮೂಲ್ಯ ಕೃತಿ ಎನಿಸಿಕೊಂಡಿದೆ. ತುಳಸಿ ಅಮ್ಮನವರು ಮಂಗಳೂರು ಮೂಲದವರು. ಅವರು ಮಂಗಳೂರು ಮಣ್ಣಗುಡ್ಡೆಯಲ್ಲಿ ಆನಂದಾಶ್ರಮವನ್ನು ಸ್ಥಾಪಿಸಿದ್ದಾರೆ.

LEAVE A REPLY

Please enter your comment!
Please enter your name here