ಚಂಚಲ ಮನಸ್ಸಿಗೊಂದು ಚೆಂದದ ಕಡಿವಾಣ

0
549

 
ಅರಿತುಕೋ ಬದುಕ ವೈಖರಿ ಅಂಕಣ: ಎಂ ಎಸ್ ಸಂಚನಾ
ನಮಗೆಲ್ಲರಿಗು ಬದುಕಲ್ಲೆನನ್ನಾದರು ಒಂದನ್ನು ಸಾಧಿಸುವ ಸಾಮಥ್ರ್ಯ ಇದ್ದೇ ಇದೆ.ಇನ್ನು ಅದೃಷ್ಠವಂತರಿಗಂತೂ ಆ ಸಾಧನೆಗೆ ಬೇಕಾದ ಸಕಲ ಸವಲತ್ತುಗಳು ಸಿಗುತ್ತಲೇ ಇರುತ್ತವೆ ಹಾಗು ಅವರ ಸಾಧನೆಗೆ ಬೆಂಬಲವಾಗಿ ನಿಲ್ಲುವವರಿಗೂ ಬರವಿರುವುದಿಲ್ಲ. ಇಷ್ಟದರೂ ಒಮ್ಮೊಮ್ಮೆ ನಾವು ನಿರೀಕ್ಷಿಸಿದ ಮಟ್ಟದಲ್ಲಿ ಆ ಸಾಧನೆಯು ನಮ್ಮಿಂದ ಸಾಧ್ಯವಾಗದೆ ಇರಬಹುದು. ಹಾಗಾದಗೆಲ್ಲ ಸಾಮಾನ್ಯವಾಗಿ ಅನಿಸುವುದೇನೆಂದರೆ ಸಾಧನೆಯ ಹಾದಿಯಲ್ಲಿ ಇರಬೇಕಾದ ಸಕಲವೂ ಇದ್ದೂ ಇರಬಾರದೊಂದು ಸೇರಿಕೊಂಡಿದ್ದರಿಂದಲೋ ಏನೋ ಸಾಧನೆಯು ಹಳ್ಳ ಹಿಡಿದಿವೆ ಎಂದು. ಹಾಗಾದರೆ ಆ ಸಾಧನೆಗೆ ತೊಡಕಾದದ್ದೇನೆಂದು ಯೋಚಿಸುತ್ತಿದ್ದೀರಾ? ಅದೇ ಚಂಚಲತೆ.
 
ಇಡೀ ಜಗತ್ತಿಂದು ಬದಲಾವಣೆಗೆ ಬಹಳ ಬೆಲೆ ಕೊಡುತ್ತದೆ. ಎಲ್ಲದರಲ್ಲೂ ಬದಲಾವಣೆ ಬೇಕೆಂದು ಬಯಸುವ ಮಂದಿಯೇ ಬಹಳಷ್ಟಿದ್ದಾರೆ. ಬದಲಾವಣೆ ಬೇಕು ನಿಜ , ಆದರೆ ಎಲ್ಲದರಲ್ಲೂ ಬೇಕಾ? ಯಾವಾಗಲೂ ಬೇಕಾ?ನಮ್ಮ ಮನಸ್ಸನ್ನೂ ನಿಮಿಷಕೊಮ್ಮೆ ಬದಲಾಯಿಸುತ್ತಿರುವ ಅವಶ್ಯಕತೆ ಇದೆಯಾ? ಹಾಗೆ ಮಾಡುತ್ತಿದ್ದರೆ ಗುರಿಯೆಡೆ ಸಾಗಲು ಆಡಚಣೆಯಾಗುವುದಿಲ್ಲವಾ? ಈ ರೀತಿ ಚಂಚಲವಾಗಿ ಚಲಿಸುವ ಚಿತ್ತವನ್ನು ಯಾರಾದರೂ ಮೆಚ್ಚಿಕೊಳ್ಳಲು ಸಾಧ್ಯವ?ಎಂಬೆಲ್ಲಾ ಪ್ರಶ್ನೆಗಳಿಗೆ ಚಂಚಲ ಚಿತ್ತದವರು ಸುಮ್ಮನೆ ಕುಳಿತು ಚಿಂತನೆ ನಡೆಸಿ ಉತ್ತರ ಕಂಡುಕೊಳ್ಳುವುದು ಒಳಿತು.
 
 
ಭಗವಧ್ಗೀತೆಯಲ್ಲಿ ಮನುಷ್ಯನ ಆರನೇ ಇಂದ್ರಿಯವೆಂದೇ ಭಾವಿಸುವ ಮನಸ್ಸಿನ ಚಂಚಲತೆಯ ಕುರಿತಂತೆ ಉಲ್ಲೇಖವಿದೆ.ಮನೋನಿಗ್ರಹದ ಬಗ್ಗೆ ಅಲ್ಲಿ ವಿಶೇಷವಾಗಿ ಬೆಳಕ ಚೆಲ್ಲಲಾಗಿದೆ.ಗೀತೆಯ ಆರನೇ ಅದ್ಯಾಯದಲ್ಲಿ ಅರ್ಜುನ ಕೃಷ್ಣನ ಬಳಿ ಹೇಳಿರುವುದೂ ಅದನ್ನೇ, ಮನಸ್ಸೆಂಬುದು ಗಾಳಿಯಂತೆ ತುಂಬಾ ಚಂಚಲ ಅದನ್ನು ನಿಗ್ರಹಿಸುವುದು ಅತ್ಯಂತ ಕಷ್ಟದ ಕೆಲಸ ಎಂದು. ಮಂಗ ಹೇಗೆ ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತಲೇ ಇರುತ್ತದೆಯೊ ಹಾಗೆ ನಮ್ಮ ಮನಸ್ಸು, ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಕ್ಷಣಮಾತ್ರದಲ್ಲಿ ಜಿಗಿಯಬಲ್ಲದು. ಮಂಗನಾದರೂ ಆಯತಪ್ಪಿ ಹಾಗೆ ದೂಪ್ಪೆಂದು ಬೀಳುವ ಸಂಭವ ತುಂಬಾ ಕಮ್ಮಿ, ಆ ಕ್ಷಣದಲ್ಲಿ ಮರದ ಕೊಂಬೆಯಾನ್ನಾದರೂ ಅದು ಆಧಾರವಾಗಿ ಹಿಡಿಯಬಲ್ಲದು,ಆದರೆ ಮನುಷ್ಯನ ಚಂಚಲ ಚಿತ್ತ ಹಾಗಲ್ಲ ನೋಡಿ , ಜೋಶ್ ನಿಂದ ಜಿಗಿಯುವಾಗ ಆಧಾರವ ಕಡೆಗಣಿಸಿ, ಅಂಗಾತ ಬಿದ್ದು ಆಘಾತ ಮಾಡಿಕೊಳ್ಳುವುದೇ ಜಾಸ್ತಿ.
 
ಎಷ್ಟೋ ಬಾರಿ ನಮಗೆ ನಮ್ಮ ಮನದಲ್ಲಿರುವ ಚಂಚಲತೆ ಎಂಬ ದೌರ್ಬಲ್ಯದ ಅರಿವೇ ಇರುವುದಿಲ್ಲ. ನೂರಾರು ಬಾರಿ, ನೂರಾರು ದಾರಿಯಲ್ಲಿ ನಿಂತು ಚಿಂತಿಸಿಯೂ ಕೊನೆಗೊಂದು ನಿಖರವಾದ ನಿರ್ಧಾರವ ತೆಗೆದುಕೊಳ್ಳಲಾಗದೆ ಕಣ್ಣೀರಿಡುವಂತಾದರೆ, ಆ ಕಣ್ಣೀರಿಗೆ ಕಾರಣ ತಮ್ಮ ಮನದ ಚಂಚಲತೆಯೂ ಇರಬಹುದು ಎಂದು ಎಷ್ಟೋ ಜನರಿಗೆ ಅನಿಸುವುದೂ ಇಲ್ಲ.
 
ನಿಜ, ನಮ್ಮ ಬದುಕಿನ ಎಲ್ಲಾ ಅವಸ್ಥೆಯಲ್ಲಿಯೂ ಚಂಚಲತೆಯ ಛಾಯೆಯೊಂದು ಇದ್ದೇ ಇದೆ. ಅದು ಬಾಲ್ಯವೇ ಇರಲಿ, ಯೌವನವೇ ಇರಲಿ, ಮುಪ್ಪೇ ಇರಲಿ ಮುಖ್ಯವಾಗಿ ಯೌವನದಲ್ಲಿ ಚಂಚಲತೆಯ ಛಾಯೆಯೊಡನೆ ಮಾಯೆಯ ಮಿಲನವಾಗುವುದರಿಂದ ಆ ಅವಸ್ಥೆಯಲ್ಲಿಯೇ ಅನೇಕ ಅವಾಂತರಗಳುನ್ನುಂಟಾಗುವುದು.
 
 
ಬೆರಳೆಣಿಕೆಯಷ್ಟು ಮಂದಿ ಮಾತ್ರ ತಮ್ಮ ಮನದಲ್ಲಿ ಚಂಚಲತೆಗೆ ಕಿಂಚಿತ್ತೂ ಜಾಗ ನೀಡಲಾರರು. ಮತ್ತುಳಿದವರ ಮನದಲ್ಲಿ ಅಷ್ಟೋ ಇಷ್ಟೋ ಚಂಚಲತೆಗೊಂಚೂರು ಜಾಗ ಉಂಟು, ಆದರೆ ಇನ್ನೂ ಕೆಲವರು ಅವರ ಮನದಲ್ಲಿ ಚಂಚಲತೆ ಒಂದನ್ನು ಬಿಟ್ಟು ಮತ್ತಿನ್ಯಾವುದಕ್ಕೂ ಮಣೆಹಾಕರು, ಹಾಗಾದರೆ ಅಂತವರ ಮನದಲ್ಲಿ ಚಂಚಲತೆಯು ಇಷ್ಟೊಂದು ಮೆರೆದಾಡಲು ಕಾರಣವೇನೆಂದು ಚಿಂತನೆ ನಡೆಸ ಹೊರಟಾಗ ಅನಿಸುವುದಿಷ್ಟು-ಯಾರಿಗೆ ತಮ್ಮ ಬದುಕಿನಲ್ಲಿ ತಮಗೇನು ಬೇಕು ಎಂಬ ಸ್ಪಷ್ಟ ಕಲ್ಪನೆ ಇರುವುದಿಲ್ಲವೋ ಅಂತವರ ಮನ ಚಂಚಲತೆಯಲ್ಲಿ ತೇಲಾಡುವುದು. ಅದಕ್ಕೊಂದು ಉದಾಹರಣೆ ನೀಡುವುದಾದರೆ ಈಗ ಒಬ್ಬ ವ್ಯಕ್ತಿಗೆ ಅವನ ಬದುಕಿನಲ್ಲಿ ನಿರ್ದಿಷ್ಟವಾದ ಗುರಿಯೆಂಬುದೊಂದು ಇಲ್ಲ ಎಂದುಕೊಳ್ಳಿ, ಇನ್ನೊಬ್ಬನ್ಯಾರೋ ಬಂದು ಒಂದು ಗುರಿಯನ್ನು ಆತನಿಗೆ ನಿಗದಿ ಪಡಿಸಿ ಆ ಕಡೆ ಈತನನ್ನು ದೂಡಿದಾಗ, ಗುರಿ ಇರದ ಆ ಮನುಷ್ಯ ಅದೇ ತನ್ನ ಗುರಿಯೆಂದು ಭಾವಿಸಿ ಆ ಕಡೆ ಓಡುತ್ತಾನೆ, ಆ ಸಂದರ್ಭದಲ್ಲಿ ಮತ್ತೊಬ್ಬನ್ಯಾರೋ ಬಂದು ಅದು ನಿನ್ನ ಗುರಿಯಲ್ಲ,ನಿನ್ನ ಗುರಿ ಬೇರೆಡೆ ಎಂದು ಬೇರೆ ಕಡೆ ಬೆರಳು ಮಾಡಿ ತೋರಿದರೆ, ಗುರಿ ಗೊತ್ತಿಲ್ಲದ ಆ ಮನುಷ್ಯ ಮತ್ತೊಬ್ಬ ತೋರಿದ ದಾರಿಯಡೆ ಮುಖಮಾಡುತ್ತಾನೆ. ಇದನ್ನೇ ತಾನೆ ಚಂಚಲತೆ ಎನ್ನುವುದು?
 
 
ಯಾರಿಗೆ ತಮ್ಮ ನಡೆ-ನುಡಿ, ಸಾಮಥ್ರ್ಯದ ಮೇಲೆ ಸಂಪೂರ್ಣ ನಂಬಿಕೆ, ಆತ್ಮವಿಶ್ವಾಸವಿರುವುದೋ, ಅಂತವರನ್ನು ಚಂಚಲತೆ ಅಷ್ಟಾಗಿ ಬಾಧಿಸದು. ಅದೇ ಯಾರಲ್ಲಿ ಅವುಗಳ ಬರವಿರುವುದೋ ಅಂತವರು ಮಾತ್ರ ಚಂಚಲತೆಯ ಕೈಯಲ್ಲಿ ಸಿಕ್ಕಿ ಬಾಡಿ ಬೆಂಡಾಗುವರು.ಸ್ವಂತ ನಿರ್ಧಾರ ಕೈಗೊಳ್ಳಲಾಗದ, ಬಲಿಷ್ಠರನ್ನು ಭಯದಿಂದಲೋ, ಆತ್ಮ ವಿಶ್ವಾಸದ ಕೊರತೆಯಿಂದಲೋ ಕಣ್ಮುಚ್ಚಿ ಅನುಸರಿಸುವ ಅನುಯಾಯಿಗಳ ಮನದಲ್ಲಿಯೂ ಚಂಚಲತೆಯ ಪ್ರಮಾಣ ತುಸು ಹೆಚ್ಚು. ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಲಾಗದ, ಅಭದ್ರತೆಯಲ್ಲೇ ಬದುಕಿನ ಬಂಡಿ ಸಾಗಿಸುವುವರ ಮನದಲ್ಲಿರುವ ಬೆಟ್ಟದಂತ ಚಂಚಲತೆಯಿಂದಾಗಿ ಬದುಕಲ್ಲಿ ಭವ್ಯತೆಯೇ ಇಲ್ಲದಂತಾಗುವುದು.
 
 
ಒಂದು ತಮಾಷೆಯ ಸಂಗತಿ ಏನು ಗೊತ್ತಾ?ಕೆಲವೊಮ್ಮೆ ಚಂಚಲತೆ ಎಂಬುದು ನಮ್ಮ ಸಮಸ್ಯೆ ಆಗಿರುವುದೇ ಇಲ್ಲ, ಕಾರಣ ಅದಕ್ಕೆ ನಾವು ನಮ್ಮ ಮನದೊಳಗೆ ಆಸ್ಪದವೇ ಕೊಟ್ಟಿರುವುದಿಲ್ಲ, ಹೀಗಿದ್ದರೂ ಕೆಲವರು ನಮ್ಮ ಹಣೆಯ ಮೇಲೆ ಈತ ಚಂಚಲಚಿತ್ತದವ ಎಂದು ಹಣೆಪಟ್ಟಿ ಹಚ್ಚುತ್ತಾರೆ. ಆ ರೀತಿ ಎಡವಟ್ಟಾಗಲು ಕಾರಣವೇನು ಹೇಳಿ? ಕಾರಣ ವಿಷ್ಟೇ ಪ್ರತಿಯೊಬ್ಬರ ಮನವು ಒಂದು ಅನನ್ಯ ರೀತಿಯಲ್ಲಿ ಚಿಂತನೆ ಸಡೆಸುತ್ತಲೇ ಇರುತ್ತದೆ, ಕೆಲವರು ತಮ್ಮ ಆ ಆಸೆ, ಆಕಾಂಕ್ಷೆ ಚಿಂತನೆಗಳನ್ನು ಇತರರೊಂದಿಗೆ ಹಂಚಿ ಕೊಳ್ಳುತ್ತಾರೆ. ಇನ್ನೂ ಕೆಲವರು ಅಪ್ಪಿ ತಪ್ಪ್ಪಿಯೂ ಅವುಗಳ ಕುರಿತಂತೆ ಬಾಯಿ ಬಿಡುವುದಿಲ್ಲ. ಈ ಎರಡು ಬಗೆಯ ಜನರಲ್ಲಿ ಮೊದಲಿನ ಗುಂಪಿನವರನ್ನೇ ಎಲ್ಲರೂ ಚಂಚಲ ಮನದವರೆಂದು ಭಾವಿಸುವುದು, ಏಕೆಂದರೆ ಅವರು ಹೇಳಿಕೊಂಡಂತೆ ತಮ್ಮಾಸೆಯನ್ನು ಈಡೇರಿಸಿಕೊಳ್ಳಲು ಹಿಡಿಯುವ ಅನೇಕ ಹಾದಿಗಳು, ಕೆಲವೊಮ್ಮೆ ಆ ಆಸೆ ಈಡೇರದೆ ನಿರಾಸೆ ಅನುಭವಿಸುವುದು. ಅದರೆ ಎರಡನೇ ಗುಂಪಿನವರಿಗೆ ಆ ಚಿಂತೆ ಇಲ್ಲ, ಅವರ ಆಸೆ ಕೈಗೂಡದೆ ಹೋದರು ಅವರನ್ನು ಯಾರೂ ಚಂಚಲ ಚಿತ್ತದವರೆನ್ನರು ಕಾರಣ, ಅವರ ಆಸೆಯ ಕುರಿತಂತೆ ಯಾರಿಗೆ ಅರಿವಿರುತ್ತದೆ ಹೇಳಿ?
ಮನದ ನೆಮ್ಮದಿಯನ್ನು ನುಚ್ಚುನೂರು ಮಾಡಬಲ್ಲ ಚಂಚಲತೆಯಿಂದ ತಪ್ಪಿಸಿಕೊಳ್ಳಲು ಪ್ರಮಾಣಿಕ ಪ್ರಯತ್ನ ಬೇಕು.ತುಂಬಾ ಸರಳವಾಗಿ ತಿಳಿಯುವುದಾದರೆ ಮೊದಲು ನಮ್ಮೊಳಗಿರುವ ಲೋಪ ದೋಷಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮನಸಿಗೆ ಶಾಂತಿಯ ನೀಡಬೇಕು, ಯಾವುದರಲ್ಲಿಯೂ ಅತಿ ಇರಕೂಡದು, ಸಕಾರಾತ್ಮಕ ಭಾವವು ಬಲಿಷ್ಠಗೊಳ್ಳುವಂತೆ ನೋಡಿಕೊಳ್ಳಬೇಕು,ಏಕಾಗ್ರತೆಯೇ ಚಂಚಲತೆಯನ್ನು ಹೊಡೆದುರುಳಿಸಲು ಇರುವ ಬ್ರಹ್ಮಾತ್ತ್ರ ಎಂಬ ಅರಿವೊಂದು ಸಾಕು.
ಎಂ ಎಸ್ ಸಂಚನಾ
[email protected]

LEAVE A REPLY

Please enter your comment!
Please enter your name here