ಗ್ರಾಮ್ಯ ಸಮಸ್ಯೆಗೆ ಹೈಟೆಕ್ ಉತ್ತರ

0
783

 
ವಾರ್ತೆ ಎಕ್ಸ್ಕ್ಲೂಸಿವ್ : ಹರೀಶ್ ಕೆ.ಆದೂರು.
ಇದು ಯುವ ವಿಜ್ಞಾನಿಗಳ ಸಾಧನೆ
ಸ್ವಚ್ಛಭಾರತದ ಕಲ್ಪನೆ ಯುವ ಜನತೆಯಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನೇ ಬೀರಿದೆ. ಎಲ್ಲೆಂದರಲ್ಲಿ ಯುವ ಜನತೆ , ಯುವ ಸಂಘಟನೆಗಳು ಸ್ವಚ್ಛತೆಯ ಮಂತ್ರ ಪಠಿಸುತ್ತಿದ್ದಾರೆ. ಏತನ್ಮಧ್ಯೆ ಇಬ್ಬರು ಯುವಕರು ಇಡೀ ರಾಷ್ಟ್ರಕ್ಕೇ ಪ್ರಯೋಜನವಾಗುವಂತಹ `ಸ್ವಚ್ಛತಾ ಯಂತ್ರವೊಂದನ್ನು’ ಅನ್ವೇಷಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದು ಯುವ ಮನಸ್ಸಿನ ಸಾಧನೆಯ ಯಶೋಗಾಥೆ.
 
mood_mahaveer col1
 
ಹೌದು ತ್ಯಾಜ್ಯ ಎಂಬುದು ಮನೆಯಿಂದ ತೊಡಗಿ ಪಟ್ಟಣ, ರಾಜ್ಯ, ರಾಷ್ಟ್ರದ ತನಕವೂ ದೊಡ್ಡ ಸಮಸ್ಯೆ ಎಂಬಂತಾಗಿದೆ. ಈ ತ್ಯಾಜ್ಯದ ವಿಲೇವಾರಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಗರ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ಮಹಾನಗರ ಪಾಲಿಕೆಗಳಲ್ಲಿ ಈ ತ್ಯಾಜ್ಯ ವಿಲೇವಾರಿಗೆ ಸರಿಯಾದ ನೌಕರರ ಸಮಸ್ಯೆ, ನೌಕರರಿದ್ದರೂ ವೇತನದ ಸಮಸ್ಯೆ, ಅಷ್ಟೆಲ್ಲಾ ಆದರೂ ತ್ಯಾಜ್ಯ ವಿಂಗಡಣೆಯ ಸಮಸ್ಯೆ ಇವಕ್ಕೆಲ್ಲ ಪರಿಹಾರ ಸಿಕ್ಕರೂ ಯಂತ್ರೋಪಕರಣಗಳ ಸಮಸ್ಯೆ ದೊಡ್ಡ ತಲೆನೋವಾಗಿದೆ. ತ್ಯಾಜ್ಯ ವಿಂಗಡಣೆಗೆ 25ರಿಂದ 30ಲಕ್ಷ ವೆಚ್ಚಮಾಡಿ ಯಂತ್ರೋಪಕರಣಗಳನ್ನು ತಂದರೂ ಅದಕ್ಕೆ ಆಪರೇಟರ್ ಬೇಕೆಂಬುದು ಮತ್ತೊಂದು ಸಮಸ್ಯೆ. ಅದರಲ್ಲಿ ತಾಂತ್ರಿಕ ದೋಷಗಳಿದ್ದರೆ ರಿಪೇರಿಯ ಸಮಸ್ಯೆ. ಒಟ್ಟಿನಲ್ಲಿ ಅದೊಂದು ದೊಡ್ಡ `ಬಿಡಿಸಲಾರದ ಕಗ್ಗಂಟಿನಂತೆ’ ಎಂಬಂತಹ ಸ್ಥಿತಿ ಪ್ರತಿಯೊಂದು ಕಡೆಗಳಲ್ಲೂ ಅನುಭವಿಸುತ್ತಿರುವುದು ಸ್ಪಷ್ಟ. ಈ ಸಮಸ್ಯೆಗಳು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ಅದರ ಪರಿಣಾಮವೇ ಮಾನವ ರಹಿತ `ಆಟೋಮೆಟಿಕ್ ಪ್ಲಾಸ್ಟಿಕ್ ಡಿಸ್ಪೋಸಲ್ ಮೆಷಿನ್ ಅಂಡ್ ಮಲ್ಟಿಟೂಲ್ ಯಂತ್ರ’ದ ಆವಿಷ್ಕಾರ.
mood_mahaveer col5
 
mood_mahaveer col3
ವಿದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ತರಹೇವಾರಿ ಯಂತ್ರಗಳಿವೆಯಾದರೂ ಈ ಮಾದರಿಯ ಯಂತ್ರಗಳಿನ್ನೂ ಬಂದಿಲ್ಲ. ಮಾನವ ರಹಿತವಾಗಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆ. ರಸ್ತೆ ಸೇರಿದಂತೆ ಎಲ್ಲೆಂದರಲ್ಲಿಗೆ ಸಂಚರಿಸುತ್ತದೆ.ಒಣ ತ್ಯಾಜ್ಯ, ಪ್ಲಾಸ್ಟಿಕ್, ಹಸಿ ತ್ಯಾಜ್ಯಗಳು ಹೀಗೆ ಪ್ರತ್ಯೇಕ ಪ್ರತ್ಯೇಕವಾಗಿ ಸ್ವಯಂ ವಿಂಗಡಣೆ ಮಾಡುತ್ತದೆ. ಇಷ್ಟೇ ಅಲ್ಲದೆ ಗಾಜುಗಳಿದ್ದರೆ ಅದನ್ನು ಪ್ರತ್ಯೇಕಿಸಿ ಸಂಗ್ರಹಿಸುತ್ತದೆ. ಪ್ರತ್ಯೇಕಿಸಿದ ತ್ಯಾಜ್ಯಗಳನ್ನು ನಿರ್ದಿಷ್ಟ ಜಾಗದಲ್ಲಿ ಆ ಯಂತ್ರವೇ ಹಾಕುವ ಕಾರ್ಯವನ್ನೂ ಮಾಡುತ್ತದೆ. ಯಂತ್ರ ಸೋಲಾರ್ ಪವರ್ ಮೂಲಕ ಕಾರ್ಯನಿರ್ವಹಿಸುತ್ತದೆ.
ಮೂಡಬಿದಿರೆಯ ಎಸ್.ಎನ್.ಎಂ ಪಾಲಿಟೆಕ್ನಿಕ್ ಕಾಲೇಜಿನ ಇ ಎಂಡ್ ಸಿ ಇಂಜಿನಿಯರಿಂಗ್ ವಿಭಾಗದ ಸನತ್ ರಾಜ್ ಹಾಗೂ ಧೀಕ್ಷಿತ್ ಕುಮಾರ್ ಈ ಯಂತ್ರವನ್ನು ಅನ್ವೇಷಣೆ ಮಾಡಿದ್ದಾರೆ. ಐ.ಆರ್.ಡಿಟೆಕ್ಟರ್, ಸೆನ್ಸಾರ್ ಗಳನ್ನು ಬಳಸಿ ಇದು ಕಾರ್ಯನಿರ್ವಹಣೆ ಮಾಡುವುದರಿಂದ ಯಾವುದೇ ರೀತಿಯಲ್ಲಿ ಮಾನವ ಶ್ರಮದ ಅವಶ್ಯಕತೆ ಇರುವುದಿಲ್ಲ. ಸಂಪೂರ್ಣ ತಂತ್ರಜ್ಞಾನವನ್ನು `ಸರ್ಕ್ಯೂಟ್ ಬೋರ್ಡ್ ‘ಗಳ ಮೂಲಕವೇ ನಿರ್ಮಿಸಲಾಗಿದೆ. ಯಾವುದೇ ರೀತಿಯ ತಾಂತ್ರಿಕ ತೊಂದರೆಗಳು ಬಂದರೆ ಕೇವಲ `ಐ.ಸಿ’ ಬದಲಾವಣೆ ಮಾಡಿದರೆ ಸಾಕಾಗುತ್ತದೆ. ಹಾಗಾಗಿ ದೊಡ್ಡ ಮೊತ್ತದ ಸರ್ವೀಸ್ ವೆಚ್ಚವೂ ಇದಕ್ಕೆ ಬರುವುದಿಲ್ಲ ಎಂಬ ವಿಶ್ವಾಸದ ನುಡಿಗಳನ್ನಾಡುತ್ತಾರೆ.
30ಮಿಷನ್ ಗಳನ್ನು ಒಂದು ಕಂಟ್ರೋಲ್ ರೂಮಿನ ಮೂಲಕ ನಿಭಾಯಿಸಬಹುದಾಗಿದೆ. ಕೇವಲ ಇಬ್ಬರು ಆಪರೇಟರ್ ಗಳು ಇದ್ದರೆ ಇಡೀ ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಯನ್ನು ಕೂತಲ್ಲಿಂದಲೇ ವ್ಯವಸ್ಥೆ ಮಾಡಬಹುದು ಎಂಬುದು ಅವರ ಅಭಿಪ್ರಾಯ. ಈಗ ಕೇವಲ 10ಸಾವಿರ ರುಪಾಯಿ ಮಿತಿಯೊಳಗಿನ ಸಣ್ಣ ಮಟ್ಟದ ಯಂತ್ರವನ್ನು ತಯಾರಿಸಿದ್ದಾರೆ. ಗರಿಷ್ಠ 1ಲಕ್ಷ ಮೊತ್ತದಲ್ಲಿ ಉನ್ನತ ಸಾಮಥ್ರ್ಯದ ಪರಿಣಾಮಕಾರಿ ಯಂತ್ರವನ್ನು ತಯಾರಿಸಬಹುದೆಂದು ಹೊಸದಿಗಂತ ಸಂಗಮಕ್ಕೆ ತಿಳಿಸಿದ್ದಾರೆ. ಈ ಯಂತ್ರ ತ್ಯಾಜ್ಯ ಸಂಗ್ರಹಣೆ ಮಾಡುವುದಲ್ಲದೆ ಅದನ್ನು ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಕೂಡಾ ಮಾಡಬಲ್ಲದು. ಸೋಲಾರ್ ತಂತ್ರಜ್ಞಾನ ಬಳಸಿದ ಹಿನ್ನಲೆಯಲ್ಲಿ ಪರಿಸರಕ್ಕೆ ಯಾವುದೇ ರೀತಿಯ ಮಾಲಿನ್ಯವಿಲ್ಲ. ಶಬ್ಧಮಾಲಿನ್ಯಕ್ಕೂ ಅವಕಾಶವಿಲ್ಲ ಎಂದು ಹೇಳುತ್ತಾರೆ.
 
Exif_JPEG_420
ಇಂದು ಕೂಲಿ ಕಾರ್ಮಿಕ ಸಮಸ್ಯೆ ಗ್ರಾಮದಿಂದ ಹಿಡಿದು ನಗರದ ತನಕ ವ್ಯಾಪಿಸಿದೆ. ಕೃಷಿಕರಂತೂ ಕಾರ್ಮಿಕರಿಲ್ಲದೆ ಕಂಗೆಡುತ್ತಿದ್ದಾರೆ. ಈ ಸಮಸ್ಯೆಯ ಪರಿಹಾರಕ್ಕೆ ಕೃಷಿ ಮೂಲದ ಕುಟುಂಬದಿಂದ ಬಂದಂತಹ ಪ್ರಮೀತ್ ಶೆಟ್ಟಿ ಹಾಗೂ ವೆಂಕಟೇಶ್ ಪ್ರಭು ಸುಲಭ ಉಪಾಯವನ್ನು ಕಂಡುಕೊಂಡಿದ್ದಾರೆ. ಕೃಷಿಯೇ ದೇಶದ ಬೆನ್ನೆಲುಬು. ಆದರೆ ಕೃಷಿ ಮಾಡಲು, ಮಾಡಿದ ಕೃಷಿಯನ್ನು ರೈತ ಪಡೆಯಲು ಸಂಕಷ್ಟ ಪಡುತ್ತಿದ್ದಾನೆ. ಕೃಷಿಕರ ನೋವನ್ನು ಮನೆಯಲ್ಲೇ ಕಂಡು ನೊಂದ ವಿದ್ಯಾರ್ಥಿಗಳು ಕೃಷಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ `ಅಟೋಮೇಟೆಡ್ ಕೋಕನಟ್ ಪ್ಲಕ್ಕರ್ ವಿತ್ ಕ್ಯಾಮರಾ’ ಎಂಬ ವಿಶೇಷ ಯಂತ್ರವನ್ನು ಆವಿಷ್ಕಾರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದು ಅಕ್ಷರಶಃ ಕೃಷಿಕರ ಪಾಲಿಗೆ ವರದಾನ. ಅಡಿಕೆ ಮರವಿರಲಿ, ತೆಂಗಿನ ಮರವಿರಲಿ ಈ ಯಂತ್ರಕ್ಕೆ ಸಮಸ್ಯೆಯೇ ಅಲ್ಲ. ಎಷ್ಟೇ ಎತ್ತರ ಮರವನ್ನಾದರೂ ಇದು ತಾನಾಗಿಯೇ ಏರಬಲ್ಲದು. ಮರದ ಸುತ್ತಳತೆ ಈ ಯಂತ್ರಕ್ಕೆ ಸಮಸ್ಯೆಯಾಗದು. ಅಡಿಕೆ,ತೆಂಗಿನ ಕೊಯ್ಲಿಗೆ ಈ ಯಂತ್ರ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದಾಗಿದೆ. ಅಡಿಕೆಗೆ ಔಷಧಿ ಸಿಂಪಡಣೆಗೂ ಇದನ್ನು ಬಳಸುವ ರೀತಿಯಲ್ಲಿ ವಿನ್ಯಾಸ ಗೊಳಿಸಲಾಗಿದೆ.ಗೊನೆಯಲ್ಲಿರುವ ಕೆಲವು ಕಾಯಿಗಳನ್ನಷ್ಟೇ ಕೀಳಬೇಕು ಎಂದಾದರೂ ಇದರಲ್ಲಿ ವ್ಯವಸ್ಥೆಯಿದೆ. 12ವೋಲ್ಟ್ ಬ್ಯಾಟರಿಯಿಂದ ಚಾಲನೆಗೊಳ್ಳುವ ಈ ಯಂತ್ರ ಒಂದು ಬಾರಿ ಬ್ಯಾಟರಿ ಫುಲ್ ಚಾರ್ಜ್ ಮಾಡಿದರೆ 150ಮರಗಳಿಂದ ಕಾಯಿ ಕೀಳುವ ಸಾಮಥ್ರ್ಯ ಹೊಂದಿದೆ. ಅನಕ್ಷರಸ್ಥರಿಗೂ ಯಾವುದೇ ರೀತಿಯಲ್ಲಿ ತೊಂದರೆಯುಂಟಾಗಬಾರದೆಂಬ ದೃಷ್ಠಿಯಿಂದ ಮನೆಗಳ ವಿದ್ಯುತ್ ದೀಪಗಳಿಗೆ ಬಳಸುವ `ಹೋಮ್ ಸ್ವಿಚ್ಛಸ್’ಗಳನ್ನೇ ಈ ಯಂತ್ರಕ್ಕೂ ಅಳವಡಿಸಲಾಗಿದೆ. ಯಂತ್ರದಲ್ಲಿರುವ ಕ್ಯಾಮರಾ ಲೆನ್ಸ್ `ಸ್ಮಾರ್ಟ್ ಫೋನ್’ಗೆ ಸಿಗ್ನಲ್ ರವಾನೆಮಾಡುವ ಮೂಲಕ ಡಿಸ್ಪ್ಲೇ ಮೂಲಕ ಮರದ ತುತ್ತ ತುದಿಯ ಚಿತ್ರಗಳನ್ನೂ , ಗೊನೆ, ಕಾಯಿಗಳ ವೀಕ್ಷಣೆಯನ್ನೂ ಸುಲಭದಲ್ಲಿ ಮಾಡಬಹುದಾಗಿದೆ.
 
mood_mahaveer col
 
ರವಿಕೀರ್ತನ್ ಪೈ ಹಾಗು ಗಣೇಶ್ ಪ್ರಸಾದ್ ಡೈನಾಮಿಕ್ ಟೈಂ ಟೇಬಲ್ ಜನರೇಟರ್ ಎಂಬ ಹೊಸ ರೀತಿಯ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು ಶಾಲಾ ಕಾಲೇಜುಗಳ ವೇಳಾ ಪಟ್ಟಿಗೆ ಅತ್ಯಂತ ಅನುಕೂಲವಾಗಲಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಉಂಟಾಗುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನ ಯಂತ್ರೋಪಕರಣಗಳ ಮೂಲಕ ಉತ್ತರ ನೀಡಬಹುದೆಂಬುದನ್ನು ಯುವ ವಿಜ್ಞಾನಿಗಳು ಸಾಧಿಸಿದ್ದಾರೆ.
 
mood_mahaveer col2
 
 
 
ವಿದ್ಯಾರ್ಥಿಗಳ ಶ್ರಮ ಶ್ಲಾಘನಾರ್ಹ
ವಿದ್ಯಾರ್ಥಿಗಳು ಅವರವರ ಸುತ್ತುಮುತ್ತಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಾಗ ದೊಡ್ಡ ರೀತಿಯ ಫಲಿತಾಂಶದ ಅನಾವರಣವಾಗುತ್ತದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಈ ಸಾಧನೆ ಕೇವಲ ಪ್ರಾಜೆಕ್ಟ್ ಗೆ ಸೀಮಿತವಾಗಬಾರದೆಂಬ ದೃಷ್ಠಿಯಿಂದ ಮುಂದಿನ ಅಕಾಡೆಮಿಕ್ ವರ್ಷ ಪ್ರಾರಂಭದಲ್ಲೇ ವಿದ್ಯಾರ್ಥಿಗಳು ತಯಾರಿಸಿದ ಡೈನಾಮಿಕ್ ಟೈಂ ಟೇಬಲ್ ಜನರೇಟರ್ ನ್ನು ನಮ್ಮ ಕಾಲೇಜಿನಲ್ಲೇ ಪ್ರಥಮವಾಗಿ ಅಳವಡಿಸುತ್ತೇವೆ ಎಂದವರು ವಾರ್ತೆ.ಕಾಂಗೆ ತಿಳಿಸಿದ್ದಾರೆ.
– ಜೆ.ಜೆ.ಪಿಂಟೋ, ಪ್ರಾಂಶುಪಾಲರು.
j j pinto
 
 
ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಚಿಂತನೆಗಳು ಹುಟ್ಟುವ ರೀತಿಯಲ್ಲಿ ಅವರಲ್ಲಡಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ನಮ್ಮ ಕ್ಲಬ್ ಕಾರ್ಯನಿರ್ವಹಿಸುತ್ತದೆ.
ಡಾ.ಗುರುದಾಸ್, ಕೋ ಆರ್ಡಿನೇಟರ್ , ಇನ್ನೋವೆಟಿವ್ ಕ್ಲಬ್
gurudas

LEAVE A REPLY

Please enter your comment!
Please enter your name here