ಗ್ಯಾಸ್ ಲೈಟ್ ನಿಂದ ಟಪ್ ತಲೆಗೆ ಎಸೆದು ಹೊಡೆದರು !

0
1152

ನಿತ್ಯ ಅಂಕಣ-೮೮ : ತಾರಾನಾಥ್‌ ಮೇಸ್ತ, ಶಿರೂರು.
ಗಣೇಶಪುರಿ ಇಲ್ಲಿ ಭಕ್ತರಿಗೆ ಅನ್ನದಾನ, ಶಾಲಾ ಮಕ್ಕಳಿಗೆ ಬಾಲಭೋಜನ ಸೇವಾ ಕಾರ್ಯಗಳನ್ನು ನಿತ್ಯಾನಂದ ಸ್ವಾಮಿಗಳು ನಡೆಸುತ್ತಿದ್ದರು. ಗುರುದೇವರ ಭಕ್ತರು ಧವಸ ಧಾನ್ಯ ಮೊದಲಾದ ಪಡಿತರ ಸಾಮಾಗ್ರಿಗಳನ್ನು ದಾನವಾಗಿ ನೀಡುತ್ತಿದ್ದರು. ಒಮ್ಮೆ ಮುಂಬೈಯ ಭಕ್ತರೊಬ್ಬರು ಅನ್ನದಾನಕ್ಕೆ ಬೇಕಾಗಿರುವ ದಿನಸಿ ಸಾಮಾಗ್ರಿಗಳನ್ನು ಸರಕು ಸಾಗಟದ ಲಾರಿಯಲ್ಲಿ ಕಳಿಸಿಕೊಟ್ಟಿದ್ದರು. ಬಂದಿರುವ ಲಾರಿಯ ಚಾಲಕ ಉದ್ಧಟತನದಿಂದ ವರ್ತಿಸುತ್ತಿದ್ದ. ಬೀಡಿ ಸೇದುತ್ತಾ ಹೊಗೆ ಬಿಡುತ್ತ, ಅಹಂ ಭಾವದ ವರ್ತನೆ ತೋರಿಸಿದ. ಇಲ್ಲಿ ಸ್ವಾಮಿ ಎಂದರೆ ಯಾರು..? ನನಗೆ ಮುಂಬೈಗೆ 2-30 ಗಂಟೆಗೆ ತಲುಪಬೇಕಾಗಿದೆ. ಬೇಗ ಬೇಗ ಸಾಮಾನುಗಳನ್ನು ಖಾಲಿ ಮಾಡಬೇಕು. ಹೀಗೆಂದು ಅವಸರದ ನಡವಳಿಕೆ ತೋರಿಸಿದ. ನಿತ್ಯಾನಂದರು ಅಲ್ಲಿಯೇ ಕುಳಿತಿದ್ದರು. ಚಾಲಕನ ಉದ್ದಟತನದ ವರ್ತನೆಗಳನ್ನು ಕಣ್ಣಾರೆ ಕಂಡರು. ಆದರೆ ಒಂದು ಶಬ್ದವು ಮಾತನಾಡದೆ ಶಾಂತರಾಗಿದ್ದರು. ನಿತ್ಯಾನಂದರು ಅಲ್ಲಿದ್ದ ಇತರ ಭಕ್ತರಲ್ಲಿ ಅವನಿಗೆ 2- 30 ಕ್ಕೆ ಮುಂಬೈ ತಲುಪಬೇಕಾಗಿದೆ, ಎಲ್ಲಾ ಸಾಮಾನುಗಳನ್ನು ಬೇಗನೆ ಇಳಿಸಿಬಿಡಿ, ಅವನು ಹೋಗಲಿಯಂತೆ, ಎಂದು ಆಜ್ಞೆ ಇತ್ತರು.
ಸ್ವಾಮಿಗಳು ಹೇಳಿದಂತೆ ಲಾರಿಯಲ್ಲಿದ್ದ ಸಾಮಾಗ್ರಿಗಳನ್ನು ಇಳಿಸಲಾಯಿತು. ಭಕ್ತರು ಸಾಮಾಗ್ರಿಗಳನ್ನು ಇಳಿಸುವಾಗಲು, ಲಾರಿ ಚಾಲಕ ಬೇಗ ಹೋಗಬೇಕು ಎಂದು ಬೈಯುತ್ತಿದ್ದ. ಲಾರಿ ಬರುವಾಗಲೇ ತಡವಾಗಿ ತಲುಪಿತ್ತು. ಎಷ್ಟು ಬೇಗ ಸಾಮಾನುಗಳನ್ನು ಖಾಲಿ ಮಾಡಿದರೂ, ಲಾರಿ ವೇಗದಲ್ಲಿ ಚಲಿಸದರೂ ಮುಂಬೈಗೆ 2-30 ಗಂಟೆಗೆ ತಲುಪಲು ಚಾಲಕನಿಗೆ ಅಸಾಧ್ಯದ ಮಾತಾಗಿತ್ತು. ಆದರೂ ಭಕ್ತರು ಲಾರಿಯಲ್ಲಿದ್ದ ಸಾಮಾಗ್ರಿಗಳನ್ನು ಇಳಿಸಿ ಚಾಲಕನಿಗೆ ಬೇಗನೆ ಹೋಗಲು ಅವಕಾಶ ಮಾಡಿಕೊಟ್ಟರು. ಲಾರಿ ಚಾಲಕ ಗಣೇಶಪುರಿಯ ಗಡಿಯನ್ನು ದಾಟಿಸಿಯಾಗಿದೆ. ಆವಾಗಲೇ ಇದ್ದಕಿದ್ದಂತೆ ಲಾರಿಯ ಯಂತ್ರದಲ್ಲಿ ಬೆಂಕಿ ಕಾಣಿಸಿಕೊಂಡಿತು. ಚಾಲಕ ಹೆದರಿಕೊಂಡು ಲಾರಿ ನಿಲ್ಲಿಸಿದ. ಬೆಂಕಿ ದಹಿಸುವ ಪ್ರಮಾಣವು ಹೆಚ್ಚತೊಡಗಿತು. ಬೆಂಕಿ ನಂದಿಸುವ ಪರಿಕರಗಳು ಸನಿಹ ಇರಲಿಲ್ಲ. ಚಾಲಕನು ಅಸಹಾಯಕನಾಗ ಬೇಕಾಯಿತು. ಲಾರಿಯು 2-30 ಗಂಟೆಯೊಳಗೆ ಭಸ್ಮಹೊಂದಿತು. ನಂತರದಲ್ಲಿ ಚಾಲಕ ತಾನು ನಿತ್ಯಾನಂದರ ಸಾನಿಧ್ಯದಲ್ಲಿ ಉಡಾಫೆಯಾಗಿ ಮಾತನಾಡಿದರ ಫಲ ಇದೆಂದು ತಿಳಿದು, ನಿತ್ಯಾನಂದರ ಬಳಿಗೆ ಬಂದು ಚರಣಗಳಿಗೆ ಬಿದ್ದು ಕ್ಷಮೆಯಾಚಿಸಿದನು. ಆದರೆ ಕಾಲವು ಮಿಂಚಿ ಹೋಗಿತ್ತು.!
ಈ ಘಟನೆಯ ಕುರಿತಾಗಿ ಆಧ್ಯಾತ್ಮ ಚಿಂತಕರಾದ ಹರಿಕೃಷ್ಣ ರಾವ್ ಸಗ್ರಿ ಅವರಲ್ಲಿ ಚರ್ಚಿಸಿದೆ. ಅವರು ಸುಜ್ಞಾನದ ನೀತಿಸಾರವನ್ನು ಈ ಕೆಳಗಿನಂತೆ ಉಣಬಡಿಸಿದರು. ಮನುಷ್ಯನಿಗೆ ಸಹನೆ ಮತ್ತು ಪ್ರೀತಿ ನಗುವಿನ ಸೇವಾಭಾವ ಅತಿ ಅಗತ್ಯ. ತನ್ನ ಉದ್ಯೋಗ ಯಾವುದೇ ಇರಲಿ. ಅಲ್ಲಿ ಪ್ರಶಾಂತ ಭಾವದಿಂದ ಯಾರ ಮನಸ್ಸಿಗೂ ನೋವು ತರದೇ ಕರ್ತವ್ಯವನ್ನು ನಿರ್ವಹಿಸಬೇಕು. ಅದಕ್ಕೆ ಕೆಲಸವೇ ಪೂಜೆ, ಕಾಯಕವೇ ಕೈಲಾಸ ಇತ್ಯಾದಿ ಉಕ್ತಿಗಳು ಜಗಜನಿತ. ಈ ಕಾಲಕ್ಕೆ ವೈದ್ಯರು, ಪೋಲಿಸ್, ಸಮಾಜಸೇವಕರು ನಮಗೆ ಆದರ್ಶ. ಅವರು ಕೋಪಿಷ್ಠರಾದರೆ ಸಮಾಜದ ಪರಿಸ್ಥಿತಿ ಹೇಗಾಗಬಹುದೆಂದು ಊಹಿಸಲು ಅಸಾಧ್ಯ. ಆಶ್ರಮಕ್ಕೆ ಸಾಮಾನು ಸಾಗಿಸುವುದೆಂದರೆ ಪುಣ್ಯ. ಪುಣ್ಯ ಕ್ಷೇತ್ರದ ಅರಿವು ಇಲ್ಲದವರು ಅಲ್ಲಿಯೂ ಜಗಳ ಕಾಯುತ್ತಾರೆ.. ಯಾತ್ರೆಗೆ ಬಂದವರಿಂದ ದೋಚುತ್ತಾರೆ. ಗಲೀಜು ಮಾಡುತ್ತಾರೆ. ಇಂತಹ ಜನರ ಬುದ್ಧಿಯನ್ನು ನಿತ್ಯಾನಂದರು ತಿದ್ದುತ್ತಿದ್ದರು. ಅವರ ಬಳಿ ಇರುತ್ತಿದ್ದ ಕಲ್ಲು ಅಥವಾ ಯಾವುದೇ ವಸ್ತುವನ್ನು ಎಸೆದು ಸರಿ ಪಡಿಸುತ್ತಿದ್ದರು.
ಪಶ್ಚಾತ್ತಾಪ ಮತ್ತು ಶರಣಾಗತಿಗೆ ಅವಕಾಶ ಕೊಟ್ಟು ಗಂಗಾಮಾತೆ ಜಗಜ್ಜನನಿಯಂತೆ ಅವರ ವಂಶವನ್ನೇ ಉದ್ಧರಿಸುತ್ತಿದ್ದರು. ಗೀತೆಯಲ್ಲಿ ‘ವಿನಾಶಾಯ ದುಸ್ಕೃತಾಂ’. ಅಂದರೆ ಕೆಟ್ಟದನ್ನು ಮಾಡುವರ ದುಷ್ಟರ ಸಂಹಾರಕ್ಕೆ ಅವತಾರ ಎಂದಿದೆ. ಆದರೆ ಸದ್ಗುರು ಅವತಾರ ಮನುಷ್ಯನೊಳಗಿನ ದುಷ್ಟ ಗುಣದ ನಾಶಕ್ಕೆ ಆಗಿದೆ. ದುಷ್ಟಗುಣ ಮಾತ್ರವಲ್ಲ ದುಷ್ಟ ಕರ್ಮಫಲದಿಂದ ಮಾನವನಿಗೆ ರೋಗಗಳು ಬರುತ್ತದೆ. ಅದನ್ನು ವಿಶಿಷ್ಟ ವಿಧಾನದಿಂದ ಬಗೆಹರಿಸುತ್ತಿದ್ದರು. ಒಲೆಯ ಕಟ್ಟಿಗೆಯಿಂದ ಹೊಡೆದಂತೆ. ಒಬ್ಬ ಭಕ್ತನಿಗೆ ತೀವ್ರ ತಲೆ ಸಿಡಿತ ಆಗಾಗ ಬರುತ್ತಿತ್ತು ಆಗ ನಿತ್ಯಾನಂದರು ಅವರ ಬಳಿಯಲ್ಲಿ ಇದ್ದ ಗ್ಯಾಸ್ ಲೈಟ್ ನಿಂದ ಟಪ್ ತಲೆಗೆ ಎಸೆದು ಹೊಡೆದರು ಆಮೇಲೆ ಆತನಿಗೆ ಎಂದಿಗೂ ತಲೆ ಸಿಡಿತದ ಪೀಡೆಯು ಹತ್ತಿರ ಬರಲಿಲ್ಲ.

LEAVE A REPLY

Please enter your comment!
Please enter your name here