ಗೋವಿನ ತ್ಯಾಜ್ಯ, ಭೂಮಿಗೆ ಪೂಜ್ಯ: ಶ್ರೀಗಳು

0
531

ನಮ್ಮ ಪ್ರತಿನಿಧಿ ವರದಿ
ಮನುಷ್ಯನ ತೃಪ್ತಿಗೆ ಗೋವು ಮೂಲ, ಆದ್ದರಿಂದ ದೇಸೀತಳಿಯ ಗೋವನ್ನು ಬೆಳೆಸುವಲ್ಲಿ ಎಲ್ಲರೂ ಮನ ಮಾಡಬೇಕೆಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಕರೆ ನೀಡಿದರು.
 
 
ಚಿಕ್ಕಮಗಳೂರಿನ ಸಮೀಪದ ತೇಗೂರಿನ ಸುರಭಿ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಇಷ್ಟು ದಿನ ಜನಗಳು ಹೆಚ್ಚಿದ್ದಲ್ಲಿ ಮಂಗಲಗೋಯಾತ್ರೆಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದರೆ ಇಂದು ದನಗಳು ಹೆಚ್ಚಿರುವ ತೇಗೂರಿನಲ್ಲಿ ಗೋವಿನ ಕಾರ್ಯಕ್ರಮ ನಡೆದದ್ದು ಎಲ್ಲರಿಗೂ ತೃಪ್ತಿಯಾಯಿತು. ಗೋವಿರುವಲ್ಲಿ ಎಲ್ಲರಿಗೂ ತೃಪ್ತಿ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿ. ಗೋವಿನ ಎಲ್ಲಾ ಉತ್ಪನ್ನಗಳೂ ಮಾನವನಿಗೆ ಸುಖವನ್ನೇ ಒದಗಿಸುತ್ತದೆ. ಹಾಗಾಗಿಯೇ ಗೋಮಾತೆಯ ತ್ಯಾಜ್ಯ, ಭೂಮಾತೆಗೂ ಪೂಜ್ಯವಾಗುತ್ತದೆ. ಅದರಿಂದ ಬೆಳೆ ಪುಷ್ಟವಾಗಿ ಬೆಳೆದು ಸರ್ವರಿಗೂ ಸಂತುಷ್ಟಿಯನ್ನು ನೀಡುತ್ತದೆ ಎಂದರು.
 
 
 
ಮನುಷ್ಯನಿಗಿಂತ ಗೋವಿಗೆ ಹೆಚ್ಚು ಬೆಲೆ
ಸೀತಾಮಾತೆಯನ್ನು ಕಾಪಾಡಿದಂತಹ ಆಂಜನೇಯನೇ, ಇವತ್ತು ಸಂಕಷ್ಟದಲ್ಲಿರುವ ಗೋಮಾತೆಯನ್ನು ರಕ್ಷಿಸಬೇಕಾದ ಸಂದರ್ಭ ಒದಗಿದೆ. ಇಂತಹ ಸಂದರ್ಭದಲ್ಲಿ ಜನರು ಜಾಗೃತರಾಗಿ ಗೋರಕ್ಷಣೆಗೆ ಮುಂದಾಗಬೇಕಿದೆ ಎಂದರು. ಇಂದು ಜೋಡೆತ್ತಿನ ಓಟ ಸ್ಪರ್ಧೆಯಲ್ಲಿ ಬಳಸುವ ಒಂದು ಜೊತೆ ಎತ್ತಿಗೆ 4 ರಿಂದ 5 ಲಕ್ಷದಷ್ಟು ಬೆಲೆಯಿದೆ. ಮಿಶ್ರ ತಳಿಗಳಿಗೆ ಇಷ್ಟು ಬೇಡಿಕೆಯಿಲ್ಲ.ದೇಸಿತಳಿಗಳಿಗೆ ಮಾತ್ರ ಈ ಬಗೆಯ ಶಕ್ತಿ ಮತ್ತು ಬೆಲೆ. ಹಾಗಾಗಿ ಇಂದು ಮನುಷ್ಯನಿಗಿಂತ ಗೋವಿಗೆ ಎಲ್ಲಾ ರೀತಿಯಿಂದಲೂ ಹೆಚ್ಚಿನ ” ಬೆಲೆ ” ನೀಡಬೇಕಾಗಿದೆ ಎಂದು ಗೋಸಂದೇಶ ನೀಡಿದರು.
 
 
ಗೋವು ಜೀವನದ ಅಂಗವಾಗಬೇಕು
ಶ್ರೀಶ್ರೀರೇಣುಕಮಹಾಂತಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜಲಸಾಗರ ದಾಟಲು ನೌಕೆಯನ್ನು ಬಳಸುವಂತೆ, ಭವಸಾಗರವನ್ನು ದಾಟಿಸಲು ಸದ್ಗುರುಗಳು ಮಾತ್ರ ಶಕ್ತರು. ಅಂತಹ ಗುರುಗಳು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಅವರ ಗೋಸಂದೇಶಗಳನ್ನು ನಾವು ಪಾಲಿಸಬೇಕಿದೆ ಎಂದರು.
ಇಂದು ಗೋರಕ್ಷಣೆ ಪ್ರತೀ ಭಾರತೀಯನ ಜವಾಬ್ದಾರಿ. ಅದಕ್ಕಾಗಿ ಗೋವು ಎಲ್ಲರ ಜೀವನದ ಒಂದು ಭಾಗವಾಗಬೇಕಿದೆ. ಆಂಜನೇಯ, ಶಿವ, ಶನಿ ಎಲ್ಲ ದೇವರನ್ನೂ ಹುಡುಕಿಕೊಂಡು ಪ್ರತ್ಯೇಕವಾಗಿ ದೇವಾಲಯಕ್ಕೆ ಹೋಗಬೇಕಾದ ಅವಶ್ಯಕತೆಯಿಲ್ಲ. ಎಲ್ಲಾ ದೇವರನ್ನೂ ಗೋಮಾತೆಯಲ್ಲಿ ಕಾಣಬಹುದಾಗಿದೆ. ಹಾಗಾಗಿ ಗೋವು ಮತ್ತು ಗುರುಗಳಿಗೆ ನಾವು ಸರ್ವಥಾ ಋಣಿಯಾಗಿರಬೇಕು ಎಂದು ಗೋಪ್ರೇಮಿಗಳಿಗೆ ಮಂಗಲಕರ ಗೋವಿನ ಮಹತ್ವದ ಕುರಿತಾದ ಅರಿವು ನೀಡಿದರು.
 
 
ತಾಯಿ ಹೃದಯ ಗೋಮಾತೆಯದ್ದು..
ಬಸವತತ್ತ್ವಪೀಠ,ಕಲ್ಯಾಣನಗರದ ಶ್ರೀಜಯಬಸವಾನಂದಸ್ವಾಮಿಗಳು ಮಾತನಾಡಿ, ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ ಎನ್ನುವ ಗೋವಿನ ಪ್ರೀತಿಯ ರೀತಿ, ಸಾಕುವ ಜನರಲ್ಲೂ ಮೂಡಬೇಕಾದ ಅವಶ್ಯಕತೆಯಿದೆ. ತಾಯಿಯಂತೆ ನಮ್ಮನ್ನು ಪೊರೆಯುವ ಗೊಮಾತೆಯನ್ನು ಜನನಿ ಹಾಗೂ ಜನ್ಮಭೂಮಿಯನ್ನು ಕಾಣುವಂತೆ ಗೌರವದಿಂದ ಕಾಣಬೇಕಿದೆ. ವಯಸ್ಸಾದ ತಂದೆ ತಾಯಿಯನ್ನು ಆರೈಕೆ ಮಾಡುವಂತೆ ಗೋವನ್ನು ವಯಸ್ಸಾದ ಮೇಲೆ ಕಸಾಯಿಖಾನೆಗೆ ಮಾರದೇ ಪ್ರೀತಿಯಿಂದಲೇ ಸಾಕುವ ಮನೋಭಾವ ಎಲ್ಲರದ್ದಾಗಬೇಕು ಎಂದು ಗೋಪರ ಕಾಳಜಿ ತೋರಿದರು.
 
 
 
ಸಂಪನ್ನಗೊಂಡ ಸುಂದರ ಶೋಭಾಯಾತ್ರೆ.
ಕಾರ್ಯಕ್ರಮದ ನಂತರ ಚಿಕ್ಕಮಗಳೂರಿನ ಅರಸುನಗರದಿಂದ ಆರಂಭವಾದ ಶೋಭಾಯಾತ್ರೆ ನಗರದ ಮುಖ್ಯಬೀದಿಗಳಲ್ಲಿ ಸಂಚರಿಸಿ, ಗೋಪ್ರೇಮದ ದಿವ್ಯಸಂದೇಶವನ್ನು ನೀಡಿತು.

LEAVE A REPLY

Please enter your comment!
Please enter your name here