ಗೋವನ್ನು ಮಾರಬೇಡಿ, ಗೋಮೂತ್ರವನ್ನು ಮಾರಿ

0
153

ನಮ್ಮ ಪ್ರತಿನಿಧಿ ವರದಿ
ಮಠ ಗೋಮೂತ್ರವನ್ನು ಖರೀದಿಸಲಿದೆ: ಮಂಗಲ ಗೋಯಾತ್ರೆಯಲ್ಲಿ ಶ್ರೀಗಳ ಉದ್ಘೋಷ
ಗೋಮೂತ್ರವನ್ನು ರಾಮಚಂದ್ರಾಪುರ ಮಠ ಖರೀದಿಸುತ್ತದೆ, ಹಾಲಿನ ಡೈರಿಯಂತೆ ಗೋಮೂತ್ರದ ಡೈರಿಯನ್ನು ನಿರ್ವಹಿಸಲು ಮಠ ಸಿದ್ದವಿದ್ದು ಮಧುಗಿರಿಯ ಗೋಪಾಲಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
 
ಮಧುಗಿರಿಯ ಮಾಲಿಮರಿಯಪ್ಪ ರಂಗಮಂದಿರದಲ್ಲಿ ನಡೆದ ಮಂಗಲ ಗೋಯಾತ್ರೆಯ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಧುಗಿರಿಯ ಗೋವನ್ನು ಹೇಗೆ ಉಳಿಸುವುದು ಎಂದು ನೋಡಬೇಕಾಗಿದೆ. ಗೊಮೂತ್ರ ಗೋವಿನ ಪ್ರಧಾನ ಉತ್ಪನ್ನವಾಗಿದ್ದು, ಹಾಲು ಕೊಡುವ ಸಮಯ ತುಂಬಾ ಕಡಿಮೆ. ಆದರೆ ಗೋವು ಗೋಮೂತ್ರವನ್ನು ಜೀವನಪರ್ಯಂತ ನೀಡುತ್ತದೆ. ಹಾಲಿನ ಬೆಲೆಯನ್ನು ಗೋಮೂತ್ರ ನಿಮಗೆ ತಂದುಕೊಡುವುದಾದರೆ, ಗೋವನ್ನು ಮಾರುವ ಪ್ರಮೇಯವೇ ಬರುವುದಿಲ್ಲ. ಗೋವನ್ನು ಮಾರುವ ಬದಲು ಗೋಮೂತ್ರವನ್ನು ಮಾರಿ, ರಾಮಚಂದ್ರಾಪುರಮಠ ರೈತರಿಗೆ ಹಾಗೂ ರೈತರ ಗೋವುಗಳಿಗೆ ಆಸರೆಯಾಗಲಿದೆ ಎಂದರು.
 
 
ಗೋ ಮೂತ್ರ ಗೋಮಯ, ಗೊಕ್ಷೀರಗಳು ಗೋಮಾತೆಯ ತೀರ್ಥ ಪ್ರಸಾದಗಳು, ಇವುಗಳನ್ನು ಸರಿಯಾಗಿ ಬಳಸುವ ಅರಿತರೆ ಮಧುಗಿರಿ ತಾಲೂಕಿನಲ್ಲಿ ಗೋ ಹತ್ಯೆ ನಿಷೇಧವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
 
 
 
ಸಂತರಿಗೆ ಕರೆ:
ನೀವು ಗೋಶಾಲೆ ಮಾಡಿ, ರಾಮಚಂದ್ರಾಪುರಮಠ ನಿನಗೆ ಅಗತ್ಯ ಸಲಹೆ ಮತ್ತು ಸಹಕಾರ ನೀಡುತ್ತದೆ. ಸಾನ್ನಿಧ್ಯವಹಿಸಿದ್ದ ತಗ್ಗೀಹಳ್ಳಿ ರಾಮಕೃಷ್ಣಾಶ್ರಮದ ಶ್ರೀ ರಮಾನಂದಜೀ ಮಹಾರಾಜ್ ಮಾತನಾಡಿ, ಗೀತೆ, ಗೋವಿಂದ, ಗೋವು ಈ ಮೂರನ್ನೂ ಹಿಂದಿನಿಂದಲೂ ಭಾರತ ಸಂಸ್ಕೃತಿ ಗೌರವಿಸಿಕೊಂಡೇ ಬಂದಿದೆ. ದೇಸಿ ತಳಿ ಕಡಿಮೆ ಹಾಲು ಕೊಟ್ಟರೂ, ಅದರಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ, ದೇಶಿ ಗೋ ತಳಿಗಳು ನಶಿಸಿ ಹೋಗುತ್ತಿರುವ ಈ ವಿಕಟ ಸಂದರ್ಭದಲ್ಲಿ ಪರಮಪೂಜ್ಯ ರಾಘವೇಶ್ವರ ಶ್ರೀಗಳು ದೇಸಿ ಗೋವುಗಳ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.
 
 
 
ರಂಭಾಪುರಿ ಖಾಸಾ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ರಾಮಚಂದ್ರಾಪುರ ಮಠ ಅಂದರೆ ಗೋವು ಎನ್ನುವಷ್ಟರ ಮಟ್ಟಿಗೆ ಪರಮಪೂಜ್ಯ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರು ನಾಡಿನಾದ್ಯಂತ ಗೋವಿನ ರಕ್ಷಣೆಗಾಗಿ ಬೃಹತ ಆಂದೋಲನ ನಡೆಸಿಕೊಂಡು ಬರುತ್ತಿದ್ದಾರೆ. ಗೋ ಮಾತೆಯ ಶಕ್ತಿಯನ್ನು ಮಹತ್ವವನ್ನು ತಿಳಿಸುವಂತ ಕೆಲಸ ಆಗಬೇಕು, ವೈದ್ಯರು ದೇಸಿ ಗೋವಿನ ಹಾಲು ಮತ್ತು ಗೋಮೂತ್ರದ ಕುರಿತಾದ ಜಾಗೃತಿ ಮಾಡಿಸಬೇಕು ಎಂದರು.
 
 
ವಿಶ್ವಕರ್ಮ ಮಹಾಸಂಸ್ಥಾನದ ಶ್ರೀಶ್ರೀ ನೀಲಕಂಠಾಚಾರ್ ಅವರು ಗೋಸಂರಕ್ಷಣೆಯ ಕುರಿತು ಅರಿವು ಮೂಡಿಸಿದರು. ವೇ.ಬ್ರ. ನಾಗರಾಜ ಶಾಸ್ತ್ರಿ, ಎಮ್. ಜಿ. ಶ್ರೀನಿವಾಸಮೂರ್ತಿ, ಮಧುಸೂದನ ರಾವ್, ಸುರಭಿ ಗೋಶಾಲೆ, ಡಿ. ಆರ್. ಬಸವರಾಜ್, ಸಾವಯುವ ಗೋಪರಿವಾರದ ರಾಜ್ಯ ಕಾರ್ಯದರ್ಶಿ. ಮಧುಗಿರಿ ಭಾಗದ ಗಣ್ಯರು, ಗೋಪ್ರೇಮಿಗಳು ಹಾಗೂ ರೈತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here