ಗೋರಕ್ಷಣೆಗೆ ಕಾವಿಯ ಕಾವಿದೆ. ಬಂಡಿಯ ಭೋವನೂ ಜೊತೆ ಸೇರಬೇಕಿದೆ

0
346

ನಮ್ಮ ಪ್ರತಿನಿಧಿ ವರದಿ
ಗೋಹತ್ಯೆ ನಿಲ್ಲುವ ಕಾಲಕ್ಕಾಗಿ ಕಾಯಬೇಕಿಲ್ಲ, ಗೋಹತ್ಯೆ ನಿಲ್ಲುವ ಕಾಲವನ್ನು ತರಿಸುವ ಕಾರ್ಯಕ್ಕೆ ನಾವು ಮುಂದಾಗಬೇಕಿದೆ ಎಂದು ಶ್ರೀಮದ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ರಾಮಚಂದ್ರಾಪುರಮಠ ಇವರು ಹೇಳಿದರು.
 
 
 
ಅರಸೀಕೆರೆಯ ಶ್ರೀಬಸವರಾಜೇಂದ್ರ ಪ್ರೌಢಶಾಲೆಯ ವಠಾರದಲ್ಲಿ ಮಂಗಲಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಗೋರಕ್ಷಣೆಯ ಕೈಂಕರ್ಯಕ್ಕೆ ಸಾವಿರ ಮಠಗಳ ಸ್ವರ ಸೇರಿದೆ. ಹಾಗಾಗಿ ಮಂಗಲಗೋಯಾತ್ರೆಯೊಡನೆ ಕಾವಿಯ ಕಾವಿದೆ. ಮುಂದೆ ಇದರೊಡನೆ ಬಂಡಿಯ ಭೋವನಾದ ರೈತ ಬಾಂಧವನೂ ಒಡಗೂಡಿದಲ್ಲಿ ಗೋಯಾತ್ರೆ ಯಶಸ್ವಿಯಾಗಿ ಗೋವಿನ ರಕ್ಷಣೆ ಖಂಡಿತ ಸಾಧ್ಯವಾಗುತ್ತದೆ ಎಂದರು.
 
 
 
ಗೋಮೂತ್ರ ಭೂಮಿಗೆ ಪಾನಕ, ಗೋಮಯ ಭೂಮಿಗೆ ಭೋಜನ.
ಗೋವಿಗೆ ಸಗಣಿ ಹಾಕುವ ಹಕ್ಕೂ ಇಲ್ಲ ಎನ್ನುವ ಹೀನ ಮನಸ್ಥಿತಿಗೆ ಸರ್ಕಾರಗಳು ಮುಟ್ಟಿರುವುದು ನಿಜಕ್ಕೂ ಶೋಚನೀಯ. ಯಾವಾತ ಬದುಕುವುದರಿಂದ ಸಾವಿರಾರು ಜನಕ್ಕೆ ಸಹಾಯವಾಗುತ್ತದೋ ಆತನ ಬದುಕಿಗೊಂದು ಅರ್ಥವಿದೆ. ಅಂತಹಾ ಅರ್ಥಪೂರ್ಣ ಜೀವನ ನಡೆಸುವ ಗೋಮಾತೆಯ ಉಪೇಕ್ಷೆ ಸಮಾಜಕ್ಕೆ ಅಪಾಯಕಾರಿ. ಗೋವಿನ ಮೂತ್ರ ಭೂಮಿಗೆ ಪಾನಕದಂತೆ ಇಂಬು ನೀಡಿದರೆ, ಗೋಮಯವು ಭೂಮಿಗೆ ಭೋಜನಸದೃಶವಾಗಿ ಪರಿಣಮಿಸುತ್ತದೆ ಎಂದರು.
 
 
 
ಸಹಜ ಬಾಳ್ವೆ ಗೋವಿನದ್ದಾಗಬೇಕು.
ಗೋವು ಸಹಜವಾಗಿ ಯಾವುದೇ ಕೃತಕ ಗರ್ಭಧಾರಣೆಯಿಲ್ಲದೇ ಜನಿಸಿ, ಕೃತಕವಾದ ಬಾಳ್ವೆಯಿಂದ ಹೊರತಾಗಿ ಸಹಜ ಪ್ರಕೃತಿಯಲ್ಲಿ ಬೆಳೆದು, ಸಹಜವಾಗಿ ಸಾಯುವಂತಾಗಬೇಕು ಎನ್ನುವುದಷ್ಟನ್ನೇ ನಾವೆಲ್ಲರೂ ಗಮನದಲ್ಲಿಟ್ಟುಕೊಂಡರೆ ಗೋಸಂತತಿ ಉಳಿಯಲು ಸಾಧ್ಯವಾಗುತ್ತದೆ. ಸಂಚಾರ, ಆಹಾರ, ಸಂತಾನೋತ್ಪತ್ತಿ, ಈ ಎಲ್ಲಾ ವಿಚಾರಗಳಲ್ಲೂ ಗೋವು ಯಾವುದೇ ನಿರ್ಬಂಧವಿಲ್ಲದೇ ಬದುಕು ಸಾಗಿಸುವಂತಾಗಬೇಕು. ಎಂದು ಗೋಸಂದೇಶ ನೀಡಿದರು.
 
 
 
ಶ್ರೀಜಯಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ, ಹಿಂದೆ ಒಂದೊಂದು ಮನೆಯಲ್ಲಿ 40 ರಿಂದ 50 ರಾಸುಗಳನ್ನು ಸಾಕುತ್ತಿದ್ದರು. ಆದರೆ ಇಂದು ಬರಗಾಲದ ಜೊತೆ ನೀರಿನ ಸಮಸ್ಯೆ, ಆಹಾರದ ಸಮಸ್ಯೆಯಿಂದ ರಾಸುಗಳು ಮನೆ, ಮನಗಳಿಂದ ದೂರವಾಗುತ್ತಿವೆ. ಇದಕ್ಕೆ ಕೃಷಿಕರು ಎಚ್ಚೆತ್ತುಕೊಳ್ಳುವುದೇ ಪರಿಹಾರವಾಗಿದೆ. ಗೋಶಾಲೆಗಳನ್ನು ಮಾಡುವಲ್ಲಿಯೂ ಸರ್ಕಾರ ಮನಸ್ಸು ಮಾಡಬೇಕಿದೆ. ಆಗ ಮಾತ್ರ ಕೃಷಿ ಪರಂಪರೆ ಮತ್ತು ಗೋವುಗಳು ಉಳಿಯಲು ಸಾಧ್ಯವಿದೆ ಎಂದರು.
 
 
 
ಕಸಾಯಿಖಾನೆಯಲ್ಲಿ ಜೀವಂತ ಇರುವ ಹಸು ಹಾಗೂ ಕರುಗಳನ್ನು ಚಿತ್ರಹಿಂಸೆಯೊಡನೆ ಸಾಯಿಸುವ ರೀತಿ ನರಕಸದೃಶವಾದದ್ದು. ಇದು ಇಂದಿನ ವಿಕೃತ ಮನಸ್ಸುಗಳು ತುತ್ತತುದಿಯಲ್ಲರುವುದರ ತೋರ್ಪಡಿಕೆ. ಈ ಮನೋಭಾವವನ್ನು ತೊಲಗಿಸುವ ಯೋಚನೆಯೂ ಸಮಾಜದಲ್ಲಿಯೇ ಬರಬೇಕಿದೆ. ಇದಕ್ಕಾಗಿ ಎಲ್ಲಾ ಧಾರ್ಮಿಕ ನಾಯಕರು, ರಾಜಕೀಯ ನಾಯಕರು ಹಾಗೂ ಇಡೀ ಸಮಾಜ ಒಗ್ಗಟ್ಟಾಗಿ ಗೋರಕ್ಷಣೆಯ ಕುರಿತಾಗಿ ಯೋಚಿಸಬೇಕಿದೆ ಎಂದು ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
 
 
ಶ್ರೀ ನಿರಂಜನ ಪ್ರಣವಸ್ವರೂಪಿ ರುದ್ರಮುನಿಗಳು ಮಾತನಾಡಿ, ಭೀಕರ ಬರಗಾಲದಲ್ಲಿ ಗೋವು ಸಾಕುವ ಕಷ್ಟ ರೈತರಿಗೆ ತಿಳಿದಿದೆ. ಮೇವಿನ ಸಮಸ್ಯೆಯೂ ರೈತರನ್ನು ಬಳಲಿಸುತ್ತಿದೆ. ಇದಕ್ಕಾಗಿ ಸರ್ಕಾರಗಳು ಕೇವಲ ಸಮೀಕ್ಷೆಗಳನ್ನು ನಡೆಸದೇ, ಅದೇ ಹಣವನ್ನು ರೈತ ಮತ್ತು ಗೋಸಂರಕ್ಷಣೆಗೆ ಮೀಸಲಿಡಬೇಕಿದೆ. ರಾಸಾಯನಿಕ ಗೊಬ್ಬರಗಳಿಂದ ಬರುತ್ತಿರುವ ರೋಗಗಳ ಅರಿವನ್ನು ರೈತರು ಗಮನಿಸಿಕೊಂಡು, ಸಾವಯವ ಕೃಷಿಗೆ, ದೇಶೀಗೋವಿನ ಸಾಕಣೆ ಮೂಲಕ ಮರಳಬೇಕಿದೆ. ಆರೋಗ್ಯ ಮತ್ತು ನೆಮ್ಮದಿಯನ್ನು ಎಲ್ಲಿಯೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಗಮನಿಸಿಕೊಂಡು ಗೋವಿನ ಪ್ರತೀ ಉತ್ಪನ್ನಗಳ ಅರಿವು ಬೆಳೆಸಿಕೊಳ್ಳಬೇಕಿದೆ ಎಂದು ಗೋಸಂರಕ್ಷಣೆಗೆ ಕರೆ ಇತ್ತರು.
 
 
 
ಮಾಜಿ ಅಡ್ವೋಕೇಟ್ ಜನರಲ್ ಶ್ರೀ ಅಶೊಕ್ ಹಾರ್ನಳ್ಳಿಯವರು ಮಾತನಾಡಿ, ಇಂದು ರಾಷ್ಟ್ರೀಯತೆ ಮತ್ತು ಗೋಸಂರಕ್ಷಣೆಯ ಬಗ್ಗೆ ಮಾತಾಡಿದರೆ, ಯಾವುದೋ ಒಂದು ಪಕ್ಷದ ಅಡಿಯಲ್ಲಿ ಗುರುತಿಸುವ ಪರಿಸ್ಥಿತಿ ಬಂದೊದಗಿದೆ. ಗೋಶಾಲೆಯನ್ನು ಸ್ಥಾಪನೆ ಮಾಡುವವರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಗೋಶಾಲೆಗಳ ಸಂಪರ್ಕ ಸಾಧ್ಯವಾಗಬೇಕು. ಮೇವಿನ ಬ್ಯಾಂಕ್ ಗಳನ್ನು ತೆರೆಯಲು ಸರ್ಕಾರವೇ ಸಹಕಾರ ನೀಡಬೇಕು ಹಾಗೂ ಮಾರುಕಟ್ಟೆಯಲ್ಲಿ ಗೋವಿನ ಉತ್ಪನ್ನಗಳಿಗೆ ಇನ್ನೂ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುವ ಕಾರ್ಯವಾಗಬೇಕಿದೆ ಎಂದರು.
 
 
 
ಅರಸೀಕೆರೆಯ ಅಮೃತಪಥದಲ್ಲಿ ಸಂಭ್ರಮದ ಶೋಭಾಯಾತ್ರೆ.
ಶಿವಮೊಗ್ಗದ ಶುಭಯಾತ್ರೆಯ ಬಳಿಕ ಇಂದು ಅರಸೀಕೆರೆ ತಲುಪಿದ ಮಂಗಲಗೋಯಾತ್ರೆಯ ಗೋರಥಗಳಿಗೆ ಅಮೋಘ ಸ್ವಾಗತ ಕೋರಲಾಯಿತು. ಅರಸೀಕೆರೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸನಿಹ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಕೋಲೆಬಸವನ ಗತ್ತು, ಮಾರುತಿನಾಸಿಕ್ ಡೋಲು ಸಂಘ ಹಾಗೂ ಎಂಜಗೋಡನಹಳ್ಳಿಯ ತಮಟೆಯ ಬಳಗದ ಗಮ್ಮತ್ತು, ಸೇರಿದವರೆಲ್ಲರೂ ಸಂತೋಷಿಸುವಂತಿತ್ತು. ಮರಗಾಲು ಕುಣಿತ, ಗಣ್ಯರ ಸಮಾಗಮ, ಚಕ್ಕಡಿಗಾಡಿಗಳ ಸಾಲು, ಹೀಗೆ ಸಾಲು ಸಾಲು ವೈವಿಧ್ಯಗಳಿಂದ ಕೂಡಿದ್ದ ಶೋಭಾಯಾತ್ರೆ ನಗರದ ಮುಖ್ಯಬೀದಿಗಳಲ್ಲಿ ಸಂಚರಿಸಿ, ಬಸವರಾಜೇಂದ್ರ ಪ್ರೌಢಶಾಲೆಯ ಆವರಣವನ್ನು ತಲುಪಿತು. ಈ ಸಂದರ್ಭದಲ್ಲಿ ನಿರಂಜನ ಪ್ರಣವಸ್ವರೂಪಿ ಅಭಿನವಶಿವಲಿಂಗ ಮಹಾಸ್ವಾಮಿಗಳು, ದಿನೇಶ್ ಪೈ, ಶ್ರೀ ಅಶೋಕ್ ಹಾರ್ನಳ್ಳಿಯವರು, ಹಾಗೂ ಅನೇಕ ಗೋಪ್ರೇಮಿಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕೊಪ್ಪದ ಮಕ್ಕಳಿಂದ ಪುಣ್ಯಕೋಟಿಯ ಕಥಾನಕ ಸುಂದರವಾಗಿ ನೃತ್ಯರೂಪಕದ ಮೂಲಕ ಪ್ರಸ್ತುತಪಡಿಸಲಾಯಿತು.

LEAVE A REPLY

Please enter your comment!
Please enter your name here