ಗೋಚಾತುರ್ಮಾಸ್ಯದಲ್ಲಿ ಗೋ-ಗಣಪತಿ

0
243

ಬೆಂಗಳೂರು ಪ್ರತಿನಿಧಿ ವರದಿ
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಗೋಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಗಣೇಶಚತುರ್ಥಿಯ ನಿಮಿತ್ತ ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಸಂಪನ್ನವಾಗಲಿದ್ದು, ವಿಶಿಷ್ಟವಾದ ‘ಗೋ-ಗಣಪತಿ’ಯ ಉಪಾಸನೆ ನಡೆಯಲಿದೆ.
 
gochturmasya
ಸಂಪೂರ್ಣ ಗೋಮಯದಿಂದ ತಯಾರಿಸಲಾದ, ಗೋವಿನೊಂದಿಗಿರುವ ಗಣಪತಿಯನ್ನು ಗಣೇಶಚತುರ್ಥಿಯಂದು ( ಸೆ. 5) ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಕಲ್ಪೋಕ್ತಪೂಜೆ ನಡೆಯಲಿದ್ದು, ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋ-ಗಣಪತಿಗೆ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ.
 
 
ಧಾರ್ಮಿಕ ವೈವಿಧ್ಯಗಳು:
ಗಣೇಶಚತುರ್ಥಿಯಂದು ಶುಭಮುಹೂರ್ತದಲ್ಲಿ ಗೋ-ಗಣಪತಿಯ ಪ್ರಾಣಪ್ರತಿಷ್ಠೆಯೊಂದಿಗೆ ಕಲ್ಪೋಕ್ತಪೂಜೆ ನೆರವೇರಲಿದ್ದು, ಮಹಾಗಣಪತಿ ಹವನ, ಕ್ಷಿಪ್ರಗಣಪತಿ ಹವನ, ಸಹಸ್ರ ಅಪ್ಪ(ಅಪೂಪ) ಸೇವೆ, ಸಹಸ್ರದೂರ್ವಾಚನೆ, ಅಷ್ಟಾವಧಾನ ಸೇವೆ, ಅಥರ್ವಶೀರ್ಷ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಾಲ್ಕುದಿನಗಳ ಕಾಲ ಗೋ-ಗಣಪತಿಯ ಉಪಾಸನೆ ನೆರವೇರಲಿದೆ.
 
 
ಗೋ-ಗಣಪತಿಯ ವೈಶಿಷ್ಟ್ಯ:
ಗೋ-ಗಣಪತಿಯನ್ನು ಸಂಪೂರ್ಣವಾಗಿ ಗೋಮಯವನ್ನು ಮಾತ್ರ ಬಳಸಿ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಸುಮಾರು 350 ಕೆ.ಜಿ ದೇಶೀಯ ಹಸುವಿನ ಗೋಮಯವನ್ನು ಬಳಸಲಾಗಿದೆ. ಗೋವಿನೊಂದಿಗೆ ಇರುವ ಗಣಪತಿಯ ಮೂರ್ತಿ ಅಪರೂಪದ್ದಗಿದ್ದು, ಇದಕ್ಕೆ ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೇ, ನೈಸರ್ಗಿಕವಾದ ಕೇಸರಿ, ಸುಣ್ಣ ಹಾಗೂ ಶುದ್ಧ ಅರಿಸಿಣ – ಕುಂಕುಮ ಮುಂತಾದವುಗಳನ್ನು ಮಾತ್ರ ಬಳಸಲಾಗಿದೆ.
 
 
 
ಗೋ-ಗಣಪತಿಯು ಪೂಜ್ಯ ಶ್ರೀಗಳ ಗೋಚಾತುರ್ಮಾಸ್ಯಕ್ಕೆ ವಿಶೇಷ ಮೆರುಗನ್ನು ತಂದುಕೊಡಲಿದ್ದು, ಧಾರ್ಮಿಕವಾಗಿ ವಿಶೇಷವಾದ ಮಹತ್ವವನ್ನು ಹೊಂದಿರುವ ಗೋಮಯದಿಂದಲೇ ಸಂಪೂರ್ಣವಾಗಿ ನಿರ್ಮಿಸಿರುವ ಗೋವಿನೊಂದಿಗಿರುವ ಗಣಪತಿಯಾಗಿರುವುದರಿಂದ, ಇದರ ಉಪಾಸನೆ ಇಷ್ಟಾರ್ಥ ಫಲ ನೀಡುತ್ತದೆ. ಪರಿಸರಕ್ಕೆ ಪೂರಕ ಮಾತ್ರವಲ್ಲದೇ, ಸುತ್ತಲಿನ ಪರಿಸರವನ್ನು ಶುದ್ಧಗೊಳಿಸುವ ಶಕ್ತಿಯೂ ಗೋಮಯಕ್ಕಿದ್ದು ಪರಿಸರಸ್ನೇಹಿಯಾಗಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಅಶೋಕ ಸಿದ್ದನಕೈ ಹಾಗೂ ಸಂಗಡಿಗರು ವಿಶೇಷ ಪರಿಶ್ರಮದಿಂದ ನಿರ್ಮಿಸಿದ್ದು, ಜಾಗತಿಕ ಮಟ್ಟದಲ್ಲಿ ಗೋಜಾಗೃತಿಯನ್ನು ಮೂಡಿಸುತ್ತಿರುವ ಶ್ರೀರಾಮಚಂದ್ರಾಪುರಮಠವು ‘ಗೋ-ಗಣಪತಿ’ಯ ಮೂಲಕ ಗೋಜಾಗೃತಿ ಹಾಗೂ ಪರಿಸರಪ್ರಜ್ಞೆಯನ್ನೂ ಜನಮಾನಸದಲ್ಲಿ ಮೂಡಿಸುತ್ತಿದೆ.

LEAVE A REPLY

Please enter your comment!
Please enter your name here