ಗುರುವಿನಲ್ಲಿನ ಪೂರ್ಣ ವಿಶ್ವಾಸವೇ ಸಾಕ್ಷಾತ್ಕಾರದ ಸುಲಭ ಮಾರ್ಗ!!!

0
3509

ನಿತ್ಯ ಅಂಕಣ-೭೮ : ತಾರಾನಾಥ್‌ ಮೇಸ್ತ, ಶಿರೂರು.
ಭಗವಾನ್ ನಿತ್ಯಾನಂದರ ಮಾತುಗಳೆಂದರೆ ಅಮೃತವಾಕ್ಯ. ಮಾನವ ಜೀವನವು ನಿರ್ಮಲ ಪಥದಲ್ಲಿ ಸಾಗಲು, ಅಜ್ಞಾನದ ಕತ್ತಲೆಯನ್ನು ಓಡಿಸುವ ಸುಜ್ಞಾನದ ದಿವ್ಯಪ್ರಭೆ. ಒಮ್ಮೆ ನಿತ್ಯಾನಂದರ ಭಕ್ತ ಬಾಬುರಾವ್ ಖಾಡೆ ಎನ್ನುವರು, ಭಗವಾನ್ ನಿತ್ಯಾನಂದರಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಅವರು ಕೇಳಿರುವ ಸುಂದರವಾದ ಪ್ರಶ್ನೆ ಹೀಗಿತ್ತು. “ಆತ್ಮಸಾಕ್ಷಾತ್ಕಾರ ಪಡೆಯಲು ಸುಲಭ ಮಾರ್ಗ ಯಾವುದು..?” ಆಗ ಗುರುದೇವರು ಜಿಜ್ಞಾಸು ಭಕ್ತನಿಗೆ ಹೇಳುತ್ತಾರೆ. ‘ಗುರುವಿನಲ್ಲಿ ಪೂರ್ಣ ವಿಶ್ವಾಸ’ ಅದೇ ಸಾಕ್ಷಾತ್ಕಾರದ ಸುಲಭ ಮಾರ್ಗ; ಜಪ, ತಪ, ಧ್ಯಾನ, ಪ್ರಾಣಯಾಮ ಯಾವುದೂ ಬೇಡ. ಗುರುವಿಗೆ ಶರಣಾಗತರಾದರೆ ಎಲ್ಲವನ್ನೂ ಸಂಪಾದಿಸಿದಂತೆಯೇ ಎಂದು ವಿವರಿಸುತ್ತಾರೆ. ಅದೇ ಕೂಡಲೇ ತಮ್ಮ ತಲೆಯ ಒಂದು ಕೂದಲಿನ ಎಳೆಯನ್ನು ಕಿತ್ತು ತೆಗೆಯುತ್ತಾರೆ. ಕೂದಲಿನ ಬುಡದತ್ತ ಬೆರಳು ತೋರಿಸಿ ‘ಇಷ್ಟಾದರೂ ವಿಶ್ವಾಸ ಇದ್ದರೆ ಅಷ್ಟೇ ಸಾಕು’ ಅದರಿಂದ ತನ್ನನ್ನು ತಿಳಿಯ ಬಹುದು ಎಂದು ಗುರುದೇವರು ಹೇಳುತ್ತಾರೆ. ಹೀಗೆ ಆತ್ಮಸಾಕ್ಷಾತ್ಕಾರದ ಸುಜ್ಞಾನದ ದಾರಿಯನ್ನು ಭಕ್ತ ಬಾಬುರಾವ್ ಖಾಡೆ ಅವರಿಗೆ ನಿತ್ಯಾನಂದರು ತೋರಿಸಿಕೊಟ್ಟರು.

ಶರೀರ ಭಾವನೆ ನಿಸ್ಸಾರವಾಗಿ ಬಿಟ್ಟವನೆ ಗುರು. ಗುರುವಿಗಿಂತ ಶ್ರೇಷ್ಠರು ಯಾರೂ ಇಲ್ಲ. ಗುರುವಿಗಿಂತ ಮೇಲಾದ ದೇವರಿಲ್ಲ. ಗುರುವೇ ದೇವರು, ದೇವರೇ ಗುರು. ತಾನು ಒಳ್ಳೆಯವಾನದ ಪಕ್ಷದಲ್ಲಿ ಎಲ್ಲವೂ ಒಳ್ಳೇಯದೇ. ತಾನು ತನ್ನಿಂದ ಒಳ್ಳೆದಾಗಬೇಕು. ಶರೀರ ಇರುವುದೂ ಅಲ್ಲ, ಶರೀರ ಹೋಗುವುದು ಅಲ್ಲ. ಕರ್ತವ್ಯವಾಗಿ ಮಾಡುವವನು ಒಬ್ಬನೇ. ಉದರದಿಂದ ಬರುವಾಗ ತೆಗೆದುಕೊಂಡು ಬಂದದ್ದು ಒಂದು ಶ್ವಾಸ, ಹೋಗುವಾಗ ಬಿಟ್ಟುಹೋಗುವುದು ಒಂದು ಶ್ವಾಶ. ಆಸ್ತಿ ಕೀರ್ತಿ ಇಲ್ಲ, ಅಲ್ಲಿ ಎಲ್ಲ ಒಂದೇ, ಇಲ್ಲಿ ಮಾತ್ರ ಭೇದ, ಅಲ್ಲಿ ಭೇದವಿಲ್ಲ. ಅವಧೂತ ಎಂಬುವನೆ ಎಲ್ಲರಿಗೂ ಮೇಲು. ಯೋಗಿಗಳಿಗೆ ಸನ್ಯಾಸಿಗಳಿಗೆ ಒಂದು ಸಿದ್ಧಿ ಬೇಕು. ಅವಧೂತರಿಗೆ ಏನೂ ಇಲ್ಲ.

ಭಕ್ತಿ ಎಂಬುವುದು ಭಕ್ತಿಪ್ರೇಮವು. ಕೊಡುವುದು ತಿನ್ನುವುದು ಭಕ್ತಿಯಲ್ಲ. ಮನಸ್ಸಿನ ಭ್ರಾಂತಿ. ಶರೀರ ಭಾವನೆ ಕುಡಿಯುವುದು ತಿನ್ನುವುದು ಸೂಕ್ಷ್ಮ ವಿಚಾರವು. ವಿಚಾರ ಎಂಬುವುದು ನೀರು ಕುಡಿದಂತೆ. ಶಾಂತಿ ಎಂಬುವುದು ನೀರು. ಶಾಂತಿ ಎಂಬ ನೀರಿನ ಮೇಲೆ ಕೂತು ಕೊಳ್ಳುವುದು ಯೋಗಾನಂದ. ಭೋಗವನ್ನು ಬಿಟ್ಟು ಯೋಗಾನಂದವನ್ನು ಮನಸ್ಸೆ ಸೇರು. ಹೃದಯದಲ್ಲಿ ಓಡು ಮನವೇ, ಜೀವನ್ಮುಕ್ತಿ ಎಂಬ ವಾಸನೆಯನ್ನು ಪಡೆ. ವಾಸವನ್ನು ಮಾಡು. ಉಪಾಧಿಯನ್ನು ಸೇರು ಉಪನಯನವನ್ನು ಮಾಡು ಮನವೇ. ಮನವೇ ಅನ್ಯಭಾವನೆ ಮಾಡಬೇಡ, ಸಮಭಾವನೆ ಮಾಡು.

ಅಡಿಗೆಯ ವಾಸನೆಯಿಂದ ಹೊಟ್ಟೆ ತುಂಬುವುದಿಲ್ಲ. ಊಟ ಮಾಡಬೇಕು. ಹಾಗೆಯೇ ಸ್ವಾನುಭವ ಆದರನೇ ಸಿದ್ಧಿ. ಸ್ವಾನುಭವಕ್ಕೆ ಪ್ರತಿವಾದಿಯಿಲ್ಲ. ಕೈಯಲ್ಲಿದ್ದ ಸಕ್ಕರೆಯನ್ನು ಬಾಯಲ್ಲಿ ಹಾಕಿದರೆ ಮಾತ್ರ ಸಿಹಿಯಾಗಿ ಕಾಣುವುದು. ಇದು ಸ್ವಾನುಭವ. ಎಲೆಯಿಲ್ಲದ ಮರಕ್ಕೆ ಗಾಳಿಯಿಲ್ಲ. ಸತ್ತ ಶವದಲ್ಲಿ ಗಾಳಿಯಿಲ್ಲ, ಶಬ್ದ ಇಲ್ಲ. ಗಾಳಿ ಇಲ್ಲದೆ ಜಗತ್ತಿನಲ್ಲಿ ಪ್ರಾಣಿ ಬದುಕುವುದಿಲ್ಲ. ಇವೆಲ್ಲಾ ನಿತ್ಯಾನಂದರು ಹಲವು ಸಂದರ್ಭಗಳಲ್ಲಿ ಭಕ್ತರಿಗೆ ಭೋಧಿಸಿರುವ ಮಾತುಗಳಾಗಿವೆ. ಕೆಲವೊಮ್ಮೆ ಅವರ ನೀತಿಸಾರದ ಭೋಧನೆಗಳು ಅರ್ಥೈಸಿಕೊಳ್ಳಲು ಕಬ್ಬಿಣದ ಕಡಲೆಯಂತೆ ಕಠಿಣವಾಗಿರುತ್ತಿದ್ದವು.

Advertisement

LEAVE A REPLY

Please enter your comment!
Please enter your name here