ಗುರುದೇವರ ಕೃಪಗೆ ಪಾತ್ರರಾದವರು ಅನೇಕರು

0
2348

ನಿತ್ಯ ಅಂಕಣ-೯೬ : ತಾರಾನಾಥ್‌ ಮೇಸ್ತ, ಶಿರೂರು.
ಭಗವಾನ್ ನಿತ್ಯಾನಂದರಿಗೆ ಸರ್ವ ಧರ್ಮದ ಭಕ್ತರಿದ್ದರು. ಗುರುದೇವರು ಎಲ್ಲರನ್ನೂ ಪ್ರೀತಿಯಿಂದ, ಅನುಗ್ರಹಿಸುತ್ತಿದ್ದರು. ಗುರುದೇವರ ಅನುಗ್ರಹ ಪಡೆದು ಸಜ್ಜನರಾದವರು, ರೋಗದಿಂದ ಮುಕ್ತಿ ಪಡೆದವರು, ಸಾಂತ್ವನ ಪಡೆದವರು, ಧನಿಕರಾದವರು, ಸಾಧಕರಾದವರು, ಅನ್ಯಧರ್ಮದ ಬಂಧುಗಳು ಅನೇಕರು. ನಿತ್ಯಾನಂದ ಸ್ವಾಮೀಜಿಗಳಿಂದ ಅನುಗ್ರಹಿರಾದ ಮುಸ್ಲಿಂ ಧರ್ಮದ ರಾಜಯೋಗಿ ಕರೀಂಪೀರ್ ಸ್ವಾಮೀಜಿ ಮೈಸೂರಿನಲ್ಲಿ ಹಾಗೂ ಕ್ರಿಶ್ಚನ್ ಧರ್ಮದ ಡೇವಿಡ್ ಸ್ವಾಮಿ ತಮಿಳುನಾಡಿನಲ್ಲಿ ಆಶ್ರಮ ಸ್ಥಾಪಿಸಿ ಆಧ್ಯಾತ್ಮ ಜೀವನ ನಡೆಸಿದರು. ಹಾಗೆಯೇ ಅಮೇರಿಕಾ ದೇಶದ ಪ್ರಜೆಯಾದ ರೂಡಿ ಕ್ರೈಸ್ತ ಮತದ ವ್ಯಕ್ತಿ. ಆತ ಭಾರತಕ್ಕೆ ಬಂದು ಗಣೇಶಪುರಿಯಲ್ಲಿ ನಿತ್ಯಾನಂದ ಬಾಬಾರ ದರ್ಶನ ಪಡೆಯುತ್ತಾರೆ. ಮುಂದೆ ಗುರುದೇವರ ಪರಮಭಕ್ತರಾಗಿ, ಗುರುದೇವರ ಕೃಪೆಗೆ ಪಾತ್ರರಾಗುತ್ತಾರೆ. ರೂಡಿಗೆ ಮುಂದೆ ಗುರುದೇವರು ‘ರುದ್ರಾನಂದ ಸ್ವಾಮಿ’ ಎಂದು ಶುಭನಾಮ ನೀಡಿ ಅನುಗ್ರಹಿಸುತ್ತಾರೆ. ಗಣೇಶಪುರಿಯಿಂದ ಅಮೇರಿಕಕ್ಕೆ ತೆರಳಿ, ಯತಿ ಧರ್ಮ ಪಾಲಿಸುತ್ತ ತಾವು ಸ್ಥಾಪಿಸಿರುವ ನಿತ್ಯಾನಂದ ಆಶ್ರಮದಲ್ಲಿ ಸಮಾಧಿ ಪಡೆಯುತ್ತಾರೆ.
ಇಸ್ಲಾಂ ಧರ್ಮದ ಭಕ್ತನೊಬ್ಬ ಕಾಂಞಂಗಾಡ್ ಆಶ್ರಮದಲ್ಲಿ ಆಗಿಂದಾಗ ನಿತ್ಯಾನಂದ ಸ್ವಾಮಿಗಳ ದರ್ಶನವನ್ನು ಪಡೆಯುತ್ತಿದ್ದ. ಆತನ ನಡೆಗೆ ಸ್ವಜಾತಿಯ ಬಂಧುಗಳಿಂದ ವಿರೋಧ ವ್ಯಕ್ತವಾಗುತ್ತದೆ. ‘ಮಸೀದಿಗೆ ಹೋಗಿ ನಮಾಜು ಮಾಡು. ಎಂಬ ಸಲಹೆಯೊಂದಿಗೆ, ನಿತ್ಯಾನಂದರಲ್ಲಿಗೆ ಹೋಗ ಬೇಡ’ ಎಂದು ಎಚ್ಟರಿಕೆಯನ್ನು ಸ್ವಜಾತಿಯವರು ನೀಡುತ್ತಾರೆ. ನಡೆದ ಘಟನೆಯನ್ನು ಮುಸ್ಲಿಂ ಭಕ್ತನು ಮರುದಿನ ಸ್ವಾಮಿಗಳಲ್ಲಿ ಹೇಳಿಕೊಳ್ಳುತ್ತಾನೆ. ಆಗ ಗುರುದೇವರು, ‘ನೀನು ಅವರ ಮಾತು ಗೌರವಿಸು, ನೀನು ನಮಾಜು ಮಾಡು, ನೀನು ನಮಾಜ್ ಮಾಡಿದರೂ ಅದು ಇಲ್ಲಿಗೆ ತಲುಪುತ್ತದೆ’ ಎಂದು ಹೇಳುತ್ತಾರೆ. “ದೇವರು, ಧರ್ಮ ಎಲ್ಲಾ ಒಂದೇ. ಬಾಳೆ ಹಣ್ಣಿಗೆ ನೀವು ಕೇಲಾ ಎನ್ನುತ್ತೀರಿ. ನಾವು ಮಲೆಯಾಳದಲ್ಲಿ ಫಳಂ ಎನ್ನುತ್ತೇವೆ. ಆಂಗ್ಲರು ಬನಾನಾ ಎಂದು ಹೇಳುತ್ತಾರೆ. ವಸ್ತು ಒಂದೇ. ನಾಮವು ಹಲವು ಹೀಗೆಂದು ಭಕ್ತನಿಗೆ ಸುಲಭವಾಗಿ ಅರ್ಥವಾಗುವಂತೆ ಉದಾಹರಣೆ ಮೂಲಕ ಗುರುದೇವರು ವಿವರಿಸುತ್ತಾರೆ.
ನಿತ್ಯಾನಂದರ ಬಳಿಗೆ ಬಂದು, ಮುಲ್ಲಾ ಒಬ್ಬರು ನಮಸ್ಕರಿಸಿ ಮಾತನಾಡಿಸುತ್ತಿದ್ದ. ಆತನಿಗೆ ‘ಮಕ್ಕಾ- ಮದೀನ’ ಪವಿತ್ರ ಸ್ಥಳದ ದರ್ಶನ ಮಾಡಬೇಕೆಂಬುವುದು ಬಹುದಿನಗಳ ಆಶೆಯಾಗಿತ್ತು. ಅವನಾಶೆ ಗುರುದೇವರಿಗೆ ತಿಳಿದು ಬರುತ್ತದೆ. ಒಂದು ದಿನ ನಿತ್ಯಾನಂದರು ಮುಲ್ಲಾನನ್ನು ಸನಿಹ ಕರೆದು, “ಮುಲ್ಲಾ ನಿನಗೆ ಮಕ್ಕಾ ಮದೀನಕ್ಕೆ ಹೋಗಲೇ ಬೇಕೇನು..?” ಎಂದು ಮಲೆಯಾಳಿ ಭಾಷೆಯಲ್ಲಿ ಪ್ರಶ್ನಿಸುತ್ತಾರೆ. ಮುಲ್ಲಾ ‘ಹೌದೆಂದು ತಲೆಯಲ್ಲಾಡಿಸಿದ’. ಆಗ ನಿತ್ಯಾನಂದರು ಅಲ್ಲಿಗೆ ಹೋಗಲು ಹಣ ಬೇಡವನೋ..? ಎಂದು ಪ್ರಶ್ನಿಸುತ್ತಾರೆ. ಮುಂದೆ ಉತ್ತರಿಸಲಾಗದೆ, ಮೌನದಿಂದ ವಿಧೇಯನಾಗಿ ನಿಂತಿರುವ ಮುಸ್ಲಿಂ ಭಕ್ತನಿಗೆ ಯಾತ್ರೆ ಪೂರೈಸಲು ತನ್ನ ಲಂಗೋಟಿಯಿಂದ ಹಣವನ್ನು ತೆಗೆದು ಕೊಟ್ಟರು. ಯಾತ್ರೆ ಪೂರೈಸಿ ಬಂದ ಮುಲ್ಲ ಗುರುದೇವರಡೆಗೆ ಬಂದು, ‘ಸ್ವಾಮೀಜಿ ನಿಮ್ಮನ್ನು ನಾನು ಮಕ್ಕಾದಲ್ಲಿ ಕಂಡೆನು’ ಎಂದು ಹೇಳಿಕೊಳ್ಳುತ್ತಾನೆ. ಆತನಿಗೆ ನಿತ್ಯಾನಂದರು ಮಹಾಮಹಿಮರೆಂದು ತಿಳಿದುಬಂದು ಭಕ್ತನಾಗುತ್ತಾನೆ.
ನಿತ್ಯಾನಂದರು ಉಡುಪಿಯಲ್ಲಿ ಇದ್ದ ಸಮಯದಲ್ಲಿ ಉಡುಪಿಯ ಆಬ್ದುಲ್ ಗಫಾರಖಾನ್ ಅವರು ಗುರುದೇವರ ಸಂಪರ್ಕ ಪಡೆಯುತ್ತಾರೆ. ಅವರ ಆರ್ಶಿವಾದವು ಖಾನ್ ಸಾಹೇಬರಿಗೆ ಪ್ರಾಪ್ತಿಯಾಗುತ್ತದೆ. ಅವರು ಗುರುದೇವರ ಲೀಲೆಗಳನ್ನು ಕಣ್ಣಾರೆ ಕಂಡವರು. ಗುರುದೇವರ ಜಾತಿ ಮತ ಭೇದರಹಿತ ತತ್ವ ಸಿದ್ದಾಂತವು ಭಾರತ ದೇಶಕ್ಕೆ ಅವಶ್ಯ ಇದೆ ಎನ್ನುವ ಅಭಿಪ್ರಾಯ ಅವರದಾಗಿತ್ತು. ಮಹಾರಾಷ್ಟ್ರದ ಠಾಣಾ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಖಾನ್ ಸಾಹೇಬರಿಗೆ ಗಣೇಶಪುರಿಯಲ್ಲಿ ಸರಕಾರದ ಜಮೀನಿನಲ್ಲಿ ನಿತ್ಯಾನಂದ ಸ್ವಾಮಿಗಳು, ಸರಕಾರದ ಯಾವೊಂದು ಅನುಮತಿ ಇಲ್ಲದೆ ಅತಿಕ್ರಮಣ ಮಾಡುತ್ತಿದ್ದಾರೆ ಎಂಬ ದೂರನ್ನು ಅಲ್ಲಿಯವರು ವಿನಾಕಾರಣ ನೀಡುತ್ತಾರೆ. ಸತ್ಯಾಂಶ ಪರಿಶೀಲನೆಗೆ ಜಿಲ್ಲಾಧಿಕಾರಿಗಳು ಗಣೇಶಪುರಿಗೆ ಆಗಮಿಸುತ್ತಾರೆ. ಅವರು ನಿತ್ಯಾನಂದರ ದರ್ಶನ ಪಡೆದಾಗ, ಅವರು ಆಕರ್ಷಣೆಗೆ ಒಳಗಾಗುತ್ತಾರೆ. ಎಲ್ಲಾ ವಿಚಾರಗಳ ಮರೆತು ಬಿಡುತ್ತಾರೆ. ಅವರಿಗೆ ನಿತ್ಯಾನಂದರಲ್ಲಿ ಅತೀವ ಭಕ್ತಿ ಭಾವ ವ್ಯಕ್ತವಾಗುತ್ತದೆ.
ಕ್ರೈಸ್ತ ಧರ್ಮದ ಜಾನ್ ಎಂಬ ಭಕ್ತ ಆಗಿಂದಾಗ ಗಣೇಶಪುರಿಗೆ ಬಂದು ಗುರುದೇವರ ದರ್ಶನ ಪಡೆಯುತ್ತಿದ್ದ. ಹೀಗೊಂದು ದಿನ ಅವನಿಗೆ ಗಣೇಶಪುರಿಗೆ ಮರಳಿ ತೆರಳಲು ಹಣ ಇಲ್ಲದಂತಾಗುತ್ತದೆ. ಜಾನ್ ನಿತ್ಯಾನಂದರಿಗೆ ನಮಸ್ಕರಿಸಿ ತೆರಳುವಾಗ ಆತನಿಗೆ ಹತ್ತು ರೂಪಾಯಿಯ ನೋಟು ಬಿದ್ದಿರುವುದು ಸಿಗುತ್ತದೆ. ಸಂಕಷ್ಟದಲ್ಲಿದ್ದ ಆತನಿಗೆ ಅದೇ ಹಣವನ್ನು ಮುಂಬೈಗೆ ತೆರಳಲು ಬಳಸುತ್ತಾನೆ. ಉಳಿದ ಹಣದಿಂದ ಹೂವಿನ ವ್ಯಾಪಾರ ಪ್ರಾರಂಭಿಸುತ್ತಾನೆ. ಮುಂದೆ ಜಾನ್ ಶ್ರೀಮಂತ ವ್ಯಕ್ತಿಯಾಗುತ್ತಾನೆ. ಗೊರೆಗಾಂವ್ ಇಲ್ಲಿಯ ಮಕ್ಕಳಿಗೆ ಗುರುದೇವರ ಹೆಸರಿನಲ್ಲಿ ಭಾಲಭೋಜನವನ್ನು ವಾರದಲ್ಲಿ ಎರಡು ದಿನ ಉಣಬಡಿಸುತ್ತಿದ್ದ. ಹೀಗೆ ಅನ್ಯಧರ್ಮದ ಬಂಧುಗಳು ಗುರುದೇವರ ಕೃಪಗೆ ಪಾತ್ರರಾದವರು ಅನೇಕರು. ಇವು ಕೆಲವು ಉದಾಹರಣೆಗಳನ್ನು ಅಷ್ಟೇ ಇಲ್ಲಿ ಉಲ್ಲೇಖಿಸಿರುವುದು.

LEAVE A REPLY

Please enter your comment!
Please enter your name here