ಗುರುದೇವರ ಅಮೃತಹಸ್ತವು ಅನ್ನಪ್ರಸಾದವನ್ನು ಅಕ್ಷಯಗೊಳಿಸಿತು!!!

0
1407


ನಿತ್ಯ ಅಂಕಣ: ೬೬- ತಾರಾನಾಥ್‌ ಮೇಸ್ತ,ಶಿರೂರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ನಿವಾಸಿಯಾದ ವೆಂಕಟರಾವ್ ಅವರ ಮಗಳ ಮಗುವಿಗೆ ಬಾಧಿಸಿದ ಆಮಶಂಕೆ ರೋಗವನ್ನು ನಿತ್ಯಾನಂದರು ತಮ್ಮ ಕರಸ್ಪರ್ಶದಿಂದ ಅವರ ಮನೆಯಲ್ಲಿ ಗುಣಪಡಿಸಿದ್ದರು. ಇದಕ್ಕೂ ಮೊದಲು ವೆಂಕಟರಾವ್ ಅವರು ಬಹಳಷ್ಟು ವೈದ್ಯರ ಮೂಲಕ ಮಗುವಿಗೆ ಚಿಕಿತ್ಸೆ ನೀಡಿಸಿದ್ದರು. ಚಿಕಿತ್ಸೆ ಫಲಕಾರಿ ಆಗಿರಲಿಲ್ಲ. ಮಗುವಿನ ಆರೋಗ್ಯ ಸ್ಥಿತಿಯು ಯಥಾಸ್ಥಿತಿಯಲ್ಲಿಯೇ ಇದ್ದಿತ್ತು. ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ, ನಿತ್ಯಾನಂದರು ವೆಂಕಟರಾವ್ ಅವರಲ್ಲಿ ಮೂಲ್ಕಿ ಪರಿಸರದ ಜನರಿಗೆ ಅನ್ನಸಂತರ್ಪಣೆ ನಡೆಸಲು ಹೇಳಿದ್ದರು. ಅದರಂತೆ ವೆಂಕಟರಾವ್ ಅವರು ಅನ್ನಸಂತರ್ಪಣೆ ನಡೆಸಲು ಒಂದು ಶುಭದಿನ ನಿಗದಿಪಡಿಸಿದರು. ಭಗವಾನ್ ನಿತ್ಯಾನಂದ ಸ್ವಾಮಿಗಳು ಮೂಲ್ಕಿಗೆ ಚಿತ್ತೈಸಿದ್ದಾರೆ. ವೆಂಕಟರಾವ್ ಅವರ ಮನೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಅವರ ಮನೆಯಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಎಂಬ ಸಿಹಿಸುದ್ದಿಕೇಳಿ ಮೂಲ್ಕಿಯ ಪರಿಸರದ ಜನರು ಬಹಳ ಸಂತೋಷ ಪಡುತ್ತಾರೆ. ಆ ದಿನ ಊರ ಜನರು ಸಾವಿರಾರು ಸಂಖ್ಯೆಯಲ್ಲಿ ನಿತ್ಯಾನಂದರ ಅನ್ನ ಪ್ರಸಾದ ಸವಿಯಲು ಹಾಗೂ ನಿತ್ಯಾನಂದರ ದರ್ಶನ ಪಡೆಯಲು ವೆಂಕಟರಾವ್ ಅವರ ಮನೆಯಲ್ಲಿ ಹಾಕಿದ ಮಡಲು ಚಪ್ಪರದ ಅಡಿಯಲ್ಲಿ ಸೇರುತ್ತಾರೆ.

ಮಡಲು ಚಪ್ಪರದಲ್ಲಿ ಸೇರಿರುವ ಭಕ್ತರದಂಡು ಕಂಡು, ವೆಂಕಟರಾವ್ ಅವರು ದಂಗಾಗಿ ಹೋಗುತ್ತಾರೆ. ಅವರು ಭೋಜನ ಪ್ರಸಾದ ಸ್ವೀಕರಿಸಲು ಬರುವ ಭಕ್ತರನ್ನು ನಿರ್ಧಿಷ್ಟವಾದ ಸಂಖ್ಯೆಯಲ್ಲಿ ನಿರೀಕ್ಷಿಸಿದ್ದರು. ಆಹಾರ ಪೋಲು ಆಗಬಾರದೆಂದು, ಲೆಕ್ಕಚಾರದಿಂದ ಬಾಣಸಿಗರಿಂದ ಅಡಿಗೆ ತಯಾರಿಸಿದ್ದರು. ಆದರೆ ಅವರ ಲೆಕ್ಕಚಾರ ಮಾತ್ರ ತಲೆಕೆಳಗಾಗುತ್ತದೆ. ವೆಂಕಟರಾವ್ ಅವರು ಶ್ರೀಮಂತರು. ಸಾವಿರಾರು ಹೊಟ್ಟೆಗಳಿಗೆ ಉಣ್ಣಲು ಬಡಿಸುವ ಶಕ್ತಿ ಅವರಲ್ಲಿದೆ. ಎದುರಾದ ಪರಿಸ್ಥಿತಿಯಲ್ಲಿ ಅಡಿಗೆ ಕಡಿಮೆಯಾದರೆ, ಊಟದ ಸಮಯದಲ್ಲಿ ಅಡಿಗೆ ತಯಾರಿ ಮಾಡುವುದು ಸವಾಲಿನ ಕೆಲಸವೇ ಸರಿ. ಉಣ್ಣುವವರಿಗೆ ಊಟ ತಯಾರಿ ಆಗುವವರೆಗೆ ಕಾಯಿಸುವುದು ತಪ್ಪಾಗುತ್ತದೆ. ಗುರುದೇವರ ದರ್ಶನ ಪಡೆಯಲು ಬಂದಿರುವ ಜನಜಂಗುಳಿ ಕಂಡ ರಾವ್ ಅವರು, ತಾನು ಇಷ್ಟೊಂದು ಜನರಿಗೆ ವ್ಯವಸ್ಥೆಯನ್ನು ತೃಪ್ತಿಕರವಾಗಿ ಮಾಡಲು ಸಾಧ್ಯವೇ..! ಎಂದು ಗಾಭರಿಗೆ ಒಳಗಾಗುತ್ತಾರೆ. ತಕ್ಷಣ ರಾವ್ ಅವರು ನಿತ್ಯಾನಂದ ಸ್ವಾಮಿಗಳಲ್ಲಿ ಸಂಕಷ್ಟವನ್ನು ನಿವೇದಿಸಿ ಕೊಳ್ಳುತ್ತಾರೆ. ಭಕ್ತನ ಅಳಲಿಗೆ ನಿತ್ಯಾನಂದರು ನಗುತ್ತಲೇ ಅಭಯ ನೀಡುತ್ತಾರೆ.

ಗುರುದೇವರು ನೇರಾವಾಗಿ ಅಡಿಗೆ ನಡೆಯುವ ಚಪ್ಪರದಡೆಗೆ ಬಂದು, ಬಾಣಸಿಗರು ಅಡಿಗೆ ಸಿದ್ಧಗೊಳಿಸಿರುವುದನ್ನು ಕಾಣುತ್ತಾರೆ. ನಂತರ ಎಲ್ಲಾ ಪದಾರ್ಥಗಳ ಪಾತ್ರೆಗಳಿಗೆ ಗುರುದೇವರು ಸೌಟನ್ನು ಮುಳುಗಿಸಿ ಅಲುಗಾಡಿಸುತ್ತಾರೆ. ನಿತ್ಯಾನಂದರು ವೆಂಕಟರಾವ್ ಅವರಲ್ಲಿ ಮತ್ತೇನು ಚಿಂತಿಸುವುದು ಬೇಡ. ಇಲ್ಲಿರುವ ಅನ್ನ, ಭಕ್ಷ್ಯ ಪದಾರ್ಥಗಳು ಕೊರತೆಯಾಗದೆ, ಬಂದಿರುವ ಜನರಿಗೆ ಸಂತೃಪ್ತಿ ಪಡಿಸುತ್ತದೆ. ಅಧಿಕವಾಗಬಹುದು ಸಂತೃಪ್ತಿ ಪಡವಷ್ಟು ಬಡಸಬಹುದೆಂದು ಗುರುದೇವರು ಹೇಳುತ್ತಾರೆ. ಅಭಯನುಡಿ ಆಲಿಸದ ರಾವ್ ಅವರಿಗೆ ಭಯವು ದೂರವಾಗಿ ಧೈರ್ಯಬರುತ್ತದೆ. ಬಂದವರಿಗೆಲ್ಲರಿಗೂ ಉದರ ತಣಿಸುವಷ್ಟು ಅನ್ನದಾನ ನಡೆಯುತ್ತದೆ. ಗುರುದೇವರು ಹೇಳಿದಂತೆ ನಡೆಯುತ್ತದೆ. ಅಷ್ಟೊಂದು ಜನರು ಅನ್ನ ಪ್ರಸಾದ ಸ್ವೀಕರಿಸಿ ಹೋದರೂ ಅನ್ನ ,ಸಾಂಬರು, ಪರಮಾನ್ನ, ಭಕ್ಷ್ಯಗಳು ತಾಮ್ರದ ಕಠಾರಿಗಳಲ್ಲಿ ಹಾಗೆಯೇ ಉಳಿದಿರುತ್ತದೆ. ರಾವ್ ಅವರು ಉಳಿದಿರುವ ಆಹಾರ ಪದಾರ್ಥಗಳನ್ನು ಪೋಲು ಮಾಡದೆ ಸಮೀಪದ ಮನೆಗಳಿಗೆ ವಿತರಿಸುತ್ತಾರೆ. ಅಂತೂ ಸಂಕಷ್ಟದಲ್ಲಿ ಸಿಲುಕಿದ ವೆಂಕಟರಾವ್ ಅವರನ್ನು ಗುರುದೇವರು ಸಂತೋಷಗೊಳಿಸುತ್ತಾರೆ. ಗುರುದೇವರ ಅಮೃತಹಸ್ತವು ಅನ್ನಪ್ರಸಾದವನ್ನು ಅಕ್ಷಯಗೊಳಿಸಿದ ಪವಾಡ ಕಂಡು, ರಾವ್ ಕುಟುಂಬಿಕರು ಆಶ್ಚರ್ಯ ಪಡುತ್ತಾರೆ.

LEAVE A REPLY

Please enter your comment!
Please enter your name here