ಮ0ಗಳೂರು ಪ್ರತಿನಿಧಿ ವರದಿ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಅರಣ್ಯ ಇಲಾಖೆ, ಸಾರ್ವಜನಿಕ ಮತ್ತು ಜಿಲ್ಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಕಾಲೇಜು ಎನ್.ಎಸ್.ಎಸ್. ಘಟಕ, ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 19 ರಂದು ಗೀತಾ ಎಸ್.ಎಂ. ಶೆಟ್ಟಿ ಸಭಾಭವನ, ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಗಳು, ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಸಪ್ತಾಹ ಉದ್ಘಾಟನಾ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ಬೀಳಗಿ, ಗಿಡ ನೆಡುವ ಮೂಲಕ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡುತ್ತಾ ನಾವು ಮುಂದಿನ ಪೀಳಿಗೆಗಾಗಿ ಏನಾದರೂ ಬಳುವಳಿ ನೀಡುವುದಿದ್ದರೆ ಅದು ಉತ್ತಮವಾದ ಪರಿಸರವನ್ನು ನಿರ್ಮಸುವ ಮುಖಾಂತರ ಹಾಗೂ ಗಿಡಗಳನ್ನು ನೆಡುವುದಲ್ಲದೇ ಅವುಗಳನ್ನು ಮರಗಳಾಗಿ ಬೆಳೆಯುವ ತನಕ ಪೋಷಿಸಿದಾಗ ಮಾತ್ರ ಉತ್ತಮ ಪರಿಸರವನ್ನು ಹೊಂದಲು ಸಾಧ್ಯ. ಸಿದ್ಧತೆಯ ಮೂಲಕ ಗಿಡಗಳನ್ನು ನೆಟ್ಟು ,ಬದ್ಧತೆಯಿಂದ ಅವುಗಳನ್ನು ಪೋಷಿಸಿ ಮರಗಳಾಗಿ ಬೆಳಸಿದಾಗ ಮಾತ್ರ ಉತ್ತಮ ಫಲ ಸಿಗುವ ಸಾಧ್ಯತೆಯಿರುವುದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ನಿಡವನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಶುದ್ಧವಾದ ಪರಿಸರದ ವಾತಾವರಣವನ್ನು ಸೃಷ್ಠಿಮಾಡೋಣ ಎಂದು ಹೇಳಿದರು.
ಸಮಾರಂಭದದ ಅಧ್ಯಕ್ಷತೆಯನ್ನು ರಾಮಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್. ಬಿಜ್ಜೂರು, ಭಾಗವಹಿಸಿ, ಪರಿಸರ ಜೀವನ ಚಕ್ರ, ನೀರಿನ ಸಂರಕ್ಷಣೆ ಹಾಗೂ ಪರಿಸರದ ಉಳಿವು ಮತ್ತು ಬೆಳವಣಿಗೆಯ ಬಗ್ಗೆ ಉಪಯುಕ್ತವಾದ ಮಾಹಿತಿ ನೀಡಿದರು.
ಸಮಾರಂಭಕ್ಕೂ ಮೊದಲು ರಾಮಕೃಷ್ಣ ವಿದ್ಯಾ ಸಂಸ್ಥೆಗಳು, ಬಂಟ್ಸ್ ವೃತ್ತ ದಿಂದ ಜ್ಯೋತಿ ವೃತ್ತದವರೆಗೆ ಪರಿಸರ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದ ನಂತರ ನೆರದಿದ್ದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದದವರಿಗೆ ಗಿಡಗಳನ್ನು ವಿತರಿಸಲಾಯಿತು.