ಗಾಂಧೀ ಕನಸನ್ನು ಭಗ್ನಗೊಳಿಸಿದ ಸರ್ಕಾರ

0
2439

ಸರಕಾರಕ್ಕೊಂದು ಬಹಿರಂಗ ಪತ್ರ


ಛೀ…ಇದು ನಾಚಿಗೆ ಗೇಡು…

ಮಾತೆತ್ತಿದರೆ ಗಾಂಧೀ ಚಿಂತನೆಯನ್ನು ಬೋಧಿಸುತ್ತಿರುವ ಸರಕಾರ, ರಾಜಕಾರಣಿಗಳು ಅಕ್ಷರಶಃ ಗಾಂಧೀ ಚಿಂತನೆಗೆ ಅವಮಾನ ಎಸಗಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಕನಸನ್ನು ನುಚ್ಚುನೂರು ಮಾಡಿದೆ. ಆಳುವ ವರ್ಗ ತನ್ನ ಕೈಯಾರೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸನ್ನು ಭಗ್ನಗೊಳಿಸಿದ್ದು ತಪ್ಪು.
ಕಳೆದ ೪೧ದಿನಗಳಿಂದ ರಾಜ್ಯದಲ್ಲಿ ಲಾಕ್‌ ಡೌನ್‌ ನಡೆಸಿ ಅಧಿಕೃತ ಮದ್ಯ ಮಾರಾಟಕ್ಕೆ ಬ್ರೇಕ್‌ ಹಾಕಿದ್ದು ಮೆಚ್ಚತಕ್ಕಂತಹ ವಿಚಾರ. ರಾಜ್ಯದಾದ್ಯಂತ ಇದ್ದಂತಹ ಅದೆಷ್ಟೋ ಕುಟುಂಬಗಳಲ್ಲಿ ನೆಮ್ಮದಿಯಿತ್ತು. ಗಂಡ – ಹೆಂಡಿರ ನಡುವೆ ಕದನವಿರಲಿಲ್ಲ.ಅಬ್ಬ… ನಮ್ಮಪ್ಪ ಬದಲಾದರಲ್ಲವೇ ಎಂಬ ಸಂತಸ ಅನೇಕ ಕುಟುಂಬಳಲ್ಲಿದ್ದವು. ಲಾಕ್‌ ಡೌನ್‌ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಮದ್ಯ ತೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಎಷ್ಟೋ ಮನೆಗಳಲ್ಲಿ ಸಂತೋಷ-ನೆಮ್ಮದಿಯ ವಾತಾವರಣ ನಿರ್ಮಾಣವಾಗಿತ್ತು. ಆರೋಗ್ಯ ಸುಧಾರಣೆಯೂ ಆಗಿತ್ತು. ಗಳಿಸಿದ ಹಣದಲ್ಲಿ ನೆಮ್ಮದಿಯ ದಿನ ಕಳೆಯುವ ವಾತಾವರಣವಿತ್ತು. ಆದರೆ ಸರಕಾರದ ಒಂದು ತಪ್ಪು ಹೆಜ್ಜೆ ಇಡೀ ರಾಜ್ಯವನ್ನೇ ಅಡಿಮೇಲು ಮಾಡುವಂತಾಗಿದೆ. ಸರಕಾರದ ಬೊಕ್ಕಸಕ್ಕೆ ಹಣವೇನೋ ಬಂದಿದೆ. ಆದರೆ ಜನರ ಬಾಳು ಅಕ್ಷರಶಃ ಹಾಳಾಗಿದೆ. ನೆಮ್ಮದಿ ನೆಲೆಸಿದ್ದ ಕುಟುಂಬಗಳಲ್ಲಿ ಮತ್ತೆ ನೆಮ್ಮದಿ ಕೆಡುವಂತಾಗಿದೆ.ಕೇವಲ ೨೪ತಾಸುಗಳಲ್ಲಿ ಎಷ್ಟೋ ಮನೆಗಳು ʻಮಸಣʼವಾಗಿ ಪರಿವರ್ತನೆಯಾಗಿದೆ. ಜನತೆಗೆ ಜ್ಞಾನದ ಬೆಳಕು ಹರಿಸಬೇಕಾದ ಸರಕಾರವೇ ಜನತೆಯನ್ನು ತಿದ್ದುವ ಬದಲು ತಪ್ಪುದಾರಿಗೆಳೆಯುತ್ತಿದೆ- ಇದು ಸಾಬೀತಾಗಿದೆ ಕೂಡಾ.
೧೨ಲಕ್ಷ ಲೀಟರ್‌ ಕುಡಿದರು!: ಲಾಕ್‌ ಡೌನ್‌ ಸಡಿಲಿಕೆಯಾದ ಮೊದಲ ದಿನವೇ ರಾಜ್ಯದಲ್ಲಿ ಅಕ್ಷರಶಃ ಮದ್ಯದ ಹೊಳೆ ಹರಿದಿದೆ. ಸರಿ ಸುಮಾರು ೧೨ಲಕ್ಷ ಲೀಟರ್‌ ಮದ್ಯ ವ್ಯಾಪಾರವಾಗಿದೆ. ೪೫ಕೋಟಿ ರುಪಾಯಿ ಮೊತ್ತದ ಮದ್ಯ ಮಾರಾಟ ರಾಜ್ಯದಲ್ಲಾಗಿದೆ. ಕೇವಲ ೧೨ತಾಸುಗಳಲ್ಲಿ ಸರಕಾರಕ್ಕೆ ೩೧.೫ಕೋಟಿ ರುಪಾಯಿ ಹರಿದುಬಂದಂತಾಗಿದೆ. ಸರಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಹಣ ಸಂದಾಯವಾಗುತ್ತಿರುವುದರಲ್ಲಿ ಮದ್ಯ ವ್ಯವಹಾರವೂ ಒಂದು ಎಂಬುದರಲ್ಲಿ ಎರಡು ಮಾತಿಲ್ಲ.ರಾಜ್ಯದ ಜನತೆಯ ನೆಮ್ಮದಿಯ ಮಂತ್ರ ಪಠಿಸುವ ಸರಕಾರ ಮದ್ಯ ವ್ಯಾಪಾರಕ್ಕೆ ಅನುಮತಿ ನೀಡುವ ಮೂಲಕ ಜನತೆಯ ಬಾಳಲ್ಲಿ ಕತ್ತಲು ತುಂಬುವ ಕಾರ್ಯ ಮಾಡಿದೆ.ಇದು ಖಂಡನೀಯ.
ಸರಕಾರ ಮದ್ಯದಂಗಡಿಗೆ ಅವಕಾಶನೀಡಿದೆ. ಜನತೆ ಬದಲಾಗಬೇಕಾಗಿತ್ತು. ನಾನು ನಮ್ಮದು ಎಂಬ ಭಾವನೆ ಜನತೆಯಲ್ಲಿರಬೇಕಾಗಿತ್ತು. ಈ ದುಷ್ಚಟದಿಂದ ದೂರವಿರಬೇಕೆಂಬ ಜ್ಞಾನ ಜನತೆಗಿರಬೇಕಾಗಿತ್ತು. ಅಕ್ಷರಶಸ್ಥರು, ಯುವಕ ಯುವತಿಯರು ಸರತಿ ಸಾಲಲ್ಲಿ ನಿಂತು ಮದ್ಯ ಖರೀದಿಸುವ ರೀತಿ ನೋಡಿದರೆ ನಾಚಿಕೆಯಾಗುತ್ತದೆ. ಇಂದಿನ ಯುವಕರೇ ನಾಳಿನ ಪ್ರಜೆಗಳು ಎಂಬ ನಾಡ್ನುಡಿಯನ್ನೇ ಅಣಕಿಸುವಂತೆ ಭಾಸವಾಗುತ್ತದೆ. ಕಳೆದ ೨೪ಗಂಟೆಗಳಲ್ಲಿ ರಾಜ್ಯದಲ್ಲಿ ಕುಡುಕರಿಂದಾದ ತೊಂದರೆಗಳು ಅನೇಕಾನೇಕ. ಇದು ಸರಕಾರಕ್ಕೆ ಕಾಣದಾಯಿತೇ?
ಸದಾ ಮದ್ಯ ನಿಷೇಧದ ಬಗ್ಗೆ ಚಿಂತಿಸುವ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸೋಮವಾರದಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ಲಾಕ್‌ ಡೌನ್‌ ಅವಧಿಯಲ್ಲಿ ಗಳಿಸಿಕೊಂಡ ಆರೋಗ್ಯವನ್ನು ಜೀವನ ಪೂರ್ತಿ ಉಳಿಸಿಕೊಳ್ಳುವಂತೆ ವಿನಂತಿಸಿದ್ದಾರೆ. ಮಹಾತ್ಮಾ ಗಾಂಧಿಯವರ ಕನಸು ಇದಾಗಿದ್ದು ಸಮೃದ್ಧ ಕುಟುಂಬದ ನಿರ್ಮಾಪಕರಾಗುವಂತೆ ಜನತೆಗೆ ಮನವಿ ಮಾಡಿದ್ದರು. ಸರಕಾರದ ಮದ್ಯ ವ್ಯಾಪಾರದ ಅನುಮತಿ ಈ ಎಲ್ಲಾ ಗಣ್ಯರ ವಿನಂತಿಯನ್ನು, ಅದೆಷ್ಟೋ ಮುತ್ತೈದೆಯರ ಮಾಂಗಲ್ಯ ಭಾಗ್ಯವನ್ನು ʻಸರಕಾರವೇʼಕಿತ್ತುಕೊಳ್ಳುವಂತೆ ಪ್ರೇರೇಪಿಸುತ್ತಿದೆ ಎಂದರೆ ತಪ್ಪಲ್ಲ.
ಸುಖೀ ಸಮಾಜ, ಸಾಮಾಜಿಕ ಸ್ವಾಸ್ಥ್ಯದ ಪರ ಎದ್ದು ನಿಲ್ಲುವ ಸ್ಥಿತಿಗೆ ಇಂದು ಬಂದು ಮುಟ್ಟಿದ್ದೇವೆ. ಇದು ನನ್ನೊಬ್ಬನ ಕಳಕಳಿಯಾಗಬಾರದು. ಇಡೀ ಸಮಾಜ, ಸಾಮಾಜಿಕ ಜವಾಬ್ದಾರಿಯ ಹೊಣೆ ಹೊತ್ತಿರುವ ಮಾಧ್ಯಮಗಳ ಜವಾಬ್ದಾರಿಯೂ ಹೌದು. ಪ್ರತಿಯೊಂದು ಮಾಧ್ಯಮಗಳು ಈ ನಿಟ್ಟಿನಲ್ಲಿ ಎದ್ದೇಳಬೇಕಾಗಿದೆ. ಮದ್ಯಮಾರಾಟದ ಝಲಕ್‌ ಗಳನ್ನು ದಿನಪೂರ್ತಿ ತೋರಿಸಿ, ರಂಜಿಸುವ ಸುದ್ದಿಮಾಧ್ಯಮಗಳು, ಜವಾಬ್ದಾರಿಯ ಸ್ಥಾನದಲ್ಲಿರುವ ಮುದ್ರಣ ಮಾಧ್ಯಮಗಳು ಸರಕಾರದ ಧೋರಣೆಯನ್ನು ಖಂಡಿಸಬೇಕಾಗಿದೆ. ಮದ್ಯಮುಕ್ತ ರಾಜ್ಯವಾಗುವತ್ತ ಒಂದು ದೊಡ್ಡ ದಿಟ್ಟ ನಿರ್ಧಾರಕ್ಕೆ ಮುನ್ನುಡಿ ಬರೆಯಬೇಕಾಗಿದೆ.

ಹರೀಶ್‌ ಕೆ.ಆದೂರು.
ಸಮೂಹ ಸಂಪಾದಕ, ವಾರ್ತೆ.ಕಾಂ/ಕಾಲ.ನ್ಯೂಸ್/ಕಾಲ ಟಿವಿ

LEAVE A REPLY

Please enter your comment!
Please enter your name here