ಗವ್ಯ ಚಿಕಿತ್ಸಾ – ರಾಷ್ಟೀಯ ವಿಚಾರ ಸಂಕಿರಣ

0
477

ಬೆಂಗಳೂರು ಪ್ರತಿನಿಧಿ ವರದಿ
ಆಯುರ್ವೇದ ತಜ್ಞರು ಗವ್ಯವನ್ನು ಬಳಸಬೇಕು, ಗವ್ಯ ಚಿಕಿತ್ಸೆಯ ಬಗ್ಗೆ ಜನತೆಗೆ ತಿಳಿಹೇಳಬೇಕು ಹಾಗೆಯೇ ಗವ್ಯ ಚಿಕಿತ್ಸೆಗೆ ಪ್ರಾಶಸ್ತ್ಯನೀಡಿ ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕು, ಗೋವಿನ ಮೌಲ್ಯವನ್ನು ವರ್ಧಿಸುವ ಮೂಲಕ ಗೋಸಂರಕ್ಷಣೆಯಲ್ಲಿ ಯೋಧರಾಗಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಮಸ್ತ ಆಯುರ್ವೇದ ಜಗತ್ತಿಗೆ ಕರೆನೀಡಿದರು.
 
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ, ಕಾಮದುಘಾ ಯೋಜನೆಯ ಅಂಗವಾಗಿ ನಡೆದ ‘ಗವ್ಯ ಚಿಕಿತ್ಸಾ – ರಾಷ್ಟೀಯ ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮಿಶ್ರತಳಿಯ ಹಸುವಿನಲ್ಲಿ ಯಾವುದೇ ಔಷಧೀಯ ಗುಣಗಳಿಲ್ಲ ಎಂಬುದು ಈಗಾಗಲೇ ಸಂಶೋಧನೆಗಳಿಂದ ದೃಢಪಟ್ಟಿದ್ದು, ಆಯುರ್ವೇದ ಔಷಧಗಳಲ್ಲಿ ಶುದ್ಧ ಭಾರತೀಯ ಗೋವಿನ ಗವ್ಯವನ್ನು ಮಾತ್ರ ಬಳಸಬೇಕು, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಗವ್ಯಾಧಾರಿತ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಕ್ಯಾನ್ಸರ್ ಚಿಕಿತ್ಸೆಗೆ ಮಾತ್ರವಲ್ಲದೇ ಕ್ಯಾನ್ಸರ್ ಬರದಂತೆ ತಡೆಯಲು, ಕ್ಯಾನ್ಸರ್ ಚಿಕಿತ್ಸೆಯ ನಂತರ ಪುನಶ್ಚೇತನಕ್ಕೂ ಗವ್ಯವನ್ನು ಬಳಸಿಕೊಳ್ಳಬೇಕು ಎಂದರು.
 
 
ಆಯುರ್ವೇದ ತಜ್ಞರು ದೊಡ್ಡ ಸಂಖ್ಯೆಯಲ್ಲಿ ಸೇರಿ ಗವ್ಯ ಚಿಕಿತ್ಸೆಯ ಕುರಿತು ವಿಚಾರ ವಿನಿಮಯ ಮಾಡುತ್ತಿರುವುದು ಶುಭಸಂಕೇತವಾಗಿದೆ ಎಂದ ಶ್ರೀಗಳು, ಗೋವು ರಾಜಕೀಯ ಮುಕ್ತವಾಗ ಬೇಕು, ಸರ್ವೋಪಕಾರಿಯಾದ ಗೋವಿನ ಸಂರಕ್ಷಣೆಯಲ್ಲಿ ಹಿಂದು – ಮುಸ್ಲಿಮ್ – ಕ್ರಿಶ್ಚಿಯನ್ ಎಂಬ ಭೇದಮಾಡದೇ, ಎಲ್ಲ ಮತ – ಪಂಥದವರೂ ತೊಡಗಿಸಿಕೊಂಡು, ಗೋವಿನ ಉಪಯೋಗವನ್ನು ಪಡೆಯಬೇಕು ಎಂದು ಹಾರೈಸಿದರು.
 
ರಾಷ್ಟೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷರಾದ ವಿಜಯಲಕ್ಷ್ಮಿ ದೇಶಮಾನೆ ಅವರು, ಗೋವಿನಿಂದ, ಪ್ರಕೃತಿಯಿಂದ ನಾವು ದೂರವಾಗಿರುವುದೇ ರೋಗಗಳಿಗೆ ಆಹ್ವಾನ ಕೊಟ್ಟಂತಾಗಿದೆ, ಪಂಜಾಬಿನಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಲು ಗೋಆಧಾರಿತ ಕೃಷಿಯ ಬದಲು ಮಿತಿಮೀರಿ ರಾಸಾಯನಿಕ ಬಳಕೆಯೇ ಕಾರಣವಾಗಿದೆ. ಹಾಗಾಗಿ ಗೋಆಧಾರಿತ ಕೃಷಿ ಪದ್ಧತಿಯನ್ನು ರಾಷ್ಟೀಯ ನೀತಿಯಾಗಿ ಜಾರಿ ಮಾಡಬೇಕು ಎಂದು ಕರೆನೀಡಿದರು.
 
 
ನಾಗಪುರದ ಗೋವಿಜ್ಞಾನ ಅನುಸಂಧಾನ ಕೇಂದ್ರದ ಸುನಿಲ್ ಮಾನ್ ಸಿಂಗ್ ಅವರು ಗವ್ಯಾಧಾರಿತ ಚಿಕಿತ್ಸೆಯ ಕುರಿತು ವಿಚಾರ ಮಂಡಿಸಿ, ಆಧುನಿಕ ವೈದ್ಯಪದ್ಧತಿಯಲ್ಲಿ ಸಾಧ್ಯವಾಗದ ಅನೇಕ ರೋಗಗಳನ್ನು ಗೋ ಅರ್ಕದ ಬಳಕೆಯ ಮೂಲಕ ಗುಣಪಡಿಸಿದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಶ್ರೀರಾಮಚಂದ್ರಾಪುರಮಠದ ಪ್ರೇರಣೆಯೊಂದಿಗೆ ಗವ್ಯಾಧಾರಿತ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಮಾ ಗೋ ಪ್ರಾಡೆಕ್ಟ್ಸ್ ನ ಗವ್ಯೋತ್ಪನ್ನಗಳಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ಪ್ರಸಿದ್ದ ಆಯುರ್ವೇದ ತಜ್ಞರುಗಳಾದ ಡಾ. ಬಿ ಜಿ ಗೋಪಿನಾಥ್, ಡಾ. ಕೆ.ಸಿ ಬಲ್ಲಾಳ್, ಜಾಮ್ ನಗರದ ಡಾ. ಹಿತೇಶ್ ಜಾನಿ, ಡಾ ರವಿಶಂಕರ್ ಪೆರ್ವಾಜೆ, ಡಾ. ಬಿ ಆರ್ ರಾಮಕೃಷ್ಣ ಉಪಸ್ಥಿತರಿದ್ದು, ವಿಚಾರಮಂಡನೆ ಮಾಡಿದರು.
 
ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಗೆ ಪೂರಕವಾಗಿ ಸಂಯೋಜನೆಗೊಂಡಿದ್ದ ಈ ವಿಚಾರ ಸಂಕಿರಣಕ್ಕೆ ಆರೋಗ್ಯ ಭಾರತೀ ಬೆಂಗಳೂರು, ನ್ಯಾಷನಲ್ ಇಂಟ್ರಿಗೇಟೆಡ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಅಗ್ನಿವೇಶ ಆಯುರ್ವೇದ ಪ್ರತಿಷ್ಠಾನ ಸಹಭಾಗಿತ್ವವಹಿಸಿದ್ದವು. ದೇಶದ ನಾನಾ ಭಾಗಗಳ ಸುಮಾರು 200ಕ್ಕೂ ಹೆಚ್ಚು ಆಯುರ್ವೇದ ತಜ್ಞರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here